ಸೋಮವಾರ, ಡಿಸೆಂಬರ್ 9, 2019
26 °C

ಎಲ್ಲ ಸಮುದಾಯಕ್ಕೆ ನ್ಯಾಯ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲ ಸಮುದಾಯಕ್ಕೆ ನ್ಯಾಯ: ಸಿಎಂ

ಬೆಂಗಳೂರು: `ಎಲ್ಲ ಸಮುದಾಯದ ಜನರಿಗೂ ಸಾಮಾಜಿಕ ನ್ಯಾಯ ನೀಡುವ ಮೂಲಕ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.ಸಪ್ನ ಬುಕ್‌ಹೌಸ್ ಸಂಸ್ಥೆಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯ ಡಾ.ಎಚ್.ವಿ. ಹಂದೆ ಅವರ `ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಅಂಬೇಡ್ಕರ್~ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.`ಜಾತಿ ಪದ್ಧತಿಯಿಂದ ನೊಂದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಸಾಮಾಜಿಕ ಹೋರಾಟ ಕ್ರಾಂತಿಗೆ ನಾಂದಿ ಹಾಡಿದ ಅಂಬೇಡ್ಕರ್ ಅವರು ದೇಶದ ಧೀಮಂತ ನಾಯಕ. ಅಂಬೇಡ್ಕರ್, ಸುಭಾಷ್‌ಚಂದ್ರ ಬೋಸ್ ಹಾಗೂ ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆ ಎಲ್ಲರನ್ನೂ ತಲುಪಿದಾಗ ಮಾತ್ರ ದೇಶದ ಭವಿಷ್ಯ ಉಜ್ವಲವಾಗಿ ಬೆಳಗಲಿದೆ~ ಎಂದರು.`ಅಂಬೇಡ್ಕರ್ ಅವರ ಬುದ್ಧಿಶಕ್ತಿ, ದೂರದೃಷ್ಟಿ ಸೇರಿದಂತೆ ಅವರ ಬಗೆಗಿನ ಸಾಕಷ್ಟು ಮಹತ್ವದ ಸಂಗತಿಗಳನ್ನು ಒಳಗೊಂಡಿರುವ ಈ ಕೃತಿಯು ಮೌಲಿಕವಾಗಿದೆ. ಇಂಗ್ಲಿಷ್‌ನಿಂದ ಕನ್ನಡ ಮತ್ತು ತಮಿಳಿಗೆ ಭಾಷಾಂತರಗೊಂಡಿರುವ ಕೃತಿಯು ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಸೌಹಾರ್ದ ಒಡನಾಟವನ್ನು ಪ್ರತಿಬಿಂಬಿಸಿದೆ~ ಎಂದು ಹೇಳಿದರು.`ರಾಜ್ಯದಲ್ಲಿ 2011-12ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಗೆ 4,633 ಕೋಟಿ ರೂಪಾಯಿ ಹಾಗೂ ಗಿರಿಜನರ ಕಲ್ಯಾಣಕ್ಕಾಗಿ ಸುಮಾರು 1,867 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ~ ಎಂದರು.ಜನರ ಆಸ್ತಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, `ಅಂಬೇಡ್ಕರ್ ಅವರು ಜಗತ್ತಿನಲ್ಲೇ ಅತಿ ಉತ್ಕೃಷ್ಟವಾದ ಸಂವಿಧಾನವನ್ನು ನೀಡಿದ್ದಾರೆ. ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರು ದೇಶದ 100 ಕೋಟಿ ಜನರ ಆಸ್ತಿ~ ಎಂದರು.ಅಂಬೇಡ್ಕರ್ ಅನುಯಾಯಿ: `ನಾನು ಅಂಬೇಡ್ಕರ್ ಅನುಯಾಯಿ. ಎಲ್ಲ ಸಮುದಾಯದವರಿಗೂ ಸವಲತ್ತು ಕಲ್ಪಿಸಬೇಕು ಎಂಬ ಚಿಂತನೆಗೆ ಅವರೇ ಪ್ರೇರಣೆ. ತಮಿಳರು ಹಾಗೂ ಕನ್ನಡಿಗರ ನಡುವಿನ ಸಂಬಂಧ ಸುಧಾರಣೆಗೆ ಕೈಗೊಂಡ ಕ್ರಮಗಳಿಗೂ ಅವರೇ ಸ್ಫೂರ್ತಿ~ ಎಂದರು.ರಾಜ್ಯಸಭಾ ಸದಸ್ಯ ಎಂ. ರಾಮಾಜೋಯಿಸ್, `ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯಗಳನ್ನು ಪಾಲಿಸಿದ್ದರೆ ಈ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಜಾತಿ, ಅಸಮಾನತೆಯ ಕಾರಣಕ್ಕೆ ದೇಶದಲ್ಲಿ ಈವರೆಗೆ ಉಂಟಾಗಿರುವ ಜೀವ, ಆಸ್ತಿ ಹಾನಿಯನ್ನು ಲೆಕ್ಕ ಹಾಕಿದರೆ ಭಾರತವನ್ನು ಐದಾರು ಬಾರಿ ಕಟ್ಟಬಹುದು~ ಎಂದು ನುಡಿದರು.`ಅವರು ಕಾನೂನು ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರು. ಆದರೆ ಇಂದು ಕಾನೂನು ಎತ್ತಿ ಹಿಡಿಯುವವರೇ ಕಾನೂನು ಉಲ್ಲಂಘಿಸುವುದು ಹೆಚ್ಚಾಗಿದೆ~ ಎಂದು ವಕೀಲರ ಪ್ರತಿಭಟನೆಯನ್ನು ಪ್ರಸ್ತಾಪಿಸದೆ ಹೇಳಿದರು.ಡಾ.ಎಚ್.ವಿ. ಹಂದೆ, ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿರುವ ಕೃಷ್ಣಭಟ್ ಅರ್ತಿಕಜೆ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ, ಸಪ್ನ ಬುಕ್‌ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ, ತಮಿಳುನಾಡಿನ ಬಿಜೆಪಿ ಮುಖಂಡ ಸಿ.ಪಿ. ರಾಧಾಕೃಷ್ಣ ಇತರರು ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)