ಎಲ್‌ಜಿ ಒಪ್ಟಿಮಸ್ ವಿಯು

7
ವಿಚಿತ್ರ ಆಕಾರದ ಫೋನ್

ಎಲ್‌ಜಿ ಒಪ್ಟಿಮಸ್ ವಿಯು

Published:
Updated:

ಇದನ್ನು ಫೋನ್ ಎನ್ನುವುದೇ ಟ್ಯಾಬ್ಲೆಟ್ ಎನ್ನುವುದೇ ಎಂಬ ಅನುಮಾನ ಮೂಡುವ, ಉದ್ದ ಅಗಲಗಳ ಅನುಪಾತ 4:3ರಲ್ಲಿರುವ ಒಂದು ವಿಶೇಷ ಗ್ಯಾಜೆಟ್ ಈ ವಾರ.ಯಾವುದೇ ಫೋನ್ ತೆಗೆದು ನೋಡಿ. ಸಾಮಾನ್ಯವಾಗಿ ಅದರ ಅಗಲ ಮತ್ತು ಉದ್ದಕ್ಕೆ ಅನುಪಾತ ಮಾಡಿ ನೋಡಿದಾಗ ಅಗಲಕ್ಕಿಂತ ಉದ್ದ ತುಂಬ ಹೆಚ್ಚಾಗಿರುತ್ತದೆ. ಇತ್ತೀಚೆಗೆ ಬಹುಪಾಲು ಸ್ಮಾರ್ಟ್‌ಫೋನ್‌ಗಳು ಹೈಡೆಫಿನಿಶನ್ ವೀಡಿಯೊಗಳನ್ನು ಪ್ಲೇ ಮಾಡಬಲ್ಲವು. ಬಹುಪಾಲು ಹೈಡೆಫಿನಿಶನ್ ವೀಡಿಯೊಗಳು 16:9 (ಉದ್ದ:ಅಗಲ) ಅನುಪಾತದಲ್ಲಿರುತ್ತವೆ. ಅಂತೆಯೇ ಫೋನ್‌ಗಳ ಗಾತ್ರವೂ ಅದಕ್ಕೆ ಸಮೀಪ ಇರುತ್ತವೆ.ವಿಷಯ ಹೀಗಿರುವಾಗ ಒಂದು ಹೊಸ ಫೋನ್ 4:3 ಅನುಪಾತದಲ್ಲಿದ್ದರೆ? ತುಂಬ ಹಳೆಯ ವೀಡಿಯೊಗಳು (ಸಿನಿಮಾಗಳು) ಈ ಅನುಪಾತದಲ್ಲಿದ್ದವು. ಹೊಸ ಯುಗಕ್ಕೆ ಹಳೆ ಸಿನಿಮಾ ಎನ್ನೋಣವೇ? ಅದು ಕೇವಲ ಸಿನಿಮಾ ಅಥವಾ ವೀಡಿಯೊದ ಕಥೆ. ಈ ಫೋನ್ ಅತ್ತ ಫೋನ್ ಎನ್ನಿಸಿಕೊಳ್ಳುವುದೂ ಕಷ್ಟ, ಇತ್ತ ಟ್ಯಾಬ್ಲೆಟ್ ಎನ್ನುವುದೂ ಕಷ್ಟ. ಅಂತಹ ಒಂದು ವಿಚಿತ್ರ ಗಾತ್ರದ ಗ್ಯಾಜೆಟ್ ಎಲ್‌ಜಿ ಒಪ್ಟಿಮಸ್ ವಿಯು (LG Optimus Vu)ನಮ್ಮ ಈ ವಾರದ ಗ್ಯಾಜೆಟ್.ಎಂದಿನಂತೆ ಮೊದಲು ಇದರ ಗುಣವೈಶಿಷ್ಟ್ಯಗಳ ಕಡೆ ಗಮನ ಹರಿಸೋಣ. ನಾಲ್ಕು ಹೃದಯಗಳ (ಕ್ವಾಡ್ ಕೋರ್) 1.5 ಗಿಗಾಹರ್ಟ್ಸ್ ಪ್ರೋಸೆಸರ್. 1 ಗಿಗಾಬೈಟ್ ಪ್ರಾಥಮಿಕ ಮತ್ತು 32 ಗಿಗಾಬೈಟ್ ಸಂಗ್ರಹ ಮೆಮೊರಿ. 139.6 ಗಿ 90.4 ಗಿ 8.5  ಮಿಮೀ ಗಾತ್ರ. 5 ಇಂಚು ಗಾತ್ರದ ಕೆಪಾಸಿಟಿವ್ ಸ್ಪರ್ಶಸಂವೇದಿ ಪರದೆ. 1024 x 768 ಪಿಕ್ಸೆಲ್ ರೆಸೊಲೂಶನ್ (4:3 ಅನುಪಾತ). 168 ಗ್ರಾಂ ತೂಕ.

ಆಂಡ್ರೋಯ್ಡ 4.0.4 ಐಸ್‌ಕ್ರೀಂ ಕಾರ್ಯಾಚರಣ ವ್ಯವಸ್ಥೆ. 8 ಮೆಗಾಪಿಕ್ಸೆಲ್ ಪ್ರಾಥಮಿಕ (ಎದುರುಗಡೆಯ) ಮತ್ತು 1.3 ಮೆಗಾಪಿಕ್ಸೆಲ್ ಎರಡನೆಯ ಕ್ಯಾಮೆರಾ (ವೀಡಿಯೊ ಚಾಟ್ ಮಾಡಲು). ಹೈಡೆಫಿನಿಶನ್ ವೀಡಿಯೊ ರೆಕಾರ್ಡಿಂಗ್ ಮತ್ತು ಪ್ಲೇಬ್ಯಾಕ್. 3.5 ಮಿಮೀ ಹೆಡ್‌ಫೋನ್ ಕಿಂಡಿ.. 2,080 mAh  ಬ್ಯಾಟರಿ. ವೈಫೈ, ಬ್ಲೂಟೂತ್, ಎನ್‌ಎಫ್‌ಸಿ, ಜಿಪಿಎಸ್, ಯುಎಸ್‌ಬಿ ಸಂಪರ್ಕ ಕಿಂಡಿ, ಇತ್ಯಾದಿ. ಗಮನಾರ್ಹ ಕೊರತೆಗಳು - ಹೆಚ್ಚಿಗೆ ಮೆಮೊರಿ ಅಂದರೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯವಿಲ್ಲ ಮತ್ತು ರೇಡಿಯೊ ಇಲ್ಲ ಎಂಬುದು.

ಇದರ ವೈಶಿಷ್ಟ್ಯ ಇದರ ಗಾತ್ರ ಎಂದೇನಲ್ಲ. ಕಂಪೆನಿಯ ಜಾಲತಾಣದಲ್ಲೇ ಇದನ್ನು ಅರ್ಧ ಸ್ಮಾರ್ಟ್‌ಫೋನ್, ಅರ್ಧ ಟ್ಯಾಬ್ಲೆಟ್ ಎಂದು ಕರೆದಿದ್ದಾರೆ. ಈ ವಿಚಿತ್ರ ಗಾತ್ರದಿಂದಾಗಿ ಕೆಲವು ಕೆಲಸಗಳನ್ನು ಚೆನ್ನಾಗಿ ಅನುಭವಿಸಬಹುದು. ಅವೆಂದರೆ ಅಂತರಜಾಲ ವೀಕ್ಷಣೆ ಮತ್ತು ವಿದ್ಯುನ್ಮಾನ ಪುಸ್ತಕ (ಇಬುಕ್) ಓದುವಿಕೆ. ಈ ಒಂದು ವಿಷಯದಲ್ಲಿ ಇದು ಬಹುಮಟ್ಟಿಗೆ ಟ್ಯಾಬ್ಲೆಟ್‌ನಂತಿದೆ. ಇಮೇಲ್ ಕಳುಹಿಸಲು ಅಥವಾ ಏನಾದರೂ ಟೈಪ್ ಮಾಡಲು ಇದರ ಗಾತ್ರ ಅನುಕೂಲಕರವಾಗಿದೆ.

ಕೀಲಿಮಣೆಯಲ್ಲಿ ಅಕ್ಷರಗಳ ನಡುವೆ ಸಾಕಷ್ಟು ಸ್ಥಳ ಇರುವುದರಿಂದ ಸರಿಯಾದ ಅಕ್ಷರವನ್ನೇ ವೇಗವಾಗಿ ಕುಟ್ಟಬಹುದು. ಕೆಲವು ಕಿರುತಂತ್ರಾಂಶಗಳು (app) ಈ ವಿಚಿತ್ರ ಗಾತ್ರದಿಂದಾಗಿ ಚೆನ್ನಾದ ಅನುಭವ ನೀಡುವುದಿಲ್ಲ. ಅದಕ್ಕೆಂದೇ ಅವರು ಒಂದು ಸೌಲಭ್ಯ ನೀಡಿದ್ದಾರೆ. ಅದನ್ನು ಆಯ್ಕೆ ಮಾಡಿಕೊಂಡರೆ ಪರದೆಯ ಅನುಪಾತ ಬದಲಾಗುತ್ತದೆ. ಆದರೆ ಎರಡು ಕಡೆ (ಮೇಲೆ ಮತ್ತು ಕೆಳಗೆ ಅಥವಾ ಎಡಕ್ಕೆ ಮತ್ತು ಬಲಕ್ಕೆ) ಸ್ಥಳ ನಿರುಪಯುಕ್ತವಾಗುತ್ತದೆ.

ಇದರ ಕ್ಯಾಮೆರಾ ಚೆನ್ನಾಗಿದೆ. ಹಲವು ಸೀನ್ ಆಯ್ಕೆಗಳಿವೆ. ವೀಡಿಯೊ ಕೂಡ ತಯಾರಿಸಬಹುದು. ಹೈಡೆಫಿನಿಶನ್ ವೀಡಿಯೊ ಶೂಟ್ ಮಾಡಬಹುದು ಮತ್ತು ವೀಕ್ಷಿಸಬಹುದು. ಆದರೆ ಹೈಡೆಫಿನಿಶನ್ ವೀಡಿಯೊ ವೀಕ್ಷಿಸುವಾಗ ಮೇಲೆ ಮತ್ತು ಕೆಳಗೆ ಕಪ್ಪು ಪಟ್ಟಿಯಂತೆ ಕಂಡುಬರುತ್ತದೆ. ಯಾಕೆಂದರೆ ಪರದೆಯ ಅಷ್ಟು ಜಾಗ ಆಗ ನಿರುಪಯುಕ್ತವಾಗಿರುತ್ತದೆ. ಕ್ಯಾಮೆರಾದಲ್ಲಿ ಎಚ್‌ಡಿಆರ್ ಮತ್ತು ಪನೋರಾಮ ಆಯ್ಕೆಗಳಿವೆ. ಇವೆರಡು ತುಂಬ ಉಪಯುಕ್ತ.

ಪನೋರಾಮ ಆಯ್ಕೆ ಮಾಡಿ ಕ್ಯಾಮೆರಾ ತಿರುಗಿಸುತ್ತ ಹಲವು ಫೋಟೊಗಳನ್ನು ತೆಗೆದರೆ ಇದು ಅವುಗಳನ್ನೆಲ್ಲ ಹೊಲಿದು ದೊಡ್ಡ ಫೋಟೊ ಮಾಡಿ ಕೊಡುತ್ತದೆ. ಪಶ್ಚಿಮ ಘಟ್ಟದ ವಿಹಂಗಮ ನೋಟದ ಫೋಟೊ ತಯಾರಿಸಲು ಇದು ತುಂಬ ಉಪಯುಕ್ತ ಸೌಲಭ್ಯ. ಯಾವುದಾದರೊಂದು ದೃಶ್ಯದಲ್ಲಿ ಬೇರೆ ಬೇರೆ ಸ್ಥಾನದಲ್ಲಿ ಬೆಳಕು ತುಂಬ ಹೆಚ್ಚು ಕಡಿಮೆ ಇದ್ದರೆ ಯಾವ ಜಾಗಕ್ಕೆ ಅಪೆರ್ಚರ್ ಸರಿ ಮಾಡಿದರೂ ಫೋಟೊ ಚೆನ್ನಾಗಿ ಬರುವುದಿಲ್ಲ.

ಅಂತಹ ಸಂದರ್ಭದಲ್ಲಿ ಬೇರೆ ಬೇರೆ ಜಾಗಕ್ಕೆ ಬೇರೆ ಬೇರೆ ಅಪೆರ್ಚರ್ ಆಯ್ಕೆ ಮಾಡಿ ಹಲವು ಫೋಟೊ ತೆಗೆದು ಅನಂತರ ಅವುಗಳನ್ನು ಗಣಕದಲ್ಲಿ ಜೋಡಿಸಿ ಸರಿಯಾದ ಫೋಟೊ ತಯಾರಿಸಲಾಗುತ್ತದೆ. ಈ ವಿಧಾನಕ್ಕೆ ಹೈ ಡೈನಾಮಿಕ್ ರೇಂಜ್ (High Dynamic Range - HDR) ಅರ್ಥಾತ್ ಎಚ್‌ಡಿಆರ್ ಫೋಟೊಗ್ರಫಿ  ಎನ್ನುತ್ತಾರೆ. ಈ ಫೋನ್‌ನಲ್ಲಿ ಈ ಸೌಲಭ್ಯ ಇದೆ. ಎಚ್‌ಡಿಆರ್ ಎಂದು ಆಯ್ಕೆ ಮಾಡಿಕೊಂಡರೆ ಸಾಕು. ಅದು ಹಲವು ಫೋಟೊಗಳನ್ನು ತೆಗೆದು ಅವುಗಳನ್ನು ಸಂಸ್ಕರಿಸಿ, ಜೋಡಿಸಿ ಉತ್ತಮ ಫೋಟೊ ತಯಾರಿಸಿ ಕೊಡುತ್ತದೆ. ನಾನು ಈ ಸೌಲಭ್ಯವನ್ನು ಬಳಸಿ ನೋಡಿದೆ. ಫಲಿತಾಂಶ ಚೆನ್ನಾಗಿದೆ.

ಸಂಗೀತದ ಗುಣಮಟ್ಟ ಪರವಾಗಿಲ್ಲ. ಅತ್ಯದ್ಭುತ ಎನ್ನುವಂತಿಲ್ಲ. ಆದರೆ ಜೊತೆಗೆ ನೀಡಿದ ಇಯರ್‌ಫೋನ್ ಸುಮಾರಾಗಿದೆ. ಕ್ರಿಯೇಟಿವ್ ಇಪಿ 630 ಇಯರ್‌ಫೋನ್ ಇದಕ್ಕಿಂತ ಚೆನ್ನಾಗಿದೆ. ಡೋಲ್ಬಿ ಸೌಲಭ್ಯವಿದೆ. ಈ ಸೌಲಭ್ಯ ಇಯರ್‌ಫೋನ್ ಮೂಲಕ ಆಲಿಸುವಾಗ ಮಾತ್ರ. ಸ್ಪೀಕರ್ ಮೂಲಕ ಆಲಿಸುವಾಗ ಈ ಸೌಲಭ್ಯ ಕೆಲಸ ಮಾಡುವುದಿಲ್ಲ. ಎಲ್ಲ ನಮೂನೆಯ ಆಡಿಯೊ ಮತ್ತು ವೀಡಿಯೊಗಳನ್ನು ಪ್ಲೇ ಮಾಡುತ್ತದೆ.ಇದರ ಜೊತೆ ರಬ್ಬರ‌್ಡಿಯಂ ಎಂಬ ಹೆಸರಿನ ಒಂದು ಸ್ಟೈಲಸ್ ಪೆನ್ ನೀಡಿದ್ದಾರೆ. ಇದು ಬಹುಮಟ್ಟಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಜೊತೆ ನೀಡಿರುವ ಪೆನ್‌ನಂತೆಯೇ ಕೆಲಸ ಮಾಡುತ್ತದೆ. ಇದನ್ನು ಬಳಸಿ ಪರದೆಯ ಮೇಲೆ ಮೂಡಿದ ಚಿತ್ರದ ಮೇಲೆ ಗೀಚಬಹುದು ಮತ್ತು ಟಿಪ್ಪಣಿ ಮಾಡಬಹುದು. ಇದರ ಹೆಸರೇ ಹೇಳುವಂತೆ ಇದರ ತುದಿ ಮೊನಚಾಗಿಲ್ಲ. ಬದಲಿಗೆ ರಬ್ಬರ್ ಇದೆ.  ಕೆಪಾಸಿಟಿವ್ ಪರದೆಯ ಮೇಲೆ ಬೆರಳಿನ ಬದಲಿಗೆ ಬಳಸಲು ಅನುಕೂಲ.

ತುಂಬ ಚಳಿ ಇರುವ ಸ್ಥಳಗಳಲ್ಲಿ ಮತ್ತು ದ್ವಿಚಕ್ರ ಸವಾರರು ಕೈಗೆ ಗ್ಲೌಸ್ ಹಾಕಿದ್ದಲ್ಲಿ ಕೆಪಾಸಿಟಿವ್ ಸ್ಪರ್ಶಸಂವೇದಿ ಪರದೆಯ ಮೇಲೆ ಕೆಲಸ ಮಾಡಲು ಆಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಇಂತಹ ಸ್ಟೈಲಸ್ ಪೆನ್ ಕೆಲಸಕ್ಕೆ ಬರುತ್ತದೆ (ಇಂತಹ ಸ್ಟೈಲಸ್ ಪೆನ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ). ಆದರೆ ಈ ಸ್ಟೈಲಸ್ ಪೆನ್ನನ್ನು ಫೋನಿನೊಳಗೆ ಇಡಲು ಸೂಕ್ತ ವ್ಯವಸ್ಥೆ ಇಲ್ಲ. ಆದುದರಿಂದ ಇದನ್ನು ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು.

ದೊಡ್ಡ ಪರದೆಗೆ ತಕ್ಕ ಬ್ಯಾಟರಿ ನೀಡಿಲ್ಲ. ಸಾಯಂಕಾಲದ ಹೊತ್ತಿಗೆ ಚಾರ್ಜರ್ ಹುಡುಕಬೇಕಾಗುತ್ತದೆ. ಒಂದು ಸಂತಸದ ಸಂಗತಿ ಎಂದರೆ ಹಲವು ಕಿರುತಂತ್ರಾಂಶಗಳಲ್ಲಿ ಕನ್ನಡ ಪಠ್ಯದ ವೀಕ್ಷಣೆ ಮಾಡಬಹುದು. ಕೆಲವು ಕಡೆ ಅಷ್ಟು ಸರಿಯಾಗಿ ಮೂಡಿಬರುವುದಿಲ್ಲ. Anysoftkeyboard ಮತ್ತು Kannada for anysoftkeyboard ಹಾಕಿಕೊಂಡು ಕನ್ನಡದಲ್ಲಿ ಪಠ್ಯ ಊಡಿಸಬಹದು. ಇದರ ಬೆಲೆ 34 ಸಾವಿರ ರೂ.ಗ್ಯಾಜೆಟ್ ಸಲಹೆ

ಬೀದರ್‌ನ ರತ್ನಕುಮಾರ ಅವರ ಪ್ರಶ್ನೆ:
ಪತ್ರಿಕಾ ಪ್ರಕಟಣೆಗಾಗಿ ಇಂಗ್ಲೀಷ್ ವರದಿಯನ್ನು ಕನ್ನಡಕ್ಕೆ ಭಾಷಾಂತರ ಮಾಡುವ ತಂತ್ರಾಂಶ ಇದೆಯಾ?

ಉ: ಪರಿಪೂರ್ಣವಾದುದು ಇಲ್ಲ. ಗೂಗ್ಲ್ ಅನುವಾದಕ (translate.google.com) ಬಳಸಿ ಸ್ವಲ್ಪ ಮಟ್ಟಿನ ಅನುವಾದ ಮಾಡಬಹುದು. ಆದರೆ ಅದರ ಫಲಿತಾಂಶ ಅಷ್ಟೇನೂ ತೃಪ್ತಿದಾಯಕವಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry