ಶನಿವಾರ, ಮೇ 15, 2021
26 °C

ಎಲ್ಲೆಡೆ ಲೋಡ್‌ಶೆಡ್ಡಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆ ಬಹುತೇಕ ಮೇ ಅಂತ್ಯದವರೆಗೂ ಮುಂದುವರಿಯಲಿದೆ. ಬಿರುಸಿನ ಮಳೆಯಾಗಿ ಬೇಡಿಕೆ ಪ್ರಮಾಣ ಕಡಿಮೆಯಾಗದಿದ್ದರೆ ಅಥವಾ ಪವನ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಾಗದಿದ್ದರೆ ಲೋಡ್‌ಶೆಡ್ಡಿಂಗ್ ಮುಂದುವರಿಸದೆ ಬೇರೆ ದಾರಿಯೇ ಇಲ್ಲ ಎಂದು ಇಂಧನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ನಾಲ್ಕು ಘಟಕಗಳು ಸ್ಥಗಿತಗೊಂಡಿರುವುದರಿಂದ ಸೋಮವಾರದಿಂದ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದೆ. ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಸಲು ಸಾಧ್ಯವಾಗದ ಕಾರಣ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲ ಕಡೆ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ.

ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ನಿತ್ಯ ಎಷ್ಟು ಗಂಟೆ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತದೆ ಎಂಬುದನ್ನು ವಿದ್ಯುತ್ ಸರಬರಾಜು ಕಂಪೆನಿಗಳು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಕೆಲ ನಗರ ಪ್ರದೇಶಗಳಲ್ಲಿ ಎರಡು ಗಂಟೆ ಕಾಲ ಕಡಿತ ಮಾಡಲಾಗುತ್ತಿದೆ. ಹಲವು ಭಾಗಗಳಲ್ಲಿ 4-5 ಗಂಟೆ ಕಡಿತವಾಗುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಆರು ಗಂಟೆ ಕಾಲ ತ್ರಿಫೇಸ್ ಮತ್ತು ರಾತ್ರಿ ವೇಳೆ ನಿರಂತರವಾಗಿ ಸಿಂಗಲ್‌ಫೇಸ್ ವಿದ್ಯುತ್ ನೀಡಲಾಗುವುದು ಎಂದು ಸರ್ಕಾರ ಹೇಳಿತ್ತು. ಆದರೆ ಇದರ ಪಾಲನೆಯಾಗುತ್ತಿಲ್ಲ. ಪದೇ ಪದೇ ವಿದ್ಯುತ್ ಕಡಿತವಾಗುತ್ತಿರುವುದರಿಂದ ಜನ ಪರದಾಡುವಂತಾಗಿದೆ.

`ಶುರುವಾಗದ ಉತ್ಪಾದನೆ~
ರಾಯಚೂರು: `ಕೃಷ್ಣಾ~ ನದಿ ಬತ್ತಿರುವುದರಿಂದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ ನೀರಿನ ಅಭಾವ ಮುಂದುವರಿದಿದೆ. ಮೂರು ದಿನದ ಹಿಂದೆ ಸ್ಥಗಿತಗೊಂಡಿರುವ ಆರ್‌ಟಿಪಿಎಸ್‌ನ 4 ಘಟಕಗಳಲ್ಲಿ ನೀರಿನ ಅಭಾವದ ಕಾರಣ ಬುಧವಾರವೂ ವಿದ್ಯುತ್ ಉತ್ಪಾದನೆಯಾಗಲಿಲ್ಲ.

ತಾಂತ್ರಿಕ ಸಮಸ್ಯೆಯಿಂದ ಬುಧವಾರ 1ನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿತ್ತು. ದುರಸ್ತಿ ಪೂರ್ಣಗೊಂಡಿದ್ದರಿಂದ ಸಂಜೆಯಿಂದ ಮತ್ತೆ ಈ ಘಟಕವು ವಿದ್ಯುತ್ ಉತ್ಪಾದನೆ ಆರಂಭಿಸಿತು.

ಸದ್ಯ 3, 6, 7, 8  ಈ  ನಾಲ್ಕು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. 1, 2, 4, 5ನೇ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಆರ್‌ಟಿಪಿಎಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಭಾಸ್ಕರ್ ತಿಳಿಸಿದ್ದಾರೆ.

ಇಂಧನ ಇಲಾಖೆ ಮೂಲಗಳ ಪ್ರಕಾರ ಬುಧವಾರ 700 ಮೆಗಾವಾಟ್ ಅಧಿಕೃತ ಖೋತಾ (ಲೋಡ್‌ಶೆಡ್ಡಿಂಗ್) ಜೊತೆಗೆ ಅನಿಯಮಿತವಾಗಿ ಸುಮಾರು 500ರಿಂದ 700 ಮೆಗಾವಾಟ್ ವಿದ್ಯುತ್ ಖೋತಾ ಮಾಡಲಾಗಿದೆ.

ಮಂಗಳವಾರಕ್ಕೆ ಹೋಲಿಸಿದರೆ ಬುಧವಾರದ ಪೂರೈಕೆಯಲ್ಲಿ ಸುಧಾರಣೆ ಕಂಡು ಬಂದಿದೆ. ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಉಡುಪಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ 600 ಮೆಗಾವಾಟ್ ಸಾಮರ್ಥ್ಯದ ಮೊದಲ ಘಟಕದಲ್ಲಿ ಬುಧವಾರ ಬೆಳಿಗ್ಗೆಯಿಂದ ವಿದ್ಯುತ್ ಉತ್ಪಾದನೆ ಪುನರಾರಂಭವಾಗಿದೆ.

ಆರ್‌ಟಿಪಿಎಸ್‌ನ ನಾಲ್ಕು ಘಟಕಗಳು ಸ್ಥಗಿತಗೊಂಡಿದ್ದರೂ ವಿವಿಧ ಮೂಲಗಳಿಂದ ಮಂಗಳವಾರ ಒಟ್ಟು 159.25 ದಶಲಕ್ಷ ಯೂನಿಟ್ ವಿದ್ಯುತ್ ಪೂರೈಕೆಯಾಗಿದೆ. (ಕಳೆದ ವರ್ಷ ಏಪ್ರಿಲ್ 24ರಂದು ಒಟ್ಟು 118 ದಶಲಕ್ಷ ಯೂನಿಟ್ ಪೂರೈಕೆಯಾಗಿತ್ತು.)

ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಲವಿದ್ಯುತ್ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಏರಿಸಲಾಗಿದೆ. ಮಂಗಳವಾರ 56.14 ದಶಲಕ್ಷ ಯೂನಿಟ್ ಜಲವಿದ್ಯುತ್ ಉತ್ಪಾದನೆಯಾಗಿದೆ. 8-10 ದಿನಗಳ ಹಿಂದಕ್ಕೆ ಹೋಲಿಸಿದರೆ ವಿದ್ಯುತ್ ಬೇಡಿಕೆಯಲ್ಲಿ ಸ್ವಲ್ಪಮಟ್ಟಿನ ಕುಸಿತವಾಗಿದೆ. 190 ದಶಲಕ್ಷ ಯೂನಿಟ್‌ವರೆಗೂ ಇದ್ದ ಬೇಡಿಕೆ ಪ್ರಮಾಣ ಈಗ 170 ದಶಲಕ್ಷ ಯೂನಿಟ್‌ಗೆ ಇಳಿದಿದೆ. ಸದ್ಯ 160 ದಶಲಕ್ಷ ಯೂನಿಟ್ ಪೂರೈಕೆಯಾಗುತ್ತಿದ್ದು, ಬೇಡಿಕೆ ಮತ್ತು ಪೂರೈಕೆ ನಡುವೆ 10 ದಶಲಕ್ಷ ಯೂನಿಟ್ ವ್ಯತ್ಯಾಸವಿದೆ.

ನೀರಿನ ಮಟ್ಟ: ಬುಧವಾರ ಬೆಳಗಿನ ಮಾಹಿತಿ ಪ್ರಕಾರ ಪ್ರಮುಖ ಜಲವಿದ್ಯುತ್ ಉತ್ಪಾದನಾ ಜಲಾಶಯವಾದ ಲಿಂಗನಮಕ್ಕಿಯಲ್ಲಿ 1771.45 ಅಡಿ (1778.10) ನೀರಿನ ಸಂಗ್ರಹವಿತ್ತು. ಸೂಪಾದಲ್ಲಿ 523.62 ಮೀ. (529.38 ಮೀ.) ಹಾಗೂ ಮಾಣಿಯಲ್ಲಿ 575.62 ಮೀ. (573.99 ಮೀ.) ನೀರಿದೆ.

ಆವರಣದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ ಇದ್ದ ನೀರಿನ ಪ್ರಮಾಣದ ಮಾಹಿತಿ ನೀಡಲಾಗಿದೆ.

ಗುರುವಾರದ ವೇಳೆಗೆ ನೀರು: ಆರ್‌ಟಿಪಿಎಸ್‌ನಲ್ಲಿ ನೀರಿನ ಸಮಸ್ಯೆಯಿಂದ ಸ್ಥಗಿತಗೊಂಡಿರುವ ನಾಲ್ಕು ಘಟಕಗಳಲ್ಲಿ ಆದಷ್ಟು ಬೇಗ ವಿದ್ಯುತ್ ಉತ್ಪಾದನೆ ಪುನರಾರಂಭಿಸಲು ಗಮನ ನೀಡಲಾಗಿದೆ. ಗುರುವಾರದ ವೇಳೆಗೆ ನಾರಾಯಣಪುರ ಜಲಾಶಯದ ನೀರು ಆರ್‌ಟಿಪಿಎಸ್ ತಲುಪಲಿದ್ದು, ಆ ನಂತರ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಐದು ಸಾವಿರ ಕ್ಯೂಸೆಕ್ ನೀರನ್ನು ನಾರಾಯಣಪುರ ಜಲಾಶಯದಿಂದ ಬಿಡುಗಡೆ ಮಾಡಲಾಗಿದೆ. ಕಾಲುವೆಗಳಲ್ಲಿ ಮರಳು ತೆಗೆದಿರುವುದರಿಂದ ಹಳ್ಳಗಳಲ್ಲಿ ನೀರು ನಿಲ್ಲುತ್ತಿದೆ. ಹಳ್ಳಗಳು ತುಂಬಿದ ನಂತರ ನೀರು ಹರಿಯಬೇಕಾಗಿರುವುದರಿಂದ ಶಕ್ತಿನಗರ ತಲುಪುವುದು ತಡವಾಗಿದೆ ಎಂದು ತಿಳಿಸಿದರು.

`ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗದಂತೆ ನಿಗಾ ವಹಿಸಿದ್ದು, ಅಗತ್ಯ ಬಿದ್ದರೆ ಜಿಂದಾಲ್ ಉಕ್ಕು ಸಂಸ್ಥೆಯಿಂದ ಇನ್ನೂ ಹೆಚ್ಚುವರಿಯಾಗಿ 180 ಮೆಗಾವಾಟ್ ವಿದ್ಯುತ್ ಖರೀದಿಗೆ ಕ್ರಮ ತೆಗೆದುಕೊಳ್ಳಲಾಗುವುದು. ಛತ್ತೀಸ್‌ಗಡದಿಂದ ಈ ಹಿಂದೆ ಕೇವಲ 60ರಿಂದ 70 ಮೆಗಾವಾಟ್ ವಿದ್ಯುತ್ ಲಭ್ಯ ಇತ್ತು. ಈಗ ಆ ರಾಜ್ಯದಿಂದ 250 ಮೆಗಾವಾಟ್‌ಗೆ ಖರೀದಿ ಮಾಡುತ್ತಿದ್ದು, ಪರಿಸ್ಥಿತಿ ಸುಧಾರಿಸುವ ಹಂತದಲ್ಲಿದೆ~ ಎಂದು ಶೋಭಾ ವಿವರಿಸಿದರು.

ಒಟ್ಟಾರೆ, 990 ಮೆಗಾವಾಟ್ ವಿದ್ಯುತ್ ಖರೀದಿ ಮಾಡುತ್ತಿದ್ದು, ಹೆಚ್ಚುವರಿ ವಿದ್ಯುತ್ ಖರೀದಿಗೆ ಪ್ರಸರಣ ಮಾರ್ಗದ ಸಮಸ್ಯೆ ಎದುರಾಗಿದೆ ಎಂದರು.

`ಜಲವಿದ್ಯುತ್ ಮೂಲಗಳಿಂದ ಜೂನ್ 30ರವರೆಗೆ ಒಟ್ಟು 2,173 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಪ್ರತಿನಿತ್ಯ 51.5 ದಶಲಕ್ಷ ಯೂನಿಟ್ ಪ್ರಸ್ತುತ ಉತ್ಪಾದನೆ ಮಾಡುತ್ತಿದ್ದು, ಅದನ್ನು ಸ್ವಲ್ಪ ಕಡಿಮೆ ಅಂದರೆ 40.5 ದಶಲಕ್ಷ ಯೂನಿಟ್‌ಗೆ ಇಳಿಸಿದರೆ, ಸುಮಾರು 66 ದಿನ ಜಲ ವಿದ್ಯುತ್ ಉತ್ಪಾದನೆ ಮಾಡಬಹುದು. ಆ ವೇಳೆಗೆ ಮಳೆ ಆರಂಭವಾಗಲಿದ್ದು, ಹೆಚ್ಚಿನ ಸಮಸ್ಯೆ ಆಗುವುದಿಲ್ಲ~ ಎಂದು ತಿಳಿಸಿದರು.

ಮುಂದಿನ ಬೇಸಿಗೆಗೆ ಗುಜರಾತ್‌ನಿಂದ 500 ಮೆಗಾವಾಟ್ ವಿದ್ಯುತ್ ಲಭ್ಯವಾಗಲಿದೆ. ಈ ಕುರಿತು ಅಲ್ಲಿನ ಸರ್ಕಾರದ ಜತೆ ಒಪ್ಪಂದ ಕೂಡ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಛತ್ತೀಸ್‌ಗಡ ಶಾಖೋತ್ಪನ್ನ ವಿದ್ಯುತ್ ಘಟಕಕ್ಕೆ ಕಲ್ಲಿದ್ದಲು ಸರಬರಾಜು ಮಾಡಲು ಇವತ್ತಿಗೂ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ಛತ್ತೀಸ್‌ಗಡ ಸರ್ಕಾರದ ಮೈನಿಂಗ್ ಕಾರ್ಪೊರೇಷನ್‌ನಿಂದ ಕಲ್ಲಿದ್ದಲು ಗಣಿ ಪಡೆಯುವ ಬಗ್ಗೆ ಮಾತುಕತೆ ನಡೆದಿದ್ದು, ಸದ್ಯದಲ್ಲೇ ಒಪ್ಪಂದ ಆಗುವ ಸಾಧ್ಯತೆ ಇದೆ. ನಂತರ ಛತ್ತೀಸ್‌ಗಡ ಶಾಖೋತ್ಪನ್ನ ಘಟಕದ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಾಗುವುದು. ಅಲ್ಲಿ ಸುಮಾರು 1600 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಇದೆ ಎಂದು ಹೇಳಿದರು.

ಬಳ್ಳಾರಿ ಎರಡನೇ ಘಟಕ: `ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ 500 ಮೆಗಾವಾಟ್ ಸಾಮರ್ಥ್ಯದ 2ನೇ ಘಟಕಕ್ಕೆ ಕಲ್ಲಿದ್ದಲು ಸರಬರಾಜು ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಮುಂದಿನ ತಿಂಗಳ 2ನೇ ವಾರದಲ್ಲಿ ಅದು ವಿದ್ಯುತ್ ಉತ್ಪಾದನೆಯನ್ನು ಆರಂಭಿಸಲಿದೆ~ ಎಂದು ಹೇಳಿದರು.

`ಒಡಿಶಾದಿಂದ ಕಲ್ಲಿದ್ದಲು ಸರಬರಾಜಿಗೆ ಒಪ್ಪಂದ ಆಗಿದ್ದು, ಮೇ 15ರೊಳಗೆ ಅದು ರಾಜ್ಯ ತಲುಪುವ ವಿಶ್ವಾಸ ಇದೆ. ಬಳಿಕ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಲಾಗುವುದು~ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.