ಎಲ್ಲೆಲ್ಲೂ ಪುಸ್ತಕ

7

ಎಲ್ಲೆಲ್ಲೂ ಪುಸ್ತಕ

Published:
Updated:
ಎಲ್ಲೆಲ್ಲೂ ಪುಸ್ತಕ

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪುಸ್ತಕ ಮೇಳಕ್ಕೆ ಭಾನುವಾರ ತೆರೆ. ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಇತಿಹಾಸ, ಆಧ್ಯಾತ್ಮಿಕ ಪುಸ್ತಕಗಳ ಬೃಹತ್ ಭಂಡಾರವೇ ಇಲ್ಲಿದೆ. ಕನ್ನಡ, ಇಂಗ್ಲಿಷ್ ಹೊರತಾಗಿ ತೆಲುಗು, ತಮಿಳು, ಸಂಸ್ಕೃತ, ಮರಾಠಿ ಪುಸ್ತಕಗಳ ಮಳಿಗೆಗಳೂ ಇವೆ.ಅರಮನೆ ಮೈದಾನದಲ್ಲೆಗ ಸಾಹಿತ್ಯದ ಸುಗ್ಗಿ. ಬಣ್ಣ ಬಣ್ಣದ ತಿನಿಸುಗಳನ್ನು ಹರವಿಕೊಂಡ ಜಾತ್ರೆಯಂತೆ ಎತ್ತ ನೋಡಿದರೂ ಪುಸ್ತಕಗಳ ರಾಶಿ. ಸಾಹಿತ್ಯದ ಸವಿ ಬಯಸುವ ಹಸಿವಿಗೆ ರುಚಿಕಟ್ಟಾದ ಭೋಜನ. ಗಾಯತ್ರಿ ವಿಹಾರದಲ್ಲೆಗ ಸರಸ್ವತಿ ವಿಹರಿಸುತ್ತಿದ್ದಾಳೆ. ಸಾಹಿತ್ಯದ ಭಂಡಾರವನ್ನೇ ತುಂಬಿಕೊಂಡಂತಿರುವ ಮೈದಾನದಲ್ಲಿ ಉತ್ಸವದ ಕಳೆ.ಉದ್ಯಾನನಗರಿಯಲ್ಲಿ ಸಾಹಿತ್ಯ ಪ್ರಿಯರಿಗೆ ಕೊರತೆಯಿಲ್ಲ. ಅಂತೆಯೇ ಪುಸ್ತಕ ಮಳಿಗೆಗಳಿಗೂ. ಆದರೆ ಪುಸ್ತಕೋತ್ಸವವೆಂದರೆ ಪ್ರತಿವರ್ಷದ ಹಬ್ಬ. ಅತಿ ಅಪರೂಪದ ಕೃತಿಗಳ ಜಗತ್ತು ಇಲ್ಲಿ ಅನಾವರಣಗೊಂಡಿದೆ.ಹೀಗಾಗಿಯೇ ಜನ ಕೆಲಸಗಳ ಒತ್ತಡದ ಮಧ್ಯೆಯೂ ಪುಸ್ತಕೋತ್ಸವದತ್ತ ಹೆಜ್ಜೆ ಹಾಕುತ್ತಿದ್ದಾರೆ. ಕನ್ನಡ ಮಾತ್ರವಲ್ಲ ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲಿಷ್, ಸಂಸ್ಕೃತ, ಮರಾಠಿ, ಉರ್ದು ಹೀಗೆ ಹಲವು ಭಾಷೆಗಳ ಸಾಹಿತ್ಯಿಕ ಸಂಗಮವಿದು.ದೇಶದ ಪ್ರಮುಖ ಪುಸ್ತಕ ಪ್ರಕಾಶನ ಸಂಸ್ಥೆಗಳ ಕಥೆ, ಕಾದಂಬರಿ, ಕಾವ್ಯ, ವಿಮರ್ಶೆ, ಚಿಂತನೆ ಹೀಗೆ ಎಲ್ಲಾ ಸಾಹಿತ್ಯ ಪ್ರಕಾರದ ಪ್ರಕಟಣೆಗಳು ಒಂದೇ ಸೂರಿನಡಿ ಒಂದುಗೂಡಿವೆ. ಎಷ್ಟು ಬಾರಿ ಮಳಿಗೆ ಸುತ್ತಿದರೂ ಪುಸ್ತಕಪ್ರಿಯರಿಗೆ ತೃಪ್ತಿಯಿಲ್ಲ.

 

ಬಯಸುವ ಪುಸ್ತಕ ಸಿಗಲಿ- ಸಿಗದಿರಲಿ, ಪ್ರತಿ ಮಳಿಗೆಯಲ್ಲೂ ಸಾಲಾಗಿ ಜೋಡಿಸಿದ ಪುಸ್ತಕಗಳನ್ನು ಎಣಿಸುವಂತೆ ಬೆರಳುಗಳಿಂದ ಮೀಟುತ್ತಾ ಮುಂದಡಿಯಿಡುತ್ತಾರೆ. ಇನ್ನು ತನ್ನ ನೆಚ್ಚಿನ ಬರಹಗಾರರ ಪುಸ್ತಕವನ್ನು ಹುಡುಕುವವರಿಗೆ ಯಾವ ಮಳಿಗೆಯಲ್ಲಿ ಹುಡುಕಬೇಕೆಂಬ ಗೊಂದಲ.

ಯಾಕೆಂದರೆ ಅಲ್ಲಿರುವ ಮಳಿಗೆಗಳ ಸಂಖ್ಯೆಯೇ ಸುಮಾರು 340. ಒಳಗೆ ಕಾಲಿಟ್ಟ ಮೇಲೆ ಒಂದಾದರೂ ಪುಸ್ತಕ ಕೊಳ್ಳದೆ ಹೊರಹೋಗಲು ಮನಸಾಗುವುದೂ ಇಲ್ಲ. ಎಷ್ಟೆಲ್ಲ ಭಾಷೆಯ ಪುಸ್ತಕಗಳಿದ್ದರೂ ಇಂಗ್ಲಿಷ್ ಸಾಹಿತ್ಯವಿರುವ ಮಳಿಗೆಗಳತ್ತ ಕಣ್ಣು ಹಾಯಿಸುವವರೇ ಹೆಚ್ಚು. ವಿಶ್ವದ ಖ್ಯಾತ ಲೇಖಕರ ಪುಸ್ತಕಗಳು ಅತಿ ಕಡಿಮೆ ಬೆಲೆಯಲ್ಲಿ ಸಿಗುವುದೇ ಇದಕ್ಕೆ ಕಾರಣ.

 

ಕನ್ನಡ ಪುಸ್ತಕಗಳಿಗೂ ಬೇಡಿಕೆ ಕಡಿಮೆಯಿಲ್ಲ. ಕನ್ನಡ ಪುಸ್ತಕಗಳದ್ದೇ 79 ಮಳಿಗೆಗಳು ಇಲ್ಲಿವೆ. ಇಂಗ್ಲಿಷ್ ಪುಸ್ತಕ ಮಳಿಗೆಗಳಲ್ಲಿ ಯುವಮುಖಗಳು ಹೆಚ್ಚಾಗಿದ್ದರೆ, ಕನ್ನಡ ಪುಸ್ತಕಗಳ ಮಳಿಗೆಗಳಲ್ಲಿ ಹಿರಿಯರೇ ಹೆಚ್ಚು.ಪುಸ್ತಕೋತ್ಸವವಾದರೂ ಮಕ್ಕಳನ್ನು ಆಕರ್ಷಿಸುವ ವಸ್ತುಗಳಿಗೇನೂ ಕೊರತೆಯಿಲ್ಲ. ಸ್ಟೇಷನರಿಗಳ ಜೊತೆಗೆ ಮಕ್ಕಳ ಕಲಿಕೆ ಮತ್ತು ಮನರಂಜನೆಗೆ ಇಂಬು ನೀಡುವ ತರಹೇವಾರಿ ಸಾಮಗ್ರಿಗಳು ಅಲ್ಲಿವೆ. ಸಾಹಿತ್ಯ, ಸಂಗೀತ, ಸಿನಿಮಾ ಸಿ.ಡಿಗಳಿವೆ. ಪಕ್ಕದಲ್ಲೇ ಬಾಯಲ್ಲಿ ನೀರೂರಿಸುವ ಖಾದ್ಯಗಳೂ ಲಭ್ಯ.ಸಾಹಿತ್ಯ ಪರಿಷೆಯ ವಾರ್ಷಿಕ ಜಾತ್ರೆಗೆ ತೆರೆಬೀಳಲು ಇನ್ನು ಎರಡು ದಿನ ಮಾತ್ರ ಬಾಕಿ. ವಾರಾಂತ್ಯವನ್ನು ಪುಸ್ತಕೋತ್ಸವದೊಂದಿಗೆ ಕಳೆಯುವುದಕ್ಕಿಂತ ಬೇರೆ ಸಂಭ್ರಮ ಬೇಕೆ?ಕಡಿಮೆ ಭರಾಟೆ

ಹಿಂದಿನ ಪುಸ್ತಕೋತ್ಸವಗಳಿಗೆ ಹೋಲಿಸಿದರೆ ಈ ಬಾರಿ ಜನಸಾಗರ ಕಡಿಮೆ. ಅಂದಾಜು 2 ಲಕ್ಷ ಜನರನ್ನು ನಿರೀಕ್ಷಿಸಲಾಗಿತ್ತು. ಕೊನೆಯ ಎರಡು ದಿನವಾದ ಇಂದು ಮತ್ತು ನಾಳೆ ಅಪಾರ ಸಂಖ್ಯೆಯಲ್ಲಿ ಪುಸ್ತಕ ಪ್ರೇಮಿಗಳು ಇತ್ತ ಬರುತ್ತಾರೆ ಎಂಬ ಆಶಯ ಸಂಘಟಕರಾದ ಬೆಂಗಳೂರು ಪುಸ್ತಕ ಮಾರಾಟ ಮತ್ತು ಪ್ರಕಾಶಕರ ಸಂಘದ್ದು.ಪುಸ್ತಕೋತ್ಸವದತ್ತ ಸೆಳೆಯುವುದಕ್ಕಾಗಿಯೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸುಮಾರು 40 ಸಾವಿರ ಪಾಸುಗಳನ್ನು ವಿತರಿಸಲಾಗಿದೆ. ಹಿರಿಯ ನಾಗರಿಕರಿಗೆ ಪಾಸ್‌ನ ಅಗತ್ಯವಿಲ್ಲ. ತಂಡತಂಡವಾಗಿ ಬರುವ ಶಾಲಾ ಮಕ್ಕಳಿಗೂ ಉಚಿತ ಪ್ರವೇಶ.ಪುಸ್ತಕ ಮೇಳದಲ್ಲಿ ನಕಲಿ ಪುಸ್ತಕಗಳು ಮಾರಾಟವಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ ಸಂಘಟಕರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry