ಎಲ್ಲಿಗೆ ಬಂತೋ ಸಂಗಯ್ಯ, ಕಾನ್ ಕಾನ್ ಒತ್ತಿ ಒತ್ತಿ

7

ಎಲ್ಲಿಗೆ ಬಂತೋ ಸಂಗಯ್ಯ, ಕಾನ್ ಕಾನ್ ಒತ್ತಿ ಒತ್ತಿ

Published:
Updated:

ಹರಿಹರ: ‘ಯಾರಿಗೆ ಬಂತು, ಎಲ್ಲಿಗೆ ಬಂತು ಕಿರ್ಲೋಸ್ಕರ್ ಕಂಪೆನಿ ಪರಿಹಾರ’ ಇದು ಕೇವಲ ಕಿರ್ಲೋಸ್ಕರ ಕಂಪೆನಿ ಮಾಜಿ ಕಾರ್ಮಿಕರಿಗೆ ಮಾತ್ರವಲ್ಲದೇ, ಹರಿಹರ ನಗರದ ಸಾರ್ವಜನಿಕರನ್ನೂ ಕಾಡುತ್ತಿರುವ ಯಕ್ಷ ಪ್ರಶ್ನೆ?ಕಾರ್ಮಿಕರಿಗೆ ಹೇಗೆ ಪರಿಹಾರ ಸಿಕ್ಕಿಲ್ಲವೋ, ಹಾಗೆಯೇ ಸಾರ್ವಜನಿಕರಿಗೂ ಉತ್ತರ ಸಿಕ್ಕಿಲ್ಲ.ಕಿರ್ಲೋಸ್ಕರ್ ಕಂಪೆನಿ 2000ರ ನ. 8ರಿಂದ ಲೇ-ಆಫ್ ಘೋಷಣೆ ಮಾಡಿತು.2001ರ ಜ. 1ರಂದು ಕಂಪೆನಿ ಘೋಷಿಸಿದ ಬೀಗಮುದ್ರೆ, ನೂತನ ವರ್ಷ ಹೊಸತನ ತರುತ್ತದೆ ಎಂಬ ಭರವಸೆಯಿಂದ ಕಾಯುತ್ತಿದ್ದ ಕಾರ್ಮಿಕರ ಶಬರಿ ನಿರೀಕ್ಷೆಗೆ ಬರ ಸಿಡಿಲಿನಂತೆ ಎರಗಿತು. ಅಂದಿನಿಂದಲೇ ಕಂಪೆನಿ ಕಾರ್ಮಿಕರ ಕಷ್ಟಗಳ ಸರಮಾಲೆ ಪ್ರಾರಂಭವಾಯಿತು.ಕಂಪೆನಿ ಬೀಗಮುದ್ರೆ ಘೋಷಣೆ ಮಾಡಿದ ಸಂದರ್ಭದಲ್ಲಿ ಸುಮಾರು 1,800 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರೆಲ್ಲಾ ಅನಿವಾರ್ಯವಾಗಿ ಬೀದಿಗಿಳಿದು, ಸರದಿ ಉಪವಾಸ ಹಾಗೂ ಸತ್ಯಾಗ್ರಹ ಕಾರ್ಯಕ್ರಮ ಪ್ರಾರಂಭಿಸಿದರು. ಇದರಲ್ಲಿ ಕಾರ್ಮಿಕರ ಜತೆ ಅವರ ಕುಟುಂಬದ ಸದಸ್ಯರೂ ಪಾಲ್ಗೊಂಡರು. ಈ ಸತ್ಯಾಗ್ರಹಕ್ಕೆ ನಗರದ ಸಂಘ-ಸಂಸ್ಥೆ ಹಾಗೂ ಸಂಘಟನೆಗಳಷ್ಟೇ ಅಲ್ಲದೇ ಸಮಸ್ತ ಊರಿಗೆ ಊರೇ ಬೆಂಬಲ ನೀಡಿತು. ಸುಮ್ಮನಿದ್ದರೆ ಜನ ಕ್ಷಮಿಸಿಯಾರೆ? ಎಂಬ ಬೆದರಿಕೆಗೆ ಚುನಾಯಿತ ಪ್ರತಿನಿಧಿಗಳು ಕಾರ್ಮಿಕರೊಂದಿಗೆ ಧ್ವನಿ ಸೇರಿಸಿದರು. ಯಾವುದೇ ಕಾರಣಕ್ಕೂ ಕಂಪೆನಿಯನ್ನು ಬಂದ್ ಮಾಡಲು ಬಿಡುವುದಿಲ್ಲ. ಪುನಃ ಕಂಪೆನಿಯನ್ನು ಪ್ರಾರಂಭಿಸುವಂತೆ ಮಾಡುತ್ತೇವೆ ಎಂಬ ಕಾರ್ಮಿಕ ನಾಯಕರ, ಗಣ್ಯರ, ರಾಜಕಾರಣಿ ಹಾಗೂ ಜನಪ್ರತಿನಿಧಿಗಳ ಭರವಸೆಗಳು ಕಾರ್ಮಿಕರ ಪಾಲಿಗೆ ಮರೀಚಿಕೆಯಾಗಿದ್ದು ಅರಗಿಸಿಕೊಳ್ಳಲಾರದ ಸತ್ಯ.ಸರ್ಕಾರ ಹಾಗೂ ಸಂಘಟನೆಗಳ ಒತ್ತಡಕ್ಕೆ ಮಣಿಯದ ಕಿರ್ಲೋಸ್ಕರ್ ಕಂಪೆನಿ ಬೀಗಮುದ್ರೆಯನ್ನು ಶಾಶ್ವತಗೊಳಿಸಿತು. ಕಂಪೆನಿ ಬೀಗಮುದ್ರೆಯಿಂದ ಸಣ್ಣ ಕೈಗಾರಿಕೆಗಳು, ಕಾರ್ಮಿಕರು ಹಾಗೂ ನಗರದ ಒಟ್ಟು ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತವಾಯಿತು. ಸಂಸಾರ ನಿರ್ವಹಣೆ ಹಾಗೂ ಪೂರ್ವನಿರ್ಧಾರಿತ ಯೋಜನೆಗಳಾದ ಬ್ಯಾಂಕ್ ಸಾಲ, ಮನೆ ಸಾಲ, ಮಕ್ಕಳ ವಿದ್ಯಾಭ್ಯಾಸ, ಮದುವೆ-ಮುಂಜಿಗಾಗಿ ಕಾರ್ಮಿಕರು ಕಷ್ಟಪಟ್ಟು ಕಟ್ಟಿಸಿದ ಮನೆ ಹಾಗೂ ಚೂರುಪಾರು ಚಿನ್ನಾಭರಣಗಳನ್ನು ಮಾರಿಕೊಂಡು ಬೀದಿಗೆ ಬಿದ್ದರು. ಆರ್ಥಿಕ ಮುಗ್ಗಟ್ಟಿನಿಂದ ಚೇತರಿಸಕೊಳ್ಳಲಾಗದ ಹಲವರು ಊರು ಬಿಟ್ಟು, ಬೇರೆ ಊರುಗಳಲ್ಲಿ ಪರ್ಯಾಯ ಕೆಲಸಗಳನ್ನು ಕಂಡುಕೊಂಡರು. ಇಲ್ಲೇ ಉಳಿದವರು ರೊಟ್ಟಿ ಹಾಗೂ ವಿವಿಧ ಬಗೆಯ ಚಟ್ನಿಪುಡಿಗಳ ಮಾರಾಟ, ಹೊಲಿಗೆ, ಕಸೂತಿ ಮೊದಲಾದ ಸಣ್ಣ-ಪುಟ್ಟ ಸ್ವಉದ್ಯೋಗಗಳಿಂದ ಜೀವನ ಸಾಗಿಸುತ್ತಿದ್ದಾರೆ.ಕಿರ್ಲೋಸ್ಕರ್ ಕಂಪೆನಿ ಬೀಗಮುದ್ರೆಯಾಗಿ 10 ವರ್ಷ ಹಾಗೂ ಕಂಪೆನಿಯ ಯಂತ್ರಗಳು ಹಾಗೂ ನಿವೇಶನ ಮಾರಾಟವಾಗಿ 2 ವರ್ಷ ಕಳೆದಿವೆ. ಕಂಪೆನಿಯನ್ನು ಮಾರಾಟಕ್ಕೆ ಪಡೆದ ಸಂಸ್ಥೆಯವರು ಸಮಾಪನಾಧಿಕಾರಿಗಳಿಗೆ ಕಂಪೆನಿ ಹಾಗೂ ನಿವೇಶನದ ಹಣ ಪಾವತಿಸಿದ್ದಾರೆ. ನಾಲ್ಕಾರು ಕಾರ್ಮಿಕ ಸಂಘಟನೆಗಳು ಪರಿಹಾರ ದೊರಕಿಸಲು ನಿರಂತರವಾಗಿ ಹೋರಾಟ ನಡೆಸುತ್ತಿವೆ. ಕೆಲವೇ ತಿಂಗಳುಗಳಲ್ಲಿ ಕಾರ್ಮಿಕರ ಬಾಕಿ ವೇತನ, ಗ್ರ್ಯಾಚುಟಿ, ಪರಿಹಾರ, ರಜಾ ವೇತನ, ಬೋನಸ್ ಎಲ್ಲವನ್ನೂ ದೊರಕಿಸಿ ಕೊಡುತ್ತೇವೆ ಎಂದು ಸರ್ಕಾರ, ಕಾರ್ಮಿಕ ಇಲಾಖೆ ಹಾಗೂ ಸಮಾಪನಾಧಿಕಾರಿಗಳು ವೃತಃ ಕಾಲಹರಣ ಮಾಡುತ್ತಿದ್ದಾರೆ ಎಂಬುದು ಕಾರ್ಮಿಕರ ಆರೋಪ.1,800 ಕಾರ್ಮಿಕರಲ್ಲಿ, ಸುಮಾರು 500 ಕಾರ್ಮಿಕರು ಇಹಲೋಕ ತ್ಯಜಿಸಿದ್ದಾರೆ. ಅವರ ಕುಟುಂಬಗಳ ವಾರಸುದಾರರ ಗೋಳು ಸರ್ಕಾರಕ್ಕೆ ಕೇಳದಿರುವುದೇ ವಿಪರ್ಯಾಸ. ದಶಕಗಳಿಂದ ಸಂಕಷ್ಟಗಳಲ್ಲೇ ಜೀವನ ಸಾಗಿಸುತ್ತಿರುವ ಕಾರ್ಮಿಕ ಕುಟುಂಬಗಳಿಗೆ ಆದಷ್ಟು ಬೇಗನೇ ಬಾಕಿ ಹಣ ದೊರೆತು ಅವರ ಬಾಳು ಹಸನಾಗಲಿ ಎಂಬುದು ನಗರದ ಸಮಸ್ತ ಸಾರ್ವಜನಿಕರ ಆಶಯ.

ಮೂರು ತಿಂಗಳೊಳಗಾಗಿ ಪರಿಹಾರಕ್ಕೆ ನಿರ್ದೇಶನ

ಹರಿಹರ:
ಕರ್ನಾಟಕದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಅವರು 2010ರ ಡಿ. 15ರಂದು, ಮೈಸೂರು ಕಿರ್ಲೋಸ್ಕರ್ ಕಂಪೆನಿಯ ಕಾರ್ಮಿಕರಿಗೆ ಮೂರು ತಿಂಗಳ ಒಳಗಾಗಿ ಎಲ್ಲ ಪರಿಹಾರಗಳನ್ನು ಪಾವತಿಸುವಂತೆ ಸಮಾಪನಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.ಇದಕ್ಕೂ ಮುನ್ನ 2010 ಮೇ. 31ರ ನ್ಯಾಯಾಲಯದ ನಿರ್ದೇಶನವನ್ನು ಸಮಾಪನಾಧಿಕಾರಿ ಪಾಲಿಸದಿದ್ದ ಹಿನ್ನೆಲೆಯಲ್ಲಿ ಮೈಸೂರು ಕಿರ್ಲೋಸ್ಕರ್ ಕಾರ್ಮಿಕರ (ಎಐಟಿಯುಸಿ) ಸಂಘದ ಅಧ್ಯಕ್ಷರಾದ ಶಿವಣ್ಣ ಮತ್ತು ಎಐಟಿಯುಸಿ ಕಾನೂನು ತಜ್ಞರಾದ ಎಂ.ಸಿ. ನರಸಿಂಹನ್, ಮುರಳೀಧರ, ನಾರಾಯಣಸ್ವಾಮಿ ಹಾಗೂ ವೆಂಕಟಪ್ಪ ಅವರೊಂದಿಗೆ ಚರ್ಚಿಸಿ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯಲ್ಲಿ ಕಾರ್ಮಿಕರ ಪರವಾಗಿ ತೀರ್ಪು ಬಂದಿದೆ ಎಂದು ಸಂಘದ ಪದಾಧಿಕಾರಿಗಳಾದ ಪರಮೇಶ್ವರಪ್ಪ, ಎಂ. ಲಕ್ಷ್ಮೀಕಾಂತ್ ಹಾಗೂ ಜಿ. ಈರಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry