ಸೋಮವಾರ, ನವೆಂಬರ್ 18, 2019
26 °C
ಉತ್ತರ ಕೊರಿಯ ಕುರಿತ ಬಿಬಿಸಿ ಸಾಕ್ಷ್ಯಚಿತ್ರ

ಎಲ್‌ಎಸ್‌ಇ ವಿದ್ಯಾರ್ಥಿಗಳಿಗೆ ಬೆದರಿಕೆ

Published:
Updated:

ಲಂಡನ್ (ಪಿಟಿಐ):  ದಕ್ಷಿಣ ಕೊರಿಯ ವಿರುದ್ಧ ಸಮರ ಸಾರಿರುವ ಉತ್ತರ ಕೊರಿಯದಲ್ಲಿಯ ಪ್ರಸಕ್ತ ಸ್ಥಿತಿಗತಿ ಕುರಿತಾದ ಸಾಕ್ಷ್ಯಚಿತ್ರ ಇದೀಗ ಬಿಬಿಸಿ ಹಾಗೂ ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (ಎಲ್‌ಎಸ್‌ಇ) ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಈ ನಡುವೆ ಸಾಕ್ಷ್ಯಚಿತ್ರವನ್ನು ಶುಕ್ರವಾರ ಪ್ರಸಾರ ಮಾಡುವುದಾಗಿ ಬಿಬಿಸಿ ಸ್ಪಷ್ಟಪಡಿಸಿದೆ.ಬಿಬಿಸಿ ಚಾನೆಲ್‌ನ ಮೂವರು ಪತ್ರಕರ್ತರು ತನಿಖಾ ಪತ್ರಿಕೋದ್ಯಮದ ಭಾಗವಾಗಿ ತಮ್ಮಂದಿಗೆ ಎಲ್‌ಎಸ್‌ಇನ ವಿದ್ಯಾರ್ಥಿಗಳನ್ನು ಉತ್ತರ ಕೊರಿಯಕ್ಕೆ ಕರೆದೊಯ್ದು ಯುದ್ಧಭೀತಿಯ ಹಿನ್ನೆಲೆಯಲ್ಲಿ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದ್ದರು. ಈ ವಿಚಾರ ಸೂಕ್ಷ್ಮ ಎನಿಸಿರುವುದರಿಂದ ಇದೀಗ ಈ ಸಂಬಂಧ ಉತ್ತರ ಕೊರಿಯ ಸರ್ಕಾರದಿಂದ ಎಲ್‌ಎಸ್‌ಇ ವಿದ್ಯಾರ್ಥಿಗಳಿಗೆ ಬೆದರಿಕೆಯ ಇಮೇಲ್ ಸಂದೇಶಗಳು ಬರುತ್ತಿವೆ.ಹೀಗಾಗಿ ಬಿಬಿಸಿಯ ವಿರುದ್ಧ ಹರಿಯಾಯ್ದಿರುವ ಎಲ್‌ಎಸ್‌ಇ, `ಕಾಲೇಜು ಟ್ರಿಪ್ ನೆಪದಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಉತ್ತರ ಕೊರಿಯಕ್ಕೆ ಕರೆದೊಯ್ಯುವ ಮೂಲಕ ಅವರನ್ನು ಅಪಾಯಕ್ಕೆ ಸಿಲುಕಿಸಲಾಗಿದೆ' ಎಂದು ದೂರಿದೆ.ವರದಿಗಾರ ಜಾನ್ ಸ್ವೀನಿ ಒಳಗೊಂಡಂತೆ ಮೂವರು ಪತ್ರಕರ್ತರು ಎಲ್‌ಎಸ್‌ಇ ಸದಸ್ಯರೊಂದಿಗೆ ಸೇರಿಕೊಂಡು ಕಳೆದ ತಿಂಗಳು ಉತ್ತರ ಕೊರಿಯಕ್ಕೆ ತೆರಳಿ ಈ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದ್ದಾರೆ.ವಿಶ್ವವಿದ್ಯಾಲಯದ ಟ್ರಿಪ್ ನೆಪದಲ್ಲಿ ಬಿಬಿಸಿ ವಿದ್ಯಾರ್ಥಿಗಳನ್ನು `ಉದ್ದೇಶಪೂರ್ವಕವಾಗಿ ತಪ್ಪುದಾರಿಗೆ' ಎಳೆದಿದ್ದು ಅವರನ್ನು `ಗಂಭೀರ ಅಪಾಯ'ಕ್ಕೆ ಸಿಲುಕಿಸಿದೆ ಎಂದು ಎಲ್‌ಎಸ್‌ಇ ಆರೋಪಿಸಿರುವುದನ್ನು `ಟೆಲಿಗ್ರಾಫ್' ವರದಿ ಮಾಡಿದೆ.ಸಾಕ್ಷ್ಯಚಿತ್ರ ಸಿದ್ಧಪಡಿಸುವ ಕುರಿತು ಪ್ರವಾಸ ಹೊರಡುವ ಮುನ್ನ ಬಿಬಿಸಿ ತಿಳಿಸಿರಲಿಲ್ಲ ಎಂದು ಎಲ್‌ಎಸ್‌ಇ ಆರೋಪಿಸಿದ್ದರೆ, ಅವರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು ಎಂದು ಬಿಬಿಸಿ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)