ಎಲ್ಲಿ ಹೋಯಿತು ಕೌಂಟಿಯ ತುಡಿತ?

7

ಎಲ್ಲಿ ಹೋಯಿತು ಕೌಂಟಿಯ ತುಡಿತ?

Published:
Updated:

2006 ರಲ್ಲಿ ನಡೆದ ಘಟನೆಯೊಂದಿಗೆ ಕೌಂಟಿ ಕ್ರಿಕೆಟ್ ಮಹತ್ವದ ಬಗ್ಗೆ ಮಾತನಾಡಬೇಕು. ಭಾರತ ಕಂಡ ಅತ್ಯುತ್ತಮ ವೇಗಿಗಳಲ್ಲಿ ಜಹೀರ್ ಖಾನ್ ಕೂಡ ಒಬ್ಬರು. ಅವರು 2006ರಲ್ಲಿ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರಗುಳಿ­ದಿದ್ದರು. ಆದರೆ ಸುಮ್ಮನೇ ಕೂರದ ಅವರು ಕೌಂಟಿ ಕ್ರಿಕೆಟ್ ಆಡಲು ಮುಂದಾಗಿದ್ದರು.ಕೌಂಟಿ ತಂಡ ವೂರ್ಸ್ಟರ್‌ಶೈರ್ ಪರ ಎಡಗೈ ವೇಗಿ ಜಹೀರ್ ಕೆಲ ದಿನ ಆಡಿದ್ದರು. 2007ರಲ್ಲಿ ರಾಹುಲ್ ದ್ರಾವಿಡ್ ಸಾರಥ್ಯದ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಆ ಸರಣಿಗೆ ಜಹೀರ್‌ಗೂ ಸ್ಥಾನ ಲಭಿಸಿತ್ತು. ಭಾರತ ಆ ಸರಣಿಯನ್ನು 1–0ರಲ್ಲಿ ಜಯಿಸಿತು. ಅದು ಭಾರತಕ್ಕೆ ಲಭಿಸಿದ ಐತಿಹಾಸಿಕ ಗೆಲುವು ಕೂಡ. ವಿಶೇಷವೆಂದರೆ ಜಹೀರ್ ಆಗ ‘ಸರಣಿ ಶ್ರೇಷ್ಠ’ ಗೌರವ ಪಡೆದಿದ್ದರು.ಕೌಂಟಿಯಲ್ಲಿ ಆಡಿದ ಅನುಭವ ಜಹೀರ್ ಅವರ ಕ್ರಿಕೆಟ್ ಜೀವನಕ್ಕೆ ಸಿಕ್ಕ ಮಹತ್ವದ ತಿರುವು. ಭಾರತದ ಪ್ರಮುಖ ಆಟಗಾರರು ಫಾರ್ಮ್ ಕಂಡುಕೊಳ್ಳಲು ಕೌಂಟಿಯಲ್ಲಿ ಆಡಿದ ಉದಾಹರಣೆ ಇದೆ. ಫಾರೂಕ್ ಎಂಜಿನಿಯರ್, ಸಚಿನ್, ಕುಂಬ್ಳೆ, ಜಾವಗಲ್ ಶ್ರೀನಾಥ್ ಅವರಿಂದ ಹಿಡಿದು ಗೌತಮ್ ಗಂಭೀರ್, ಪಿಯೂಷ್ ಚಾವ್ಲಾ ವರೆಗೆ ಇಂಗ್ಲೆಂಡ್ ಹಾಗೂ ವೇಲ್ಸ್‌ನ ಪ್ರತಿಷ್ಠಿತ ಕ್ರಿಕೆಟ್ ಕ್ಲಬ್‌ಗಳನ್ನು ಪ್ರತಿನಿಧಿಸಿದ್ದಾರೆ.ಕೌಂಟಿ ಕ್ರಿಕೆಟ್‌ಗೆ ತನ್ನದೇ ಆದ ಗಾಂಭೀರ್ಯವಿದೆ. ಈ ಟೂರ್ನಿಯಲ್ಲಿ ಆಡುವುದೇ ಒಂದು ದೊಡ್ಡ ಗೌರವ. ಕ್ಲಬ್‌ಗಳ ನಡುವೆ ನಡೆಯುವ ಕೌಂಟಿ ಚಾಂಪಿಯನ್‌ಷಿಪ್‌ ಇನ್ನೂ ವಾಣಿಜ್ಯೀಕರಣಗೊಂಡಿಲ್ಲ ಎಂಬುದು ವಿಶೇಷ.

