ಶುಕ್ರವಾರ, ನವೆಂಬರ್ 15, 2019
21 °C

`ಎಲ್ಲ ಧರ್ಮದ ಆದರ್ಶ ಬೌದ್ಧ ಧರ್ಮದಲ್ಲಿ'

Published:
Updated:

ಬೆಂಗಳೂರು: `ಪ್ರಪಂಚದ ಎಲ್ಲ ಧರ್ಮಗಳ ಆದರ್ಶಗಳನ್ನು ಬೌದ್ಧ ಧರ್ಮದಲ್ಲಿ ಕಾಣಬಹುದು. ಪ್ರೀತಿ, ಕರುಣೆ, ಶಾಂತಿ ಮತ್ತು ಸಹನೆಗಳು ಈ ಧರ್ಮದ ಮೌಲ್ಯಗಳು' ಎಂದು ಲೇಖಕ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.ಬೋಧಗಯಾದ ಮೇಲೆ ನಡೆದ ಬಾಂಬ್ ಸ್ಫೋಟವನ್ನು ಖಂಡಿಸಿ ವಿವಿಧ ಸಂಘಟನೆಗಳು ನಗರದ ಪುರಭವನದ ಬಳಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.`ಸರ್ಕಾರ ಮತ್ತು ಅಧಿಕಾರಿಗಳ ಅಜಾಗರೂಕತೆಯಿಂದ ಇಂತಹ ಕೃತ್ಯಗಳು ಜರುಗುತ್ತಿವೆ. ಸರ್ಕಾರ ಎಚ್ಚೆತ್ತುಕೊಂಡು ಐತಿಹಾಸಿಕ ಸ್ಥಳಗಳಿಗೆ ಸೂಕ್ತ ರಕ್ಷಣೆ ನೀಡಬೇಕು' ಎಂದು ಅವರು ಆಗ್ರಹಿಸಿದರು.ನಿವೃತ್ತ ಐಪಿಎಸ್ ಅಧಿಕಾರಿ ಸುಭಾಷ್ ಭರಣಿ, `ದೇಶದಲ್ಲಿ ಹಿಂಸಾಕೃತ್ಯಗಳು ಹೆಚ್ಚುತ್ತಿದ್ದು, ಇದಕ್ಕೆ ಆಳುವವರ ಅದಕ್ಷತೆಯೇ ಕಾರಣ. ಇಂತಹ ಹೇಯ ಕೃತ್ಯಗಳನ್ನು ತಪ್ಪಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಹಾಗೆಯೇ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗಲೂ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ.ಇದು ಸರ್ಕಾರದ ನಿಷ್ಕ್ರಿಯತೆಯನ್ನು ತೋರುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ಜರುಗದಂತೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬಾಂಬ್ ಸ್ಫೋಟದ ಆರೋಪಿಗಳನ್ನು ಪತ್ತೆ ಮಾಡಿ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು' ಎಂದರು.ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಸದಸ್ಯರು, ಸಾಹಿತಿಗಳು, ಮುಸ್ಲಿಂ ಮುಖಂಡರು, ಬೌದ್ಧ ಬಿಕ್ಕುಗಳು, ರಂಗಕರ್ಮಿಗಳು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)