ಎಲ್ಲೆಡೆ ಬಸವ ಧರ್ಮ ಪಸರಿಸಲು ಕರೆ

7

ಎಲ್ಲೆಡೆ ಬಸವ ಧರ್ಮ ಪಸರಿಸಲು ಕರೆ

Published:
Updated:

ಬೀದರ್: `ಬಸವಧರ್ಮದ ಕಲ್ಪನೆ ಎಲ್ಲೆಡೆ ಪಸರಿಸಬೇಕು ಎಂದರೇ ಶರಣರ ನಾಡಿನಲ್ಲಿ ಇರುವ ಪ್ರತಿಯೊಬ್ಬರು ನಮ್ಮವರು ಎನ್ನುವ ಭಾವನೆಯನ್ನು ಮೈಗೂಡಿಸಿಕೊಳ್ಳಬೇಕು' ಎಂದು ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.ಬಸವ ಜಯಂತಿ ಶತಮಾನೋತ್ಸವ ವರ್ಷಾಚರಣೆ ನಿಮಿತ್ತ ಜಿಲ್ಲಾ ಬಸವ ಕೇಂದ್ರ ನಗರದ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಮೂರು ದಿನಗಳ `ಶರಣ ಸಂಸ್ಕೃತಿ ಉತ್ಸವ' ಹಾಗೂ `ಬಸವಧರ್ಮ ಸಮಾವೇಶ'ವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.`ಪರರು, ಪರ ಧರ್ಮದವರು ಎನ್ನುವ ಭಾವನೆ ಹೊಂದಿದ್ದರೆ ಶರಣರ ಬದುಕಿಗೆ ಯಾವುದೇ ಅರ್ಥ ಬರುವುದಿಲ್ಲ. ಎಲ್ಲರನ್ನು ನಮ್ಮವರು ಎನ್ನುವ ದೃಷ್ಟಿಕೋನದಿಂದ ನೋಡಬೇಕೇ ವಿನಾ ಪರರು ಎನ್ನುವ ಭಾವನೆಯಿಂದ ಅಲ್ಲ. ಅಂದಾಗ ಮಾತ್ರ ಬಸವಧರ್ಮದ ಕಲ್ಪನೆ ಎಲ್ಲೆಡೆ ಹರಡಲು ಸಾಧ್ಯ' ಎಂದು ತಿಳಿಸಿದರು.ಶರಣರು ರಚಿಸಿರುವ ವಚನಗಳಲ್ಲಿ ಒಂದು ವಚನ ಸರಿಯಾಗಿ ಅರ್ಥ ಮಾಡಿಕೊಂಡರೆ ಸಾಕು ಬಸವಧರ್ಮದ ಕಲ್ಪನೆ ಸಂಪೂರ್ಣ ಅರ್ಥವಾಗುತ್ತದೆ. ಬಸವಣ್ಣರನ್ನು ವಿಜ್ಞಾನಿ, ಸಂಶೋಧಕ, ಬದುಕಿಗೆ ಉತ್ತಮ ಮಾರ್ಗದರ್ಶನ ನೀಡಿದ್ದ ವ್ಯಕ್ತಿ ಎಂದು ಕಾಣಬೇಕೇ ಹೊರತು ಅವರನ್ನು ಒಂದು ಧರ್ಮಗುರು ಎಂದಲ್ಲ ಎಂದರು.ವಿದ್ಯಾರ್ಥಿಗಳು ಸಕರಾತ್ಮಕ ತತ್ವ, ವಿಚಾರಗಳು ಅನುಕರಣೆ ಮಾಡಬೇಕು.  ಇಂದಿನ ಅನೇಕ ಯುವಕರು ಬದುಕಿನಲ್ಲಿ ನಕರಾತ್ಮಕ ವಿಷಯಗಳು ಹೆಚ್ಚಾಗಿ ಅನುಸರಿಸುತ್ತಿದ್ದ ಕಾರಣ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ಭವಿಷ್ಯದಲ್ಲಿ ಮಹಾತ್ಮರಂತೆ ವ್ಯಕ್ತಿತ್ವ ನಿರ್ಮಾಣ ಆಗಬೇಕು ಅಂದರೆ ಸಕರಾತ್ಮಕ ವಿಷಯಗಳನ್ನು ಪಾಲಿಸಲೇಬೇಕು. ಶರಣರು ರಚಿಸಿರುವ ಪ್ರತಿಯೊಂದು ವಚನದಲ್ಲೂ ಸಕರಾತ್ಮಕ ವಿಷಯಗಳು ಕಾಣಬಹುದು. ಅವುಗಳು ಅನುಸರಿಸುವ ಮೂಲಕ ಉತ್ತಮ ವ್ಯಕ್ತಿತ್ವ ನಿರ್ಮಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ವಿದ್ಯಾರ್ಥಿಗಳು ಜ್ಞಾನಕ್ಕಾಗಿ ಅಧ್ಯಯನ ಮಾಡಬೇಕೇ ಹೊರತು ಅಂಕಗಳು ಪಡೆಯುವುದಕ್ಕಾಗಿ ಅಲ್ಲ, ಆಸಕ್ತಿ ಇರುವ ವಿಷಯದಲ್ಲಿ ಶ್ರೇಷ್ಠ ಜ್ಞಾನಿಯಾಗಲು ಪರಿಶ್ರಮ ಪಡಬೇಕು ಎಂದು ಹೇಳಿದರು.ಬೀದರ್ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ, ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಶ್ರೀದೇವಿ ಕರಂಜೆ, ಪ್ರಮುಖರಾದ ಪೂರ್ಣಿಮಾ ಜಾರ್ಜ್, ಅನೀಲಕುಮಾರ್ ಬೆಲ್ದಾರ್, ವೈಜನಾಥ ಕಮಠಾಣೆ, ಅಬ್ದುಲ್ ಖದೀರ್, ರಮೇಶ ಕುಲಕರ್ಣಿ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ಬಸವಕೇಂದ್ರದ ಜಿಲ್ಲಾ ಅಧ್ಯಕ್ಷ ಶರಣಪ್ಪ ಮಿಠಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry