ಎಲ್ಲ ಗೊತ್ತುಎನ್ನಲಾದೀತೆ?

7

ಎಲ್ಲ ಗೊತ್ತುಎನ್ನಲಾದೀತೆ?

Published:
Updated:
ಎಲ್ಲ ಗೊತ್ತುಎನ್ನಲಾದೀತೆ?

ತಿಳಿಯದಿರುವುದನೆಲ್ಲ ತಿಳಿಯಬೇಕೆನಲು ಮನ /

ಕೇಳಿ ಬಿಡು ಪ್ರಶ್ನೆಗಳ ಸಹಜ ಶೈಲಿಯಲಿ //

ಗಾಲಿ ತಿರುಗುವುದಕ್ಕೆ ಜಿಡ್ಡು ಲೇಪಿಸುವಂತೆ /

ಅಳವಡಿಸು ಪ್ರಶ್ನೆಗಳ! - ನವ್ಯಜೀವಿ //

ಸ್ವತಃ ಮಾತನಾಡುವುದಕ್ಕಿಂತ ಇನ್ನೊಬ್ಬರ ಮಾತನ್ನು ಕೇಳುವುದೇ ಅತಿ ಮುಖ್ಯ ಹಾಗೂ     ಲಾಭದಾಯಕ ಎಂದು ಕಳೆದ ಅಂಕಣದಲ್ಲಿ ಓದಿದ್ದೇವೆ. ಅದರಲ್ಲೂ ಬೋರ್ಡ್ ರೂಮಿನ ಸುತ್ತಮುತ್ತ ಹಾಗೂ ನಮ್ಮ ಹೊರ ಜಗತ್ತಿನ ವ್ಯವಹಾರದಲ್ಲಿ ಇದು ಅತ್ಯಾವಶ್ಯಕ ಕೂಡ. ನಮ್ಮ ಮುಂದೆ ಕುಳಿತಿರುವವರ ಮನಸ್ಸಿನಲ್ಲಿ ನಿಜವಾಗಿಯೂ ಏನಿದೆ ಎಂದು ಅರ್ಥೈಸಿಕೊಳ್ಳದಿದ್ದರೆ ನಮ್ಮ ಮಾತುಗಳು ಅವರಿಗೆ ಅಸಂಬದ್ಧವಾದೀತು. ಇದರಿಂದ ನಷ್ಟ ನಮಗೆ ಮಾತ್ರ ಎಂಬ ಅರಿವು ನಮ್ಮಲ್ಲಿರಬೇಕು.ಹೀಗಾದರೆ ಮುಂದೆ ಕುಳಿತವರಿಗೆ ನಾವು ಮಾತನಾಡಲು ಅವಕಾಶ ಕೊಡಬೇಕು ಎಂದಾಯಿತು.ಇದನ್ನು ಒಪ್ಪಿದರೆ ನಮಗಿಲ್ಲಿ ಎರಡು ಗೊಂದಲಗಳಿವೆ. ಮುಂದೆ ಕುಳಿತವನು ಸಂದರ್ಭಕ್ಕೆ ಒಪ್ಪದ ಹಾಗೂ ಹಿಡಿದ ಕೆಲಸಕ್ಕೆ ಬಾರದ ಸಂಗತಿಗಳನ್ನು ಮಾತನಾಡುತ್ತಿದ್ದರೆ ನಮ್ಮ ಸಂವಹನ ದಡ ಮುಟ್ಟುವುದಾದರೂ ಹೇಗೆ? ಬೇಡದ ಮಾತುಗಳನ್ನೇ ಅವನಾಡುತ್ತಿದ್ದರೆ ಅದನ್ನು ಸುಮ್ಮನೆ ಕೇಳುತ್ತಾ ಕೂಡುವುದೂ ಸಮಯ ಹಾಳಲ್ಲವೆ? ಇದರಿಂದ ನಷ್ಟ ಮತ್ತೆ ನಮಗೇ ತಾನೆ? ಇದು ಮೊದಲ ಗೊಂದಲವಾದರೆ, ಮುಂದೆ ಕುಳಿತವರು ಮಾತನ್ನೇ ಆಡದಿದ್ದರೆ ಹೇಗೆ? ಅವನು ಸ್ವಭಾವತಃ `ಮೌನಿ ಬಾಬಾ~ ಆಗಿದ್ದರೆ?! ಅವನು ಮಾತನಾಡುವವರೆಗೂ ನಾವೂ ಮಾತನಾಡದೆ ಸುಮ್ಮನೆ ಕುಳಿತಿರಬೇಕೆ? ಇದು ಹೇಗೆ ಸಾಧ್ಯವಾದೀತು? ಇದು ಎರಡನೆಯ ಗೊಂದಲ.ನಮ್ಮ ವ್ಯವಹಾರ ಪ್ರಪಂಚದಲ್ಲಿ ನಮಗೆ ಈ ಇಬ್ಬರ ದರ್ಶನವೂ ಆಗಿರುತ್ತದೆ. ಒಬ್ಬರು ಬೇಕಾದ್ದು ಹಾಗೂ ಬೇಡದ್ದು.. ಹೀಗೆ ಎಲ್ಲವನ್ನೂ ಅಂಕುಶವಿಲ್ಲದೆ ಹರಿಯಬಿಡುತ್ತ ಹಿಡಿದ ಕೆಲಸವನ್ನು ಮರೆಮಾಚಿಸಿದರೆ, ಇನ್ನೊಬ್ಬರು `ಮಾತನಾಡಿದರೆ ಎಲ್ಲಿ ಮುತ್ತು ಉದುರುವುದೋ~ ಎಂದು ಹೆದರಿ ತುಟಿ ಎರಡು ಮಾಡದೆ ಮುದುಡಿ ಕುಳಿತಿರುತ್ತಾರೆ. ಇಬ್ಬರಿಂದಲೂ ಒಟ್ಟಿನಲ್ಲಿ ನಮ್ಮ ಸಮಯ ಹಾಳು.ಹಾಗಾದರೆ ಮೊದಲನೆಯವರೊಂದಿಗೆ ಅವರಿಗೆ ಮಾತನಾಡಲು ಅವಕಾಶವನ್ನೇ ಕೊಡದೆ ನಾವೇ ಹೆಚ್ಚು ಮಾತನಾಡಿಬಿಟ್ಟರೆ ಪರಿಹಾರ ಉಂಟೆ ಎಂಬುದು ಸ್ವಾಭಾವಿಕ ಪ್ರಶ್ನೆ. ಅಂತೆಯೇ ಎರಡನೆಯವರೊಂದಿಗೆ ಆದಷ್ಟೂ ನಾವೇ ಮಾತನಾಡಿ ಹೊರಬರುವುದು ಮೇಲು ಎಂದೆನ್ನಿಸಬಹುದು. ಈ ಎರಡೂ ಕೂಡ ನಿಜವಾದ ಪರಿಹಾರವಲ್ಲ.

 

ಮೊದಲನೆಯವರ ಮಾತನ್ನು ನಿಯಂತ್ರಿಸುತ್ತ ಹಾಗೂ ಅದಕ್ಕೂ ಮಿಗಿಲಾಗಿ ಸಂದರ್ಭೋಚಿತವಾಗಿ ಹಾಗೂ ಸನ್ನಿವೇಶಕ್ಕೆ ಒಪ್ಪದ ಹಾಗೆ ಮಾತನಾಡಿಸುತ್ತ, ಎರಡನೆಯವರನ್ನು ಅವರದೇ ಮಿತಿಯಲ್ಲಿ ಮಾತಿನಲ್ಲಿ ಶಾಮೀಲು ಮಾಡುವುದೇ ನಮಗಿರುವ ಒಂದೇ ಒಂದು ಉಪಾಯ.ಅಂದರೆ, ಎಂದಿಗೂ ನಮ್ಮದೇ ಮಾತನ್ನು ಹಿಡಿತದಲ್ಲಿಟ್ಟುಕೊಂಡು ಮುಂದೆ ಕುಳಿತವರಾರೇ ಆಗಿರಲಿ, ಅವರನ್ನು ಸಕಾರಾತ್ಮಕವಾಗಿ ಸಂವಹನದಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳುವುದೇ ಸೂಕ್ತ ಹಾಗೂ ಜಾಣತನ.ನನ್ನ ಸುಧೀರ್ಘವಾದ ಕೆಲಸದ ಅನುಭವದಲ್ಲಿ ನಾನು ಕಂಡುಕೊಂಡಿರುವ ಸತ್ಯ ಒಂದಿದೆ. ನಮ್ಮ ಯಾವುದೇ ಕೆಲಸದ ಯಶಸ್ಸಿನ ಹಿಂದೆ ಆ ಕೆಲಸಕ್ಕೆ ಬೇಕಾದ ಬಹುತೇಕ ಎಲ್ಲ ಮಾಹಿತಿಗಳೂ ನಮಗಿದೆಯೇ ಎಂಬ ಅಂಶ ಅತಿ ಮುಖ್ಯ. ನಾವು ಬರಿಯ ಊಹೆಗಳ ಮೇರೆಗೇ ನಮ್ಮ ಕಾರ್ಯವೈಖರಿಯನ್ನು ರೂಪಿಸುತ್ತಾ ಸಾಗಿದರೆ, ಹಿಡಿದ ಕೆಲಸದಲ್ಲಿ ನಮಗೆ ಯಶಸ್ಸು ಸಿಗುವುದೇ ಇಲ್ಲವೆಂದಲ್ಲ.ಆದರೆ ಅಂತಹ ಸನ್ನಿವೇಶಗಳಲ್ಲಿ ನಮ್ಮ ಯಶಸ್ಸಿನ ಸಾಧ್ಯತೆ ತೀರಾ ಕಡಿಮೆ. ಮಾಡುತ್ತಿರುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸುವ ಸಾಧ್ಯತೆಗಳನ್ನು ನಾವು ಹೆಚ್ಚು ಮಾಡಿಕೊಳ್ಳಬೇಕೆಂದಾಗ, ಆ ಕೆಲಸವನ್ನು ಶುರು ಮಾಡುವ ಮುನ್ನ ಆ ಕೆಲಸದ ಬಹುತೇಕ ಎಲ್ಲ ವಿಷಯಗಳ ಬಗ್ಗೆಯೂ ನಮಗೆ ನಿಖರವಾದ ಮಾಹಿತಿ ಇರಬೇಕು. ಇಲ್ಲಸಲ್ಲದ ಊಹೆಗಳಿಗೆ ಎಡೆ ಇರಬಾರದು. ಹಾಗಾದರೆ ಅಂತಹ `ಎಲ್ಲ ಗೊತ್ತು!~ ಎಂಬ ಸ್ಥಿತಿಯನ್ನು ತಲುಪುವುದು ಸಾಧ್ಯವಾ? ಉತ್ತರ ಹುಡುಕೋಣ.ನಮ್ಮಲ್ಲಿನ ಯಾರಾದರೊಬ್ಬರ ಮನೆಗೆ ಹೋದಾಗ ಅಲ್ಲಿ ಮಕ್ಕಳಿದ್ದಾರೆ ಎಂದಿಟ್ಟುಕೊಳ್ಳಿ. ನೀವ ಅಲ್ಲಿ ಇರುವವರೆಗೂ ಆ ಮನೆಯ ಹಿರಿಯರು, ಅದರಲ್ಲೂ ತಂದೆ - ತಾಯಂದಿರು, ಅವಕಾಶ ದೊರೆತಾಗಲೆಲ್ಲ ತಮ್ಮ ಮಕ್ಕಳ ಬುದ್ಧಿವಂತಿಕೆಯನ್ನು ನಮ್ಮ ಮುಂದೆ ಪ್ರದರ್ಶಿಸುತ್ತಾರೆ.ಮಗುವನ್ನು ಪುಸಲಾಯಿಸಿ ಅಥವಾ ಆದೇಶಿಸಿ ಅವರು ತಮ್ಮ ಮಗುವಿನಿಂದ ಅದು ಕಲಿತಿರುವ ಹಾಡು-ಪದ್ಯಗಳನ್ನು ಹೇಳಿಸುತ್ತಾರೆ, ನಾಟ್ಯ ಮಾಡಿಸುತ್ತಾರೆ. ನಮಗೆ ವಿಸ್ಮಯವೆನಿಸುವ ಸಾಮಾನ್ಯ ಜ್ಞಾನದ ಅತಿ ಕಠಿಣ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಉರು ಹೊಡೆದಿರುವ ಮಗುವಿನಿಂದ ಅವೆಲ್ಲವನ್ನೂ ಚಾಚೂ ತಪ್ಪದೆ ಒಪ್ಪಿಸುತ್ತಾರೆ. ಆ ಮಗುವಿನ ಜ್ಞಾನದಾಳವನ್ನು ಕಂಡು `ಅಬ್ಬಾ~ ಎಂದು ಬೆರಗಾಗುತ್ತೇವೆ.

 

ನಮ್ಮದೇ ಮಕ್ಕಳು ಈ ಮಟ್ಟಕ್ಕಿಲ್ಲವಲ್ಲಾ ಎಂದು ಒಳಗೊಳಗೇ ಸಣ್ಣದಾಗಿ ನೋವನ್ನು ಅನುಭವಿಸುತ್ತೇವೆ ಕೂಡ!ಮಗು ಬೆಳೆಯುತ್ತದೆ. ಸ್ಕೂಲಿಗೆ ಬರುತ್ತದೆ. ಅಲ್ಲಿಂದ ಉತ್ತರಗಳನ್ನು ಉರು ಹೊಡೆಯುವ ಅಭ್ಯಾಸ ಮತ್ತಷ್ಟೂ ಬಿರುಸಾಗುತ್ತದೆ. ಪಠ್ಯಪುಸ್ತಕದ ಪ್ರತಿ ಪಾಠದ ಕಡೆಯಲ್ಲಿ ಅವರೇ ಕೇಳಬಹುದಾದ ಪ್ರಶ್ನೆಗಳನ್ನು ಕೊಟ್ಟು ಬಿಡುತ್ತಾರೆ.ಮಾಸ್ತರರು ಅದಕ್ಕೆಲ್ಲ ಉತ್ತರಗಳನ್ನು ಬರೆಸುತ್ತಾರೆ. ಯಾರ ಅಕ್ಷರ ದುಂಡಾಗಿದೆಯೋ ಹಾಗೂ ಯಾರ ಜ್ಞಾಪಕಶಕ್ತಿ ಚುರುಕಾಗಿದೆಯೋ ಅವರಿಗೆಲ್ಲ ನೂರಕ್ಕೆ ನೂರು ಅಂಕಗಳು!ಈಗ ಹುಡುಗ ಕಾಲೇಜಿಗೆ ಬಂದಿದ್ದಾನೆ, ಬೆಳೆದು ದೊಡ್ಡವನಾಗಿದ್ದಾನೆ. ಆದರೆ ಅಲ್ಲೂ ಅಷ್ಟೆ, ಸ್ಕೂಲಿನದೇ ಪುನರಾವರ್ತನೆ. ಯಾರೋ ಕೇಳಿದ ಪ್ರಶ್ನೆಗಳಿಗೆ ಕಂಠಪಾಠ ಮಾಡಿದ ಉತ್ತರಗಳನ್ನು ಬರೆಯುವುದು. ಹಿಂದಿನ ಹತ್ತಾರು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಗೆಹರಿಸಿದ್ದರೆ ಆತ ಗೆದ್ದಂತೆಯೇ ಸರಿ!ಗಮನಿಸಿದ್ದೀರಾ? ಈ ಯಾವ ಹಂತದಲ್ಲೂ ನಾವು ಮಗುವಿಗೆ ಪ್ರಶ್ನೆಗಳನ್ನು, ಅದರಲ್ಲೂ ಸರಿಯಾದ ಪ್ರಶ್ನೆಗಳನ್ನು ಸರಿಯಾದ ರೀತಿಯಲ್ಲಿ ಕೇಳುವಂತೆ ಪ್ರೇರೇಪಿಸುವುದೇ ಇಲ್ಲ. `ಹೊಸ ಪ್ರಶ್ನೆಗಳನ್ನು ಕೇಳದೇ ಹೊಸ ಉತ್ತರಗಳಿಲ್ಲ~ ಎಂಬರಿವು ಇದ್ದರೂ, ಹೇಗೆ ಪ್ರಶ್ನೆಗಳನ್ನು ಕೇಳಬೇಕು ಎಂಬ ಪಾಠವನ್ನೇ ಹೇಳುವುದಿಲ್ಲ.

 

ಶಿಕ್ಷಣದ ವಿವಿಧ ವಿಷಯಗಳು ಅತ್ತ ಇರಲಿ, ಇಂದಿನ ಮ್ಯಾನೇಜ್‌ಮೆಂಟ್ ಕಲಿಕೆಯನ್ನೇ ತೆಗೆದುಕೊಳ್ಳಿ. ಅಲ್ಲೂ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಳಿಕೊಡುತ್ತಾರೆಯೇ ಹೊರತು ಪ್ರಶ್ನೆಗಳನ್ನು ಕೇಳುವ ಕಲಿಕೆ ಇಲ್ಲವೇ ಇಲ್ಲ!ಇಂತಹ ವಾತಾವರಣದಿಂದ ಉದ್ಯೋಗಕ್ಕೆ ಬರುವ ನಮ್ಮೆಲ್ಲರದೂ ಇದೇ ಪಜೀತಿ. ನಮಗೆ ಗೊತ್ತಿರುವ ಉತ್ತರಗಳ ಬಲದ ಮೇಲೆ ನಾವು ಅಷ್ಟರಮಟ್ಟಿಗೆ ತಿಳಿದವರು. ಆದರೆ ಅದರ ಚೌಕಟ್ಟಿನ ಹೊರಕ್ಕೆ ತೆರಳಿ ನವನವೀನವಾದ ಜ್ಞಾನ ಪಡೆಯಬೇಕೆಂಬ ಹಾದಿಯಲ್ಲಿ ಕುಂಟಲು ಶುರುವಿಡುತ್ತೇವೆ.ಕಂಪೆನಿಯ ಒಳಗಡೆ ನಮ್ಮ ಸಹಚರರೊಡನೆಯ ಪ್ರಾಜೆಕ್ಟ್ ಮೀಟಿಂಗುಗಳಿರಬಹುದು ಅಥವಾ ಬಾಸ್ ಜತೆ ನಮ್ಮ ಕೆಲಸದ ಬಗೆಗಿನ ಅವರ ಅನಿಸಿಕೆಗಳನ್ನು ತಿಳಿದುಕೊಳ್ಳುವ ಅಪ್ರೈಸಲ್‌ಗಳಿರಬಹುದು ಅಥವಾ ಹೊರಗಡೆಯ ಗ್ರಾಹಕರೊಡನೆಯ ಮಾತುಕತೆಗಳಿರಬಹುದು.ಇಲ್ಲೆಲ್ಲ ನಮಗೆ ತೊಡಕಾಗಿರುವುದು `ಸರಿಯಾದ ಪ್ರಶ್ನೆ ಕೇಳುವ ಕಲೆ~ ನಮ್ಮಲ್ಲಿಲ್ಲದಿರುವುದೇ ಆಗಿದೆ. ಇಂತಹ ದಿನನಿತ್ಯದ ನೂರಾರು ಸಂದರ್ಭಗಳಲ್ಲೆಲ್ಲ ಐದು ನಿಮಿಷಗಳ ಕುಶಲೋಪರಿಯ ನಂತರ ಮಾತನ್ನು ಗಂಭೀರವಾಗಿ, ಅರ್ಥವತ್ತಾಗಿ ಹಾಗೂ ಎಲ್ಲಕ್ಕಿಂತಲೂ ಮುಖ್ಯವಾಗಿ ಹಿಡಿದ ಕೆಲಸಕ್ಕೆ ಸಹಾಯವಾಗುವ ಹಾದಿಯಲ್ಲಿ ನಡೆಸಿಕೊಂಡು ಹೋಗಬೇಕಾದರೆ, ನಮಗೆ ಸರಿಯಾದ ಪ್ರಶ್ನೆಗಳನ್ನು, ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಕೇಳುವ ಕಲೆ ಕರಗತವಾಗಿರಬೇಕು.ಆತ ಮೌನಿಯಾಗಿದ್ದರೇನಂತೆ, ನಿಮ್ಮ ಪ್ರಶ್ನೆಗಳು ಸ್ಪಷ್ಟವಾಗಿ ಚುರುಕಾಗಿದ್ದರೆ ಆತ ಖಂಡಿತವಾಗಿಯೂ ಅದಕ್ಕೆ ಸರಿಯಾಗಿಯೇ ಉತ್ತರಿಸುತ್ತಾನೆ. ಆತನ ಮಾತು ಕೇವಲ ಹಾಳುಹರಟೆಯೇ ಆದರೇನಂತೆ. ನಿಮ್ಮ ಪ್ರಾಮಾಣಿಕವಾದ ಹಾಗೂ ಸೂಕ್ಷ್ಮವಾದ ಪ್ರಶ್ನಾವಳಿಗಳಿಂದ ಆತನನ್ನು ಮತ್ತೆ ರಹದಾರಿಗೆ ತರುತ್ತ ನಿಮಗೆ ಬೇಕಾದ ವಿವರಗಳನ್ನೆಲ್ಲ ನೀವು ಆತನಿಂದ ಪಡೆಯಬಹುದು.ವಿಷಯ ಗೊತ್ತಾ? ನಾವದೆಷ್ಟೇ ಓದಿಕೊಂಡಿದ್ದರೂ ನಮ್ಮ ಜೀವನದ ಪ್ರತಿ ಹಂತದಲ್ಲೂ, ವ್ಯವಹಾರವೋ ಅಥವಾ ಸ್ವಂತದ ಬದುಕೋ. ನಮಗೆ ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವ ವಿಷಯಗಳ ಪ್ರಮಾಣವೇ ಅತ್ಯಧಿಕ. ನಕ್ಷತ್ರಗಳಂತೆ ಅಗಣಿತ! ಅಂತಹ ಗೊತ್ತಿರದ ವಿಷಯಗಳ ಮಹಾಪೂರದಲ್ಲಿ ನಮಗೆ ಬೇಕೆನಿಸಿದ ವಿಷಯಗಳನ್ನು ಹೆಕ್ಕಿ ನಮ್ಮದಾಗಿಸಿಕೊಳ್ಳಬೇಕೆಂದರೆ ನಮಗಿರುವ ಏಕಮೇವ ಮಾರ್ಗ - `ಸರಿಯಾಗಿ ಪ್ರಶ್ನೆ ಕೇಳುವುದು~ ಮಾತ್ರವೇ ಆಗಿದೆ.ಆದರೆ ಪ್ರಶ್ನೆ ಕೇಳುವುದು ಉತ್ತರ ಹೇಳುವಷ್ಟು ಸುಲಭವಲ್ಲ. ಅಂತೆಯೇ ಆ ದಿಸೆಯಲ್ಲಿ ಅಗತ್ಯವಾದ ಕೆಲವು ವಿಚಾರಗಳತ್ತ ಮುಂದಿನ ಅಂಕಣದಲ್ಲಿ ಗಮನ ಹರಿಸೋಣ.

ಲೇಖಕರನ್ನು  satyesh.bellur@gmail.com ಇ-ಮೇಲ್ ವಿಳಾಸಕ್ಕೆ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry