ಎಲ್ಲೆಡೆ ಹಾರಿತು ರಾಷ್ಟ್ರಧ್ವಜ: ಪ್ರಬಲ ಲೋಕಪಾಲಕ್ಕೆ ಬದ್ಧ

7

ಎಲ್ಲೆಡೆ ಹಾರಿತು ರಾಷ್ಟ್ರಧ್ವಜ: ಪ್ರಬಲ ಲೋಕಪಾಲಕ್ಕೆ ಬದ್ಧ

Published:
Updated:
ಎಲ್ಲೆಡೆ ಹಾರಿತು ರಾಷ್ಟ್ರಧ್ವಜ: ಪ್ರಬಲ ಲೋಕಪಾಲಕ್ಕೆ ಬದ್ಧ

ನವದೆಹಲಿ: `ಉನ್ನತ ಸ್ಥಾನಗಳಲ್ಲಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಬಲ ಲೋಕಪಾಲ ಮಸೂದೆ~ ಜಾರಿಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ಉಪವಾಸ ಸತ್ಯಾಗ್ರಹಗಳು ಸಮಸ್ಯೆಗೆ ಪರಿಹಾರವಲ್ಲ~ ಎಂದು ಪ್ರಧಾನಿ ಮನಮೋಹನ್‌ಸಿಂಗ್ ಸೋಮವಾರ    ಸ್ಪಷ್ಟವಾಗಿ ಹೇಳಿದರು.65ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಂಪುಕೋಟೆ ಮೇಲಿಂದ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಸಿಂಗ್, ಲೋಕಸಭೆಯಲ್ಲಿ ಮಂಡಿಸಲಾಗಿರುವ ಲೋಕಪಾಲ ಮಸೂದೆ ವಿರೋಧಿಸಿ ಆಮರಣ ಉಪವಾಸ ಕೈಗೊಳ್ಳಲು ಹೊರಟಿರುವ ಅಣ್ಣಾ ಅವರಿಗೆ ಚಳವಳಿ ಕೈಬಿಡುವಂತೆ ಸೂಚ್ಯವಾಗಿ ಕಿವಿಮಾತು ಹೇಳಿದರು. ಆದರೆ, ಎಲ್ಲೂ ಹಿರಿಯ ಗಾಂಧಿವಾದಿ ಹೆಸರನ್ನು ಅವರು ಉಲ್ಲೇಖಿಸಲಿಲ್ಲ.`ದೇಶದಲ್ಲಿ ಕೆಲವರು ಗೊಂದಲ ಸಮಸ್ಯೆ ಸೃಷ್ಟಿಸಲು ಮುಂದಾಗಿದ್ದಾರೆ. ಇದರಿಂದ ಪ್ರಗತಿ ಸ್ಥಗಿತಗೊಳ್ಳಲಿದೆ. ಇಂಥವರ ಬಗ್ಗೆ  ಎಚ್ಚರಿಕೆಯಿಂದಿರಬೇಕು. ಇದಕ್ಕೆ ಅವಕಾಶ ಕೊಡಬಾರದು~ ಎಂದು ಪ್ರಧಾನಿ ಕಳಕಳಿ ಮನವಿ ಮಾಡಿದರು. ಸತತ ಎಂಟನೇ ವರ್ಷ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ದೇಶವನ್ನು ಉದ್ದೇಶಿಸಿ ಭಾಚಣ ಮಾಡಿದ ಮನಮೋಹನ್ ಸಿಂಗ್, `ಯಾವುದೇ ಸರ್ಕಾರ ಮಂತ್ರ ದಂಡ ಹಿಡಿದು ಭ್ರಷ್ಟಾಚಾರ ತೊಲಗಿಸಲು ಸಾಧ್ಯವಿಲ್ಲ. ಬದುಕಿನ ಎಲ್ಲ ಮಗ್ಗಲು ಎಲ್ಲ ರಂಗಗಳನ್ನು ವ್ಯಾಪಿಸಿರುವ ಭ್ರಷ್ಟಚಾರದ ವಿರುದ್ಧ ಹೋರಾಟ ನಡೆಸಲು ಸರ್ಕಾರದ ಜತೆ ಹೆಗಲು ಕೊಟ್ಟು ನಿಲ್ಲಬೇಕು~ ಎಂದರು.`ದೇಶಕ್ಕೆ ಎಂಥ ಲೋಕಪಾಲ ಮಸೂದೆ ಬೇಕೆಂಬ ತೀರ್ಮಾನ ಮಾಡುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ~ ಎಂದು ಸಿಂಗ್ ಸ್ಪಷ್ಟಪಡಿಸಿದರು. ಪ್ರಧಾನಿ ಕಚೇರಿ, ಉನ್ನತ ನ್ಯಾಯಾಂಗ ಒಳಗೊಳ್ಳುವ ಜನ ಲೋಕಪಾಲ ಮಸೂದೆಗೆ ಆಗ್ರಹಿಸಿ ಮಂಗಳವಾರದಿಂದ  ಅಣ್ಣಾ ಆಮರಣ ಉಪವಾಸ ಸತ್ಯಾಗ್ರಹ ನಡೆಸಲು ಉದ್ದೇಶಿಸಿದ್ದಾರೆ. ಲೋಕಸಭೆಯಲ್ಲಿ ಮಂಡಿಸಲಾಗಿರುವ ಮಸೂದೆಯಿಂದ ಇವೆರಡು ಸಂಸ್ಥೆಗಳನ್ನು ಹೊರಗಿಡಲಾಗಿದೆ.`ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಕೆಲವರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಈ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವವರು ತಮ್ಮ ನಿಲುವನ್ನು ಸಂಸತ್ತು, ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳ ಮುಂದಿಡಲು ಅವಕಾಶವಿದೆ. ಅನಗತ್ಯವಾಗಿ   ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದು ಉಚಿತವಲ್ಲ~ ಎಂದು ಪ್ರಧಾನಿ ಹೇಳಿದರು.~ಭ್ರಷ್ಟಾಚಾರ ದೇಶದ ಬಹುದೊಡ್ಡ ಪಿಡುಗು. ಪರಿವರ್ತನೆ ಹಾದಿಯಲ್ಲಿ ಮುನ್ನಡೆದಿರುವ ದೇಶಕ್ಕೆ ಇದು ತೊಡಕಾಗಬಾರದು. ಈ ಹಿನ್ನೆಲೆಯಲ್ಲಿ ವ್ಯಾಪಕ ಚರ್ಚೆ ನಡೆಯಬೇಕಿದೆ. ಇಂಥ ಪ್ರಯತ್ನಗಳು ಪ್ರತಿಕೂಲ ವಾತಾವರಣ ಸೃಷ್ಟಿಗೆ ಕಾರಣವಾಗಬಾರದು~ ಎಂದು ಅಭಿಪ್ರಾಯಪಟ್ಟರು.ಬೆಳಿಗ್ಗೆಯಿಂದ ಬೀಳುತ್ತಿದ್ದ ಮಳೆ ನಡುವೆಯೇ ಗುಂಡು ನಿರೋಧಕ ಪರದೆಯೊಳಗೆ ನಿಂತು 40 ನಿಮಿಷ ಮಾತನಾಡಿದ ಪ್ರಧಾನಿ ಸಿಂಗ್, ಭೂಸ್ವಾಧೀನ, ಭಯೋತ್ಪಾದನೆ, ನಕ್ಸಲೀಯ ಚಳವಳಿ, ಹಣದುಬ್ಬರ ಮತ್ತಿತರ ವಿಷಯಗಳನ್ನು ಕುರಿತು ಪ್ರಸ್ತಾಪಿಸಿದರು.~ವೈಯಕ್ತಿಕ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಬದಿಗೊತ್ತಿ ರಾಷ್ಟ್ರೀಯ ಮಹತ್ವದ ವಿಷಯಗಳಲ್ಲಿ ಒಮ್ಮತಕ್ಕೆ ಬರಲು ಇದು  ಸಕಾಲ. ಈ ವಿಷಯಗಳಿಗೆ ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ಅಡ್ಡಿಯಾಗಬಾರದು~ ಎಂದು ಪ್ರಧಾನಿ ಸಲಹೆ ಮಾಡಿದರು.`ನಾವು ದೇಶಕ್ಕೆ ರಾಜಕೀಯ ಸ್ಥಿರತೆ ತಂದುಕೊಡುವಲ್ಲಿ ಯಶಸ್ವಿಯಾಗಿದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೂ ಕಾರಣವಾಗಿದ್ದೇವೆ. ಮತೀಯ ಸಾಮರಸ್ಯ ಕಾಪಾಡುವ ಮೂಲಕ ಶಾಂತಿ ಸಹಬಾಳ್ವೆಯ ವಾತಾವರಣ ಸೃಷ್ಟಿಸಿದ್ದೇವೆ. ನಮ್ಮ ಏಳು ವರ್ಷಗಳ ಆಡಳಿತದಲ್ಲಿ ಆರ್ಥಿಕ ಪ್ರಗತಿ ಆಗಿದೆ~ ಎಂದು ವಿಶ್ಲೇಷಿಸಿದರು.ಭೂಸ್ವಾಧೀನದ ವಿರುದ್ಧ ರೈತರು ನಡೆಸಿರುವ ಹೋರಾಟ ಕುರಿತು ಪ್ರಸ್ತಾಪ ಮಾಡಿದ ಸಿಂಗ್, ಉದ್ಯಮಗಳ ಸ್ಥಾಪನೆಗೆ ಭೂಮಿ ಬೇಕು. ಇದರಿಂದ ರೈತರ ಬದುಕು ನಾಶವಾಗಬಾರದು. ಸ್ವಾಧೀನ ಪ್ರಕ್ರಿಯೆ ಪಾರದರ್ಶಕ ಮತ್ತು ನ್ಯಾಯಸಮ್ಮತ ವಿಧಾನದಲ್ಲಿ ನಡೆಯಬೇಕು. ಈ ಕಾರಣಕ್ಕೆ 117 ವರ್ಷ ಹಳೇಯದಾದ ಭೂ ಸ್ವಾಧೀನ ಕಾಯ್ದೆ ಬದಲಾವಣೆ ಮಾಡಲಾಗುತ್ತಿದೆ. ಹೊಸ ಕಾನೂನು ರೂಪಿಸಲಾಗುತ್ತಿದೆ. ಒಮ್ಮತದೊಂದಿಗೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಭರವಸೆ ಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry