ಬುಧವಾರ, ಜೂನ್ 16, 2021
23 °C

ಎಲ್‌ಪಿಜಿ ನೇರ ಸಬ್ಸಿಡಿ: ಮೈಸೂರಲ್ಲಿ ನೀರಸ

ಪ್ರಜಾವಾಣಿ ವಾರ್ತೆ/ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಮೈಸೂರು: ಮುಂದಿನ 6 ತಿಂಗಳಿನಲ್ಲಿ ದೇಶದ 50 ಜಿಲ್ಲೆಗಳಲ್ಲಿ ಅಡುಗೆ ಅನಿಲಗಳ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಖಾತೆಗೆ ಜಮಾ ಮಾಡುವ ಯೋಜನೆ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ 2012-2013ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟ ಮಾಡಿರುವುದು ಮೈಸೂರಿನ ಜನತೆಯನ್ನು ಗೊಂದಲಕ್ಕೀಡು ಮಾಡಿದೆ.ನೇರ ಸಬ್ಸಿಡಿ ಪೈಲಟ್ ಯೋಜನೆ ಮೈಸೂರಿನಲ್ಲಿ 2011ರ ಆಗಸ್ಟ್‌ನಿಂದಲೇ ಜಾರಿಯಲ್ಲಿದೆ. ಆದರೆ ಮೈಸೂರಿನ ನಾಗರಿಕರಿಗೆ ಮಾತ್ರ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಶೇ 10ರಷ್ಟು ಕೂಡ ಈ ಯೋಜನೆಯ ಪ್ರಗತಿ ಆಗಿಲ್ಲ ಎಂದು ಇಲಾಖೆಯ ಮೂಲಗಳು ಹೇಳಿವೆ.ಭಾರತ್ ಪೆಟ್ರೋಲಿಯಂ, ಇಂಡೇನ್ ಮತ್ತು ಎಚ್‌ಪಿ ಕಂಪೆನಿಯ ತಲಾ ಒಂದೊಂದು ಏಜೆನ್ಸಿಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಯತ್ನಿಸಲಾಗುತ್ತಿದೆ. ಮೂರು ಏಜೆನ್ಸಿಗಳ ಸುಮಾರು 77 ಸಾವಿರ ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದರೂ ಇನ್ನೂ ಪೂರ್ಣ ಮಾಹಿತಿ ಲಭ್ಯವಾಗಿಲ್ಲ.ಈ ಯೋಜನೆ ಜಾರಿಗೆ ಆಧಾರ್ ಸಂಖ್ಯೆ ಕಡ್ಡಾಯ. ಗ್ರಾಹಕರ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಮುಂತಾದ ವಿವರಗಳನ್ನು ನೀಡುವಂತೆ  ಸೂಚಿಸಲಾಗಿದೆ. ರಾಜ್ಯದಲ್ಲಿ ಆಧಾರ್ ಸಂಖ್ಯೆ ನೀಡುವ ಯೋಜನೆಯನ್ನೂ ಕೂಡ ಮೈಸೂರಿನಲ್ಲಿ ಮೊದಲ ಬಾರಿಗೆ ಆರಂಭಿಸಲಾಗಿದ್ದರೂ ಇನ್ನೂ ಎಲ್ಲರಿಗೂ ಆಧಾರ ಸಂಖ್ಯೆ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ತೈಲ ಕಂಪೆನಿಗಳಿಗೆ ಗ್ರಾಹಕರ ವಿವರ ಲಭ್ಯವಾಗುತ್ತಿಲ್ಲ.ಗ್ರಾಹಕರಿಗೆ ಮಾರುಕಟ್ಟೆ ದರದಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ನೀಡುವುದು. ನಂತರ ಗ್ರಾಹಕರ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಜಮಾ ಮಾಡುವುದು ಈ ಯೋಜನೆಯ ಉದ್ದೇಶ. ಈಗ ಪ್ರತಿ ಸಿಲಿಂಡರ್‌ಗೆ 414.50 ರೂಪಾಯಿ ಪಡೆಯಲಾಗುತ್ತಿದೆ. ಒಂದು ಸಿಲಿಂಡರ್‌ಗೆ ಮಾರುಕಟ್ಟೆ ದರವನ್ನು ಆಧರಿಸಿ 300ರಿಂದ 350 ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ. ನೇರ ಸಬ್ಸಿಡಿ ಯೋಜನೆ ಕಡ್ಡಾಯವಾದರೆ ಗ್ರಾಹಕರು ಪ್ರತಿ ಸಿಲಿಂಡರ್‌ಗೆ ಸುಮಾರು 750 ರೂಪಾಯಿ ನೀಡಿ ಪಡೆಯಬೇಕಾಗುತ್ತದೆ.ಕಳೆದ ಆಗಸ್ಟ್ ತಿಂಗಳಿನಲ್ಲಿಯೇ ಮೂರು ಏಜೆನ್ಸಿಗಳ ವ್ಯಾಪ್ತಿಯಲ್ಲಿ ಪೈಲೆಟ್ ಯೋಜನೆ ಆರಂಭಿಸಲು ತೈಲ ಕಂಪೆನಿಗಳು ಬಯಸಿದ್ದರೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಲಿಲ್ಲ. ಕಂಪೆನಿಗಳು ತಿಳಿವಳಿಕೆ ನೀಡಿ ಒತ್ತಾಯ ಮಾಡಿದ್ದರಿಂದ ಕೆಲವು ಗ್ರಾಹಕರು ಮಾಹಿತಿ ನೀಡುತ್ತಿದ್ದಾರೆ ಎಂದು ಕಂಪೆನಿ ಅಧಿಕಾರಿಗಳು ತಿಳಿಸಿದರು.ವರ್ಷಕ್ಕೆ ನಿರ್ದಿಷ್ಟ ಪ್ರಮಾಣದ ಸಿಲಿಂಡರ್‌ಗಳನ್ನು ಒದಗಿಸುವುದು, ಅಡುಗೆ ಅನಿಲ ಸಿಲಿಂಡರ್‌ಗಳ ದುರುಪಯೋಗ ತಪ್ಪಿಸುವುದು, ಒಂದೇ ಕುಟುಂದವರು ಹಲವಾರು ಸಂಪರ್ಕ ಹೊಂದುವುದನ್ನು ತಪ್ಪಿಸುವುದು ಈ ಯೋಜನೆಯ ಉದ್ದೇಶ. ಕಳೆದ ಆಗಸ್ಟ್‌ನಲ್ಲಿಯೇ 3 ಏಜೆನ್ಸಿಗಳ ವ್ಯಾಪ್ತಿಯಲ್ಲಿ ಯೋಜನೆ ಚಾಲ್ತಿಗೆ ಬಂದಿದ್ದರೂ ಇನ್ನೂ ಶೇ 10ರಷ್ಟು ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 28 ಅಡುಗೆ ಅನಿಲ ವಿತರಕರಿದ್ದು 5.30 ಲಕ್ಷ ಗ್ರಾಹಕರಿದ್ದಾರೆ. ಸ್ಪಷ್ಟ ನಿರ್ದೇಶನ ಇಲ್ಲ: ಈ ಯೋಜನೆ ಕೇಂದ್ರ ಸರ್ಕಾರದ ಯೋಜನೆ. ಕೆಲವು ಏಜೆನ್ಸಿಗಳು ಗ್ರಾಹಕರ ಬ್ಯಾಂಕ್ ಖಾತೆ ಮಾಹಿತಿ ಪಡೆದುಕೊಳ್ಳುತ್ತಿವೆ. ಆದರೆ ಈ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕಿ ಕುಮುದ ಗಿರೀಶ್ ಪ್ರಜಾವಾಣಿಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.