ಎಲ್ಲ ಸಾಹಿತಿಗಳಿಗೂ ಜ್ಞಾನಪೀಠ ಪ್ರಶಸ್ತಿ ಅಸಾಧ್ಯ

7

ಎಲ್ಲ ಸಾಹಿತಿಗಳಿಗೂ ಜ್ಞಾನಪೀಠ ಪ್ರಶಸ್ತಿ ಅಸಾಧ್ಯ

Published:
Updated:

ಬೆಂಗಳೂರು: `ಜ್ಞಾನಪೀಠ ಪ್ರಶಸ್ತಿ ಕೆಲವು ಕಾರಣಗಳಿಗಾಗಿ ಎಷ್ಟೋ ಬಾರಿ ಅರ್ಹರಿಗೆ ಸಿಗುವುದಿಲ್ಲ. ಹಾಗೆಂದು ಅದು ಅಯೋಗ್ಯರಿಗೂ ಸಿಗಬಾರದು~ ಎಂದು ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ನುಡಿದರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಶೇಷಾದ್ರಿಪುರಂ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರ ಹಾಗೂ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ `ಯು.ಆರ್.ಅನಂತಮೂರ್ತಿ-ಸಾಹಿತ್ಯ ಚಿಂತನ~ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ನನಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಕೊಂಚ ಗಲಿಬಿಲಿಯಾಯಿತು. ನನಗಿಂತ ಈ ಪ್ರಶಸ್ತಿಗೆ ಹೆಚ್ಚು ಅರ್ಹರಾದ ಪು.ತಿ.ನರಸಿಂಹಾಚಾರ್, ಗೊರೂರು ರಾಮಸ್ವಾವಿಅಯ್ಯಂಗಾರ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರಂಥ ಸಾಹಿತಿಗಳಿದ್ದರು. ಆದರೆ ಎಲ್ಲ ಉತ್ತಮ ಸಾಹಿತಿಗಳಿಗೂ ಜ್ಞಾನಪೀಠ ಸಿಗುವುದಿಲ್ಲ~ ಎಂದರು.`ಕುವೆಂಪು ಅವರು ವಿಕಾಸದಲ್ಲಿ ನಂಬಿಕೆ ಇಟ್ಟು ಸಾಹಿತ್ಯ ರಚನೆ ಮಾಡಿದರು. ಆದರೆ ಇತ್ತೀಚೆಗೆ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾದ ಡಾ.ಚಂದ್ರಶೇಖರ ಕಂಬಾರರು ತಮ್ಮ ಕೃತಿಯೊಂದರಲ್ಲಿ ಶಾಲೆ ಬಂದುದರಿಂದ ಹಳ್ಳಿಯೊಂದು ಹಾಳಾಯಿತು ಎಂಬ ಬಗ್ಗೆ ಬರೆದಿದ್ದಾರೆ.ಅಂದರೆ ವಿಕಾಸದ ಬಗ್ಗೆ ಅನುಮಾನ ಇಟ್ಟುಕೊಂಡೇ ಬರೆದಿದ್ದಾರೆ. ಕುವೆಂಪು ಮತ್ತು ಕಂಬಾರ ಇಬ್ಬರೂ ಶೂದ್ರ ಪ್ರತಿಭೆಗಳು. ಆದರೆ ನಿಲುವುಗಳು ವಿಭಿನ್ನವಾಗಿವೆ. ಇಂಥ ವಿಚಾರಗಳ ಬಗ್ಗೆ ಚಿಂತನೆ ನಡೆಯಬೇಕು~ ಎಂದು ಸಲಹೆ ನೀಡಿದರು.ಅಕಾಡೆಮಿ ಪ್ರಕಟಿಸಿದ ಶೂದ್ರ ಶ್ರೀನಿವಾಸ್ ಅವರ `ಯು.ಆರ್.ಅನಂತಮೂರ್ತಿ~ ಕೃತಿಯನ್ನು ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಜಿ.ಎಸ್.ಸಿದ್ಧಲಿಂಗಯ್ಯ ಅವರು ಮಾತನಾಡಿ, `ಯಾರೇ ಬರೆದ ಕೃತಿಯನ್ನು ತಮ್ಮದೆಂಬಂತೆ ಪರಿಗಣಿಸುವ ಸಹೃದಯತೆ ಬೇಂದ್ರೆ ಮತ್ತು ಅನಂತಮೂರ್ತಿ ಅವರಿಗಿದೆ.ಶೂದ್ರ ಅವರು ಬರೆದ ಕೃತಿಯಲ್ಲಿ ಅನಂತಮೂರ್ತಿ ಅವರ ಕಥೆ, ಕಾದಂಬರಿ, ಅನುವಾದ, ವೈಚಾರಿಕತೆಗಳ ವಿಶ್ಲೇಷಣೆ ಮಾಡಲಾಗಿದೆ. ನಂತರದ ಅಧ್ಯಾಯಗಳಲ್ಲಿ ಅವರ ಜೀವನದ ಪ್ರಮುಖ ಘಟನೆಗಳನ್ನು ನೆನಪಿಸಿಕೊಳ್ಳಲಾಗಿದೆ~ ಎಂದರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ ಮಾತನಾಡಿ, `ಅನಂತಮೂರ್ತಿ ಅವರು ವರ್ತಮಾನ ಪ್ರಜ್ಞೆಯ ಸಂಕೇತವಾಗಿದ್ದಾರೆ. ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಸ್ಪಂದಿಸುತ್ತಿದ್ದಾರೆ.ರಾಜ್ಯ ಸರ್ಕಾರ ಶಾಲೆಗಳನ್ನು ಮುಚ್ಚುವ ಬಗೆಗೆ ತಮ್ಮ ನಿಲುವನ್ನು ಪ್ರಕಟಿಸಿರುವ ಅವರು, ಕನ್ನಡ ಶಾಲೆಗಳನ್ನು ನಡೆಸಲು ಅಗತ್ಯವಿರುವ ಸಲಹೆ, ಪರಿಹಾರಗಳನ್ನೂ ಸೂಚಿಸಿದ್ದಾರೆ~ ಎಂದು ಹೇಳಿದರು.ಲೇಖಕ ಶೂದ್ರ ಶ್ರೀನಿವಾಸ್, `ಅನಂತಮೂರ್ತಿ ಕೃತಿಗಳ ವ್ಯಾಪ್ತಿ ಅಗಾಧವಾದುದು. ಕೇವಲ 250 ಪುಟಗಳಲ್ಲಿ ಅವರ ಎಲ್ಲ ಕೃತಿ, ಕಾದಂಬರಿಗಳ ಬಗ್ಗೆ ಬರೆಯುವುದು ಅಸಾಧ್ಯವಾದುದು. ಅವರ ಸಾಹಿತ್ಯದ ಮೂಲಕವೇ ಜಗತ್ತಿನ ಸಾಹಿತ್ಯದ ಅರಿವು ದೊರಕಿತು.ಕನ್ನಡ ಸಾಹಿತ್ಯದ ಸಹೋದ್ಯೋಗಿಗಳೆಂದರೆ ಲಂಕೇಶ್ ಮತ್ತು ಅನಂತಮೂರ್ತಿ~ ಎಂದು ನುಡಿದರು.  ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಡಾ.ವೂಡೇ ಪಿ.ಕೃಷ್ಣ, ಪ್ರಾಂಶುಪಾಲ ಪ್ರೊ.ಎಂ.ಡಿ.ರಾಜನ್, ಅಕಾಡೆಮಿ ರಿಜಿಸ್ಟ್ರಾರ್ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ವೇದಿಕೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry