`ಎಲ್ಲ ಅಧ್ಯಕ್ಷರೇ ಮಾಡಿದ್ದು'!

ಗುರುವಾರ , ಜೂಲೈ 18, 2019
27 °C

`ಎಲ್ಲ ಅಧ್ಯಕ್ಷರೇ ಮಾಡಿದ್ದು'!

Published:
Updated:

ಬೆಂಗಳೂರು: `ನನಗೇನೂ ಗೊತ್ತಿಲ್ಲ. ಎಲ್ಲ ಅಧ್ಯಕ್ಷರೇ ಮಾಡಿದ್ದು. ಅವರ ನಿರ್ದೇಶನದಂತೆ ನಾನು ನಡೆದುಕೊಂಡಿದ್ದೇನೆ'.

1996, 1998 ಮತ್ತು 2004ರ ಕೆಪಿಎಸ್‌ಸಿ ನೇಮಕಾತಿ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಿಐಡಿ ಪೊಲೀಸರಿಗೆ ಆಗಿನ ಕೆಪಿಎಸ್‌ಸಿ ಸದಸ್ಯರು ನೀಡಿದ್ದ ಹೇಳಿಕೆ ಇದು. ಬಹುತೇಕ ಎಲ್ಲ ಸದಸ್ಯರೂ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಈ ಬಾರಿ ಕೂಡ ಇಂತಹದ್ದೇ ಹೇಳಿಕೆ ಬರಬಹುದು ಎಂಬ ಶಂಕೆ ಹಲವಾರು ಅಭ್ಯರ್ಥಿಗಳನ್ನು ಕಾಡುತ್ತಿದೆ.2011ರ ನವೆಂಬರ್ 23ರಂದು ಸಿಐಡಿ ಪೊಲೀಸರ ಮುಂದೆ ಹೇಳಿಕೆ ನೀಡಿದ ಆಗಿನ ಕೆಪಿಎಸ್‌ಸಿ ಸದಸ್ಯೆ ಲಿಲಿಯನ್ ಝೇವಿಯರ್, `ನಾನು ಸಂದರ್ಶನದಲ್ಲಿ ಭಾಗಿಯಾದ ಪ್ರಕರಣಗಳಲ್ಲಿ ಕೆಲವೊಂದು ಸಲ ಕಣ್ತಪ್ಪಿನಿಂದ, ಕೆಲವೊಂದು ಸಲ ಅಧ್ಯಕ್ಷ ಡಾ.ಎಚ್. ಎನ್. ಕೃಷ್ಣ ನಿರ್ದೇಶನದಂತೆ ಅಂಕಗಳನ್ನು ಹೆಚ್ಚು- ಕಡಿಮೆ ಮಾಡಿದ್ದೇನೆ. ಇದರಲ್ಲಿ ನನಗೆ ಯಾವುದೇ ವೈಯಕ್ತಿಕ ದುರುದ್ದೇಶ ಇರಲಿಲ್ಲ' ಎಂದು ತಿಳಿಸಿದ್ದಾರೆ.1998ರ ಪರೀಕ್ಷೆಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ನೇಮಕಗೊಂಡ 3ಎ ವರ್ಗದ ಬಿ.ಎನ್.ಮಂಜುನಾಥ್ ಅವರ ಸಂದರ್ಶನದ ಅಂಕವನ್ನು 50ರಿಂದ 150ಕ್ಕೆ ತಿದ್ದಲಾಗಿದೆ. ಅದೇ ರೀತಿ ಸಹಾಯಕ ಖಜಾನೆ ಅಧಿಕಾರಿಯಾಗಿ ನೇಮಕಗೊಂಡ ಪರಿಶಿಷ್ಟ ಜಾತಿಯ ಎಂ.ಎಸ್. ಸಂಗಪುರ ಅವರ ಸಂದರ್ಶನದ ಅಂಕವನ್ನೂ 50ರಿಂದ 150ಕ್ಕೆ ಹೆಚ್ಚಿಸಲಾಗಿದೆ. 1999ರ ಸಾಲಿನಲ್ಲಿ ಪರಿಶಿಷ್ಟ ಜಾತಿಯ ಟಿ.ಅಮರನಾಥ್, 3ಎ ವರ್ಗದ ದೇವರಾಜ್ ಅವರ ಅಂಕಗಳನ್ನೂ ಹೆಚ್ಚಿಸಲಾಗಿದೆ. 2004ರ ಸಂದರ್ಶನದಲ್ಲಿ ಮಹದೇವ ನಾಯ್ಕ ಅವರ ಅಂಕವನ್ನೂ ಹೆಚ್ಚಿಸಲಾಗಿದೆ. ಈ ಎಲ್ಲ ಪ್ರಕರಣಗಳಲ್ಲಿ ತಾವು ಅಧ್ಯಕ್ಷ ಡಾ.ಎಚ್.ಎನ್.ಕೃಷ್ಣ ಅವರ ಒತ್ತಡದಿಂದ ಅಂಕಗಳನ್ನು ಹೆಚ್ಚಿಸಿದ್ದಾಗಿ ಲಿಲಿಯನ್ ಹೇಳಿಕೆ ನೀಡ್ದ್ದಿದರು.2003ರಿಂದ 2008ರವರೆಗೆ ಕೆಪಿಎಸ್‌ಸಿ ಸದಸ್ಯರಾಗಿದ್ದ ವೆಂಕಟಸ್ವಾಮಿ ಅವರೂ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಆದರೆ, ಅಂಕ ಹೆಚ್ಚಿಸಿದ್ದು ಯಾವ ಕಾರಣಕ್ಕೆ ಎನ್ನುವುದು ತಮಗೆ ನೆನಪಿಲ್ಲ ಎಂದೂ ಹೇಳಿದ್ದಾರೆ. ಎಸ್.ಗುಣಕರ, ಗುರುನಾಥ ಬಡಿಗೇರ ಮತ್ತು ಎಂ.ಆರ್. ರಾಜೇಶ್ ಅವರ ಸಂದರ್ಶನದ ಅಂಕಗಳನ್ನು ವೆಂಕಟಸ್ವಾಮಿ ಅವರು ಹೆಚ್ಚಿಸಿದ್ದಾರೆ ಎಂಬ ಆರೋಪವಿತ್ತು. ಈ ಬಗ್ಗೆ ಸಿಐಡಿ ಪೊಲೀಸರಿಗೆ ಹೇಳಿಕೆ ನೀಡಿದ ಅವರು `ಯಾವ ಕಾರಣಕ್ಕೆ ನಾನು ಅಂಕ ಬದಲಾಯಿಸಿದೆ ಎನ್ನುವುದು ನೆನಪೇ ಇಲ್ಲ' ಎಂದಿದ್ದರು. ಸಿಐಡಿ ಇದನ್ನೇ ದಾಖಲಿಸಿಕೊಂಡಿದೆ.ಆಗ ಸದಸ್ಯರಾಗಿದ್ದ ಡಾ.ಎಚ್.ಎಸ್. ಪಾಟೀಲ್ ಅವರು ಎಚ್.ಎಲ್.ಗುರುಪ್ರಸಾದ್, ಆರತಿ, ಆರ್.ಶಾಲಿನಿ, ಆರ್. ರೂಪಾ, ಎಸ್.ಬಿ.ನರೇಂದ್ರ ಅವರ ಸಂದರ್ಶನದ ಅಂಕವನ್ನು ಹೆಚ್ಚು ಮಾಡಿದ್ದಾರೆ. ಶಾಲಿನಿ ಅವರ ಅಂಕವನ್ನು 75ರಿಂದ 150ಕ್ಕೆ, ನರೇಂದ್ರ ಅವರ ಅಂಕವನ್ನು 100ರಿಂದ 150ಕ್ಕೆ ಏರಿಸಿದ್ದಾರೆ. `ಹೀಗೆ ಯಾಕೆ ಮಾಡಿದಿರಿ' ಎಂದು ಕೇಳಿದರೆ `ಇವೆಲ್ಲವನ್ನೂ ಅಧ್ಯಕ್ಷರ ನಿರ್ದೇಶನದಂತೆ ಮಾಡಿದ್ದೇನೆ' ಎಂದು ಹೇಳಿಕೆ ನೀಡಿದ್ದಾರೆ.ಬಿ.ಆರ್.ರೂಪಾ ಅವರು 3ಎ ಪ್ರಮಾಣಪತ್ರ ಸಲ್ಲಿಸಿರಲಿಲ್ಲ. ಕೆಪಿಎಸ್‌ಸಿ ದಾಖಲಾತಿ ಪುಸ್ತಕದಲ್ಲಿ ಇವರು ಜಾತಿ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂದೇ ಬರೆಯಲಾಗಿದೆ. ಆದರೂ ಕೂಡ ಆಗಿನ ಅಧ್ಯಕ್ಷ ಕೃಷ್ಣ ಅವರು ಇವರನ್ನು 3ಎ ಮಹಿಳೆ ಪ್ರವರ್ಗದಲ್ಲಿ ಸೇರಿಸಿ ಸಂದರ್ಶನ ನಡೆಸಿದ್ದಾರೆ. ಇನ್ನೊಬ್ಬ ಸದಸ್ಯ ದಾಸಯ್ಯ ಕೂಡ ಇವರನ್ನು ಪ್ರವರ್ಗ 3'ಎ' ನಲ್ಲಿಯೇ ಸಂದರ್ಶನ ನಡೆಸಿದ್ದಾರೆ. ಅಂತಿಮವಾಗಿ 3ಎ ಪ್ರವರ್ಗದ ಆಧಾರದಲ್ಲಿಯೇ ಅವರಿಗೆ ತಹಶೀಲ್ದಾರ್ ಹುದ್ದೆಯನ್ನೂ ನೀಡಲಾಗಿದೆ. ಸಂದರ್ಶನದ ತಖ್ತೆಯನ್ನು ಪರಿಶೀಲಿಸಿದರೆ 1998, 1999 ಮತ್ತು 2004ರ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮಬಾಹಿರ, ಕಾನೂನು ಬಾಹಿರ ಕೃತ್ಯಗಳು ನಡೆದಿರುವುದು ಕಂಡು ಬರುತ್ತದೆ. `ಇದಕ್ಕೆಲ್ಲಾ ಅಧ್ಯಕ್ಷ ಕೃಷ್ಣ ಕಾರಣರಾಗಿದ್ದಾರೆ' ಎಂದು ಸಿಐಡಿ ಹೇಳಿದೆ.ದಾಸಯ್ಯ, ಮೊಹಮ್ಮದ್ ಅಲಿಖಾನ್ ಕೂಡ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಈ ಎಲ್ಲ ಹೇಳಿಕೆಯನ್ನು ಪಡೆದುಕೊಂಡ ಸಿಐಡಿ, `1998, 1999 ಮತ್ತು 2004ರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಕೆಪಿಎಸ್‌ಸಿ ಅಧ್ಯಕ್ಷ ಡಾ.ಎಚ್.ಎನ್. ಕೃಷ್ಣ ಅವರು ಐಪಿಸಿ 120 (ಬಿ), 418, 465, 468, 471, 506ರ ಪ್ರಕಾರ ಆರೋಪಿಯಾಗಿದ್ದು, ಅವರನ್ನು ಶಿಕ್ಷೆಗೆ ಒಳಪಡಿಸಬಹುದು' ಎಂದು ಹೈಕೋರ್ಟಿಗೆ ತಿಳಿಸಿದೆ. ಈ ಬಗ್ಗೆ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್, ನಿಲುವು ಸ್ಪಷ್ಟಪಡಿಸುವಂತೆ ಸರ್ಕಾರವನ್ನು ಕೇಳಿದೆ. ಜು.16ಕ್ಕೆ ಇದು ಮತ್ತೆ ವಿಚಾರಣೆಗೆ ಬರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry