ಮಂಗಳವಾರ, ಮೇ 24, 2022
27 °C

ಎಲ್ಲ ಹುದ್ದೆಗಳೂ ಕಾಂಗ್ರೆಸ್ ಬಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರಪತಿ ಹುದ್ದೆಗೆ ಯುಪಿಎ ಒಕ್ಕೂಟ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಆಯ್ಕೆ ಮಾಡಿದ ನಂತರ, ಮುಂದೆ ಖಾಲಿಯಾಗುವ ಮೂರು ಪ್ರಮುಖ ಹುದ್ದೆಗಳತ್ತ ದೃಷ್ಟಿ ನೆಟ್ಟಿರುವ ಕಾಂಗ್ರೆಸ್, ಆ ಮೂರೂ ಹುದ್ದೆಗಳನ್ನು ತನ್ನಲ್ಲೇ ಉಳಿಸಿಕೊಳ್ಳಲು ತಂತ್ರ ರೂಪಿಸುತ್ತಿದೆ.
ಮುಂದಿನ ತಿಂಗಳು ಉಪರಾಷ್ಟ್ರಪತಿ ಅಧಿಕಾರಾವಧಿ ಪೂರ್ಣಗೊಳ್ಳುತ್ತದೆ. ರಾಜ್ಯಸಭಾದ ಉಪಸಭಾಪತಿ ಹುದ್ದೆ ಎರಡು ತಿಂಗಳಿನಿಂದ ಖಾಲಿ ಇದೆ. ಪ್ರಣವ್ ಮುಖರ್ಜಿ ಅವರು ಹತ್ತು ದಿನಗಳೊಳಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದರಿಂದ, ಸಚಿವ ಸ್ಥಾನದ ಜೊತೆಗೆ ಲೋಕಸಭೆಯ ನಾಯಕನ ಸ್ಥಾನವೂ ಖಾಲಿಯಾಗುತ್ತದೆ.ಕಾಂಗ್ರೆಸ್ ಮೂಲಗಳಿಂದ `ಪ್ರಜಾವಾಣಿ~ಗೆ  ಲಭ್ಯವಾಗಿರುವ ಮಾಹಿತಿ ಪ್ರಕಾರ, `ಈ ಮೂರು ಹುದ್ದೆಗಳಲ್ಲಿ ಯಾವುದನ್ನೂ ಬೇರೆ ಪಕ್ಷಗಳಿಗೆ ಬಿಟ್ಟುಕೊಡಲು ಕಾಂಗ್ರೆಸ್ ಸಿದ್ಧವಿಲ್ಲ. ಮಾತ್ರವಲ್ಲ, ಯುಪಿಎ ಒಕ್ಕೂಟದಲ್ಲಿರುವ ಮಿತ್ರ ಪಕ್ಷಗಳಿಗೂ ಬಿಟ್ಟುಕೊಡುವ ಸಾಧ್ಯತೆಗಳೂ ಕಡಿಮೆ.ಏತನ್ಮಧ್ಯೆ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರನ್ನು ಅಲ್ಪಸಂಖ್ಯಾತ ವರ್ಗದವರು ಎಂಬ ಕಾರಣಕ್ಕೆ ಎರಡನೇ ಅವಧಿಗೆ ಮುಂದುವರಿಸಲು ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ. ಆದರೆ, ಇಲ್ಲಿಯವರೆವಿಗೂ ಎಸ್.ರಾಧಾಕೃಷ್ಣನ್ ಹೊರತುಪಡಿಸಿದರೆ ಬೇರೆ ಯಾರಿಗೂ ಎರಡನೇ ಅವಧಿಗೆ ಅಧಿಕಾರ ನೀಡಿದ ಉದಾಹರಣೆ ಕಾಂಗ್ರೆಸ್ ಪಕ್ಷದಲಿಲ್ಲ.ಎರಡನೆಯದಾಗಿ ಉಪರಾಷ್ಟ್ರಪತಿ ಹುದ್ದೆಯಲ್ಲಿದ್ದವರು ಮೇಲ್ಮನೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ. ಅಧಿವೇಶನದ ಸಮಯದಲ್ಲಿ ಉಂಟಾಗುವ ಅನೇಕ ಕಠಿಣ ಸವಾಲುಗಳನ್ನು ಅಧ್ಯಕ್ಷ ಪೀಠದಲ್ಲಿದ್ದವರು ಎದುರಿಸಿ, ಪರಿಹಾರ ನೀಡಬೇಕಾಗುತ್ತದೆ. ಹೇಳಿ ಕೇಳಿ ಮೇಲ್ಮನೆಯಲ್ಲಿ ಯುಪಿಎ ಅಲ್ಪಸಂಖ್ಯಾತ ಪಕ್ಷ.

