ಎಲ್ಲ ತಾಲ್ಲೂಕುಗಳೂಬರಪೀಡಿತ

7

ಎಲ್ಲ ತಾಲ್ಲೂಕುಗಳೂಬರಪೀಡಿತ

Published:
Updated:

ಬೀದರ್: ಈಗ ಜಿಲ್ಲೆಯ ಎಲ್ಲ ತಾಲ್ಲೂಕುಗಳೂ `ಬರಪೀಡಿತ~ ತಾಲ್ಲೂಕುಗಳ ಪಟ್ಟಿಗೆ ಸೇರಿವೆ. ಈ ಹಿಂದೆ  ಬೀದರ್ ತಾಲ್ಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿತ್ತು. ಇದೀಗ ಔರಾದ್, ಭಾಲ್ಕಿ, ಬಸವಕಲ್ಯಾಣ   ಮತ್ತು ಹುಮನಾಬಾದ್ ತಾಲ್ಲೂಕುಗಳನ್ನೂ ಸರ್ಕಾರ ಬರಪೀಡಿತ ಎಂದು ಘೋಷಿಸಿದ್ದರಿಂದ ಇಡೀ ಜಿಲ್ಲೆ ಬರಪೀಡಿತ ಪಟ್ಟಿಗೆ ಸೇರಿದಂತಾಗಿದೆ.ಫೆಬ್ರುವರಿ 1 ರಂದು ರಾಜ್ಯ ಸರ್ಕಾರ ಮತ್ತೆ 24 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಆದೇಶ ಹೊರಡಿಸಿದೆ. ಇದರಲ್ಲಿ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳನ್ನು ಸೇರಿಸಲಾಗಿದೆ.2011ರ ಅಕ್ಟೋಬರ್ 15 ರಿಂದ ಡಿಸೆಂಬರ್ 31 ವರೆಗಿನ ಮಳೆಯ ಕೊರತೆ ಹಾಗೂ ಸತತ ಆರು ವಾರಗಳ ಒಣ ವಾತಾವರಣ ಆಧರಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಎಂ. ಆನಂದಪ್ಪ ಆದೇಶದಲ್ಲಿ ತಿಳಿಸಿದ್ದಾರೆ.

ಬರಪೀಡಿತ ಎಂದು ಘೋಷಿಸಿರುವ ತಾಲ್ಲೂಕುಗಳಲ್ಲಿ ಭೂರಹಿತ ಕಾರ್ಮಿಕರು, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಲ್ಪಿಸಬೇಕು. ಕುಡಿಯುವ ನೀರು, ಮೇವು ಸರಬರಾಜು ಮತ್ತು ಜಾನುವಾರುಗಳ ಸಂರಕ್ಷಣೆಗೆ ತತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಪರಿಹಾರ ಒದಗಿಸಿ: ಸರ್ಕಾರ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿದರೆ ಸಾಲದು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸುತ್ತಾರೆ ರೈತರಾದ ನಾಗಯ್ಯ ಎಸ್.ಬೀದರ್ ತಾಲ್ಲೂಕನ್ನು ನಾಲ್ಕು ತಿಂಗಳ ಹಿಂದೆಯೇ ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ, ಈವರೆಗೆ ಯಾವುದೇ ಪರಿಹಾರ ಕಾಮಗಾರಿ ಕೈಗೊಳ್ಳಲಾಗಿಲ್ಲ. ಹೀಗಾಗಿ ಈಗಿನ ಬರ ಘೋಷಣೆ ಕೇವಲ ಘೋಷಣೆಗೆ ಸಿಮಿತ ಆಗಬಾರದು ಎನ್ನುತ್ತಾರೆ ಅವರು.ಮಳೆಯ ಕೊರತೆಯಿಂದಾಗಿ ಎಲ್ಲೆಡೆ ಕುಡಿಯುವ ನೀರು, ಮೇವಿನ ಸಮಸ್ಯೆ ಉಂಟಾಗಿದೆ. ಕೃಷಿ ಕಾರ್ಮಿಕರು ಕೆಲಸವಿಲ್ಲದೇ ಗುಳೆ ಹೊರಟಿದ್ದಾರೆ. ಸಾಲ ಸೂಲ ಮಾಡಿ ಹೈರಾಣಾಗಿರುವ ರೈತರು ದಿಕ್ಕು ತೋಚದಂತಾಗಿದ್ದಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ.ಆದ್ದರಿಂದ ಸರ್ಕಾರ ಕೂಡಲೇ ಕುಡಿಯುವ ನೀರು, ಮೇವು, ಉದ್ಯೋಗ ಸೃಷ್ಟಿ ಹಾಗೂ ರೈತರಿಗೆ ಪರಿಹಾರ ಒದಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಾರೆ

 

`ಬೀದರ್ ಉತ್ಸವ~ ಮುಂದಕ್ಕೆ

ಬೀದರ್: ಫೆಬ್ರುವರಿ 17 ರಿಂದ 19ರ ವರೆಗೆ ನಡೆಸಲು ಉದ್ದೇಶಿಸಲಾಗಿದ್ದ ಬೀದರ್ ಉತ್ಸವವನ್ನು ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದ್ದಾರೆ.ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರಗಾಲದ ಪರಿಸ್ಥಿತಿ ಇರುವುದರಿಂದ ಯಾವುದೇ ಜಿಲ್ಲಾ ಉತ್ಸವಗಳನ್ನು ಆಚರಿಸದಿರುವಂತೆ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಶಾಸಕರೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದು, ಏಪ್ರಿಲ್ 7 ರಿಂದ 9ರ ವರೆಗೆ ಉತ್ಸವ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.ಈಗಾಗಲೇ ಜಿಲ್ಲೆಯಲ್ಲಿ ಡೈಮಂಡ್, ಪ್ಲಾಟಿನಂ ಹಾಗೂ ಗೋಲ್ಡ್ ಕಾರ್ಡ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಕಾರ್ಡ್‌ಗಳನ್ನು ಖರೀದಿಸಿರುವವರು ಅದನ್ನು ಎಪ್ರಿಲ್ 7 ರಿಂದ 9ರ ವರೆಗೆ ನಡೆಯಲಿರುವ ಬೀದರ್ ಉತ್ಸವದ ಸಂದರ್ಭದಲ್ಲಿ ಬಳಸಿಕೊಳ್ಳಬಹುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry