ಎಲ್ಲ ಕ್ಷೇತ್ರ ಕಲುಷಿತ: ವಿಷಾದ

7

ಎಲ್ಲ ಕ್ಷೇತ್ರ ಕಲುಷಿತ: ವಿಷಾದ

Published:
Updated:

ಬೆಂಗಳೂರು: `ಮನುಷ್ಯನ ಸಾಮಾನ್ಯ ಪ್ರಜ್ಞೆಯ ಕೊರತೆಯಿಂದಾಗಿ ಪ್ರಸ್ತುತ ಧಾರ್ಮಿಕ, ರಾಜಕೀಯ, ಕಲೆ, ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳೂ ದುಃಸ್ಥಿತಿಗೆ ತಲುಪಿವೆ~ ಎಂದು ಕರ್ನಾಟಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಹೇಳಿದರು.ನಗರದಲ್ಲಿ ಮಂಗಳವಾರ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಮಾಜಿ ಮೇಯರ್ ಕೆ.ಎಂ.ನಂಜಪ್ಪ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ನಮ್ಮ ಸಮಾಜದಲ್ಲಿ ಇಂದು ಎಲ್ಲವೂ ಭ್ರಷ್ಟವಾಗಲು ಮುಖ್ಯ ಕಾರಣ ಸಾಮಾನ್ಯ ಪ್ರಜ್ಞೆಯ ಕೊರತೆ. ಇಂದಿನ ಶಿಕ್ಷಣ ವ್ಯವಸ್ಥೆ ಬದುಕಲು ಬೇಕಾದ ಶಿಕ್ಷಣವನ್ನು ಕೊಡುತ್ತಿಲ್ಲ.

 

ಅನುಭವದ ಶಿಕ್ಷಣದ ಬದಲು ಕೇವಲ ಅಕ್ಷರ ಶಿಕ್ಷಣ ನೀಡಲಾಗುತ್ತಿದೆ. ವೃತ್ತಿ ಶಿಕ್ಷಣದ ಬದಲು ಇಂದು ವ್ಯಕ್ತಿ ಶಿಕ್ಷಣದ ಅಗತ್ಯವಿದೆ. ಹಲವು ಹಗರಣಗಳಿಂದಾಗಿ ಕರ್ನಾಟಕ ಇಂದು ದೇಶದಲ್ಲಿಯೇ ತಲೆ ತಗ್ಗಿಸುವಂತಹ ಸ್ಥಿತಿಗೆ ತಲುಪಲು ಮೌಲ್ಯಗಳ ಕುಸಿತವೇ ಕಾರಣ~ ಎಂದು ಅವರು ನುಡಿದರು.`ಶಿಕ್ಷಣ ಹಾಗೂ ಸಮಾಜ ಸೇವೆಗಾಗಿ ತಮ್ಮನ್ನೇ ಅರ್ಪಿಸಿಕೊಂಡವರು ಕೆ.ಎಂ.ನಂಜಪ್ಪನವರು. ಎಂತಹ ಸಂದರ್ಭದಲ್ಲೂ ಅವರು ತಮ್ಮ ಬದ್ಧತೆ ಬಿಡಲಿಲ್ಲ. ಅವರ ಜೀವನ ಎಲ್ಲರಿಗೂ ಆದರ್ಶಪ್ರಾಯವಾದುದು. ಸಾರ್ವಜನಿಕ ಸೇವೆಗೆ ನಂಜಪ್ಪ ಮಾದರಿಯಂತಿದ್ದರು. ಅವರ ಪ್ರಾಮಾಣಿಕತೆಯಿಂದಾಗಿ ಒಂದೇ ಒಂದು ಕಪ್ಪು ಚುಕ್ಕೆಯೂ ಅವರ ರಾಜಕಾರಣದಲ್ಲಿ ಇರಲಿಲ್ಲ~ ಎಂದರು.ಗೊ.ರು.ಚನ್ನಬಸಪ್ಪ ಅವರು `ಕೆ.ಎಂ.ನಂಜಪ್ಪ-100~ ಸ್ಮರಣಿಕೆ ಹಾಗೂ ಕಾಲೇಜು ಮಾಸಿಕದ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ, ಗೌರವ ಕಾರ್ಯದರ್ಶಿ ಡಾ.ವೂಡೆ ಪಿ.ಕೃಷ್ಣ, ನಂಜಪ್ಪನವರ ಪುತ್ರಿ ಸತ್ಯಾ ವಿಶ್ವನಾಥ್, ರಕ್ತದಾನ ಸಂಘಟಕ ರಾಜು ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry