ಮಂಗಳವಾರ, ನವೆಂಬರ್ 12, 2019
27 °C
ಎನ್‌ಟಿಆರ್ ಪುತ್ರಿ ನೋಡಲು ಸಂಭ್ರಮ

ಎಲ್ಲೆಡೆ ಬಿರುಸುಗೊಂಡ ಚುನಾವಣೆ ಪ್ರಚಾರ

Published:
Updated:

ಚಿಕ್ಕಬಳ್ಳಾಪುರ: `ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ನಡೆದಿರುವ ಭ್ರಷ್ಟಾಷಾರ ಹಿಂದೆಂದೂ ನಡೆದಿಲ್ಲ. ನೊಂದ ಜನರಿಗೆ ಯಾವುದೇ ರೀತಿಯ ಅನ್ಯಾಯ, ಅಕ್ರಮ ಮತ್ತು ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ ಕಾಂಗ್ರೆಸ್ ಸರ್ಕಾರವು ಉತ್ತಮ ಆಡಳಿತ ನೀಡುತ್ತದೆ. ' ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಪುರಂದೇಶ್ವರಿ ದೇವಿ ಹೇಳಿದರು.ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅವರು ಭಾಷಣ ಮಾಡಿದ ಕಾರಣ ಬಿ.ಬಿ ರಸ್ತೆ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಗುಂಪುಗೂಡಿದ ಜನರನ್ನು ಚದುರಿಸಲು ಮತ್ತು ಸಂಚಾರ ವ್ಯವಸ್ಥೆಯನ್ನು ಸರಿಪಡಿಸಲು ಪೊಲೀಸರು ಹರಸಾಹಸಪಡಬೇಕಾಯಿತು.ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ.ಸುಧಾಕರ್, ಕಾಂಗ್ರೆಸ್ ಮುಖಂಡ ಕೆ.ವಿ.ನವೀನ್‌ಕಿರಣ್ ಮತ್ತಿತರರು ಉಪಸ್ಥಿತರಿದ್ದರು.ಮುಗಿಬಿದ್ದ ಜನ

ಕೇಂದ್ರ ಮಾನವ ಸಂಪನ್ಮೂಲ ರಾಜ್ಯ ಸಚಿವೆ ಮತ್ತು ಖ್ಯಾತ ನಟ ಎನ್.ಟಿ.ರಾಮರಾವ್ ಅವರ ಪುತ್ರಿ ಪುರಂದೇಶ್ವರಿ ದೇವಿಯವರು ಬುಧವಾರ ನಗರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದರು. ಎನ್‌ಟಿಆರ್ ಅಭಿಮಾನಿಗಳಾಗಿದ್ದ ಬಹುತೇಕ ಮಂದಿ ತಮ್ಮ ಮೆಚ್ಚಿನ ನಟನ ಪುತ್ರಿ ಏನು ಭಾಷಣ ಮಾಡುತ್ತಾರೆ ಮತ್ತು ಯಾವ ವಿಷಯವನ್ನು ಹೇಳುತ್ತಾರೆ ಎಂದು ತಿಳಿದುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡಿದ ಪುರಂದೇಶ್ವರಿ ದೇವಿಯವರ ಮಾತುಗಳಿಗೆ ಜನರು ಚಪ್ಪಾಳೆ ತಟ್ಟಿದರು.ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಪುರಂದೇಶ್ವರಿ ದೇವಿ ಬರುತ್ತಾರೆ ಎಂಬುದರ ಬಗ್ಗೆ ಮಾಹಿತಿ ಇತ್ತೇ ಹೊರತು ಖಚಿತವಾಗಿರಲಿಲ್ಲ. ಆದರೆ ಅವರು ಆಗಮಿಸಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಅವರನ್ನು ನೋಡಲು ಜನರು ಮುಗಿಬಿದ್ದರು. ನಗರದ ಹೊಸ ಬಸ್ ನಿಲ್ದಾಣದ ಬಳಿಯಿರುವ ದೇವಾಲಯದಿಂದ ಆರಂಭಗೊಂಡ ಪ್ರಚಾರದ ಮೆರವಣಿಗೆಯಲ್ಲಿ ಜನರು ಪಾಲ್ಗೊಂಡಿದ್ದರು. ತೆರೆದ ವಾಹನದಲ್ಲಿದ್ದ ಪುರಂದೇಶ್ವರಿ ದೇವಿ ಕೈಬೀಸಿದಾಗ, ಜನರು ಹರ್ಷ ವ್ಯಕ್ತಪಡಿಸಿದರು. ಶಿಡ್ಲಘಟ್ಟ ವೃತ್ತದಲ್ಲಿ ಅವರ ಭಾಷಣವನ್ನು ಆಲಿಸಿದರು.`ಅಭಿವೃದ್ಧಿಗೆ  ಬದ್ಧ'

ಗೌರಿಬಿದನೂರು: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗಗಳ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.ತಾಲ್ಲೂಕಿನ ತೊಂಡೇಭಾವಿ ರೈಲು ನಿಲ್ದಾಣದ ಬಳಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಎನ್.ಎಂ.ರವಿನಾರಾಯಣರೆಡ್ಡಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳು ಮತದಾರರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಾ ಸುಧೀರ್ಘ ಕಾಲ ಆಡಳಿತ ನಡೆಸಿವೆ. ರಾಜ್ಯದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 650 ಕೋಟಿ ಹಣ ನೀಡಲಾಗಿದೆ. ಶಾಶ್ವತ ನೀರಾವರಿಗಾಗಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ 800ಕೋಟಿ ಹಣವನ್ನು ಬಜೆಟ್‌ನಲ್ಲಿ ಮೀಸಲಿರಿಸಿದ್ದಾರೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಕರ್ನಾಟಕವನ್ನು ನಂಬರ್ ಓನ್ ರಾಜ್ಯವನ್ನಾಗಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.ಬಿಜೆಪಿ ಅಭ್ಯರ್ಥಿ ಎನ್.ಎಂ.ರವಿನಾರಾಯಣರೆಡ್ಡಿ, ಮುಖಂಡರಾದ ನಾಚಕುಂಟೆ ಗೋಪಾಲ್, ಹನುಮೇಗೌಡ,ನಾರಾಯಣಸ್ವಾಮಿ,ಸಣ್ಣಕ್ಕಿವೆಂಕಟರವಣಪ್ಪ,ಕೋಚಿಮುಲ್ ನಿರ್ದೇಶಕ ವಿ.ಸಿ.ಗಂಗಯ್ಯ,ಜಯಣ್ಣ,ಹರೀಶ್‌ರೆಡ್ಡಿ, ಧನುಂಜಯ ಪಾಲ್ಗೊಂಡಿದ್ದರು.`ಕುತಂತ್ರ ಬಿಡಿ'

ಬಾಗೇಪಲ್ಲಿ: ನನ್ನ ಮೇಲೆ ದ್ವೇಷ ಸಾಧಿಸುವ ರಾಜಕೀಯ ಅಭ್ಯರ್ಥಿಗಳು ಅನ್ಯ ಸುಬ್ಬಾರೆಡ್ಡಿ ಹೆಸರನ್ನು ಹುಡುಕಿ, ನಾಮಪತ್ರಗಳು ಸಲ್ಲಿಸಿರುವುದು ರಾಜಕೀಯ ಕುತಂತ್ರ ಆಗಿದೆ. ಇದನ್ನು ಬಿಟ್ಟು ನೇರ ರಾಜಕೀಯ ಮಾಡಬೇಕು ಎಂದು ಪಕ್ಷೇತರ ಅಭ್ಯರ್ಥಿ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಪ್ರಚಾರ ಸಭೆಯಲ್ಲಿ ಮುಖಂಡರಾದ ಚೆಂಡೂರುವೆಂಕಟೇಶ್, ಅಮರನಾಥರೆಡ್ಡಿ, ಮೋಪೂರ್‌ರೆಡ್ಡಿ, ಶಿವರಾಮರೆಡ್ಡಿ, ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.ಭೋವಿ ಜನಾಂಗ ಬೆಂಬಲ

15 ವರ್ಷದಿಂದ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಪಕ್ಷೇತರ ಅಭ್ಯರ್ಥಿ ಎಸ್.ಎನ್.ಸುಬ್ಬಾರೆಡ್ಡಿಗೆ ನಮ್ಮ ಬೆಂಬಲವಿದೆ ಎಂದು ಭೋವಿ ಸಮುದಾಯದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕ್ಷೇತ್ರದ ಬಡ ಭೋವಿ ಸಮುದಾಯದವರು ಕನಿಷ್ಠ ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ.  ಹಾಲಿ, ಮಾಜಿ ಶಾಸಕರು, ಸಂಸದರು ಕನಿಷ್ಠ ಸೌಲಭ್ಯಗಳನ್ನು ಒದಗಿಸಿಲ್ಲ. ಈ ಹಿನ್ನೆಲೆಯಲ್ಲಿ  ಎಸ್.ಎನ್.ಸುಬ್ಬಾರೆಡಿ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದರು.ಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಸಿ.ಸಿ.ವೆಂಕಟರವಣಪ್ಪ, ಡಿ.ವಿ.ರವಿ, ಸಿ.ವೆಂಕಟರವಣಪ್ಪ, ಆಂಜನೇಯಲು, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.`ಲೈಂಗಿಕ ಹಗರಣವೇ ಬಿಜೆಪಿ ಸಾಧನೆ'

ಗುಡಿಬಂಡೆ: ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಕೇಂದ್ರ ಸಚಿವೆ ಪುರಂದರೇಶ್ವರಿ ತಿಳಿಸಿದರು.ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರ ಬುಧವಾರ ಆಯೋಜಿಸಿದ್ದ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.

5 ವರ್ಷದಲ್ಲಿ ರಾಷ್ಟ್ರದ ಸಂಪತ್ತನ್ನು ಲೂಟಿ ಮಾಡಿ, ಲೈಂಗಿಕ ಹಗರಣದಲ್ಲಿ ಪಾಲ್ಗೊಂಡಿದ್ದೇ ಬಿಜೆಪಿ ಸಾಧನೆಯಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಎನ್.ಸಂಪಂಗಿ ಮಾತನಾಡಿದರು.ಮುಖಂಡರಾದ ಲಕ್ಷ್ಮೀನಾರಾಯಣಪ್ಪ , ಅಶ್ವತ್ಥರೆಡ್ಡಿ, ಕೇಶವರೆಡ್ಡಿ, ಕೃಷ್ಣಪ್ಪ, ಎಚ್.ನರಸಿಂಹರೆಡ್ಡಿ, ಯೋಗಿಶ್ವರಿ ವಿಜಯ್,  ನರಸಿಂಹನಾಯ್ಡು,  ಇಸ್ಮಾಯಿಲ್ ಆಜಾದ್, ಅನಿಲ್ ಕುಮಾರ್, ಜಿ.ವಿ.ವಿಶ್ವನಾಥ್, ನರಸಿಂಹಪ್ಪ ಇತರರು ಇದ್ದರು.`ಅಭಿವೃದ್ಧಿ ತಡೆದ ಬಿಜೆಪಿ'

ಗೌರಿಬಿದನೂರು:ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಹುತೇಕ ನಾಯಕರು ರಾಜ್ಯದ ಆದಾಯವನ್ನು ದುರುಪಯೋಗ ಪಡಿಸಿಕೊಂಡು ಜೈಲುಪಾಲಾಗಿದ್ದಾರೆ ಎಂದು ಕೇಂದ್ರ ಸಚಿವೆ ಪುರಂದರೇಶ್ವರಿ ಟೀಕಿಸಿದರು.ಪಟ್ಟಣದ ಗಾಂಧಿ ವೃತ್ತದಲ್ಲಿ ಬುಧವಾರ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎನ್.ಎಚ್.ಶಿವಶಂಕರರೆಡ್ಡಿ ಪರ ಪ್ರಚಾರ ಭಾಷಣ ಮಾಡಿದರು.ಐದು ವರ್ಷದುದ್ದಕೂ ಕಚ್ಚಾಟದಲ್ಲಿ, ಹಣಕ್ಕಾಗಿ ಆಡಳಿತ ನೀಡಿದ ಶ್ರೇಯಸ್ಸು ಬಿಜೆಪಿ ಅವರಿಗೆ ಸಲ್ಲಬೇಕು. ರಾಜ್ಯಕ್ಕೆ ಬಿಜೆಪಿ ಹೊರತಾದ ಆಡಳಿತದ ಅಗತ್ಯವಿದೆ. ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬರುವುದೇ ಈಗ ನಿಮ್ಮ ಮುಂದಿರುವ ಆಯ್ಕೆ ಎಂದು ಪುರಂದೇಶ್ವರಿ ದೇವಿ ಹೇಳಿದರು.

ಅಭ್ಯರ್ಥಿ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿದರು.ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಘವೇಂದ್ರಹನುಮಾನ್, ಕೇಶವರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎನ್.ನಿರಂಜನ್, ಪುರಸಭೆ ಸದಸ್ಯರಾದ ಮುನಿರಾಜು, ಕಲ್ಪನಾ ರಮೇಶ್,  ವಿ.ರಮೇಶ್,ಮುಖಂಡರಾದ ಬಿ.ಕೆ.ಶಿವಪ್ಪ ಮತ್ತಿತರರು ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)