ಮಂಗಳವಾರ, ಜನವರಿ 21, 2020
18 °C
‘ದುರ್ಗೋತ್ಸವ’ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಭರವಸೆ

ಎಲ್ಲ ಸಮುದಾಯಗಳಿಗೂ ಸಮಾನ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ‘ಎಲ್ಲ ಸಮುದಾಯದವರನ್ನೂ ವಿಶ್ವಾಸಕ್ಕೆ ತೆಗದುಕೊಂಡು ಐತಿಹಾಸಿಕ ಚಿತ್ರದುರ್ಗದ ಉತ್ಸವವನ್ನು ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಭರವಸೆ ನೀಡಿದರು.‘ದುರ್ಗೋತ್ಸವ’ ಆಚರಣೆ ಪ್ರಯುಕ್ತ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ವರ್ಗಗಳು, ಸಮುದಾಯಗಳ ಮುಖಂಡರಿಂದ ಸಲಹೆ ಸ್ವೀಕರಿಸಿದ ನಂತರ ಮಾತಾಡಿದ ಅವರು, ‘ಯಾವುದೇ ಕಾರಣಕ್ಕೂ ಇದು ಜಿಲ್ಲಾಧಿಕಾರಿ ಉತ್ಸವ ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.‘ದುರ್ಗೋತ್ಸವ ಜಾನಪದ ಬುಡಕಟ್ಟು ಸಂಸ್ಕೃತಿಗಳ ಕಲೆ ಸಾಹಿತ್ಯಗಳ ಉತ್ಸವ ಆಗಬೇಕು. ಅಳವಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳಿಗೂ ಉತ್ಸವದಲ್ಲಿ ಅವಕಾಶ ಕಲ್ಪಿಸುತ್ತಿದ್ದೇವೆ.  ಅದಕ್ಕಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಅಂತಿಮವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಎಲ್ಲರನ್ನೂ ಆಹ್ವಾನಿಸಿ ಸಲಹೆ ಸೂಚನೆಗಳನ್ನು ಪಡೆಯಲಾಗುತ್ತದೆ  ಜಿಲ್ಲಾಡಳಿತ ಕೈಗೊಂಡ ಎಲ್ಲಾ ಸಿದ್ದತೆಗಳನ್ನು ಸರ್ಕಾರಕ್ಕೆ ತಲುಪಿಸಿದ ನಂತರವೇ ಉತ್ಸವಕ್ಕೆ ಹಣ ಬಿಡುಗಡೆಯಾಗುತ್ತದೆ ಎಂದು ವಿವರಿಸಿದರು. ಕ್ರೋಡೀಕರಿಸಿ ಹಂಪಿ ಉತ್ಸವದ ಮಾದರಿಯಲ್ಲಿ ದುರ್ಗೋತ್ಸವ ಮಾಡುವ ಯೋಚನೆ ಇದೆ ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾರಾಯಣಸ್ವಾಮಿ ಮಾತನಾಡಿ, ‘ಚಿತ್ರದುರ್ಗ ಜಿಲ್ಲೆ ಜೀವ

ವೈವಿದ್ಯದ ತಾಣ. ಇಲ್ಲಿನ ನೀರು, ಬೆಳೆ ಮತ್ತು ಭಾಷೆಗೆ ತನ್ನದೇ ಆದ ಸೊಗಡಿದೆ. ದುರ್ಗೋತ್ಸವದಲ್ಲಿ ಯುವ ಪೀಳಿಗೆಗೆ ಹೆಚ್ಚು ಆದ್ಯತೆ ನೀಡಬೇಕು. ಈ ಉತ್ಸವ ಚಿತ್ರದುರ್ಗ ನಗರಕ್ಕಷ್ಟೇ ಮೀಸಲಾಗದೇ ಜಿಲ್ಲೆಯ ಎಲ್ಲಾ ತಾಲೂಕಿನ ಹಳ್ಳಿ ಹಳ್ಳಿಗಳಿಗೂ ದುರ್ಗೋತ್ಸವ ತಲುಪಬೇಕು. ನಾಟಿ ವೈದ್ಯರನ್ನು ಉತ್ಸವದಲ್ಲಿ ಕರೆಸಿ ಅವರಲ್ಲಿರುವ ಜ್ಞಾನವನ್ನು ತಿಳಿದುಕೊಳ್ಳಬೇಕು ಅಲ್ಲದೇ ಪ್ರಾಣಿ ಪಕ್ಷಿಗಳ ಸಂಕುಲಗಳ ಪರಿಚಯವು ಯುವ ಜನಾಂಗಕ್ಕೆ ಮಾಡಿಕೊಡಬೇಕಾಗಿದೆ ಎಂದರು.ಸಭೆಯಲ್ಲಿ ಭಾಗವಹಿಸಿದ್ದ ಡಾ.ರಾಮಚಂದ್ರ ನಾಯಕ್ ಮಾತನಾಡಿ, ‘ಬುಡಕಟ್ಟು ಸಂಸ್ಕೃತಿ ಹಾಗೂ ಜಾನಪದ ಸಾಹಿತ್ಯವುಳ್ಳ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಕಲಾವಿದ­ರನ್ನು ದುರ್ಗೋತ್ಸವಕ್ಕೆ ಆಹ್ವಾನಿಸಿ ಇದೊಂದು ದುರ್ಗದ ಹಬ್ಬ ಎನ್ನುವ ರೀತಿಯಲ್ಲಿ ಆಚರಿಸಬೇಕು’ ಎಂದು ಸಲಹೆ ನೀಡಿದರು. ಕೋಟೆಯ ಮೇಲ್ಭಾಗದಲ್ಲಿ ದುರ್ಗೋತ್ಸವವನ್ನು ಆಚರಿಸಿದರೆ ವಯಸ್ಸಾದವರು ಕೋಟೆ ಹತ್ತುವುದು ಕಷ್ಟವಾಗುತ್ತದೆ. ಆದ ಕಾರಣ ನಗರದಲ್ಲೇ ದುರ್ಗೋತ್ಸವ ಆಚರಿಸುವಂತೆ ಸಲಹೆ ನೀಡಿದರು.ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಕರಿಯಪ್ಪ ಮಾಳಗಿ ಮಾತನಾಡಿ, ಬುಡಕಟ್ಟು ಸಂಸ್ಕೃತಿಯೇ ಹೆಚ್ಚಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿ ಹಳ್ಳಿಯಲ್ಲೂ ಮನೆ ಮನೆಗೆ ದುರ್ಗೋತ್ಸವ ಬಗ್ಗೆ ಮಾಹಿತಿ ತಲುಪಬೇಕು. ಇಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿರುವುದರಿಂದ ಅವರ ಸಂಶೋಧನೆಗಳಿಗೂ ಅನುಕೂಲಕರ ವಾಗುವ ವಿಚಾರಗಳ ಮೇಲೆ  ದುರ್ಗೋತ್ಸವ ದಲ್ಲಿ ಬೆಳಕು ಚೆಲ್ಲುವಂತೆ ತಿಳಿಸಿದರು.ಮದಕರಿ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಿ.ಬೋರಪ್ಪ, ನಗರಸಭೆ ಮಾಜಿ ಸದಸ್ಯ ಕೆ.ನಾಗರಾಜು, ಆರ್.ಶೇಷಣ್ಣಕುಮಾರ್, ರಮಾನಾಗರಾಜ್, ವೆಂಕಣ್ಣಾಚಾರ್, ಮುರುಘರಾಜೇಂದ್ರ ಒಡೆಯರ್, ವಕೀಲ ಫಾತ್ಯರಾಜನ್, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್. ಅಣ್ಣಪ್ಪಸ್ವಾಮಿ, ಬೆಳಗಟ್ಟ ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್, ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)