ಎಲ್‌ಐಸಿಗೆ ಧ್ಯೇಯ ಗೀತೆ ಕೊಟ್ಟ ಧಾರವಾಡ!

7

ಎಲ್‌ಐಸಿಗೆ ಧ್ಯೇಯ ಗೀತೆ ಕೊಟ್ಟ ಧಾರವಾಡ!

Published:
Updated:
ಎಲ್‌ಐಸಿಗೆ ಧ್ಯೇಯ ಗೀತೆ ಕೊಟ್ಟ ಧಾರವಾಡ!

ಹುಬ್ಬಳ್ಳಿ:  ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಪಾಲಿಗೆ `ಆವೋ ಪ್ಯಾರೆ ಸಾಥ್ ಹಮಾರೆ~ ಹಾಡು ರಾಷ್ಟ್ರಗೀತೆಯಷ್ಟೇ ಮಹತ್ವದ್ದು. ನಿಗಮದ ಕರ್ತವ್ಯ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಈ ಗೀತೆಯನ್ನು ಎಲ್‌ಐಸಿ ನಡೆಸುವ ಎಲ್ಲ ಅಧಿಕೃತ ಕಾರ್ಯಕ್ರಮಗಳ ಆರಂಭದಲ್ಲಿ ಹಾಡಲಾಗುತ್ತದೆ.ಅಂದಹಾಗೆ, ಎಲ್‌ಐಸಿಗೆ ಈ ಧ್ಯೇಯಗೀತೆಯನ್ನು ಕೊಟ್ಟ ಹೆಮ್ಮೆ ಧಾರವಾಡದ್ದು. ಮೂಲ ಕನ್ನಡದಲ್ಲಿ ಈ ಗೀತೆ ಬರೆದ ಎನ್.ಬಿ. ಗಂಜಿಕರ್ ಹಾಗೂ ಗೀತೆಯ ಭಾವಕ್ಕೆ ಒಂದಿನಿತೂ ಕುಂದಾಗದಂತೆ ಹಿಂದಿಗೆ ಅನುವಾದಿಸಿದ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಇಬ್ಬರೂ ಧಾರವಾಡದವರೇ. ಕಳೆದ 18 ವರ್ಷಗಳಿಂದ ಈ ಗೀತೆಯನ್ನು ನಿಗಮದಲ್ಲಿ ಹಾಡಲಾಗುತ್ತಿದೆ.ಧಾರವಾಡಕ್ಕೂ ಈ ಧ್ಯೇಯ ಗೀತೆಗೂ ಇರುವ ನಂಟಿನ ಗುಟ್ಟನ್ನು ಬಿಚ್ಚಿ ಮುಂದಿಟ್ಟವರು ಎಲ್‌ಐಸಿ ಧಾರವಾಡ ಪ್ರಾದೇಶಿಕ ಕಚೇರಿಯಲ್ಲಿ ಹಿರಿಯ ಅಧಿಕಾರಿಯಾಗಿರುವ ಅಬ್ದುಲ್ ಖಾನ್. ಗಂಜಿಕರ್ ಅವರ ಭಾರತಿನಗರ ಮನೆಯ ವಿಳಾಸವನ್ನೂ ಅವರು ಕೊಟ್ಟರು. ಹೋಗಿ ಬಾಗಿಲು ಬಡಿದರೆ ಗಂಜಿಕರ್ ಮಾತನಾಡಲು ಸುತಾರಾಂ ಒಪ್ಪಲಿಲ್ಲ. ಕೊನೆಗೆ ಅವರ ಬಾಯಿ ಬಿಡಿಸಲು ಖಾನ್ ಸಾಹೇಬರೇ ಅಲ್ಲಿಗೆ ಬರಬೇಕಾಯಿತು.ಅದು 1994ರ ಇಸ್ವಿ. ಆಗ ಎಲ್‌ಐಸಿ ಮುಖ್ಯಸ್ಥರಾಗಿದ್ದ ಜಿ.ಎನ್. ವಾಜಪೇಯಿ ನಿಗಮಕ್ಕೆ ಒಂದು ಧ್ಯೇಯಗೀತೆ ಬೇಕೆಂಬುದನ್ನು ಮನಗಂಡರು. ಸಂಸ್ಥೆಗೆ ಬೇಕಾದ ಅಂತಹ ಗೀತೆಗಾಗಿ ರಾಷ್ಟ್ರವ್ಯಾಪಿ ಸ್ಪರ್ಧೆಯನ್ನು ಸಂಘಟಿಸಿದ ಅವರು, ಸೂಕ್ತವಾದ ಹಾಡಿನ ಆಯ್ಕೆಯಾಗಿ ಭಾಷಾ ವಿಜ್ಞಾನಿಗಳ ಒಂದು ಸಮಿತಿಯನ್ನೂ ರಚಿಸಿದರು.

 

ಆಗ ಹೈದರಾಬಾದ್‌ನಲ್ಲಿ ಸಿಬ್ಬಂದಿ ವಿಭಾಗದ ಮುಖ್ಯಸ್ಥರಾಗಿದ್ದ ಗಂಜಿಕರ್ ತಾವೂ ಒಂದು `ಕೈ~ ನೋಡಿದರಾಯಿತು ಎಂದು ಪೆನ್ನು ಹಿಡಿದು ಕುಳಿತರು. ಕೇವಲ ಎರಡು ದಿನಗಳಲ್ಲಿ ಕನ್ನಡದಲ್ಲಿ ಧ್ಯೇಯಗೀತೆ ಸಿದ್ಧವಾಯಿತು.`ನಿಗಮದ ಧ್ಯೇಯ ಏನು, ಅದರ ಜನಪರ ಕಾಳಜಿ ಎಂಥದು, ಅಲ್ಲಿಯ ಉದ್ಯೋಗಿಗಳ ಕರ್ತವ್ಯ ಪ್ರಜ್ಞೆ ಹೇಗಿರಬೇಕು ಎಂಬುದು ನಾನು ಆ ಗೀತೆ ಬರೆಯುವಾಗ ಹೊಂದಿದ ಯೋಚನೆಯಾಗಿತ್ತು~ ಎಂದು ಗಂಜಿಕರ್ ಹೇಳುತ್ತಾರೆ.ದೇಶದ ಎಲ್ಲೆಡೆಯಿಂದ ಎಲ್‌ಐಸಿ ಕೇಂದ್ರ ಕಚೇರಿ ಮುಂಬೈನತ್ತ ಗೀತೆಗಳ ಪ್ರವಾಹವೇ ಹರಿದುಬಂತು. ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ, ಬಂಗಾಳಿ ಮೊದಲಾದ ಭಾಷೆಗಳಲ್ಲಿ ಆ ಗೀತೆಗಳಿದ್ದವು. ಎಲ್ಲ ಹಾಡುಗಳನ್ನು ಪರಿಶೀಲನೆ ಮಾಡಿದ ಭಾಷಾ ವಿಜ್ಞಾನಿಗಳ ತಂಡ, ಅಂತಿಮವಾಗಿ ಗಂಜಿಕರ್ ಅವರ ಗೀತೆಯನ್ನು ಆಯ್ಕೆಮಾಡಿತು. ಅಷ್ಟರಲ್ಲಿ ದೆಹಲಿಗೆ ಬಂದಿದ್ದ ಗಂಜಿಕರ್‌ಗೆ ಮುಂಬೈನಿಂದ ಅಭಿನಂದನೆ ಕರೆ ಬಂತು. ಸ್ವತಃ ವಾಜಪೇಯಿ ಅವರೇ ಗೀತೆ ರಚನೆಕಾರರಿಗೆ ದೂರವಾಣಿ ಕರೆ ಮಾಡಿದ್ದರು.ಕನ್ನಡದಲ್ಲಿದ್ದ ಗೀತೆಗೆ ಹಿಂದಿ ರೂಪ ಕೊಡುವ ಸಮಸ್ಯೆ ಎದುರಾಯಿತು. ಆಗ ಅವರಿಗೆ ಸಿಕ್ಕಿದ್ದು ಹಿರಿಯ ವಿದ್ವಾಂಸ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ. ಒಂದೆರಡು ಬೈಠಕ್‌ಗಳಲ್ಲಿಯೇ ಪಟ್ಟಣಶೆಟ್ಟಿ ಹಾಗೂ ಗಂಜಿಕರ್ ಕೂಡಿಕೊಂಡು ಧ್ಯೇಯಗೀತೆಯ ಹಿಂದಿ ಅವತರಣಿಕೆಯನ್ನು ಸಿದ್ಧಪಡಿಸಿದರು.`ನನ್ನ ಭಾವಗಳಿಗೆ ಪಟ್ಟಣಶೆಟ್ಟಿ ಜೀವ ತುಂಬಿದರು~ ಎಂದೆನ್ನುವ ಗಂಜಿಕರ್, `ಹೈದರಾಬಾದ್‌ನಲ್ಲಿ ಆಕಸ್ಮಿಕವಾಗಿ ಜನ್ಮತಾಳಿದ ಗೀತೆಗೆ ಈಗ 18 ವರ್ಷ ತುಂಬಿವೆ ಎಂದರೆ ಸೋಜಿಗವಾಗುತ್ತದೆ~ ಎಂದು  ಪ್ರತಿಕ್ರಿಯಿಸುತ್ತಾರೆ.ಸಾಹಿತ್ಯದ ಅನನ್ಯ ಅನ್ವೇಷಕರಾಗಿರುವ ಗಂಜಿಕರ್, ಧಾರವಾಡದಲ್ಲೇ ನೆಲೆಸಿದ್ದರೂ ಹೊರ ಜಗತ್ತಿನಿಂದ ಬಹುದೂರ ಇದ್ದಾರೆ. ಪ್ರಚಾರವೆಂದರೆ ಅವರಿಗೆ ಅಲರ್ಜಿ. ಲೆಕ್ಕವಿಲ್ಲದಷ್ಟು ಪ್ರಬಂಧ, ನೂರಾರು ಗೀತೆಗಳನ್ನು ಬರೆದಿರುವ ಅವರು, ಎಲ್ಲಿಯೂ ಪ್ರಕಾಶನಕ್ಕೆ ಕೊಟ್ಟಿಲ್ಲ. ಪುಸ್ತಕ ಮಾಡಬೇಕೆಂಬ ಅವಶ್ಯಕತೆಯೂ ಅವರನ್ನು ಕಾಡಿಲ್ಲ. ನಾಡಲ್ಲಿದ್ದೂ ಕಾಡಿನಲ್ಲಿ ಇದ್ದಂತೆ ಋಷಿಸದೃಶವಾದ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.ಸೆಪ್ಟೆಂಬರ್ ಒಂದರಂದು ನಿಗಮದ ವಾರ್ಷಿಕೋತ್ಸವ ದಿನ. ಅಂದು ರಜಾ ದಿನವಾಗಿದ್ದರಿಂದ ಮರುದಿನ ಎಲ್ಲೆಡೆ ಅಧಿಕೃತ ಕಾರ್ಯಕ್ರಮ ನಡೆಯಲಿದೆ. ಅವತ್ತು ಮತ್ತೆ ಧ್ಯೇಯಗೀತೆ ಎಲ್ಲೆಡೆ ಮೊಳಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry