ಎಲ್ಲೆ ಮೀರಿದ್ದು ಹೌದು: ರಿಕಿ ಪಾಂಟಿಂಗ್

7

ಎಲ್ಲೆ ಮೀರಿದ್ದು ಹೌದು: ರಿಕಿ ಪಾಂಟಿಂಗ್

Published:
Updated:

ನಾಗಪುರ: ಜಿಂಬಾಬ್ವೆ ವಿರುದ್ಧದ ಪಂದ್ಯದ ವೇಳೆ ಮೊಟೇರಾದ ಸರ್ದಾರ್ ಪಟೇಲ್ ಕ್ರೀಡಾಂಗಣದ ಡ್ರೆಸಿಂಗ್ ಕೊಠಡಿಯ ಟಿವಿ ಸೆಟ್‌ಗೆ ಹಾನಿ ಉಂಟಾದ ಘಟನೆಗೆ ಅತಿಯಾದ ರಂಜನೆ ನೀಡಲಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.‘ಇಂತಹ ಕತೆ ಎಲ್ಲಿ ಹುಟ್ಟಿಕೊಳ್ಳುತ್ತದೆ ಎಂಬುದು ತಿಳಿಯುತ್ತಿಲ್ಲ. ಘಟನೆಯ ಬಗ್ಗೆ ಮಾಧ್ಯಮಗಳಲ್ಲಿ ವರ್ಣನೆ ನೀಡಲಾಗಿದೆ. ನಿಜವಾಗಿಯೂ ನಾನು ಬ್ಯಾಟ್‌ನಿಂದ ಟಿವಿ ಸೆಟ್‌ಗೆ ಬಡಿದಿಲ್ಲ. ಪ್ಯಾಡ್‌ನ್ನು ಕಿಟ್ ಬ್ಯಾಗ್‌ನತ್ತ ಎಸೆದಿದ್ದೆ. ಅದು ಆಕಸ್ಮಿಕವಾಗಿ ಟಿವಿ ಸೆಟ್‌ಗೆ ಅಪ್ಪಳಿಸಿದೆ. ಇದರಿಂದ ಅಲ್ಪ ಹಾನಿ ಉಂಟಾಗಿದೆ. ಘಟನೆಯನ್ನು ಕೂಡಲೇ ತಂಡದ ಮ್ಯಾನೇಜರ್ ಗಮನಕ್ಕೆ ತಂದಿದ್ದೇನೆ. ಐಸಿಸಿ ನನಗೆ ಎಚ್ಚರಿಕೆ ನೀಡಿದ್ದು, ತಪ್ಪನ್ನು ಈಗಾಗಲೇ ಒಪ್ಪಿಕೊಂಡಿದ್ದೇವೆ’ ಎಂದು ಅವರು ವಿವರಿಸಿದರು.ಜಿಂಬಾಬ್ವೆ ವಿರುದ್ಧ ಸೋಮವಾರ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದ ವೇಳೆ ಈ ಘಟನೆ ನಡೆದಿತ್ತು. ರನೌಟ್ ಆದ ನಿರಾಸೆಯಿಂದ ಪೆವಿಲಿಯನ್‌ಗೆ ಮರಳಿದ್ದ ಪಾಂಟಿಂಗ್ ಡ್ರೆಸಿಂಗ್ ಕೊಠಡಿಯ ಟಿವಿ ಸೆಟ್‌ಗೆ ಹಾನಿ ಉಂಟುಮಾಡಿದ್ದರು. ಬಳಿಕ ಕ್ಷಮೆಯಾಚಿಸಿದ್ದ ಅವರು ಐಸಿಸಿಯ ಎಚ್ಚರಿಕೆ ಪಡೆದಿದ್ದರು.ಆದರೆ ಡ್ರೆಸಿಂಗ್ ಕೊಠಡಿಯಲ್ಲಿ ತಾನು ಎಲ್ಲೆ ಮೀರಿದ್ದು ಹೌದು ಎಂಬುದನ್ನು ‘ಪಂಟರ್’ ಒಪ್ಪಿಕೊಂಡರು. ಇಂತಹ ಘಟನೆಗಳಿಂದ ಡ್ರೆಸಿಂಗ್ ಕೊಠಡಿಯ ವಾತಾವರಣ ಕೆಡುವುದಿಲ್ಲವೇ ಎಂಬ ಪ್ರಶ್ನೆಗೆ, ‘ಎಲ್ಲದಕ್ಕೂ ಒಂದು ಮಿತಿ ಎಂಬುದಿರುತ್ತದೆ. ಡ್ರೆಸಿಂಗ್ ಕೊಠಡಿಯಲ್ಲಿ ಯಾವುದೇ ಉಪಕರಣಗಳಿಗೆ ಹಾನಿ ಮಾಡಬಾರದು. ನಾನು ಎಲ್ಲೆ ಮೀರಿದ್ದು ಹೌದು. ಇದರ ಜವಾಬ್ದಾರಿ ಹೊತ್ತುಕೊಳ್ಳುವೆ. ನಡೆದ ಘಟನೆಯನ್ನು ಮರೆತು ಆಟದತ್ತ ಗಮನ ಕೇಂದ್ರೀಕರಿಸುವೆ’ ಎಂದು     ಹೇಳಿದರು.‘ಆಟದ ಮೇಲೆ ಗಮನ ನೀಡುವುದು ಕಷ್ಟ’

ಆಸ್ಟ್ರೇಲಿಯಾ ವಿರುದ್ಧದ ಪ್ರಮುಖ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡದ ಆಟಗಾರರು ದೈಹಿಕವಾಗಿ ಸಜ್ಜಾಗಿದ್ದಾರೆ. ಆದರೆ ಮಾನಸಿಕವಾಗಿ ಸಂಪೂರ್ಣವಾಗಿ ಸಿದ್ಧರಾಗಿಲ್ಲ. ತವರಿನಲ್ಲಿ ಜನರು ಭೂಕಂಪದಿಂದ ಕಷ್ಟ ಅನುಭವಿಸಿರುವ ಕಾರಣ ತಂಡದ ಆಟಗಾರರಿಗೆ ಪಂದ್ಯದ ಮೇಲೆ ಗಮನ ನೀಡುವುದು ಸ್ವಲ್ಪ ಕಷ್ಟ ಎಂದು ಕಿವೀಸ್ ನಾಯಕ ಡೇನಿಯಲ್ ವೆಟೋರಿ ತಿಳಿಸಿದರು.   ‘ಭೂಕಂಪದಿಂದ ತೊಂದರೆ ಅನುಭವಿಸಿರುವ ಜನರ ನೋವಿನಲ್ಲಿ ನಾವೂ ಭಾಗಿಯಾಗಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry