ಶನಿವಾರ, ಅಕ್ಟೋಬರ್ 19, 2019
29 °C

ಎಲ್ಲೆ ಮೀರಿದ ಅನ್ಯಭಾಷಿಕರ ದಬ್ಬಾಳಿಕೆ: ರಾಮಕೃಷ್ಣ

Published:
Updated:
ಎಲ್ಲೆ ಮೀರಿದ ಅನ್ಯಭಾಷಿಕರ ದಬ್ಬಾಳಿಕೆ: ರಾಮಕೃಷ್ಣ

ಚಾಮರಾಜನಗರ (ಸಿದ್ಧಲಿಂಗಯತಿ ವೇದಿಕೆ): `ಇಂಗ್ಲಿಷ್ ಭಾಷಾ ವ್ಯಾಮೋಹ ಸಮೂಹ ಸನ್ನಿಯಾಗಿದೆ. ಗೆದ್ದಲು ರೂಪ ಧರಿಸಿ ಕನ್ನಡವನ್ನೇ ತಿನ್ನುತ್ತಿದೆ. ಯುಕ್ತ ಕೀಟನಾಶಕ ಸಿಂಪಡಿಸಿ ಮಾತೃಭಾಷೆ ಉಳಿಸುವ ಕೆಲಸ ನಡೆಯಬೇಕಿದೆ~ ಎಂದು ಸಮ್ಮೇಳನಾಧ್ಯಕ್ಷ ಡಾ.ಆರ್. ರಾಮಕೃಷ್ಣ ಪ್ರತಿಪಾದಿಸಿದರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಮತ್ತು ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದ ಚಾಮರಾಜನಗರ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಮಾತೃಭಾಷೆ ಕನ್ನಡಕ್ಕೆ ಎದುರಾಗಿರುವ ಆಪತ್ತು ಅನಾವರಣ ಗೊಂಡಿತು. ಇಂದಿಗೂ ಆಡಳಿತದಲ್ಲಿ ಕನ್ನಡ ಜಾರಿಗೆ ಬಾರದಿರುವ ಕುರಿತು ವಿಷಾದವೂ ಇಣುಕಿತು. ಎಂಟು ಪುಟದ ಸಿದ್ಧಭಾಷಣ ಓದಿದ ಅವರು, ರೈತರ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಿದರು.`ವ್ಯಕ್ತಿಗತ ನೆಲೆಯಲ್ಲಿ ಇಂಗ್ಲಿಷ್ ವ್ಯಾಮೋಹ ಆರಂಭವಾಯಿತು. ಈಗ ಸಾಂಕ್ರಾಮಿಕ ರೋಗವಾಗಿದೆ. ರಾಜ್ಯದಲ್ಲಿ ಕನ್ನಡ ವಿರೋಧಿ ಧೋರಣೆ ಮುಂದುವರಿದಿದೆ. ಅನ್ಯಭಾಷಿಕರ ದಬ್ಬಾಳಿಕೆ ಎಲ್ಲೆ ಮೀರಿದೆ. ನಿತ್ಯಜೀವನದಲ್ಲಿಯೂ ನಮಗೆ ಅರಿವಿಲ್ಲದಂತೆ ಕಂಗ್ಲಿಷ್ ಭಾಷೆ ಬಳಸುತ್ತಿದ್ದೇವೆ. ಮಾಧ್ಯಮಗಳಲ್ಲಿ ಈ ಬಳಕೆ ಹೆಚ್ಚು. ಕನ್ನಡ ಶಬ್ದಗಳನ್ನೇ ಬಳಸುವಂತೆ ಅರಿವು ಮೂಡಿಸಲು ಅಭಿಯಾನ ಹಮ್ಮಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಭಾಷೆಯ ಔಚಿತ್ಯ ಮೀರದೆ ಸಂವಹನ ಕಲೆಯಲ್ಲಿ ತೊಡಗಿಸಿಕೊಳ್ಳುವ ಗುರುತರ ಹೊಣೆಗಾರಿಕೆ ಮಾಧ್ಯಮಗಳ ಮೇಲಿದೆ~ ಎಂದು ಅಭಿಪ್ರಾಯಪಟ್ಟರು.ಕನ್ನಡ ಬರೀ ಭಾಷೆಯಲ್ಲ. ಅದೊಂದು ಸಂಸ್ಕೃತಿ. ಆಧುನೀಕರಣದಿಂದ ಭಾಷೆ, ಸಂಸ್ಕೃತಿ ಮತ್ತು ಸಮಾಜ ಅಪಾಯಕ್ಕೆ ಸಿಲುಕಿವೆ. ಸಂಸ್ಕೃತಿಯ ಬಹುಮುಖಿ ಲಕ್ಷಣವನ್ನು ಜಾಗತೀಕರಣದ ಮೂಲಕ ಮಟ್ಟಸಗೊಳಿಸುವ ಹುನ್ನಾರ ನಡೆಯುತ್ತಿದೆ.ಅದನ್ನು ಧೈರ್ಯವಾಗಿ ಎದುರಿಸಲು ಸ್ವಾಭಿಮಾನದ ಅಗತ್ಯವಿದೆ. ಇದಕ್ಕಾಗಿ ಕನ್ನಡಿಗರಿಗೆ ಸಾಮಾಜಿಕ, ಆರ್ಥಿಕ ಭದ್ರತೆ ದೊರೆಯಬೇಕಿದೆ. ಉಚಿತ ಶಿಕ್ಷಣ, ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಪ್ರತಿಪಾದಿಸಿದರು.ಭಾಷೆ, ಶಿಕ್ಷಣ, ನಿರುದ್ಯೋಗ, ವಿದ್ಯುತ್, ವಸತಿ, ಭ್ರಷ್ಟಾಚಾರ ಸಮಸ್ಯೆ ಕಾಡುತ್ತಿದೆ. ರೈತರು ಕೂಡ ಸಂಕಷ್ಟದಲ್ಲಿದ್ದಾರೆ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದ ಸಮಸ್ಯೆ ಸೃಷ್ಟಿಯಾಗಿವೆ ಎಂದರು.ಇಂದಿಗೂ ಆಡಳಿತದಲ್ಲಿ ಕನ್ನಡ ಬಳಕೆ ಜಾರಿಗೊಂಡಿಲ್ಲ. ಈ ಕುರಿತು ಸರ್ಕಾರ ಹೊರಡಿಸಿರುವ ಸುತ್ತೋಲೆಗಳಿಗೆ ಬೆಲೆಯಿಲ್ಲ. ಕನ್ನಡ ನಾಮಫಲಕಗಳಿಗೆ ಒತ್ತು ನೀಡಿದರೆ ಸಾಲದು. ವ್ಯಾವಹಾರಿಕವಾಗಿ ಕನ್ನಡದ ವಾತಾವರಣ ಸೃಷ್ಟಿಸಬೇಕಿದೆ ಎಂದು ಹೇಳಿದರು.ಶೈಕ್ಷಣಿಕ ಹುನ್ನಾರ

ಶೈಕ್ಷಣಿಕವಾಗಿ ಕನ್ನಡವನ್ನು ಮೂಲೆಗುಂಪು ಮಾಡುವ ಹುನ್ನಾರ ನಡೆಯುತ್ತಿದೆ. ಕನ್ನಡ ಶಾಲೆ ಮುಚ್ಚಲು ಸರ್ಕಾರ ತೀರ್ಮಾನಿಸಿದ್ದೇ ಇದಕ್ಕೊಂದು ನಿದರ್ಶನ. ಆದರೆ, ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆಗೆ ಕಾರಣವಾಗಿರುವ ಅಂಶ ಹುಡುಕುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿಲ್ಲ. ಶೈಕ್ಷಣಿಕ ನಿಯಮ ಉಲ್ಲಂಘಿಸುವ ಖಾಸಗಿ ಶಾಲೆಗಳಿಗೆ ಸರ್ಕಾರ ಎಗ್ಗಿಲ್ಲದೆ ಅನುಮತಿ ನೀಡುತ್ತಿದೆ. ಇಂಗ್ಲಿಷ್ ಮಾಧ್ಯಮದ ಬೋಧನೆಗೆ ಅನುಕೂಲಕರ ವಾತಾವರಣ ಕಲ್ಪಿಸುತ್ತಿದೆ ಎಂದು ಟೀಕಿಸಿದರು.ಕನ್ನಡ ಭಾಷೆಯ ರಕ್ಷಣೆ ಮತ್ತು ಅಭಿವೃದ್ಧಿ ಸಂಬಂಧ ವ್ಯಾಪಕವಾದ ಅರಿವು ಮೂಡುತ್ತಿದೆ. ಭಾಷಾ ತಜ್ಞರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಜನರ ಹಿತಕಾಪಾಡಿಕೊಂಡೇ ಕನ್ನಡ ಕಟ್ಟುವ ಕೆಲಸ ನಡೆಯಬೇಕಿದೆ ಎಂದು ಆಶಿಸಿದ ಅವರು, ಸಂಸ್ಕೃತದಿಂದ ಕನ್ನಡಕ್ಕೆ ಯಾವುದೇ ಅಪಾಯ ಇಲ್ಲ. ಸಂಸ್ಕೃತ ಕನ್ನಡಜೀವ ಸೆಲೆಗಳ ಪೈಕಿ ಒಂದಾಗಿದೆ. ಸಂಸ್ಕೃತವನ್ನು ಕನ್ನಡ ತನ್ನದೆ ಆದ ರೀತಿಯಲ್ಲಿ ಸ್ವೀಕರಿಸಿದೆ.ಈ ಸಂಬಂಧ ಮುಂದುವರಿಸಿಕೊಂಡು ಹೋಗುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು. ನಾಡಿನಲ್ಲಿ ಏಕರೂಪದ ಶಿಕ್ಷಣ ಪದ್ಧತಿ ಜಾರಿಯಾಗಬೇಕಿದೆ. ಕೇಂದ್ರ ಶಾಲೆ ಮತ್ತು ಖಾಸಗಿ ಶಾಲೆಗಳು ವಿದ್ಯಾರ್ಥಿಗಳಲ್ಲಿ ಅಸಮಾನತೆ ಸೃಷ್ಟಿಸುತ್ತಿವೆ. ಹೈಟೆಕ್ ಭ್ರಮೆಯಲ್ಲಿ ಭಾಷಾ ಕಲಿಕೆ ಮತ್ತು ಸಾಹಿತ್ಯದ ಅಭ್ಯಾಸ ಕೈಬಿಟ್ಟು ಹೋಗುವ ಪರಿಸ್ಥಿತಿಯಿದೆ. ಇದನ್ನು ಎಲ್ಲ ಶಿಕ್ಷಣ ತಜ್ಞರು, ಭಾಷಾ ಶಿಕ್ಷಕರು ಒಗ್ಗಟ್ಟಿನಿಂದ ಎದುರಿಸಬೇಕಿದೆ ಎಂದು ಹೇಳಿದರು.ಭ್ರಷ್ಟಾಚಾರ

ಆಡಳಿತದ ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಜನರು ಎಚ್ಚೆತ್ತುಕೊಳ್ಳಬೇಕಿದೆ. ಭ್ರಷ್ಟಾಚಾರಕ್ಕೆ ಜನರು ಬೆಂಬಲ ನೀಡಬಾರದು. ಇದರ ನಿರ್ಮೂಲನೆಗೆ ಮುಂದಾಗಬೇಕು ಎಂದು ಕರೆ ನೀಡಿದರು.ಸಂಸ್ಕೃತಿಗೂ ಕಂಟಕ ಎದುರಾಗಿದೆ. ಆಧುನಿಕತೆಯ ಭರಾಟೆಯಲ್ಲಿ ಜಾನಪದ ಕಲೆಗಳು ನಶಿಸುತ್ತಿವೆ. ಹಬ್ಬ, ಜಾತ್ರೆಗಳಲ್ಲಿ ಯಾಂತ್ರಿಕತೆ ಆವರಿಸಿದೆ. ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸವಾಗಬೇಕಿದೆ ಎಂದರು.ರೈತರ ಜೀವನಕ್ಕೆ ಭದ್ರತೆ ಇಲ್ಲ. ಆಳುವ ಸರ್ಕಾರಗಳಿಗೆ ಈ ಬಗ್ಗೆ ಕಾಳಜಿ ಇಲ್ಲ. ಸೂಕ್ತ ಮಾರುಕಟ್ಟೆ, ಬಡ್ಡಿದರದಿಂದ ಅನ್ನದಾತರು ಬಸಳಿದಿದ್ದಾರೆ. ಕೈಗಾರೀಕರಣದ ನೆಪದಲ್ಲಿ ಭೂಕಬಳಿಕೆ ನಡೆಯುತ್ತಿದೆ. ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯಿಂದ  ಆಗುವ ದುಷ್ಪರಿಣಾಮದ ಬಗ್ಗೆ ಯಾರೊಬ್ಬರು ಯೋಚಿಸುತ್ತಿಲ್ಲ.

ರೈತ ವಿರೋಧಿ ನಡವಳಿಕೆ ವಿರುದ್ಧ ಬೆಳಕು ಚೆಲ್ಲಿ ರಕ್ಷಣೆಗೆ ಮುಂದಾಗಬೇಕಿದೆ ಎಂದು ಕರೆ ನೀಡಿದರು.

Post Comments (+)