 

ಹಾಗಾಗಿ ಇಂಥ ಹುದ್ದೆಯಲ್ಲಿ ತಮ್ಮ ಪಕ್ಷದವರೇ ಇರಬೇಕೆಂದು ಕಾಂಗ್ರೆಸ್ ಬಯಸುತ್ತದೆ. ರಾಜ್ಯಸಭೆಯಲ್ಲಿ ಲೋಕಪಾಲ ಮಸೂದೆ ಮಂಡನೆ ಸಮಯದಲ್ಲಿ ಮಧ್ಯರಾತ್ರಿ 12ರವರೆಗೆ ಅಧಿವೇಶನ ನಡೆದಿದ್ದು, ಹಮೀದ್ ಅನ್ಸಾರಿಯವರು ವಿವಾದಾತ್ಮಕ ವಿಚಾರಗಳನ್ನು ಎದುರಿಸಿದ್ದನ್ನು ಇಲ್ಲಿ ಉದಾಹರಿಸಬಹುದು.ಲೋಕಸಭೆಯ ಪ್ರಮುಖ ಪ್ರತಿಪಕ್ಷ ಬಿಜೆಪಿ ಉಪರಾಷ್ಟ್ರಪತಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಪ್ರಣವ್ ಮುಖರ್ಜಿಯವರನ್ನು ಬೆಂಬಲಿಸಬೇಕೆಂದರೆ, ನಮ್ಮ ಪಕ್ಷದವರಿಗೆ ಉಪರಾಷ್ಟ್ರಪತಿ ಸ್ಥಾನ ನೀಡಿ ಎಂಬ `ಚೌಕಾಸಿ~ಗೆ ಇಳಿಯುವ ಸಾಧ್ಯತೆಯಿದೆ. ಆದರೆ, ಕಾಂಗ್ರೆಸ್ ಈ ಒತ್ತಡಕ್ಕೆ ಮಣಿಯುವ ಸಾಧ್ಯತೆ ಕಡಿಮೆ.ಉಪ ರಾಷ್ಟ್ರಪತಿ ರಾಜ್ಯಸಭೆಯ ಅಧ್ಯಕ್ಷರಾಗುವುದರಿಂದ, ಮೇಲ್ಮನೆಯಲ್ಲಿ ಅಲ್ಪಸಂಖ್ಯಾತವಾಗಿರುವ ಕಾಂಗ್ರೆಸ್ ವಿರೋಧ ಪಕ್ಷಕ್ಕೆ ಈ ಸ್ಥಾನ ಬಿಟ್ಟುಕೊಡಲಾರದು. ಈ ನಡುವೆ ಸಮಾಜವಾದಿ ಪಕ್ಷ ರಾಜ್ಯಸಭೆಯ ಉಪ ಸಭಾಪತಿ ಹುದ್ದೆಯನ್ನು ತನಗೆ  ಕೊಡುವಂತೆ ಕೇಳುವ ಸೂಚನೆಯಿದೆ.ಪ್ರಣವ್ ರಾಷ್ಟ್ರಪತಿಯಾಗುವುದರಿಂದ ಲೋಕಸಭೆಯ ನಾಯಕನ ಸ್ಥಾನ ತೆರವಾಗಲಿದ್ದು, ಆ ಸ್ಥಾನ ಹಿರಿಯ ನಾಯಕ ಪೆಟ್ರೋಲಿಯಂ ಸಚಿವ ಜೈಪಾಲ್ ರೆಡ್ಡಿ ಅವರ ಹೆಸರು ಕೇಳಿಬರುತ್ತಿದೆ. ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ, ನಗರಾಭಿವೃದ್ಧಿ ಸಚಿವ ಕಮಲ್ ನಾಥ್ ಅವರಿಗೂ ಈ ಅದೃಷ್ಟ ಒಲಿಯುವ ಸಾಧ್ಯತೆಯಿದೆ.ಸಂಗ್ಮಾ ವಿರುದ್ಧ ಕ್ರಮ ?

ನವದೆಹಲಿ (ಪಿಟಿಐ):
ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳುತ್ತಿರುವ ಲೋಕಸಭೆ ಮಾಜಿ ಸ್ಪೀಕರ್ ಪಿ.ಎ.ಸಂಗ್ಮಾ ತಮ್ಮ ನಿಲುವು ಬದಲಾಯಿಸದಿದ್ದರೆ ಅವರ ವಿರುದ್ಧ ಕ್ರಮ ಅನಿವಾರ್ಯವಾಗಬಹುದು ಎಂದು ಹಿರಿಯ ಎನ್‌ಸಿಪಿ ನಾಯಕ, ಕೇಂದ್ರ ಸಚಿವ ಪ್ರಫುಲ್ ಪಟೇಲ್ ಹೇಳಿದ್ದಾರೆ.ಷರತ್ತುರಹಿತವಾಗಿ ಯುಪಿಎ ಅಭ್ಯರ್ಥಿಯನ್ನು ಬೆಂಬಲಿಸುವುದು ಎನ್‌ಸಿಪಿಯ ನಿಲುವಾಗಿದ್ದು ಒಂದುವೇಳೆ ಸಂಗ್ಮಾ ತಮ್ಮ ನಾಮಪತ್ರ ಸಲ್ಲಿಸಿದರೆ ಅವರ ವಿರುದ್ಧ ಕ್ರಮ ಅನಿವಾರ್ಯವಾಗಬಹುದು ಎಂದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.