ಬುಧವಾರ, ನವೆಂಬರ್ 20, 2019
20 °C

`ಎಲ್ಲ ಧರ್ಮಗಳಿಂದ ಸಹೋದರತ್ವ ಬೋಧನೆ'

Published:
Updated:

ಮಡಿಕೇರಿ: ಇಸ್ಲಾಂ ಸೇರಿದಂತೆ ಜಗತ್ತಿನ ಎಲ್ಲ ಧರ್ಮಗಳು ಶಾಂತಿ, ಸಹೋದರತ್ವವನ್ನು ಬೋಧಿಸುತ್ತವೆ, ಹೊರತು ದ್ವೇಷವನ್ನಲ್ಲ. ಸಮಾಜದಲ್ಲಿ ಶಾಂತಿ, ನೆಮ್ಮದಿಯನ್ನು ಎಲ್ಲ ಧರ್ಮಗಳು ಬಯಸುತ್ತವೆ ಎಂದು ಧಾರ್ಮಿಕ ಮುಖಂಡ ಉಮರ್ ಶರೀಫ್ ಹೇಳಿದರು.ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸೌಥ್ ಕರ್ನಾಟಕ ಸಲಾಫಿ ಮೂವ್‌ಮೆಂಟ್ ಮಡಿಕೇರಿ ಘಟಕವು ಭಾನುವಾರ ಆಯೋಜಿಸಿದ್ದ `ಇಸ್ಲಾ: ಶಾಂತಿಗಾಗಿ, ಸಂಘರ್ಷಕಲ್ಲ' ಧ್ಯೇಯವಾಕ್ಯದಡಿ ಶಾಂತಿ ಸಮ್ಮೇಳನದಲ್ಲಿ ಪ್ರಮುಖ ಭಾಷಣಕಾರರಾಗಿ ಅವರು ಮಾತನಾಡಿದರು.ಮಾನವ ಜನಾಂಗದ ಅಭಿವೃದ್ಧಿ ಹಾಗೂ ಸಾಮರಸ್ಯವನ್ನೇ ಜಗತ್ತಿನ ಎಲ್ಲ ಧರ್ಮಗಳು ಬೋಧಿಸುತ್ತವೆ. ಯಾವುದೇ ಧರ್ಮವಾಗಲೀ ಹಿಂಸೆಯನ್ನು, ದ್ವೇಷವನ್ನು ಎಂದಿಗೂ ಬೋಧಿಸುವುದಿಲ್ಲ. ಎಲ್ಲ ಧರ್ಮಗಳ ಸಾರ ಒಂದೇಯಾಗಿದ್ದು, ಸಮಾಜದಲ್ಲಿ ಸಾಮರಸ್ಯವೇ ಅವುಗಳಿಗೆ ಮುಖ್ಯ ಎಂದು ಅವರು ತಿಳಿಸಿದರು.ಇಸ್ಲಾ ಸೇರಿದಂತೆ ಹಿಂದೂ, ಕ್ರೈಸ್ತ್  ಹಾಗೂ ಇತರ ಧರ್ಮಗಳ ಸಾರವನ್ನು ತುಲನಾತ್ಮಕವಾಗಿ ಅವರು ವಿವರಿಸಿದರು. ಸೌಥ್ ಕರ್ನಾಟಕ ಸಲಾಫಿ ಮೂವ್‌ಮೆಂಟ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್. ಸಲೀಂ ಮಾತನಾಡಿ, ಶಿಕ್ಷಣ ರಂಗದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ವಿಶ್ವವಿದ್ಯಾಲಯಗಳು ಪರಿಣತರನ್ನು ರೂಪಿಸುತ್ತಿವೆ ಹೊರತು, ಉತ್ತಮ ಮನುಷ್ಯರನ್ನು ರೂಪಿಸುವಲ್ಲಿ ವಿಫಲವಾಗಿವೆ ಎಂದು ಹೇಳಿದರು.ದೇಹಕ್ಕೆ ನೋವಾದರೆ ಔಷಧೋಪಚಾರದಿಂದ ಗುಣಪಡಿಸಬಹುದು. ಆದರೆ, ಮನಸ್ಸಿಗೆ ನೋವಾದರೆ, ಅವಮಾನವಾದರೆ ಅದನ್ನು ಉಪಶಮನ ಮಾಡಲು ಸಾಧ್ಯವಿಲ್ಲ ಎಂದರು. ವೇದಿಕೆಯಲ್ಲಿ ಮೂವ್‌ಮೆಂಟ್‌ನ ಸುಂಟಿಕೊಪ್ಪ ಘಟಕದ ಅಧ್ಯಕ್ಷ ಪಿ.ಕೆ. ಹನೀಫ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಿ.ಚಿದ್ವಿಲಾಸ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)