ಭಾನುವಾರ, ಏಪ್ರಿಲ್ 18, 2021
33 °C

ಎಲ್ಲೆಯಿಲ್ಲದ ಆಕಾಶ ಸಂಬಂಧ

ಕೆ. ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಖಗೋಳ ವಿಜ್ಞಾನವನ್ನು ಆಪ್ತಗೊಳಿಸುವ ಯೋಜನೆಯೊಂದರ ಭಾಗವಾಗಿ ಕೋಲಾರ ಜಿಲ್ಲೆ ತಲುಪಿದ್ದು `ಗೆಲಿಲಿಯೋ ಮೊಬೈಲ್~. ದೇಶ ವಿದೇಶಗಳ ಈ ಯುವ ಸಂಶೋಧಕ ತಂಡ ಮಕ್ಕಳಿಗೂ ಶಿಕ್ಷಕರಿಗೂ ಹೇಳಿಕೊಟ್ಟದ್ದು ಕೇವಲ ಖಗೋಳ ವಿಜ್ಞಾನವನ್ನಷ್ಟೇ ಅಲ್ಲ.ಎಲ್ಲೆಯೇ ಇಲ್ಲದ ಆಕಾಶದಂತೆ ಬೆಳೆಯುತ್ತಲೇ ಇರುವ ವಿಜ್ಞಾನದ ಮೂಲಕ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ವಿಧಾನವನ್ನು.
`ಈ ಶಾಲೆಯಿಂದ ನಾವು ಆಕಾಶಕ್ಕೆ ಹೋಗೋಣ, ದೂರ ದೂರ ದೂರ...~ ಹೀಗೆನ್ನುತ್ತಲೇ ಸ್ವಿಟ್ಜರ್ಲೆಂಡ್‌ನ ಸಂಶೋಧಕ ಫಿಲಿಪ್ ಕೊಬೆಲ್ ಮಕ್ಕಳ ಮುಂದೆ ಒಂದು ಭೂಗೋಳದ ಮಾದರಿಯ ಚೆಂಡನ್ನು ತೋರಿಸಿ ನಿಧಾನಕ್ಕೆ ತಿರುಗಿಸಿದರು.ಭೂಗೋಳವನ್ನು ಹಿಡಿಯಬಲ್ಲಿರಾ ಎನ್ನುತ್ತಲೇ ಕಾಮಧೇನು ಹಳ್ಳಿಯ ಶಾಲೆಯ ಮಕ್ಕಳತ್ತ ಚೆಂಡನ್ನು ಎಸೆದರು. ಕುಳಿತಲ್ಲೇ ನೆಗೆದ ಮಕ್ಕಳು ಭೂಗೋಳವನ್ನು ಅಲ್ಲಿಂದಿಲ್ಲಿಗೆ ಆಡಿಸಿದರು, ಝಾಡಿಸಿದರು!ಮತ್ತೆ ಮಕ್ಕಳ ಬಳಿಗೆ ಬಂದ ಫಿಲಿಪ್ ಚೆಂಡಿನಲ್ಲಿ ಭಾರತ ಎಲ್ಲಿದೆ ಎಂದು ಕೇಳಿದರು. ಮಕ್ಕಳೆಲ್ಲಾ ಒಟ್ಟಾಗಿ `ಅಲ್ಲೆ~ ಎಂದು ಕಿರುಚಿದರು. ಅದು ಪ್ರಯಾಣದ ಆರಂಭ. ಭೂಗೋಳದ ಚೆಂಡು ತೋರಿಸಿದ ಫಿಲಿಪ್ ಕೆಲವೇ ನಿಮಿಷಗಳಲ್ಲಿ ಮಕ್ಕಳನ್ನೂ, ಶಿಕ್ಷಕರನ್ನೂ ಸೌರವ್ಯೆಹದ ಪ್ರಯಾಣಕ್ಕೆ ಸಜ್ಜುಗೊಳಿಸಿದ್ದರು. ಐಐಎ ವಿಜ್ಞಾನಿ ಡಾ.ರವೀಂದ್ರ ದುಭಾಷಿಯಾಗಿ ಫಿಲಿಪ್‌ರ ನೆರಳಾಗಿದ್ದರು. ಹೀಗಾಗಿ ಭಾಷೆ ತೊಡಕಾಗಲಿಲ್ಲ.ಯಾರಿಗೂ. ಯುಪಿಎಸ್ ಕೈಕೊಟ್ಟರೂ ಕೆಲಸ ನಿಲ್ಲಲಿಲ್ಲ. ಲ್ಯಾಪ್‌ಟಾಪ್ ಅನ್ನು ಕೈಯಲ್ಲಿ ಹಿಡಿದು ಯುವತಿ ಮೈತೆ ಮಕ್ಕಳ ಬಳಿಗೆ ಒಯ್ದರು. ಅಲ್ಲಿ ಸಾಂಪ್ರದಾಯಿಕ ತರಗತಿಯ ಯಾವುದೇ ಶಿಷ್ಟಾಚಾರಗಳಿರಲಿಲ್ಲ.ಅದು ಮುಗಿಯಿತೆನ್ನುವ ಹೊತ್ತಿಗೆ, ಅದುವರೆಗೂ ಕ್ಯಾಮೆರಾ ಹಿಡಿದಿದ್ದ ಮತ್ತೊಬ್ಬ ಸದಸ್ಯೆ ಪಿಲಾರ್ ಅಂಕಣಕ್ಕೆ ಬಂದು `ಸೂರ್ಯ ಸೂರ್ಯ~ ಹಾಡನ್ನು ಹೇಳತೊಡಗಿದಾಗ ಎಲ್ಲರಿಗೂ ಅಚ್ಚರಿ. ಸಾಂದ್ರಾ, ಮರಿಯಾ ಟೆಲಿಸ್ಕೋಪ್ ಬಳಸುವ ಇನ್ನೊಂದು ಪಾಠ-ಚಟುವಟಿಕೆಗೆ ಸಿದ್ಧವಾಗುತ್ತಿದ್ದರು.ತಂಡದ ಸಂಚಾಲಕಿ ಮೇಘಾಭಟ್‌ಗೆ ಅವರೆಲ್ಲರ ಉಸ್ತುವಾರಿ. ಆಕೆಯದು ಮಾತ್ರ ಯಾವ ಕ್ಷಣವೂ ಮಾಸದ ನಗು. ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದಿದ್ದು ಮಾತ್ರ ಅದೇ ಸೌರವ್ಯೆಹ ಮತ್ತು ಅದರೆಡೆಗೆ ಕಣ್ಣು ನೆಟ್ಟ ಟೆಲಿಸ್ಕೋಪ್!ಜುಲೈ 2ರಂದು ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲದ ಶಾಲೆಯಲ್ಲಿ ಶುರುವಾದ ಯಾತ್ರೆ ಜು 13ರಂದು ಮೈಸೂರಿನ ಟಿ.ಎಸ್. ಸುಬ್ಬಣ್ಣ ಪ್ರೌಢಶಾಲೆಯಲ್ಲಿ ಕೊನೆಗೊಳ್ಳಲಿದೆ.ಗೆಲಿಲಿಯೋ ಮೊಬೈಲ್!


ಮೊಬೈಲ್ ಗೊತ್ತು. ಟೆಲಿಸ್ಕೋಪ್ ಕಂಡುಹಿಡಿದ ಗೆಲಿಲಿಯೋ ಕೂಡ ಗೊತ್ತು. ಆದರೆ ಏನಿದು ಗೆಲಿಲಿಯೋ ಮೊಬೈಲ್? ಗೆಲಿಲಿಯೋ ಟೆಲಿಸ್ಕೋಪ್ ಆವಿಷ್ಕರಿಸಿದ 400ನೇ ವರ್ಷಾಚರಣೆ (2009) ಸಂದರ್ಭದಲ್ಲಿ ಖಗೋಳ ವಿಜ್ಞಾನವನ್ನು ಜನಪ್ರಿಯಗೊಳಿಸಲು ಜರ್ಮನಿಯ ಮ್ಯಾಕ್ಸ್ ಫ್ಲಾಂಕ್ ಖಭೌತ ವಿಜ್ಞಾನ ಸಂಸ್ಥೆಯ (ಮ್ಯಾಕ್ಸ್ ಫ್ಲಾಂಕ್ ಇನ್ಸ್ ಟಿಟ್ಯೂಟ್ ಆಫ್ ಅಸ್ಟ್ರೋಫಿಸಿಕ್ಸ್) ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಹುಟ್ಟುಹಾಕಿದ ಸಂಶೋಧನಾ ವಿದ್ಯಾರ್ಥಿಗಳ ತಂಡದ ಹೆಸರಿದು.

 

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂಡದ ಸದಸ್ಯರು ಓಡಾಡಿ ಅಲ್ಲಿನ ಗ್ರಾಮಾಂತರ ಪ್ರದೇಶದ ಎಳೇ ವಯಸ್ಸಿನ ಮಕ್ಕಳಿಗೆ ಖಗೋಳ ವಿಜ್ಞಾನವನ್ನು ಆಪ್ತಗೊಳಿಸುವ ರಜಾಕಾಲದ ಕಾಯಕ-ಕಾರ್ಯಕ್ರಮದ ಹೆಸರು `ಖಗೋಳ್ ರಥಯಾತ್ರಾ~.

ಖಗೋಳ ವಿಜ್ಞಾನದ ಅಂತರರಾಷ್ಟ್ರೀಯ ವರ್ಷದ (2009, ಇಂಟರ್‌ನ್ಯಾಷನಲ್ ಇಯರ್ ಆಫ್ ಅಸ್ಟ್ರಾನಮಿ-ಐವೈಎ) ವಿಶೇಷ ಯೋಜನೆಯಾಗಿ ರೂಪುಗೊಂಡ ಈ ಕಾರ್ಯಕ್ರಮಕ್ಕೆ ಯೂನಿವರ್ಸ್ ಅವೇರ್‌ನೆಸ್ (ಯುಎನ್‌ಎಡಬ್ಲ್ಯುಇ), ಗೆಲಿಲಿಯೋ ಟೀಚರ್ಸ್ ಟ್ರೈನಿಂಗ್ ಪ್ರೋಗ್ರಾಂ (ಜಿಟಿಟಿಪಿ), ಗ್ಲೋಬಲ್ ಹ್ಯಾಂಡ್ಸ್ ಆನ್ ದ ಯೂನಿವರ್ಸ್ (ಜಿಎಚ್‌ಓಯು), ಇಂಟರ್‌ನ್ಯಾಷನಲ್ ಅಸ್ಟ್ರಾನಾಮಿಕಲ್ ಯೂನಿಯನ್‌ನಿಂದ (ಐಎಯು) ಸ್ಥಾಪಿಸಲ್ಪಟ್ಟ ಆಫೀಸ್ ಆಫ್ ಅಸ್ಟ್ರಾನಮಿ ಫಾರ್ ಡೆವಲಪ್‌ಮೆಂಟ್ (ಒಎಡಿ) ಸಹಯೋಗ ನೀಡಿವೆ.ಉಕ್ಕುವ ಪ್ರಾಯ

ಈಗ ಈ ತಂಡದಲ್ಲಿರುವ 27 ಮಂದಿಯ ಪೈಕಿ ಎಲ್ಲರೂ ಖಗೋಳ ವಿಜ್ಞಾನಿಗಳಲ್ಲ. ಬಹುತೇಕರು ಪಿಎಚ್.ಡಿ ವಿದ್ಯಾರ್ಥಿಗಳು, ಖಗೋಳ ವಿಜ್ಞಾನ ಮತ್ತು ಖಭೌತ ವಿಜ್ಞಾನದ ಸಂಶೋಧಕರೇನೋ ನಿಜ. ಆದರೆ ಅವರೊಂದಿಗೆ ಪತ್ರಕರ್ತರು, ಸಮಾಜ ಕಾರ್ಯಕರ್ತರು, ಸಂಶೋಧನಾ ವಿದ್ಯಾರ್ಥಿಗಳು, ಎಂಜಿನಿಯರ್‌ಗಳೂ ಇದ್ದಾರೆ.ಹಾಗೆಂದು ಅವರೆಲ್ಲ ಒಂದೇ ದೇಶದವರೂ ಅಲ್ಲ. ಭಿನ್ನ ಭಾಷೆ, ಸಂಸ್ಕೃತಿ, ಕ್ಷೇತ್ರದ ಹಿನ್ನೆಲೆಯುಳ್ಳವರು. ಹೀಗಾಗಿ ತಂಡಕ್ಕೆ ಬಹುರಾಷ್ಟ್ರ- ಬಹುಸಂಸ್ಕೃತಿಯ ಜಗತ್ತು- ಜನರ ಬಗ್ಗೆ ಸಹಜವಾಗಿಯೇ ಗೌರವ ಮತ್ತು ಪ್ರೀತಿ. ಎಲ್ಲಕ್ಕಿಂತ ಮೇಲಾಗಿ ಅವರಲ್ಲಿ ಬಹುತೇಕರು ಉಕ್ಕುವ ಪ್ರಾಯದ ಯುವಕ-ಯುವತಿಯರು. ಕಾಮನಬಿಲ್ಲಿನ ಮೇಲಿನ ಖಗೋಳ ವಿಜ್ಞಾನ ಪಥ ಯಾತ್ರಿಕರು.ಇಲ್ಲಿ ಸ್ಪೇನ್, ಜರ್ಮನಿ, ಸ್ವಿಟ್ಜರ್ಲೆಂಡ್, ಕೊಲಂಬಿಯಾ ದೇಶಗಳ ಯುವಜನರೊಡನೆ ಭಾರತ ಮಾತೆಯ ಮಕ್ಕಳೂ ಇದ್ದಾರೆ! ಒಟ್ಟಾರೆ ಈ ತಂಡದಲ್ಲಿರುವವರೆಲ್ಲ ಯೂರೋಪ್, ಅಮೆರಿಕ ಮತ್ತು ಏಷಿಯಾದ ಬಹುರಾಷ್ಟ್ರೀಯ ಸಾಂಸ್ಕೃತಿಕ ಹಿನ್ನೆಲೆಯವರು. ಸ್ವಯಂ ಸ್ಫೂರ್ತಿಯಿಂದಲೇ ತಂಡಕ್ಕೆ ಸೇರಿದವರು. ಅವರೆಲ್ಲರನ್ನೂ ಒಟ್ಟುಗೂಡಿಸಿರುವುದು ಒಂದೇ ಆಕಾಶದ ಸೂರಿಯನಡಿಯ ವಿಸ್ತಾರ, ಭೂಮಿ ಮತ್ತು ಆಕಾಶಕಾಯದ ಒಳಗಿನ ಅಚ್ಚರಿಯ ಗ್ರಹಲೋಕ ಅರ್ಥಾತ್ ಖಗೋಳ ವಿಜ್ಞಾನವಲ್ಲದೆ ಬೇರೇನೂ ಅಲ್ಲ.ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ನಲಿ-ಕಲಿ ಚಟುವಟಿಕೆಗಳನ್ನು ಅವರು ಮಕ್ಕಳೊಡನೆ ಮಕ್ಕಳಾಗಿ, ದೊಡ್ಡವರೊಡನೆ ದೊಡ್ಡವರಾಗಿ ನಡೆಸುತ್ತಾರೆ. ಮೌನವಾಗಿ ನಿಂತಾಗ ಅವರು ಮಾಗಿದ ಹಣ್ಣಿನಂತೆ. ಮಕ್ಕಳೊಡನೆ ಬೆರೆತಾಗ ಚಿಗುರಿನಂತೆ. ಅದ್ಭುತ ಸಂವಹನ ಕೌಶಲವನ್ನು ರೂಢಿಸಿಕೊಂಡ ಅವರು ಸೂರ್ಯ, ಚಂದ್ರ, ಆಕಾಶಕಾಯಗಳ ಬಗ್ಗೆ ವಿವರಿಸುತ್ತಿದ್ದರೆ, ಹಾಡುತ್ತಿದ್ದರೆ ಮಕ್ಕಳೊಡನೆ ಶಿಕ್ಷಕರೂ ಪ್ರಯಾಣ ಆರಂಭಿಸುತ್ತಾರೆ. ತಮ್ಮ ಶಾಲೆಯಿಂದ ನೇರ ಖಗೋಳಕ್ಕೆ...!ಕೋಲಾರದಲ್ಲಿ ಮೊಬೈಲ್!

ಜರ್ಮನಿಗೂ ಕೋಲಾರಕ್ಕೂ ಹೀಗೆ ನಂಟೊಂದು ಏರ್ಪಟ್ಟಿತ್ತು ಎಂಬುದೇ ವಿಶೇಷ. ಅಲ್ಲಿಯೂ-ಇಲ್ಲಿಯೂ ಅದೇ ಆಕಾಶ ಹೊರತು ಬೇರೇನಿಲ್ಲ. ತಂಡದ ಆರು ಮಂದಿ (ಒಬ್ಬ ಯುವಕ, ಐವರು ಯುವತಿಯರು) ಬರಪೀಡಿತ ಜಿಲ್ಲೆಯ ಕೋಲಾರದ ಕೆಲವು ಶಾಲೆಗಳಿಗೆ ಕಳೆದ ವಾರ ಭೇಟಿ ನೀಡಿದ್ದರು.ತಾಲ್ಲೂಕಿನ ಕಾಮಧೇನುಹಳ್ಳಿಯ ಸರ್ಕಾರಿ ಪ್ರೌಢಾಶಾಲೆಯ ಮಕ್ಕಳನ್ನು ದೂರದ ರಾಷ್ಟ್ರಗಳಿಂದ ಬಂದ ಯುವಕ-ಯುವತಿಯರು ಯಾವ ತ್ರಾಸವೂ ಇಲ್ಲದೆ ಖಗೋಳ ಲೋಕಕ್ಕೆ ಕರೆದೊಯ್ದುದ್ದು ಮಾತ್ರ ಅಚ್ಚರಿ. ಎಲ್ಲಿಯ ಗೆಲಿಲಿಯೋ? ಜರ್ಮನಿ? ಕೋಲಾರ? ಇದಲ್ಲವೇ ಸೋಜಿಗ.

 

ಕೈ ಚಿವುಟಿಕೊಂಡರೆ ಮಾತ್ರ ಮಧುರ ನೋವು!

ಆಂಡಿಸ್ ಪರ್ವತ ಶ್ರೇಣಿಗಳ ದೇಶಗಳಾದ ಪೆರು, ಚಿಲಿ, ಬೊಲಿವಿಯಾಗಳಲ್ಲಿ ಸಂಚರಿಸಿದ್ದ ಮೊಬೈಲ್ ತಂಡದ ಸದಸ್ಯರು ಈಗ ಭಾರತಕ್ಕೆ ಬಂದಿದ್ದಾರೆ, ಅದರಲ್ಲೂ ಕರ್ನಾಟಕಕ್ಕೆ. ಬರಪೀಡಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಂದಲೇ ಈ ಯುವಕ-ಯುವತಿಯರು ತಮ್ಮ ಖಗೋಳ ರಥಯಾತ್ರೆಯನ್ನು ಆರಂಭಿಸಿದ್ದಾರೆ. ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಭಾರತೀಯ ಖಭೌತ ವಿಜ್ಞಾನ ಸಂಸ್ಥೆ- ಐಐಎ) ಮತ್ತು ಜವಹರಲಾಲ್ ನೆಹರೂ ತಾರಾಲಯ ಸಹಯೋಗ ನೀಡಿದೆ. ಯಾರಿವರು?

ಮಕ್ಕಳಿಗೆ ಖಗೋಳ ವಿಜ್ಞಾನದ ಪಾಠ ಮಾಡಲು ಕರ್ನಾಟಕಕ್ಕೆ ಬಂದಿರುವ ಈ ಆರು ಯುವಕ-ಯುವತಿಯರು ಈ ಕ್ಷೇತ್ರಕ್ಕೆ ಬಂದ ಹಿನ್ನೆಲೆಯೂ ಕುತೂಹಲಕಾರಿ. ಮೊಬೈಲ್ ತಂಡದ ಥಿಂಕ್ ಟ್ಯಾಂಕ್ ಎಂದೇ ಕರೆಯಲಾಗುವ ಸ್ವಿಟ್ಜರ್ಲೆಂಡ್‌ನ ಫಿಲಿಪ್ ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ಸೌರವ್ಯೆಹದ ಬಗ್ಗೆ ಆಸಕ್ತಿ ಇರುವ ವ್ಯಕ್ತಿ.ಎಲ್ಲರ ಬಳಿಯೂ ಆತ ಹೆಚ್ಚು ಮಾತನಾಡುತ್ತಿದ್ದುದು ಇದರ ಬಗ್ಗೆಯೇ. ಈ ವಿಷಯದ ಬಗ್ಗೆ ಮಕ್ಕಳಲ್ಲಿ ಹೆಚ್ಚು ಆಸಕ್ತಿ ಮೂಡಿಸಬೇಕು ಎಂಬುದು ಹಲವು ದಶಕಗಳ ಆಸೆ. ಅದು ಈಗ ಈಡೇರುತ್ತಿದೆ. ಜನಕ್ಕೆ, ಮಕ್ಕಳಿಗೆ ಕುತೂಹಲವಿದೆ. ಅದನ್ನು ತಣಿಸುವವರಿಲ್ಲ. ಅದಕ್ಕೇ ಭಾರತಕ್ಕೆ ಬಂದಿದ್ದೇವೆ. ಈ ಕಥನ ಯಾತ್ರೆ ಇಲ್ಲಿಗೇ ನಿಲ್ಲುವುದಿಲ್ಲ ಎನ್ನುತ್ತಾರೆ ಅವರು. ತಾಯಿ ಬೊಲಿವಿಯಾದವರು, ತಂದೆ ಸ್ವಿಟ್ಜರ್ಲೆಂಡ್‌ನವರು. ಇಬ್ಬರೂ ವಿಜ್ಞಾನಿಗಳೇನಲ್ಲ.

ಆದರೆ ಫಿಲಿಪ್ ಕಲಿಯಬೇಕೆಂದಿದ್ದನ್ನೇ ಕಲಿಸಿದರು!ತಂಡದಲ್ಲಿ ಎಲ್ಲರಿಗಿಂತ ಹಿರಿಯವರಾದ ಕೊಲಂಬಿಯಾದ ಪಿಲಾರ್ ಸಾಮಾಜಿಕ ಸಂಶೋಧಕಿ, ಕಾರ್ಯಕರ್ತೆ. ಆಕ್ಯುಪೇಷನಲ್ ಥೆರಪಿಸ್ಟ್. ಜರ್ಮನಿಯಲ್ಲಿ ಮೂರು ವರ್ಷದ ಮಗು ಮತ್ತು ಗಂಡನನ್ನು ಇರಲು ಹೇಳಿ ಭಾರತಕ್ಕೆ ಬಂದಾಕೆ. ಸದಾ ಚಟುವಟಿಕೆಯ ಆಕೆಯನ್ನು ಬಾಲ್ಯದಿಂದಲೂ ಆಕರ್ಷಿಸುತ್ತಿದ್ದುದು ಆಕಾಶ.ಈಗ ಅದೇ ಅವಕಾಶಗಳ ಬಟ್ಟಲು. ನನ್ನ ಅಪ್ಪ ದಿನವೂ ನನಗೆ ಆಕಾಶವನ್ನು ತೋರಿಸಿ ಗಮನಿಸು ಎನ್ನುತ್ತಿದ್ದರು. ಅದು ಖಗೋಳವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿತು. ಈಗ ನೋಡಿ ಆಕಾಶದಲ್ಲಿ ಏನೇನಿದೆ ಎಂದು ಹೇಳುವ ಅರ್ಹತೆ ಬಂದಿದೆ. ಅದೇ ಖುಷಿ ಎಂಬುದು ಸ್ಪೇನ್‌ನ ಸಾಂದ್ರಾ ನುಡಿ.ನನ್ನ ತಾಯಿ ಸಮಾಜಶಾಸ್ತ್ರಜ್ಞೆ. ಆಕೆ ಎಲ್ಲಿ ಹೋದರೂ ನನ್ನನ್ನು ತನ್ನೊಡನೆ ಕರೆದೊಯ್ಯುತ್ತಿದ್ದಳು. ಹೀಗಾಗಿ ಸಮುದಾಯದ ಜೊತೆಗೆ ಒಡನಾಟ ಸಲೀಸಾಯಿತು. ಈಗ ನನಗೆ ಸಮಾಜಶಾಸ್ತ್ರವೂ ಗೊತ್ತು, ಖಗೋಳ ವಿಜ್ಞಾನವೂ ಗೊತ್ತು-ಡೊಮಿನಿನಕನ್ ರಿಪಬ್ಲಿಕ್‌ನ ಯುವತಿ ಮೈತೆ ವಾಸ್‌ಕ್ವೆಸ್ ಆತ್ಮವಿಶ್ವಾಸದಿಂದ ಹೇಳಿದ ಮಾತುಗಳಿವು. ಆಕೆ ಜರ್ಮನ್ ಸ್ಪೇಸ್ ಏಜೆನ್ಸಿಯ ಸಂಶೋಧನಾ ವಿದ್ಯಾರ್ಥಿನಿ.ಐಐಎ ರವೀಂದ್ರ, ಶಿಡ್ಲಘಟ್ಟದ ಚೀಮಂಗಳ ಕುವೆಂಪು ಸರ್ಕಾರಿ ಮಾದರಿ ಶಾಲೆಯ ಮುಖ್ಯಶಿಕ್ಷಕ ಎಂ.ಜೆ.ರಾಜೀವಗೌಡ, ಕೋಲಾರದ ವಿಜ್ಞಾನ ಸಂವಹನಕಾರ ವಿ.ಎಸ್.ಎಸ್.ಶಾಸ್ತ್ರಿ ಈ ಯುವಜನರ ತಂಡದ ಸಂವಹನ ಸವಾಲುಗಳಿಗೆ ಜೊತೆಯಾಗಿದ್ದೇ ಅಲ್ಲದೆ, ಅವರನ್ನು ಸ್ವಂತ ಬಂಧುಗಳಂತೆ ಕಂಡು ಉಪಚರಿಸಿದ್ದು ಕೂಡ ವಿಶೇಷವೇ.ಕೃತಜ್ಞತೆಯ ಭಾರದಲ್ಲಿ

ಖಗೋಳ ವಿಜ್ಞಾನವನ್ನು ಜನಪ್ರಿಯಗೊಳಿಸಬೇಕು ಎಂಬ ನಮ್ಮ ಕನಸನ್ನು ನನಸು ಮಾಡುತ್ತಿರುವ ಕೋಲಾರದ ಜನರಿಗೆ, ಅದರಲ್ಲೂ ಮಕ್ಕಳಿಗೆ ನಾವು ಎಷ್ಟು ಋಣಿಯಾಗಿದ್ದರೂ ಸಾಲದು. ಮಕ್ಕಳ ಕಣ್ಣಿನಲ್ಲಿ ಆಕಾಶ ನೋಡುವ ಬೆರಗು ಎಲ್ಲಿ ಸಿಗಲು ಸಾಧ್ಯ? ಫಿಲಿಪ್‌ನ ಧನ್ಯತೆಯ ನುಡಿ ಇದು. ಕಾಲ ಕಳೆದಿದ್ದಾಗಿದೆ.ಅನುಭವ ದೊಡ್ಡದಾಗಿದೆ. ಹೇಳುವುದು, ಹಂಚಿಕೊಳ್ಳುವುದು ಸಾಕಷ್ಟಿದೆ. ಅದನ್ನೆಲ್ಲ ಹೊತ್ತು ನಾವು ನಮ್ಮ ನಮ್ಮ ಕೆಲಸಕ್ಕೆ ಹೋಗುತ್ತೇವೆ. ಇಡೀ ವರ್ಷ ಪ್ರವಾಸ ಮಾಡುತ್ತಲೇ ಇರಲು ಸಾಧ್ಯವಿಲ್ಲ. ನಮ್ಮ ಕೆಲಸ, ಸಂಶೋಧನೆಯನ್ನೂ ನೋಡಬೇಕಲ್ಲ.ಮುಂದಿನ ವರ್ಷ ಆಫ್ರಿಕಾ ದೇಶದ ಹಳ್ಳಿಗಳಿಗೆ ಹೋಗಬೇಕೆಂದಿದೆ. ಇನ್ನೂ ನಿರ್ಧಾರ ಮಾಡಿಲ್ಲ ಎಂದು ಸಾಂದ್ರಾ ನಕ್ಕರು. ಒಂದೇ ಆಕಾಶದ ಅಡಿಯಲ್ಲಿ ಹಲವು ರಾಷ್ಟ್ರಗಳ ಅವರೆಲ್ಲರೂ ಒಗ್ಗಟ್ಟಾಗಿದ್ದಾರೆ. ಅವರನ್ನು ಬಾಲ್ಯದಿಂದಲೂ ಹಾಗೆ ರೂಪಿಸಿದ ಪೋಷಕರ ಪಾತ್ರ ಮರೆಯುವಂಥದ್ದಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.