ಆದರೆ ಐಪಿಎಲ್‌ನಂಥ ಚುಟುಕು ಕ್ರಿಕೆಟ್ ಪ್ರವೇಶ ಕೌಂಟಿ ಕಡೆಗಿನ ಗಮನವನ್ನು ತಗ್ಗಿಸಿದೆ.ಐಪಿಎಲ್‌ನಲ್ಲಿ ಸಿಗುವ ಹಣದಿಂದಾಗಿ ಯುವ ಕ್ರಿಕೆಟಿಗರು ಕೌಂಟಿಯತ್ತ ಮುಖ ಮಾಡುತ್ತಿಲ್ಲ. ಜೊತೆಗೆ ಬಿಸಿಸಿಐ ಕೂಡ ಆಟಗಾರರ ಮೇಲೆ ಕೆಲ ನಿರ್ಬಂಧ ವಿಧಿಸಿದೆ. ಅಷ್ಟು ಮಾತ್ರವಲ್ಲದೇ, ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಬಿಡುವಿಲ್ಲದ ಕ್ರಿಕೆಟ್ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಇಲ್ಲೇ ಆಟಗಾರರು ಹೈರಾಣಾಗುತ್ತಿದ್ದಾರೆ. ಕೆಲವರು ರಣಜಿ ಕ್ರಿಕೆಟ್‌ನಲ್ಲೇ ಆಡುತ್ತಿಲ್ಲ. ಇನ್ನೆಲ್ಲಿ ಕೌಂಟಿ ಮಾತು!ಆದರೆ ಐಪಿಎಲ್ ಟೂರ್ನಿಯಿಂದ ಹಣ ಸಿಗುತ್ತಿದೆಯೇ ಹೊರತು ಸಕಾರಾತ್ಮಕ ಅಂಶಗಳೇ ಅಪರೂಪ. ಅದಷ್ಟೇ ಅಲ್ಲ, ಆಸ್ಟ್ರೇಲಿಯಾದಲ್ಲಿ ಬಿಗ್ ಬಾಷ್, ವೆಸ್ಟ್‌ಇಂಡೀಸ್‌ನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್, ಶ್ರೀಲಂಕಾ ಪ್ರೀಮಿಯರ್ ಲೀಗ್, ಬಾಂಗ್ಲಾ ಪ್ರಿಮೀಯರ್ ಲೀಗ್ ಪ್ರವೇಶದಿಂದಾಗಿ ಉಳಿದ ದೇಶಗಳ ಕ್ರಿಕೆಟಿಗರು ಕೂಡ ಕೌಂಟಿಯತ್ತ ಹೆಚ್ಚು ಗಮನ ಹರಿಸುತ್ತಿಲ್ಲ. ಭಾರತ 2011ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ

0–4ರಲ್ಲಿ ಟೆಸ್ಟ್ ಸರಣಿ ಸೋತು ಮುಖಭಂಗ ಅನುಭವಿ­ಸಿತ್ತು. ಕೌಂಟಿಯತ್ತ ನಿರ್ಲಕ್ಷ್ಯವೂ ಈ ಹೀನಾಯ ಸೋಲಿಗೆ ಕಾರಣವಾದ ಅಂಶಗಳಲ್ಲಿ ಒಂದು ಎಂದು ಆಗ ಕ್ರಿಕೆಟ್ ಪರಿಣತರು ವಿಶ್ಲೇಷಿಸಿದ್ದರು.ಕೌಂಟಿ ಕ್ರಿಕೆಟ್‌ಗೆ ಒಂದು ಸಂಪ್ರದಾಯವಿದೆ. ಜತೆಗೆ ವೃತ್ತಿಪರತೆ ಇದೆ. ಮನರಂಜನೆ ಹಾಗೂ ಹಣಕ್ಕಿಂತ ಇಲ್ಲಿ ಗುಣಮಟ್ಟದ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ. ವಿದೇಶಿ ಪಿಚ್‌ಗಳಲ್ಲಿ ಆಡಲು ಪರದಾಡುವ ಕ್ರಿಕೆಟಿಗರು ಕೌಂಟಿಯಲ್ಲಿ ಆಡಿ ಅದಕ್ಕೆ ಹೊಂದಿಕೊಳ್ಳಲು ಪ್ರಯತ್ನಿ­ಸು­ತ್ತಿದ್ದರು. ಏಕೆಂದರೆ ಇಲ್ಲಿನ ಪಿಚ್‌ಗಳು ಗುಣಮಟ್ಟದಿಂದ ಕೂಡಿರುತ್ತವೆ.ಭಾರತದ ಪಿಚ್‌ಗಳಿಗೆ ಹೋಲಿಸಿದರೆ ಕೌಂಟಿ ಕ್ರಿಕೆಟ್ ಸವಾಲಿನಿಂದ ಕೂಡಿರು­ತ್ತದೆ. ಅತ್ಯುತ್ತಮ ಆಟಗಾರರು ಇದರಲ್ಲಿ ಆಡುತ್ತಾರೆ. ಜೊತೆಗೆ ಬೇರೆ ಬೇರೆ ದೇಶಗಳ ಕ್ರಿಕೆಟಿಗರೊಂದಿಗೆ ಬೆರೆಯುವ ಹಾಗೂ ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಅವಕಾಶ ಇಲ್ಲಿರುತ್ತದೆ. ಆಟದ ತಾಂತ್ರಿಕ ಮಟ್ಟ ಸುಧಾರಿಸಿಕೊಳ್ಳಲು ಕೆಲವರು ಕೌಂಟಿ ಕ್ರಿಕೆಟ್‌ನಲ್ಲಿ ಆಡಿಬರುತ್ತಿದ್ದರು.ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆಯಲು ಕೂಡ ಕೌಂಟಿ ಕ್ರಿಕೆಟ್ ಅತ್ಯುತ್ತಮ ವೇದಿಕೆ ಆಗಿತ್ತು. ಹಲವು ದೇಶಗಳು ಕ್ರಿಕೆಟಿಗರು ಕೌಂಟಿಯಲ್ಲಿ ಅವಕಾಶ­ಕ್ಕಾಗಿ ಕಾದುಕುಳಿತಿರುತ್ತಿದ್ದರು. ಅವಕಾಶ ಸಿಕ್ಕಿದಾಗ ಇಡೀ ಋತು ಆಡಿ ಬರುತ್ತಿದ್ದರು. ತಮ್ಮ ದೇಶದ ಪ್ರತಿಭಾವಂತ ಕ್ರಿಕೆಟಿಗರನ್ನು ಶಿಫಾರಸು ಮಾಡುತ್ತಿದ್ದರು, ಒಮ್ಮೆ ಕುಂಬ್ಳೆ, ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರ ಹೆಸರನ್ನು ಸರ್ರೆ ತಂಡಕ್ಕೆ ಶಿಫಾರಸು ಮಾಡಿದ್ದರು. ಆ ಬಳಿಕ ಓಜಾ ಅತ್ಯುತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದು ಎಲ್ಲರಿಗೂ ಗೊತ್ತೇ ಇದೆ. ತಮ್ಮ ಸಂದರ್ಶನಗಳಲ್ಲಿ ಕೂಡ ಕುಂಬ್ಳೆಯ ನೆರವನ್ನು ಓಜಾ ಪದೇ ಪದೇ ಸ್ಮರಿಸುತ್ತಿರುತ್ತಾರೆ.ಇತ್ತೀಚೆಗೆ ಗಂಭೀರ್ ಹಾಗೂ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಕೂಡ ಆಡುತ್ತಿದ್ದಾರೆ. ಕಳಪೆ ಪ್ರದರ್ಶನದ ಕಾರಣ ಗಂಭೀರ್ ಅವರನ್ನು ಸದ್ಯ ಭಾರತ ತಂಡದಿಂದ ಕೈಬಿಡಲಾಗಿದೆ. ಅವರೀಗ ಎಸೆಕ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆರಂಭದ ಕೆಲ ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ಅವರು ಬಳಿಕ ಒಂದು ಶತಕ ಕೂಡ ಗಳಿಸಿದರು.ಕೌಂಟಿಯಲ್ಲಿ ಇದುವರೆಗೆ ಭಾರತದ ಹಲವು ಮಂದಿ ಪಾಲ್ಗೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ, ಗಮನಾರ್ಹ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದ ಕೆಲ ಕ್ರಿಕೆಟಿಗರು ಕೌಂಟಿ ಆಡಿ ಇಂಗ್ಲೆಂಡ್‌ನ ರಾಷ್ಟ್ರೀಯ ತಂಡವನ್ನೇ ಪ್ರತಿನಿಧಿಸಿದ ಉದಾಹರಣೆ ಇದೆ. ಕೆವಿನ್ ಪೀಟರ್ಸನ್ ಅದಕ್ಕೆ ಸಾಕ್ಷಿ.ಭಾರತದ ಯುವ ಆಟಗಾರರು ಸದ್ಯ ಗಮನಾರ್ಹ ಪ್ರದರ್ಶನ ತೋರುತ್ತಿರಬಹುದು. ಆದರೆ ವಿದೇಶಿ ನೆಲದಲ್ಲಿ ಟೆಸ್ಟ್ ಆಡುವಾಗ ನಿಜವಾದ ಅಗ್ನಿ ಪರೀಕ್ಷೆ ಎದುರಾಗಲಿದೆ. ಈ ಆಟಗಾರರು ಕೌಂಟಿಯಲ್ಲಿ ಆಡಿದರೆ ಖಂಡಿತ ಆ ಸವಾಲಿಗೆ ಸಜ್ಜಾಗಬಹುದು.ಅಕಸ್ಮಾತ್ ಸದ್ಯದ ಪರಿಸ್ಥಿತಿ ಮುಂದುವರಿದರೆ ಭಾರತದ ಆಟಗಾರರು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಮಾತ್ರ ಪರಿಣತರಾಗುತ್ತಾರೆ. ಆದರೆ ಟೆಸ್ಟ್ ಕ್ರಿಕೆಟ್ ಹಿಂದೆಬೀಳುವುದು ಖಂಡಿತ. 2011ರಲ್ಲಿ ವಿದೇಶಿ ನೆಲದಲ್ಲಿ ಭಾರತ ಸತತ ಎಂಟು ಪಂದ್ಯಗಳನ್ನು ಸೋತಿದ್ದು ಅದಕ್ಕೊಂದು ಸಾಕ್ಷಿ.

 

ಕೌಂಟಿ ಕ್ರಿಕೆಟ್ ಬಗ್ಗೆ...

ಕೌಂಟಿ ಎಂದರೆ ಇಂಗ್ಲೆಂಡ್ ಹಾಗೂ ವೇಲ್ಸ್‌ನ ದೇಶಿ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಸುಪರ್ದಿಯಲ್ಲಿ ಈ ಟೂರ್ನಿ ನಡೆಯುತ್ತದೆ. ಭಾರತದ ರಣಜಿ ಟೂರ್ನಿ ಮಾದರಿ­ಯಲ್ಲೇ ಕೌಂಟಿ ಚಾಂಪಿಯನ್‌ಷಿಪ್ ಜರುಗುತ್ತದೆ. ಆದರೆ ವಿವಿಧ ದೇಶಗಳ ಆಟಗಾರರು ಕೌಂಟಿ ತಂಡಗಳನ್ನು ಪ್ರತಿನಿಧಿಸು­ತ್ತಾರೆ ಎಂಬುದು ವಿಶೇಷ.ಒಟ್ಟು 18 ತಂಡಗಳಿವೆ. ಸದ್ಯದ ಕೌಂಟಿ ಚಾಂಪಿಯನ್ ವಾರ್ವಿಕ್‌ಶೈರ್. ಇಲ್ಲೂ ಡಿವಿಷನ್- 1 ಹಾಗೂ 2 ಎಂದು ವಿಭಾಗಿಸಲಾಗಿದೆ. ಈ ಟೂರ್ನಿ 1890ರಿಂದ ನಡೆಯುತ್ತಾ ಬಂದಿದೆ. 40 ಓವರ್ ಹಾಗೂ ಟ್ವೆಂಟಿ-–20 ಕ್ರಿಕೆಟ್ ಟೂರ್ನಿಗಳನ್ನೂ ಆಯೋಜಿಸ­ಲಾಗುತ್ತಿದೆ. ಕೌಂಟಿಯಲ್ಲಿ ಆಡಲು ಭಾರತದ ಆಟಗಾರರು ಬಿಸಿಸಿಐ ಅನುಮತಿ ಪಡೆಯಬೇಕಾಗುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry