ಎಲ್ಲೆಡೆ ಮಹಾತ್ಮಗಾಂಧಿ-ಶಾಸ್ತ್ರಿ ಸ್ಮರಣೆ, ಭಜನೆ

7

ಎಲ್ಲೆಡೆ ಮಹಾತ್ಮಗಾಂಧಿ-ಶಾಸ್ತ್ರಿ ಸ್ಮರಣೆ, ಭಜನೆ

Published:
Updated:

ತುಮಕೂರು: ಜಿಲ್ಲೆಯಾದ್ಯಂತ ಮಂಗಳವಾರ ಗಾಂಧಿ ಜಯಂತಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ನಗರದ ವಿವಿಧ ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು ಸೇರಿದಂತೆ ರಾಜಕೀಯ ಪಕ್ಷಗಳ ಕಚೇರಿಗಳಲ್ಲೂ ಗಾಂಧೀಜಿಯ ಸ್ಮರಣೆ ಅನುರಣಿಸಿತು.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಆರ್.ಕೆ.ರಾಜು, ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸೂಚಿಸಿದರು. ಗಾಂಧೀಜಿಯವರ ಸರಳತೆ, ಆದರ್ಶಗಳ ಗುಣಗಾನ ಮಾಡಿದರು.ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ನೇತೃತ್ವದಲ್ಲಿ ಮುಖಂಡರು ಸಾಮೂಹಿಕವಾಗಿ ಗಾಂಧಿ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.ಗಾಂಧೀಜಿ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಗಾಂಧಿ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರಲಿದೆ. ಗಾಂಧೀಜಿ ಅಹಿಂಸಾ ಹೋರಾಟ ಜಗತ್ತಿಗೆ ಕೊಟ್ಟ ಮಹಾನ್ ಕಾಣಿಕೆ ಎಂದು ಬಣ್ಣಿಸಿದರು.ಪಕ್ಷದ ಮುಖಂಡರಾದ ವಿಜಯಪ್ರಕಾಶ್‌ಮಿರ್ಜಿ, ಸಿ.ಎನ್.ಬಾಲವರ್ಧನ್, ದೊಡ್ಡಯ್ಯ, ಕೆ.ಬಿ.ಬೋರೇಗೌಡ, ಬೆಳ್ಳಿ ಲೋಕೇಶ್, ಇಕ್ಬಾಲ್ ಅಹಮದ್, ರಾಣಿ ಚಂದ್ರಶೇಖರ್, ಎಚ್.ಮಲ್ಲಿಕಾರ್ಜುನಯ್ಯ ಇನ್ನಿತರರು ಹಾಜರಿದ್ದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗಾಂಧಿ ಜಯಂತಿ ಜೊತೆಗೆ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನೂ ಆಚರಿಸಲಾಯಿತು. ಸಮಾರಂಭದಲ್ಲಿ ಮಾತನಾಡಿದ ಪಕ್ಷದ ಮುಖಂಡರು, ಈ ಇಬ್ಬರು ಮಹಾನ್ ನಾಯಕರ ಸರಳ ಬದುಕಿನ ಗುಣಗಾನ ಮಾಡಿದರು.ಸಮಾರಂಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ರಸಾದ್, ಉಪಾಧ್ಯಕ್ಷ ದೊಡ್ಮನೆ ಗೋಪಾಲಗೌಡ, ಪ್ರಧಾನ ಕಾರ್ಯದರ್ಶಿ ಅಖಿಲಾನಂದ, ಮುಖಂಡರಾದ  ರವೀಶಯ್ಯ, ಸದಾಶಿವಯ್ಯ, ನಂದೀಶ್ ಇತರರು ಇದ್ದರು.

ನಗರದ ಮಂಡಿಪೇಟೆ ಹಮಾಲರ ಕನ್ನಡ ಯುವಕರ ಸಂಘ, ಜಿಲ್ಲಾ ಭಾರತ ಸೇವಾದಲ, ಸರ್ಕಾರಿ ಪದವಿ ಪೂರ್ವ ಕಾಲೇಜು, ಸಿದ್ದಗಂಗಾ ಕಾಲೇಜು ವಿವಿಧೆಡೆ ಗಾಂಧಿ ಜಯಂತಿ ನಡೆಯಿತು.ಗಾಂಧಿ ಜನಮನದ ಪ್ರತಿಧ್ವನಿ

ಮಧುಗಿರಿ: ಗಾಂಧೀಜಿ ನೆಲದ ಧ್ವನಿ, ಜನಮನದ ಪ್ರತಿಧ್ವನಿ. ಅಧಿಕಾರವಿಲ್ಲದೆ ದೇಶದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ ಎಂದು ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಅಭಿಪ್ರಾಯಪಟ್ಟರು.

ಪುರಸಭೆ ವತಿಯಿಂದ ಪುರಭವನದಲ್ಲಿ ಏರ್ಪಡಿಸಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಮಾತನಾಡಿದ ಅವರು, ಅನ್ಯಾಯದ ದಬ್ಬಾಳಿಕೆ ವಿರುದ್ಧ ಅಹಿಂಸೆಯನ್ನು ಅಸ್ತ್ರವಾಗಿ ಬಳಸಿದ್ದರು ಎಂದರು.ನಿವೃತ್ತ ಶಿಕ್ಷಕ ಜಿ.ಸಿದ್ದಗಂಗಪ್ಪ ಮಾತನಾಡಿದರು. ಪುರಸಭೆ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಮಧು ಭಗವದ್ಗೀತೆ, ಮೌಲಿ ಶಬೀರ್ ಅಹಮ್ಮದ್ ಕುರಾನ್ ಹಾಗೂ ಫಾಸ್ಟರ್ ಪ್ರಸಾದ್ ಬೈಬಲ್ ವಾಚಿಸಿದರು.ಉಪಾಧ್ಯಕ್ಷೆ ಎಂ.ಜಿ.ಲಲಿತಕುಮಾರಿ, ಮಾಜಿ ಅಧ್ಯಕ್ಷ ಎಂ.ವಿ.ಗೋವಿಂದರಾಜು, ಸದಸ್ಯರಾದ ಎಂ.ವಿ.ಮಂಜುನಾಥ್, ಉಮೇಶ್, ಶ್ರೀಧರ್, ಎಸ್.ವಿಶ್ವಾರಾಧ್ಯ, ಆರ್‌ಎಲ್‌ಎಸ್ ರಮೇಶ್, ಅನಂತ ಕೃಷ್ಣರಾಜು, ಸುಜಾತಮ್ಮ, ರತ್ನಮ್ಮ, ಲೀಲಮ್ಮ, ರತ್ನಮ್ಮ ಕಳಸಪ್ಪ, ಶ್ರೀನಿವಾಸಮೂರ್ತಿ, ಮುಖ್ಯಾಧಿಕಾರಿ ಪಿ.ಎಸ್.ಮಾರುತಿ ಶಂಕರ್ ಇತರರು ಉಪಸ್ಥಿತರಿದ್ದರು.ಮಹಾತ್ಮ ಗಾಂಧೀಜಿ ಸ್ಮರಣೆ

ಚಿಕ್ಕನಾಯಕನಹಳ್ಳಿ: ತಾಲ್ಲೂಕು ಸ್ವಾತಂತ್ರ್ಯ ಹೋರಾಟಗಾರರ ಸಂಘದಿಂದ ಗಾಂಧಿ ಜಯಂತಿ ಅಂಗವಾಗಿ ಗಾಂಧಿಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಎಸ್‌ಮುರುಡಯ್ಯ ಅಧ್ಯಕ್ಷತೆಯಲ್ಲಿ ಗಾಂಧಿ ಸ್ಮರಣೆ ಕಾರ್ಯಕ್ರಮ ನಡೆಯಿತು. ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್, ಸಾಹಿತಿ ಎಂ.ವಿ.ನಾಗರಾಜರಾವ್, ಮುಖಂಡರಾದ ಎಚ್‌ಬಿಎಸ್ ನಾರಾಯಣಗೌಡ, ಸಿ.ಎಲ್.ಜಯದೇವ್, ಶ್ರೀನಿವಾಸಮೂರ್ತಿ ಗಾಂಧೀಜಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕೆ.ಜಿ.ಕೃಷ್ಣೇಗೌಡ, ನಾಗೇಶಯ್ಯ, ಸಿ.ಬಿ.ರೇಣುಕಸ್ವಾಮಿ ಇದ್ದರು.`ಸರಳ ಬದುಕು; ಉನ್ನತ ಚಿಂತನೆ~

ಪಾವಗಡ: `ಸರಳವಾಗಿ ಬದುಕಿ, ಉನ್ನತವಾದುದನ್ನು ಚಿಂತಿಸಿ~ ಎಂಬ ಘೋಷವಾಕ್ಯ ಯುವಕರ ಮಂತ್ರವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಪಿ.ನಾಗರಾಜಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ಎಸ್‌ಎಂಬಿಆರ್ ವಿದ್ಯಾಸಂಸ್ಥೆಯಲ್ಲಿ ಗಾಂಧಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಗಾಂಧೀಜಿ ಭಾವ ಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮರ ಸಂದೇಶ ಪಾಲಿಸಿದರೆ ಶಾಂತಿ ನೆಲೆಸುತ್ತದೆ ಎಂದರು. ಶಿಕ್ಷಣ ಇಲಾಖೆ ಅಧಿಕಾರಿ ಸುರೇಂದ್ರನಾಥ್, ವೆಂಕಟೇಶ್, ಪ್ರಭಾವತಿ, ವೆಂಕಟ ರಾಮದಾಸ್, ಶಿರೀಷ ಭಾಗವಹಿಸಿದ್ದರು. ಮಕ್ಕಳು ಶಾಲಾ ಆವರಣ, ವೇಣು ಗೋಪಾಲಸ್ವಾಮಿ ದೇವಾಲಯದ ಆವರಣ ಸ್ವಚ್ಛಗೊಳಿಸಿದರು. ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಬಿಇಒ ನಾಗರಾಜಪ್ಪ ಗಾಂಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಇಸಿಒ ಪಾತಣ್ಣ, ಜಯರಾಂ ಸುರೇಂದ್ರಕುಮಾರ್. ಜಯಣ್ಣ ಭಾಗವಹಿಸಿದ್ದರು.ಪಟ್ಟಣದ ಬಾಪೂಜಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಜನೆ ಮಾಡುವ ಮೂಲಕ ಗಾಂಧಿ ಜಯಂತಿ ಆಚರಿಸಿದರು. ಮುಖ್ಯಶಿಕ್ಷಕ ಮಹಬೂಬ್‌ಭಾಷಾ, ಗೋವಿಂದರೆಡ್ಡಿ, ಧರ್ಮಪ್ಪ, ರಾಮಾಂಜಿನರೆಡ್ಡಿ ಗಾಂಧೀಜಿ ಸಂದೇಶ ತಿಳಿಸಿದರು.ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಚೆನ್ನಬಸಪ್ಪ ಗಾಂಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ರವಿಕುಮಾರ್, ನಾಗರಾಜ್, ಕಂದಾಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.ವೈ.ಎನ್.ಹೊಸಕೋಟೆ: ಕಲುಷಿತ ಸಮಾಜದಲ್ಲಿ ಗಾಂಧಿ ತತ್ವ ಮರೆಯಾಗುತ್ತಿವೆ. ಯುವಕರು ಗಾಂಧಿ ತತ್ವ ಅನುಷ್ಠಾನ ಮಾಡಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ವೈ.ಎನ್.ಹೊಸಕೋಟೆಯ ಆರ್‌ವಿಪಿ ಕಾಲೇಜು ಪ್ರಾಂಶುಪಾಲ ಸಣ್ಣನಾಗಪ್ಪ ಅಭಿಪ್ರಾಯಪಟ್ಟರು.ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಗಾಂಧಿ ಹುಟ್ಟಿದ ನಾಡಿನಲ್ಲಿ ಅವರ ಆದರ್ಶಗಳಿಗೆ ವಿಮುಖವಾಗಿ ಸಮಾಜ ನಡೆಯುತ್ತಿದೆ. ಇದು ಬದಲಾವಣೆಯಾಗಬೇಕು ಎಂದರು.

ವಿದ್ಯಾರ್ಥಿಗಳು ಭಜನೆ ಮಾಡಿದರು. ಶ್ರೀನಿವಾಸ್ ವೆಂಕಟಾಚಲಪತಿಶೆಟ್ಟಿ ಭಾಗವಹಿಸಿದ್ದರು.ಮಂಗಳವಾಡ: ಮಹಾತ್ಮ ಗಾಂಧೀಜಿ ಆದರ್ಶ-ತತ್ವ ಉನ್ನತವಾಗಿದ್ದರೂ; ಅವು ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂದು ಗ್ರಾಮದ ಅಂತ್ಯೋದಯ ವಿದ್ಯಾಸಂಸ್ಥೆ ಪ್ರಾಂಶುಪಾಲ ಬಿ.ಕೆ.ಮುನಿಸ್ವಾಮಿ ವಿಷಾದ ವ್ಯಕ್ತಪಡಿಸಿದರು. ಶಾಲಾ ಆವರಣದಲ್ಲಿ ಶ್ರಮದಾನ ಮಾಡಲಾಯಿತು. ರಾಮಣ್ಣ ಪಾಲ್ಗೊಂಡಿದ್ದರು.ಗಾಂಧಿ ತತ್ವ ಸಾರ್ವಕಾಲಿಕ

ಕುಣಿಗಲ್: ಮಹಾತ್ಮಗಾಂಧೀಜಿ ಸರಳತೆ, ತತ್ವ ಆದರ್ಶ ಸರ್ವಕಾಲಕ್ಕೂ ಶ್ರೇಷ್ಠವಾಗಿದ್ದು, ಇಂದಿನ ಜನಾಂಗ ಅನ್ಯ ಸಂಸ್ಕೃತಿಗೆ ಮೊರೆ ಹೋಗಿ ಅವುಗಳನ್ನು ಮರೆಯುತ್ತಿರುವುದು ವಿಷಾದನೀಯ ಎಂದು ಶಾಸಕ ಬಿ.ಬಿ.ರಾಮಸ್ವಾಮಿಗೌಡ ಆತಂಕ ವ್ಯಕ್ತಪಡಿಸಿದರು.ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಗಾಂಧಿ ಜಯಂತಿಯಲ್ಲಿ ಮಾತನಾಡಿ, ವಿಶ್ವದ ಬಹುತೇಕ ರಾಷ್ಟ್ರದ ಜನತೆ ಗಾಂಧೀಜಿ ತತ್ವ ಸಿದ್ಧಾಂತಗಳಿಗೆ ಮನಸೋತು ಅಧ್ಯಯನಶೀಲರಾಗುತ್ತಿದ್ದರೆ; ಯುವ ಭಾರತ ಗಾಂಧೀಜಿ ತತ್ವಗಳನ್ನು ಕಡೆಗಣಿಸುತ್ತಿದೆ ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್.ಹುಚ್ಚಯ್ಯ ಮಾತನಾಡಿದರು. ತಹಶೀಲ್ದಾರ್ ಎನ್.ಸಿ.ಜಗದೀಶ್, ಡಿಎಸ್‌ಎಸ್‌ನ ಶಿವಶಂಕರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಶ್ರದ್ಧಾ ಭಕ್ತಿಯಿಂದ ಆಚರಣೆ

ಶಿರಾ: ತಾಲ್ಲೂಕಿನ ಶಾಲಾ ಕಾಲೇಜು, ಸರ್ಕಾರಿ ಕಚೇರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಕಚೇರಿಯಲ್ಲಿ ಮಂಗಳವಾರ ಶ್ರದ್ಧಾ ಭಕ್ತಿಯಿಂದ ಮಹಾತ್ಮ ಗಾಂಧೀಜಿಯವರ 144ನೇ ಜಯಂತಿಯನ್ನು ಆಚರಿಸಲಾಯಿತು.

ತಾಲ್ಲೂಕು ಆಡಳಿತದಿಂದ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಗಾಂಧಿ ಜಯಂತಿಯಲ್ಲಿ ತಹಶೀಲ್ದಾರ್ ಜಿ.ಎಚ್.ನಾಗಹನುಯ್ಯ ಸೇರಿದಂತೆ ತಾಲ್ಲೂಕು ಕಚೇರಿ ಅಧಿಕಾರಿಗಳು ಪಾಲ್ಗೊಂಡಿದ್ದರು.ನಗರಸಭೆ ಆವರಣದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಅಮಾನುಲ್ಲಾಖಾನ್, ಪೌರಾಯುಕ್ತ ಬಿ.ಟಿ.ರಂಗಸ್ವಾಮಿ, ಸದಸ್ಯರಾದ ರಾಜಣ್ಣ, ಪಾಂಡುರಂಗಪ್ಪ ಮತ್ತಿತರರು ಪಾಲ್ಗೊಂಡು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ವಾಸವಿ ಮಹಿಳಾ ಸಮಾಜದ ವತಿಯಿಂದ ಭಗವದ್ಗೀತಾ ಅಭಿಯಾನ ಆರಂಭಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry