ಬುಧವಾರ, ಜೂನ್ 16, 2021
27 °C

ಎಲ್ಲಾ ಗಡಿಗಳ ಹಂಗು ತೊರೆದು... (ಚಿತ್ರ : ಮಾಗಡಿ)

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ನಾಯಕ ಬಾಲ್ಯದಲ್ಲಿಯೇ ಮಾಗಡಿಯ ಗಡಿ ದಾಟಿ ಬೆಂದಕಾಳೂರಿಗೆ ಬಂದವನು. ಅದೂ ಬರಿಗಾಲಲ್ಲಿ ಓಡಿಕೊಂಡು. ಬಾಲ್ಯದ ಗೆಳತಿಯನ್ನು ಅರಸಿ ಬರುವ ಆತನಿಗೆ ಆಕೆಯ ದರ್ಶನವಾಗುವುದು 10 ವರ್ಷದ ಬಳಿಕ. ಸ್ನೇಹಿತೆ ಎಂಬ ಬಾಲ್ಯದ ಪದ ಆತ ದೊಡ್ಡವನಾಗುತ್ತಿದ್ದಂತೆ ಅದು ಪ್ರೇಯಸಿ ಎಂಬ ರೂಪಕವಾಗಿ ಬದಲಾಗಿರುತ್ತದೆ.ನಾಯಕ ಅನಾಥ. ತನ್ನ ಹೆಸರು ಗೊತ್ತಿಲ್ಲದವನಿಗೆ ಊರಿನ ಹೆಸರು ಗೊತ್ತಿರುತ್ತದೆ. ಹೀಗಾಗಿ ಆತನ ಊರು `ಮಾಗಡಿ~ಯೇ ಆತನ ಹೆಸರಾಗುತ್ತದೆ. ನಾಯಕಿಯೂ ಅನಾಥೆ. ಆದರೆ ಆಕೆಗೆ ಹೆಸರಿರುತ್ತದೆ!ಸರಳ ಕಥೆಯೊಂದನ್ನು ಅಚ್ಚುಕಟ್ಟಾಗಿ ಹೆಣೆಯುವ ಸಾಧ್ಯತೆಗಳನ್ನು ಕೈ ಬಿಟ್ಟು ಸಾವಿರ ಕಂತುಗಳ ಮೆಗಾ ಧಾರಾವಾಹಿಯನ್ನು ಸೃಷ್ಟಿಸಿದ್ದಾರೆ ನಿರ್ದೇಶಕ ಸುರೇಶ್ ಗೋಸ್ವಾಮಿ. ಅನಾಥ ಮಕ್ಕಳ ಬದುಕಿನ ಸೂಕ್ಷ್ಮತೆಗಳನ್ನು ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿಯೇ ಪ್ರಸ್ತುತಪಡಿಸುವ ಬದಲು ಎಗ್ಗಿಲ್ಲದೆ ಎಳೆದಾಡುವ ದುರ್ಬಲ ಚಿತ್ರಕಥೆ ಪ್ರೇಕ್ಷಕನ ತಾಳ್ಮೆಯನ್ನು ಪರೀಕ್ಷೆಗೆ ಒಡ್ಡುತ್ತದೆ.

 

ಬೆಂಗಳೂರಿಗೆ ಬರುವ ಹುಡುಗ ಸಿಗುವುದು ರೌಡಿ ಪಾಳ್ಯದ ಕೈಯಲ್ಲಿ. ಆದರೆ ಆತ ಸಾಧು. ಹೊಡಿ ಬಡಿ ಎಂದು ಮಚ್ಚು ಎತ್ತುವವನಲ್ಲ. ದಾರಿ ತಪ್ಪದ ಅನಾಥ ಮಗನನ್ನು ಜೊತೆಗಿಟ್ಟುಕೊಂಡು ದಾರಿ ತಪ್ಪಿರುವುದು ನಿರ್ದೇಶಕರು.ದುಃಖ, ಸಂಭ್ರಮ, ಆಕ್ರೋಶ, ಹತಾಶೆ ಹೀಗೆ ನವರಸಗಳು ಕಥೆಯಲ್ಲಿ ಇವೆ ಎಂದು ಆಗಾಗ್ಗೆ ಅನಿಸಿದರೂ ಅವುಗಳು ತೆರೆಯ ಮೇಲೆ ವ್ಯಕ್ತವಾಗುವುದೇ ಇಲ್ಲ. ಭಾವನೆಗಳು ಬತ್ತಿ ಹೋದಂತ ನಿರ್ಲಿಪ್ತ ಮುಖಗಳು ಒಪ್ಪಿಸುವ ಸಂಭಾಷಣೆಗಳನ್ನು ಅಭಿನಯವೆಂದು ಪರಿಗಣಿಸಬೇಕು!

 

ಇದಕ್ಕೆ ಅಪವಾದವೆನಿಸುವ ಪಾತ್ರಗಳೂ ಚಿತ್ರದಲ್ಲಿವೆ. ಮೊದಲರ್ಧ ನೀರಸವಾಗಿ ಸಾಗಿದರೂ ನಾಯಕನ ಸುತ್ತ ಖಳನಾಯಕರ ದಂಡು ಒಂದೊಂದಾಗಿ ಜನ್ಮವೆತ್ತುವುದರಿಂದ ದ್ವಿತೀಯಾರ್ಧದಲ್ಲಿ ಕಥೆಯಿದೆ ಎಂಬ ಹುಸಿ ಭರವಸೆ ಹುಟ್ಟಿಸುತ್ತದೆ. ನಾಯಕಿಯ ಆಗಮನಕ್ಕೂ ಅಲ್ಲಿಯವರೆಗೆ ಕಾಯಬೇಕು.

 

ಹೊಡೆದಾಟದ ದೃಶ್ಯಗಳಂತೂ ಅಸಹನೀಯ. ಪುಡಿ ರೌಡಿಯನ್ನು ಹೊಡೆಯಲೂ ನಾಯಕನಿಗೆ ಹತ್ತಾರು ನಿಮಿಷ ಬೇಕಾಗುತ್ತದೆ! ನಾಯಕನಿಗೆ ಗತಿ ಕಾಣಿಸಲು ಹೊರಡುವ ಕೆಲವು ಖಳರು ಒಂದುಕ್ಷಣ ಮುಖ ಪ್ರದರ್ಶಿಸಿ ನಾಪತ್ತೆಯಾಗುತ್ತಾರೆ.ಚಿತ್ರಕ್ಕೊಂದು ತಿರುವು ಸಿಗುತ್ತಿದೆ ಎಂದುಕೊಳ್ಳುಷ್ಟರಲ್ಲಿ ಇದ್ದಕ್ಕಿದ್ದಂತೆ ಹಾಡು ಎದುರಾಗುತ್ತದೆ. ಕೊನೆಗೂ ಮದುವೆಯಾಗುವ ನಾಯಕ- ನಾಯಕಿಗೆ ದುರಂತ ಅಂತ್ಯ ನೀಡುವ ಸನ್ನಿವೇಶವಂತೂ ಹಾಸ್ಯಮಯವಾಗಿದೆ. ಹೀಗಾಗಿ ಕೊನೆಯಲ್ಲಿನ ಟ್ರ್ಯಾಜಿಡಿ ಪ್ರೇಕ್ಷಕನನ್ನು ಕಾಡುವುದಿಲ್ಲ. ನಿರೂಪಣಾ ಶೈಲಿಯಂತೂ ದಶಕಗಳ ಹಿಂದಿನ ಚಿತ್ರಗಳನ್ನು ಕಣ್ಮುಂದೆ ತರುತ್ತದೆ.ನಾಯಕ ನಟ ದೀಪಕ್ ಅಭಿನಯದಲ್ಲಿ ಸುಧಾರಿಸಿದ್ದರೂ ಭಾವಪೂರ್ಣ ಸನ್ನಿವೇಶಗಳಲ್ಲಿ ಇನ್ನೂ ಮಾಗಬೇಕಿದೆ. ನೃತ್ಯದಲ್ಲೂ ಸಾಕಷ್ಟು ಹಿಂದೆ ಬೀಳುತ್ತಾರೆ. ನಾಯಕಿ ರಕ್ಷಿತಾಗೆ ದ್ವಿತೀಯಾರ್ಧದಲ್ಲಿ ಬಂದು ಹಾಡುಗಳಿಗೆ ಸೊಂಟ ಬಳುಕಿಸುವುದಷ್ಟೇ ಕೆಲಸ.ನಾಯಕಿಗಿಂತ ಸಹನಟಿಯರಾದ ಶಿಲ್ಪಾ ಮತ್ತು ಅನುಶ್ರೀಗೆ ಅಭಿನಯಕ್ಕೆ ಹೆಚ್ಚಿನ ಅವಕಾಶವಿದೆ. ಇಬ್ಬರೂ ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಪದ್ಮಾ ವಾಸಂತಿ, ಸುರೇಶ್ಚಂದ್ರ ಮುಂತಾದ ಪಾತ್ರಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ.ಒಂದೆರಡು ಮೆಲುಕು ಹಾಕುವಂತಹ ಹಾಡುಗಳನ್ನು ನೀಡಿದ್ದರೂ ರಾಜೇಶ್ ರಾಮನಾಥ್ ಸಂಗೀತದಲ್ಲಿ ತಾಜಾತನವಿಲ್ಲ. ಬ್ಯಾಂಕಾಕ್‌ನ ಸುಂದರ ತಾಣಗಳ ಬದಲು ಮೊಳಕಾಲುದ್ದ ನೀರು ತುಂಬಿದ ರಸ್ತೆಗಳಲ್ಲಿ ಹಾಡುಗಳನ್ನು ಚಿತ್ರೀಕರಿಸಿರುವುದು ನಿರ್ದೇಶಕರ ಮತ್ತು ಛಾಯಾಗ್ರಾಹಕರ ಅಭಿರುಚಿಯ ಕೊರತೆಯನ್ನು ಬಿಂಬಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.