ಎಲ್ಲೆಡೆ ಅನುರಣಿಸಿದ ಶಿವನಾಮ...

7

ಎಲ್ಲೆಡೆ ಅನುರಣಿಸಿದ ಶಿವನಾಮ...

Published:
Updated:

ಬೆಂಗಳೂರು: ನಗರದ ಹೊರವಲಯದ ಕನಕಪುರ ರಸ್ತೆಯಲ್ಲಿರುವ  ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಸೋಮವಾರ ಮಹಾ ಶಿವರಾತ್ರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಬೆಳಿಗ್ಗೆ ರುದ್ರ ಪೂಜೆ ಮಾಡುವ ಮೂಲಕ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಸಂಜೆ ಅವರು ಮಹಾ ರುದ್ರಾಭಿಷೇಕವನ್ನು ನೆರವೇರಿಸಿದರು. ಅರವತ್ತು ರಾಷ್ಟ್ರಗಳಿಂದ ಬಂದಿದ್ದ ಭಕ್ತಾದಿಗಳಿಗೆ ಅವರು ಸುದರ್ಶನ ಕ್ರಿಯೆಯನ್ನು ಹೇಳಿಕೊಟ್ಟರು. ಸಾಮೂಹಿಕ ಧ್ಯಾನವೂ ನಡೆಯಿತು.

ನಂತರ ಮಾತನಾಡಿದ ಗುರೂಜಿ `ಶಿವರಾತ್ರಿ ಎಂದರೆ ಆಳವಾದ ವಿಶ್ರಾಂತಿ ಎಂದು ಅರ್ಥ. ಮನಸ್ಸು ದೈವದ ಮಡಿಲಲ್ಲಿ ವಿಶ್ರಮಿಸಿದಾಗ ಮಾತ್ರ ನಿಜವಾದ ವಿಶ್ರಾಂತಿ ಸಿಗಲು ಸಾಧ್ಯ. ಶಿವರಾತ್ರಿ ದಿನ ಮಾಡಿದ ಧ್ಯಾನಕ್ಕೆ ಹೆಚ್ಚು ಫಲ ಸಿಗುತ್ತದೆ, ಏಕೆಂದರೆ ದೈವೀ ಚೇತನವು ಇಡೀ ಭೂಮಿಯನ್ನು ಸ್ಪರ್ಶಿಸುತ್ತದೆ~ ಎಂದು ಹೇಳಿದರು.

`ಚೀನಾ, ಬ್ರೆಜಿಲ್, ರಷ್ಯಾ, ತೈವಾನ್ ಸೇರಿದಂತೆ ವಿಶ್ವದ ಅರವತ್ತು ರಾಷ್ಟ್ರಗಳಿಂದ ಬಂದಿರುವ ಜನರು ಇಲ್ಲಿ ಸೇರಿದ್ದಾರೆ. ಎಲ್ಲರದ್ದೂ ಒಂದೊಂದು ಸಂಸ್ಕೃತಿಯಾಗಿದೆ. ಭಿನ್ನ ಸಂಸ್ಕೃತಿಯ ಜನರು ಒಂದಾಗಿ ಉತ್ಸವದಲ್ಲಿ ಪಾಲ್ಗೊಂಡಿರುವುದೇ ಒಂದು ಅದ್ಭುತ ಅನುಭವ. ಅಪಾರ ಸಂಖ್ಯೆಯಲ್ಲಿ ಸೇರಿರುವ ಜನರೊಂದಿಗೆ ಧ್ಯಾನಿಸುವುದು ಸುಂದರವಾದ ಅನುಭವ~ ಎಂದು ನಾರ್ವೆಯ ಆಂಡ್ರಿಯಾಸ್ ಚಿರ್ಕ್‌ಲ್ಯಾಂಡ್ ಹೇಳಿದರು.

ಸಾವಿರಾರು ಮಂದಿ ಒಟ್ಟಾಗಿ ಮಂತ್ರೋಚ್ಛಾರ ಮಾಡಿದರು. ಸಾಮೂಹಿಕವಾಗಿ ಶಿವ ಭಜನೆಯೂ ನಡೆಯಿತು.

ಶಿವಲಿಂಗಗಳ ಪ್ರದರ್ಶನ

ಕೃಷ್ಣರಾಜಪುರ: ಇಲ್ಲಿನ ಸರ್ಕಾರಿ ಕಾಲೇಜು ಆಟದ ಮೈದಾನದಲ್ಲಿ ಶಿವರಾತ್ರಿ ಪ್ರಯುಕ್ತ ಗುರು ದತ್ತಾತ್ರೇಯ ಜ್ಞಾನ ಗಂಗಾ ಸೇವಾ ಟ್ರಸ್ಟ್ ವತಿಯಿಂದ ಮೊದಲ ಬಾರಿಗೆ ಒಂದು ಲಕ್ಷ ಶಿವ ಲಿಂಗಗಳನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ಕಾರ್ಯಕ್ರಮದ ಅಂಗವಾಗಿ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ  ನೆರವೇರಿಸಲಾಯಿತು. ಸೌಂದರ್ಯ ಲಹರಿ ತಂಡದಿಂದ ಭಜನೆ, ನಾಟ್ಯ ಗಂಗಾ ತಂಡದಿಂದ ಭರತನಾಟ್ಯ, ಹರಿದಾಸ ಸಂಘದ ಅಧ್ಯಕ್ಷ ಹ.ರಾ.ನಾಗರಾಜಾಚಾರ್ ಅವರಿಂದ ಶಿವರಾತ್ರಿ ಮಹಾತ್ಮೆ ಪ್ರವಚನ ನಡೆಯಿತು.   

ಎಸ್‌ಇಎ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭರತನಾಟ್ಯ ಪ್ರದರ್ಶನ, ರಾಮಕೃಷ್ಣ ಸಾಧನಾ ಕೇಂದ್ರದ ಆವರಣದಲ್ಲಿ ಅಧ್ಯಕ್ಷ ಚಂದ್ರೇಶಾನಂದ ಜೀ ಅವರಿಂದ ಶಿವಾನಂದ ಲಹರಿ ಉಪನ್ಯಾಸ ಜರುಗಿದವು. ಮಹಾಬಲೇಶ್ವರ, ಮಂಜುನಾಥೇಶ್ವರ, ವೀರಭದ್ರಸ್ವಾಮಿ, ಓಂ ಶಕ್ತಿ ಮುಂತಾದ ದೇವಸ್ಥಾನಗಳಿಗೆ ಭಕ್ತರು ಆಗಮಿಸಿ ದರ್ಶನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry