ಎಲ್ಲೆ ಮೀರಿದ ಗಣಿಗಾರಿಕೆ

7

ಎಲ್ಲೆ ಮೀರಿದ ಗಣಿಗಾರಿಕೆ

Published:
Updated:

ಮೊಳಕಾಳ್ಮುರು: `ಮೊಳಕಾಲ್ಮುರು~ ಎಂದ ತಕ್ಷಣವೇ ನೆನಪಿಗೆ ಬರುವುದು ಮನಮೋಹಕ ರೇಷ್ಮೆಸೀರೆಗಳು. ಇದರ ಜತೆ ಸದ್ದಿಲ್ಲದೇ ಕಲ್ಲು ಗಣಿಗಾರಿಕೆ ವಿಷಯದ್ಲ್ಲಲೂ ಸಹ ತಾಲ್ಲೂಕು ಗಮನ ಸೆಳೆಯುತ್ತಿದ್ದು, ಇದು ಪೂರ್ಣ ಪ್ರಮಾಣದಲ್ಲಿ ಅಕ್ರಮವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.ತಾಲ್ಲೂಕಿನಲ್ಲಿ ಸರ್ಕಾರದ ಕಾಮಗಾರಿಗಳ ಗುತ್ತಿಗೆ ಶೇ. 25-30 ರಷ್ಟು ಕಡಿಮೆ ಬಿಡ್ ಆಗುತ್ತಿರುವುದಕ್ಕೆ ಗುತ್ತಿಗೆದಾರರು ನೀಡುವ ಮುಖ್ಯ ಕಾರಣ ಇಲ್ಲಿ ಕಾಮಗಾರಿಗೆ ಬೇಕಾದ ಕಲ್ಲು ಹಾಗೂ ಮರಳು ಸ್ಥಳೀಯವಾಗಿ ಕಡಿಮೆ ದರದಲ್ಲಿ ದೊರೆಯುತ್ತದೆ ಎಂದು. ಇದಕ್ಕೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಲ್ಲಿ ಬಹುತೇಕ ಕಾಮಗಾರಿಗಳು ಬರೀ ಕಲ್ಲು ಮತ್ತು ಜಲ್ಲಿ ಬಳಕೆಯಿಂದ ಕೂಡಿರುವುದು ಒತ್ತು ನೀಡಿದೆ.ತಾಲ್ಲೂಕಿನಲ್ಲಿ ಹಾನಗಲ್, ಮೇಗಲಕಣಿವೆ. ಮಲ್ಲೇಹರವು, ಬೊಮ್ಮದೇವರಹಳ್ಳಿ ಸುತ್ತಮುತ್ತ, ಹಾನಗಲ್ ಸುತ್ತಮುತ್ತ ಹಾಗೂ ರಾಯದುರ್ಗ ರಸ್ತೆಯಲ್ಲಿ ಪ್ರಕೃತಿ ದತ್ತವಾಗಿ ಹರಡಿಕೊಂಡಿರುವ ಗುಡ್ಡಗಳಲ್ಲಿ ಕಲ್ಲಿನ ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿಂದ ರಾಜ್ಯದ ಅನೇಕ ಕಡೆಗಳಿಗೆ ಬಂಡೆ, ಸೈಜುಕಲ್ಲುಗಳು, ಜಲ್ಲಿ ಸರಬರಾಜು ಆಗುತ್ತಿದ್ದರೂ ಸಹ ಚಿಕ್ಕನಹಳ್ಳಿ, ಮಲ್ಲೇಹರವು ಮತ್ತು ಕೆಳಗಳಕಣಿವೆ ಸೇರಿದಂತೆ ಮೂರು ಕಡೆ ಮಾತ್ರ ಪರವಾನಗಿ ಗಣಿಗಾರಿಕೆ ನಡೆಸಲಾಗುತ್ತಿತ್ತು.ಈಗ ಗಣಿ ಮತ್ತು ಭೂವಿಜ್ಞಾನ ಇಲಾಖೆ ಆದೇಶ ಮೇರೆಗೆ ಈ ಮೂರು ಪರವಾನಗಿಗಳನ್ನು ಸಹ ರದ್ದುಪಡಿಸಲಾಗಿದೆ ಎಂದು ತಾಲ್ಲೂಕು ಆಡಳಿತ ಮೂಲಗಳು ಹೇಳುತ್ತವೆ.ತಹಶೀಲ್ದಾರ್ ವೆಂಕಟಪ್ಪ ನೀಡುವ ಮಾಹಿತಿ ಪ್ರಕಾರ `ಅನಧಿಕೃತವಾಗಿ ತಾಲ್ಲೂಕಿನಿಂದ ಕಲ್ಲು, ಬಂಡೆ ಸಾಗಿಸುವ ಲಾರಿಗಳಿಗೆ ಹೆಚ್ಚಿನ ದಂಡ ವಿಧಿಸುವ ಜತೆಗೆ ಅವರಿಂದ ಮತ್ತೆ ಇಂತಹ ತಪ್ಪು ಮಾಡುವುದಿಲ್ಲ ಎಂದು ಲಿಖಿತ ಹೇಳಿಕೆ ಪಡೆಯಲಾಗುತ್ತಿದೆ ಎಂದು ಹೇಳುತ್ತಾರೆ.ಆದರೆ, ಈ ಕ್ರಮ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಅಕ್ರಮ ಗಣಿಗಾರಿಕೆ ತಪ್ಪಿಸಲು ಹಾಗೂ ಸರ್ಕಾರಕ್ಕೆ ಗಣಿಗಾರಿಕೆಯಿಂದ ಆದಾಯ ಪಡೆಯಲು ನೂತನವಾಗಿ ಹಾನಗಲ್ ಬಳಿ ಕಲ್ಲು ಗಣಿಗಾರಿಕೆ ವೃತ್ತ ಸ್ಥಾಪನೆಗೆ ಸರ್ಕಾರ ಉದ್ದೇಶಿಸಿದೆಯಂತೆ. ಇದು ಆರಂಭವಾದಲ್ಲಿ ಬೇರೆ ಎಲ್ಲಿಯೂ ಗಣಿಗಾರಿಕೆ ಮಾಡದೇ ಇಲ್ಲಿಯೇ ಪರವಾನಗಿ ಪಡೆದು ಗಣಿಗಾರಿಕೆ ಮಾಡಬೇಕಾಗುತ್ತದೆ.ಇದಕ್ಕಾಗಿ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಜತೆಗೂಡಿ ಸ್ಥಳ ಗುರುತಿಸಲಾಗಿದೆ ಎಂದು ತಾಲ್ಲೂಕು ಆಡಳಿತದ ಮೂಲಗಳು ತಿಳಿಸಿವೆ.ತಕ್ಷಣವೇ ಸರ್ಕಾರ ಇತ್ತ ಗಮನಹರಿಸಿ ಅಕ್ರಮವಾಗಿ ಲೂಟಿಯಾಗುತ್ತಿರುವ ತಾಲ್ಲೂಕಿನ ಸಂಪತ್ತನ್ನು ಉಳಿಸಲು ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂಬುದು ಸ್ಥಳೀಯರ ಮನವಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry