ಎಲ್ಲ ಮೂಲಸೌಲಭ್ಯ ಯೋಜನೆ ಪರಿಶೀಲನೆ ಅನುಮತಿಗೆ ಒತ್ತಾಯ

7

ಎಲ್ಲ ಮೂಲಸೌಲಭ್ಯ ಯೋಜನೆ ಪರಿಶೀಲನೆ ಅನುಮತಿಗೆ ಒತ್ತಾಯ

Published:
Updated:

ನವದೆಹಲಿ:  `ನೈಸ್~ ಕೈಗೆತ್ತಿಕೊಂಡಿರುವ `ಬೆಂಗಳೂರು ಮೈಸೂರು ಹೆದ್ದಾರಿ ಯೋಜನೆ~ ಹಾಗೂ ಬೆಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಎಲ್ಲ ಮೂಲಸೌಲಭ್ಯ ಯೋಜನೆಗಳ ಪರಿಶೀಲನೆಗೆ ಅನುಮತಿ ನೀಡಬೇಕೆಂದು ಟಿ.ಬಿ. ಜಯಚಂದ್ರ ಅಧ್ಯಕ್ಷತೆಯ ರಾಜ್ಯ ವಿಧಾನ ಮಂಡಳದ `ಸಾರ್ವಜನಿಕ ಲೆಕ್ಕಪತ್ರ ಸಮಿತಿ~ ಸ್ಪೀಕರ್ ಅವರನ್ನು ಒತ್ತಾಯಿಸಿದೆ.

ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಕೈಗೊಳ್ಳಲಾಗುತ್ತಿರುವ ಯೋಜನೆಗಳು ಸಿಎಜಿ ಅಥವಾ ಪಿಎಸಿ ಪರಿಶೀಲನೆಗೆ ಒಳಪಡುತ್ತಿಲ್ಲ. ಈ ಯೋಜನೆಗಳಲ್ಲೂ ಪಾರದರ್ಶಕತೆ ಸಾಧ್ಯವಾಗಬೇಕಾದರೆ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಟಿ. ಬಿ. ಜಯಚಂದ್ರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿಧಾನಸಭೆ ಸ್ಪೀಕರ್‌ಗೆ ಈ ಸಂಬಂಧ ಪತ್ರ ಬರೆದಿರುವ ಜಯಚಂದ್ರ, ತಮ್ಮ ಬೇಡಿಕೆ ಬಗ್ಗೆ ದೇಶದ ಗಮನ ಸೆಳೆಯುವ ಸಲುವಾಗಿ ಮಹಾಲೇಖಪಾಲ ವಿನೋದ್ ರೈ, ಭೂಸಾರಿಗೆ ಸಚಿವ ಸಿ.ಪಿ. ಜೋಷಿ  ಪಿಎಸಿ ಅಧ್ಯಕ್ಷ ಎಂ.ಎಂ. ಜೋಷಿ ಅವರನ್ನು ಭೇಟಿ ಮಾಡಿದ್ದರು.

ಸಮಿತಿ ಸದಸ್ಯರಾದ ವಿ.ಆರ್. ಸುದರ್ಶನ್, ಚಂದ್ರಕಾಂತ ಬೆಲ್ಲದ್, ಮಾಲಿಕಯ್ಯ ಗುತ್ತೇದಾರ್, ಮೋಹನ್ ಲಿಂಬಿಕಾಯಿ, ಪ್ರೊ. ಮಲ್ಲಿಕಾರ್ಜುನ್, ರೋಷನ್ ಬೇಗ್ ಹಾಗೂ ಶಿವಲಿಂಗೇಗೌಡ ಮೊದಲಾದವರು ಅಧ್ಯಕ್ಷರ ಜತೆಗಿದ್ದರು. ಬೆಂಗಳೂರು- ಮೈಸೂರು ಹೆದ್ದಾರಿ ಮತ್ತು ಬೆಂಗಳೂರು ವಿಮಾನ ನಿಲ್ದಾಣ ಯೋಜನೆಗೆ ಸರ್ಕಾರ ಅಗತ್ಯ ಭೂಮಿ ಒದಗಿಸಿದೆ. ಆದರೆ, ಈ ಯೋಜನೆಗಳು ನಿರೀಕ್ಷಿತ ಸೇವೆ ಒದಗಿಸಲು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಗಳನ್ನು ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ ಎಂದರು.

ಸ್ಪೀಕರ್ ಕೆ.ಜಿ. ಬೋಪಯ್ಯ ಅವರಿಗೆ ಈ ಮೊದಲು ಪತ್ರ ಬರೆಯಲಾಗಿದೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಕಾರಣಕ್ಕೆ ಮತ್ತೆ ಪತ್ರ ಬರೆಯಲಾಗುತ್ತಿದೆ. ಎರಡೂ ಯೋಜನೆಗಳನ್ನು ಪರಿಶೀಲನೆಗೆ ಒಳಪಡಿಸಬೇಕಾದ ಅಗತ್ಯ ಕುರಿತು ಮನವರಿಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಬರುತ್ತಿರುವ ಹಣ ಸರಿಯಾಗಿ ಬಳಕೆ ಆಗುತ್ತಿಲ್ಲ. ಹಣದ ಬಳಕೆಗೆ ಸಂಬಂಧಿಸಿದ ಪ್ರಮಾಣಪತ್ರ ಕೊಟ್ಟು ಉಳಿದ ಹಣ ಪಡೆಯಬೇಕು. ಹಲವು ಯೋಜನೆಗಳಲ್ಲಿ ಈ ಕೆಲಸ ಆಗಿಲ್ಲ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry