ಎಲ್ಲ ದೇಶದಲ್ಲಿ ಮಹಿಳೆ ಶೋಷಣೆ

7

ಎಲ್ಲ ದೇಶದಲ್ಲಿ ಮಹಿಳೆ ಶೋಷಣೆ

Published:
Updated:

ಹುಬ್ಬಳ್ಳಿ: ‘ಕೇವಲ ನೌಕರಿ ಕೊಟ್ಟರೆ ಮಾತ್ರ ಮಹಿಳೆಗೆ ಗೌರವ ಕೊಟ್ಟಂತಾಗುವುದಿಲ್ಲ. ಮನೆ ಕೆಲಸ ಸೇರಿ ಆಕೆ ಮಾಡುವ ಎಲ್ಲ ಕೆಲಸಕ್ಕೂ ಗೌರವ ಸಿಗಬೇಕು. ಹಾಗಾದಾಗ ಮಾತ್ರ ಮಹಿಳೆಗೆ ಸರಿಯಾದ ಸ್ಥಾನ ಸಿಗಲು ಸಾಧ್ಯ’ ಎಂದು ನಗರದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಥಿಯರಿ ಆ್ಯಂಡ್ ಪ್ರಾಕ್ಟೀಸ್‌ನ ಗೌರವ ನಿರ್ದೇಶಕ ಡಾ. ಕೆ. ರಾಘವೇಂದ್ರ ರಾವ್ ಹೇಳಿದರು.ಹೋರಾಟಗಾರ ಡಾ. ಕೆ. ಎಸ್. ಶರ್ಮಾ ಅವರ ತಾಯಿ ಸಂಪತ್ತಮ್ಮ ಅವರ ಸಂಸ್ಮರಣೆ ಕಾರ್ಯಕ್ರಮದ ಅಂಗವಾಗಿ ನಗರದ ವಿಶ್ವ ಶ್ರಮ ಚೇತನದ ಆವರಣದಲ್ಲಿ ಸೋಮವಾರ ನಡೆದ  ‘ಭಾರತದಲ್ಲಿ ಸಾಂಸ್ಕೃತಿಕ ಕ್ರಾಂತಿ ಹಾಗೂ ಮಹಿಳೆ’ ಎಂಬ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ‘ಮಾನವ ಕುಲದ ಆದಿಯಲ್ಲಿ ಮಹಿಳೆಗೆ ಸರಿಯಾದ ಸ್ಥಾನಮಾನವಿತ್ತು. ನಂತರ ಪುರುಷ ಆ ಸ್ಥಾನವನ್ನು ಕಿತ್ತುಕೊಂಡ. ಈಗ ಎಲ್ಲ ಸಂಸ್ಕೃತಿಯಲ್ಲಿ, ಎಲ್ಲ ದೇಶದಲ್ಲಿ ಮಹಿಳೆಯ ಶೋಷಣೆ ನಡೆಯುತ್ತಿದೆ’ ಎಂದು ಅವರು ಹೇಳಿದರು.ಹೆಚ್ಚಿನ ಸ್ತ್ರೀವಾದಿಗಳು ಅಥವಾ ಸ್ತ್ರೀ ವಾದ, ಪುರುಷ ದ್ವೇಷಿಯಾಗಿರುವುದು ಬೇಸರದ ವಿಷಯ. ಇದೇ ವೇಳೆ ಸ್ತ್ರೀವಾದಿಗಳು ಕೇವಲ ಶ್ರೀಮಂತ ಸಮುದಾಯಕ್ಕೆ ಮಾತ್ರ ಸೀಮಿತವಾಗಿರುವುದು ಕೂಡ ಸರಿಯಲ್ಲ. ಇಂಥ  ಸ್ಥಿತಿಯಿಂದ ಸಾಂಸ್ಕೃತಿಕ ಕ್ರಾಂತಿ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಸ್ತ್ರೀ-ಪುರುಷರಿಗೆ ಸಮಾನ ಸ್ಥಾನ ಸಿಕ್ಕಿದಾಗ ಮಾತ್ರ ಮಾನವ ಕುಲದ ಅಭಿವೃದ್ಧಿ ಸಾಧ್ಯ ಎಂದರು.ಸಾಂಸ್ಕೃತಿಕ ಕ್ರಾಂತಿಯಿಂದ ಎಲ್ಲ ಶೋಷಿತ ವರ್ಗದ ಪ್ರಗತಿ ಸಾಧ್ಯ ಎಂದು ಅಭಿಪ್ರಾಯಪಟ್ಟ ರಾಘವೇಂದ್ರ ರಾವ್, ಕರ್ನಾಟಕದಲ್ಲಿ ಬಸವಾದಿ ಶರಣರು ಮತ್ತಿತರರು ನಡೆಸಿದ ಸಾಂಸ್ಕೃತಿಕ ಕ್ರಾಂತಿ ಗಮನಾರ್ಹ ಎಂದರಲ್ಲದೆ ಸೀಮಿತ ವಲಯದಲ್ಲಿ ಸಂಪತ್ತಮ್ಮ ಅವರು ಕೂಡ ಇಲ್ಲಿನ ಸಾಂಸ್ಕೃತಿಕ ಕ್ರಾಂತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ, ತಾಯಿ ಎಂದರೆ ಹಸಿವು ಇಂಗಿಸುವ ಗುಣವುಳ್ಳವಳು. ಇಂಥ ಗುಣ ಸಂಪತ್ತಮ್ಮ ಅವರಲ್ಲಿ ಧಾರಾಳವಾಗಿ ಇತ್ತು ಎಂದು ಹೇಳಿದರು.ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಬಿ. ಕೃಷ್ಣಮೂರ್ತಿ ಮಾತನಾಡಿ, ಎಲ್ಲರಲ್ಲೂ ತಾಯಿ ಗುಣ ಸೇರಿಕೊಂಡರೆ ಸಂಸ್ಕೃತಿ ಉಚ್ಛ್ರಾಯಕ್ಕೆ ತಲುಪಲು ಸಾಧ್ಯ ಎಂದರು. ಹುಬ್ಬಳ್ಳಿಯ ಬೇಂದ್ರೆ ಸಂಶೋಧನಾ ಸಂಸ್ಥೆಯ ಸಹ ನಿರ್ದೇಶಕ ಡಾ. ವಾಮನ ಬೇಂದ್ರೆ, ಧಾರವಾಡದ ಕರ್ನಾಟಕ ಕಲಾ ಕಾಲೇಜಿನ ಉಪನ್ಯಾಸಕಿ ಪ್ರೊ. ವೀಣಾ ಕುಲಕರ್ಣಿ, ಹಿರಿಯ ಪತ್ರಕರ್ತ ಎಂ. ಮದನ ಮೋಹನ, ಪತ್ರಕರ್ತರಾದ ಮನೋಜ ಪಾಟೀಲ, ಮಲ್ಲಿಕಾರ್ಜುನ ಸಿದ್ದಣ್ಣವರ ಮುಂತಾದವರು ಮಾತನಾಡಿದರು.ಡಾ. ಕೆ.ಎಸ್. ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಚೆಗೆ ನಿಧನರಾದ ಪತ್ರಕರ್ತ ಮತ್ತಿಹಳ್ಳಿ ನಾಗರಾಜ ರಾವ್ ಅವರ ಸಂಸ್ಮರಣ ಸಂಪುಟವನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಪ್ರೊ. ರವೀಂದ್ರ ಶಿರೋಳ್ಕರ್ ನಿರೂಪಿಸಿದರು. ಸಂಜಯ ತ್ರಾಸದ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry