ಮಂಗಳವಾರ, ಜುಲೈ 14, 2020
24 °C

ಎಲ್ಲೆಡೆ ಶಿವನ ಜಪ: ಹರಿದು ಬಂದ ಭಕ್ತಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲೆಡೆ ಶಿವನ ಜಪ: ಹರಿದು ಬಂದ ಭಕ್ತಸಾಗರ

ಶಿವಮೊಗ್ಗ: ಜಿಲ್ಲಾದ್ಯಂತ ಬುಧವಾರ ಮಹಾಶಿವರಾತ್ರಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಎಲ್ಲಾ ಶಿವನ ದೇವಾಲಯಗಳ ಮುಂದೆ ಜನ ದರ್ಶನಕ್ಕಾಗಿ ಸಾಲುಗಟ್ಟಿದ್ದರು.ಪ್ರತಿ ವರ್ಷದಂತೆ ಈ ಬಾರಿಯೂ ನಗರದ ಹೊರವಲಯದ ಹರಕೆರೆ ಶಿವನ ದೇವಾಲಯ ಪ್ರಮುಖ ಆಕರ್ಷಣೆಯಾಗಿತ್ತು. ಹರಕೆರೆ ದೇವಾಲಯದಲ್ಲಿ ‘ಮಹಾಶಿವರಾತ್ರಿ’ಗೆ ಸಕಲ ಸಿದ್ಧತೆಗಳನ್ನು ಮಾಡಲಾಗಿತ್ತು. ಬಹುತೇಕ ಎಲ್ಲ ವಾಹನಗಳು ಹರಕೆರೆ ಕಡೆಗೆ ಮುಖಮಾಡಿದ್ದವು. ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಶಿವನ ಆರಾಧನೆಗಾಗಿ ತಂಡೋಪತಂಡವಾಗಿ ಸಮೀಪದ ಅಭಯಂಕರನ ದರ್ಶನಕ್ಕೆ ಹರಿದು ಬರಲಾರಂಭಿಸಿತ್ತು.ಮಕ್ಕಳು ಸೇರಿದಂತೆ ಭಕ್ತರು ನಗರದ ತುಂಗಾನದಿಯಲ್ಲಿ ಸ್ನಾನ ಮಾಡಿ, ನೇರವಾಗಿ ದೇವಸ್ಥಾನಕ್ಕೆ ತೆರಳಿ, ಶಿವನ ದರ್ಶನ ಪಡೆಯುತ್ತಿದ್ದುದು ಕಂಡುಬಂತು. ಹರಕೆರೆಯಲ್ಲಿ ಹರಿದುಬರುತ್ತಿದ್ದ ಭಕ್ತರಿಗೆ ದೇವಾಲಯ ಸಮಿತಿಯಿಂದ ಮಜ್ಜಿಗೆ ಮತ್ತು ತಂಪು ಪಾನೀಯ, ಪ್ರಸಾದ ವಿತರಿಸಲಾಗುತ್ತಿತ್ತು. ಇಲ್ಲಿ ಈ ಬಾರಿ ದೇವಾಲಯದ ಗರ್ಭಗುಡಿ ಪ್ರವೇಶ ನಿರ್ಬಂಧಿಸಲಾಗಿತ್ತು. ಪ್ರವೇಶ ದ್ವಾರದಲ್ಲೇ ಶಿವನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಭಕ್ತರು ಗಂಟೆಗಟ್ಟಲೆ ನಿಲ್ಲುವ ತಾಪತ್ರಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು.  ನಗರದ ಪ್ರಮುಖ ದೇವಾಲಯಗಳಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ಸಾವಿರಾರು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ಗುರುವಾರ ಬೆಳಿಗ್ಗೆ ಆರು ಗಂಟೆವರೆಗೂ ಭಕ್ತರು ಆಗಮಿಸಲಿದ್ದು, ಸಾವಿರಾರು ಜನ ಹರಕೆರೆಯ ಅಭಯಂಕರನ ದರ್ಶನಕ್ಕೆ ಬರಲಿದ್ದಾರೆ. ಶಿವರಾತ್ರಿ ಪ್ರಯುಕ್ತ ನಗರದ ಆದಿ ಚುಂಚನಗಿರಿ ಶಾಖಾಮಠದ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಮಹಿಳೆಯರಿಂದ ಅಖಂಡ ಭಜನೆ, ಗುರು ಕರಿಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ರುದ್ರಾಭಿಷೇಕ, ಕ್ಷೀರಾಭಿಷೇಕ, ವ್ಯಕ್ತಿ ವಿಕಾಸ ಕೇಂದ್ರದಿಂದ ಶುಭಮಂಗಳ ಸಮುದಾಯ ಭವನದಲ್ಲಿ ಮಹಾರುದ್ರಾಭಿಷೇಕ ಸಂಕಲ್ಪ ಪೂಜೆ ಮತ್ತು ಶಿವಾರ್ಪಣಮ್, ಮಾರುತಿ ಬಡಾವಣೆಯ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ಕ್ಷೀರಾಭಿಷೇಕ, ವಿಶೇಷ ಅಲಂಕಾರ, ಸ್ವಾಮಿ ವಿವೇಕಾನಂದ ಬಡಾವಣೆಯ ನಾಗಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ರುದ್ರಾಭಿಷೇಕ ಸಹಿತ ಶಿವಕಲ್ಪೋಕ್ತ ಪೂಜೆ ನಡೆಯಿತು.ಈಶ್ವರನ ದರ್ಶನ

ಭದ್ರಾವತಿ ವರದಿ:
ಇಲ್ಲಿನ ಭದ್ರಾನದಿಯ ಈಶ್ವರ, ಬಲಮುರಿ ಗಣಪತಿ ಹಾಗೂ ನಾಗದೇವತೆ ದರ್ಶನಕ್ಕೆ ಶಿವರಾತ್ರಿ ದಿನವಾದ ಬುಧವಾರ ಸಹಸ್ರಾರು ಜನರು ಸರದಿ ಸಾಲಿನಲ್ಲಿ ಆಗಮಿಸಿದರು.  ವೀರಶೈವ ಸೇವಾ ಸಮಿತಿ ಮಂಗಳವಾರ ಸಂಜೆ ನದಿ ತಟದಲ್ಲಿ ಹೋಮ, ಬೆಳಿಗ್ಗೆ ರುದ್ರಾಭಿಷೇಕವನ್ನು ಏರ್ಪಡಿಸಿದ್ದು, ಬಿಳಿಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ ಈ ಧಾರ್ಮಿಕ ಕಾರ್ಯ ನಡೆಯಿತು.ಸಹಸ್ರಾರು ಭಕ್ತರು ನದಿಯ ತಟದಲ್ಲಿನ ಈ ತ್ರಿಮೂರ್ತಿಗಳ ದರ್ಶನ ಪಡೆದು ಸಾಗುತ್ತಿದ್ದ ದೃಶ್ಯ ನಿರಂತರವಾಗಿ ನಡೆದಿತ್ತು. ನದಿಯಲ್ಲಿನ ದೇವರ ಮಂಟಪಕ್ಕೆ ಈಬಾರಿ ವಿಶೇಷ ಅಲಂಕಾರ ಮಾಡಿದ್ದು ಸಾಕಷ್ಟು ಆಕರ್ಷಣೆಯನ್ನು ಹೆಚ್ಚು ಮಾಡಿತ್ತು.ಹೊಸಮನೆ

ಎನ್‌ಎಂಸಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ರುದ್ರಾಭಿಷೇಕ, ಪೂಜೆ ನಡೆಯಿತು. ಈ ಭಾಗದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.ಕಾಗದನಗರ: ಇಲ್ಲಿನ ಈಶ್ವರ ದೇವಾಲಯದಲ್ಲಿ ಬೆಳಗಿನ ಜಾವದಿಂದ ವಿಶೇಷ ಪೂಜೆ ನಡೆಯಿತು. ಇಲ್ಲಿನ ನೂರಾರು ಜನರು ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕಾರ ಮಾಡುತ್ತಿದ್ದ ದೃಶ್ಯ ಕಂಡುಬಂತು. ಇದಲ್ಲದೇ ನಗರದ ವಿವಿಧ ಬಡಾವಣೆಗಳ ಈಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆದು ನೂರಾರು ಭಕ್ತರು ಭಾಗವಹಿಸಿದ್ದು ಕಂಡಬಂತು. ಇದಲ್ಲದೇ ಹಲವು ಯುವಕ ಸಂಘ-ಸಂಸ್ಥೆಗಳು ಬಂದ ಜನರಿಗೆ ಕುಡಿಯಲು ಪಾನಕ, ಮಜ್ಜಿಗೆ ವ್ಯವಸ್ಥೆ ಮಾಡಿದ್ದವು. ಶ್ರದ್ಧಾಭಕ್ತಿ

ಸೊರಬ ವರದಿ:
ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುವ ಹಬ್ಬ ಎಂದೇ ಕರೆಯಲ್ಪಡುವ ಶಿವರಾತ್ರಿಗೆ ತಾಲ್ಲೂಕಿನಾದ್ಯಂತ ಬುಧವಾರ ಶ್ರದ್ಧಾಭಕ್ತಿಯ ಚಾಲನೆ ದೊರಕಿತು.ಬೇಡರ ಕಣ್ಣಪ್ಪನ ಪೌರಾಣಿಕ ಕಥೆಯ ಹಿನ್ನೆಲೆಯ ಹಬ್ಬದಲ್ಲಿ ಉಪವಾಸ, ಜಾಗರಣೆ, ಶಿವಧ್ಯಾನ ಪ್ರಮುಖ ಆಗಿದ್ದು, ಶಿವನಿಗೆ ವಿಶೇಷ ಪೂಜೆ, ಅರ್ಚನೆ ಸಲ್ಲಿಸಿದ ಜನತೆ ಉಪವಾಸ ಆಚರಿಸಿದರು.

ಪಟ್ಟಣದ ಬಸವೇಶ್ವರ, ಈಶ್ವರ ದೇವಸ್ಥಾನದಲ್ಲಿ ಅಕ್ಕನ ಬಳಗ ಮೊದಲಾದ ಸಂಘಟನೆ ವತಿಯಿಂದ ಸಾಮೂಹಿಕ ಪೂಜೆ ನಡೆಯಿತು.ಆನವಟ್ಟಿಯ ವಾಸವಿ ಮಹಿಳಾ ಹಾಗೂ ಯುವತಿ ಮಂಡಳಿಯವರು ಗ್ರಾಮದ ಕನ್ನಿಕಾ ಪರಮೇಶ್ವರಿ ದೇವಸ್ಥಾದಲ್ಲಿ ಪೂಜೆ ಸಲ್ಲಿಸಿದರು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಏರ್ಪಡಿಸಲಾಗಿತ್ತು.ಜಡೆ ಸಂಸ್ಥಾನಮಠದಲ್ಲಿ ಮಠ ಹಾಗೂ ರೇಣುಕಾಂಬಾ ಟ್ರಸ್ಟ್ ವತಿಯಿಂದ ವಿಶೇಷ ಕಾರ್ಯಕ್ರಮ, ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿತ್ತು.ಬಂಕಸಾಣದ ಹೊಳೆಲಿಂಗೇಶ್ವರ, ಕೋಟಿಪುರದ ಕೈಠಭೇಶ್ವರ, ಆನವಟ್ಟಿಯ ಅಮೃತೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಯಾಮ ಪೂಜೆ, ರುದ್ರಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಶಿವನಿಗೆ ಬಿಲ್ವಪತ್ರೆ, ಶಿವನ ಹೂವು, ತುಂಬೆ ಹೂವಿನ ಅಲಂಕಾರ ಮಾಡಲಾಗಿತ್ತು.ರಥೋತ್ಸವ

ಗುರುವಾರ ಮಧ್ಯಾಹ್ನ 12.05ಕ್ಕೆ ಕೋಟಿಪುರದ ಕೈಠಭೇಶ್ವರ ದೇವರ ರಥೋತ್ಸವ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.