ಎಲ್‌ಪಿಜಿ ಮಿತಿ ಸಡಿಲಿಕೆ ಇಲ್ಲ

7

ಎಲ್‌ಪಿಜಿ ಮಿತಿ ಸಡಿಲಿಕೆ ಇಲ್ಲ

Published:
Updated:

ಮಾರುಕಟ್ಟೆ ದರದಲ್ಲಿ ಖರೀದಿಸುವ ಸಿಲಿಂಡರ್‌ಗೆ ಯಾವುದೇ ಮಿತಿ ಇಲ್ಲ

ನವದೆಹಲಿ (ಪಿಟಿಐ): ಸಬ್ಸಿಡಿ ಸೌಲಭ್ಯದ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಮೇಲೆ ಹೇರಲಾಗಿರುವ ವಾರ್ಷಿಕ 6ರ ಮಿತಿ ರದ್ದುಪಡಿಸುವ ಅಥವಾ ಮಾರ್ಪಾಡು ಮಾಡುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದೆ.ಮಿತಿ ರದ್ದುಪಡಿಸಿದರೆ ಅಥವಾ ಮಾರ್ಪಾಡು ಮಾಡಿದರೆ ಒಟ್ಟಾರೆ ಆರ್ಥಿಕ ಸುಧಾರಣಾ ಪ್ರಕ್ರಿಯೆಗೆ ಹಿನ್ನಡೆ ಉಂಟಾಗಲಿದೆ. ಹೀಗಾಗಿ ಎಲ್‌ಪಿಜಿ ಮಿತಿಯಲ್ಲಿ ಯಾವುದೇ ಸಡಿಲಿಕೆ ಇರಲಾರದು ಎಂದು ಅಧಿಕೃತ ಮೂಲಗಳು ತಿಳಿಸಿವೆ.ಸಬ್ಸಿಡಿ ಹೊರೆ ಕಡಿಮೆ ಮಾಡುವ ಉದ್ದೇಶದಿಂದ, ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆರು ಸಬ್ಸಿಡಿ ಸಹಿತದ ಸಿಲಿಂಡರ್ ಸರಬರಾಜು ಮಾಡುವ ನಿರ್ಧಾರವನ್ನು ಸರ್ಕಾರವು  ಸೆಪ್ಟೆಂಬರ್ 13ರಂದು ತೆಗೆದುಕೊಂಡಿದೆ. ಇದಕ್ಕಿಂತ ಹೆಚ್ಚಿನ ಪ್ರಮಾಣದ ಸಿಲಿಂಡರ್‌ಗಳು ಬೇಕಾದಲ್ಲಿ ಮಾರುಕಟ್ಟೆ ದರದಲ್ಲಿ ಖರೀದಿಸಬೇಕು ಎಂದು ಸೂಚಿಸಲಾಗಿದೆ.ಸಬ್ಸಿಡಿ ಸಹಿತದ ಸಿಲಿಂಡರ್ ಮೇಲಿನ ಮಿತಿಯನ್ನು ಸಡಿಲಗೊಳಿಸಿದರೆ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಎಫ್‌ಡಿಐಗೆ ಅವಕಾಶ ಸೇರಿದಂತೆ ಇತರ ಸುಧಾರಣಾ ಕ್ರಮಗಳನ್ನೂ ಬದಲಾಯಿಸಬೇಕು ಎಂಬ ಒತ್ತಡ ಬರಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.2012ರ ಏಪ್ರಿಲ್‌ನಿಂದ ಆರಂಭವಾದ ಪ್ರಸಕ್ತ ಸಾಲಿನ ಹಣಕಾಸು  ವರ್ಷದ ಮೊದಲ ಆರು ತಿಂಗಳಲ್ಲಿ ಎಷ್ಟೇ ಸಿಲಿಂಡರ್‌ಗಳನ್ನು ಬಳಸಿದ್ದರೂ ಉಳಿದ ಆರು ತಿಂಗಳ ಅವಧಿಯಲ್ಲಿ ಅಂದರೆ 2013ರ ಮಾರ್ಚ್ 31ರವರೆಗಿನ ಅವಧಿಯಲ್ಲಿ  ಸಬ್ಸಿಡಿ ಸೌಲಭ್ಯದ ಮೂರು ಸಿಲಿಂಡರ್‌ಗಳು ಮಾತ್ರ ಲಭ್ಯವಾಗಲಿವೆ ಎಂದು ಪೆಟ್ರೋಲಿಯಂ ಖಾತೆಯ ಸಚಿವ ಜೈಪಾಲ್ ರೆಡ್ಡಿ ತಿಳಿಸಿದ್ದಾರೆ.ಸಬ್ಸಿಡಿ ಇರುವ ಮೂರು ಸಿಲಿಂಡರ್ ಬಳಸಿದ ನಂತರ ಮಾರುಕಟ್ಟೆ ದರದಲ್ಲಿ ಖರೀದಿಸುವ ಸಿಲಿಂಡರ್‌ಗೆ ಯಾವುದೇ ಮೀತಿ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.2013ರ ಏಪ್ರಿಲ್ ಒಂದರಿಂದ ವರ್ಷಕ್ಕೆ ಸಬ್ಸಿಡಿ ಸೌಲಭ್ಯದ ಆರು ಸಿಲಿಂಡರ್ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ.ಸಬ್ಸಿಡಿ ಸೌಲಭ್ಯದ ಮತ್ತು ಸಬ್ಸಿಡಿಯೇತರ ಸಿಲಿಂಡರ್‌ಗಳ ಸರಬರಾಜಿನಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದೂ ತೈಲ ಕಂಪೆನಿಗಳು ಭರವಸೆ ನೀಡಿವೆ.ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳಿಗೆ  ಬೇಡಿಕೆ ಹೆಚ್ಚುತ್ತದೆ. ಬೇಡಿಕೆಗೆ ಅನುಗುಣವಾಗಿ ಸರಬರಾಜಿಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಹೊಸ ಸಂಪರ್ಕಕ್ಕೆ ನಿರ್ಬಂಧವಿಲ್ಲ

ನವದೆಹಲಿ (ಪಿಟಿಐ): ಒಂದಕ್ಕಿಂತ ಹೆಚ್ಚು ಸಂಪರ್ಕ ಹೊಂದಿರುವ ಗ್ರಾಹಕರ ಸಮೀಕ್ಷೆಯ ನಂತರ ಸಬ್ಸಿಡಿ ಸೌಲಭ್ಯದ ಹೊಸ ಸಂಪರ್ಕಗಳನ್ನು ನೀಡಲಾಗುತ್ತದೆ. ಹೊಸ ಸಂಪರ್ಕಗಳಿಗೆ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ ಎಂದು ತೈಲ ಕಂಪೆನಿಗಳು ಸ್ಪಷ್ಟಪಡಿಸಿವೆ.ಗ್ರಾಹಕರ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕುವ ಉದ್ದೇಶದಿಂದ ವಿತರಕರಿಗೆ  `ನಿಮ್ಮ ಗ್ರಾಹಕರ ಬಗ್ಗೆ ತಿಳಿದುಕೊಳ್ಳಿ~ ( ಕೆವೈಸಿ)  ಯೋಜನೆ  ಜಾರಿ ಮಾಡಲಾಗುತ್ತಿದ್ದು,  ಹೊಸ ನಮೂನೆಗಳನ್ನು ವಿತರಿಸಲಾಗುತ್ತದೆ.

 

ಇದೇ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಸಂಪರ್ಕ ಹೊಂದಿದ ಗ್ರಾಹಕರ ಮಾಹಿತಿಗಳನ್ನೂ ಕಲೆ ಹಾಕಲಾಗುತ್ತದೆ. ಇದಾದ ನಂತರ  ಹೊಸ ಸಂಪರ್ಕಗಳ ಅರ್ಜಿ ವಿಲೇವಾರಿ ಮಾಡಲಾಗುತ್ತದೆ ಎಂದು ತೈಲ ಕಂಪೆನಿಗಳು           ತಿಳಿಸಿವೆ.ಹೊಸ ಸಂಪರ್ಕ ಬಯಸುವವರೂ `ಕೆವೈಸಿ~ ನಮೂನೆ ಭರ್ತಿ ಮಾಡಿಕೊಡುವುದು ಕಡ್ಡಾಯ. ಈ ನಮೂನೆಯ ಜತೆಗೆ ಗುರುತಿನ ಮತ್ತು ವಿಳಾಸದ ಪುರಾವೆಯನ್ನೂ ಒದಗಿಸಬೇಕಾಗುತ್ತದೆ.

 

ಪಾರದರ್ಶಕತೆಗೆ ಹೊಸ ತಂತ್ರಜ್ಞಾನ

ಮುಂಬೈ (ಪಿಟಿಐ): ಸಬ್ಸಿಡಿ ಸೌಲಭ್ಯ ಇರುವ `ಎಲ್‌ಪಿಜಿ~ ಬಳಕೆಯ ಮೇಲೆ ಮಿತಿ ಹೇರಿರುವುದರಿಂದ ಸಿಲಿಂಡರ್‌ಗಳ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹೊಸ ತಂತ್ರಜ್ಞಾನ ಅಳವಡಿಸಲಾಗುತ್ತಿದೆ ಎಂದು ತೈಲ ಮಾರುಕಟ್ಟೆ ಕಂಪೆನಿಗಳ ಮೂಲಗಳು ತಿಳಿಸಿವೆ.ದೇಶದಾದ್ಯಂತ ಇರುವ ನೋಂದಾಯಿತ 14 ಕೋಟಿ ಗ್ರಾಹಕರಿಗೆ  ಬಾರ್ ಕೋಡಿಂಗ್, `ಆರ್‌ಎಫ್‌ಐಡಿ~ ಮತ್ತು `ಜಿಪಿಆರ್‌ಎಸ್~ ವ್ಯವಸ್ಥೆಯ ಮೂಲಕ ಸಿಲಿಂಡರ್‌ಗಳನ್ನು ವಿತರಿಸಲು ಉದ್ದೇಶಿಸಲಾಗಿದೆ. ಈ ವ್ಯವಸ್ಥೆಯನ್ನು ಮುಂದಿನ ಮಾರ್ಚ್‌ನಿಂದ ಜಾರಿಗೆ ತರಲಾಗುತ್ತದೆ ಎಂದು ಬಿಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಜಾರ್ಜ್ ಪೌಲ್ ತಿಳಿಸಿದ್ದಾರೆ.

ಸಬ್ಸಿಡಿ ಸಿಲಿಂಡರ್ ಬಳಕೆಯ ಮೇಲೆ ಮಿತಿ ಹೇರಿರುವುದರಿಂದ ಹೊಸ ವ್ಯವಸ್ಥೆಯನ್ನು ತ್ವರಿತವಾಗಿ ಜಾರಿ ಮಾಡುವ ಅನಿವಾರ್ಯತೆ ಉದ್ಭವಿಸಿದೆ. ಈಗ ಗೃಹ ಬಳಕೆ ಗ್ರಾಹಕರ ಕಾರ್ಡ್ ವ್ಯವಸ್ಥೆ ಜಾರಿಯಲ್ಲಿದ್ದು ಅನೇಕ ಗ್ರಾಹಕರು ಕಾರ್ಡ್‌ಗಳನ್ನು ಕಳೆದುಕೊಂಡಿರುವುದರಿಂದ ಬಳಸಿದ ಸಿಲಿಂಡರ್‌ಗಳ ಲೆಕ್ಕ ಸರಿಯಾಗಿ ಸಿಗುತ್ತಿಲ್ಲ. ಆದ್ದರಿಂದ ಗ್ರಾಹಕರು ಇನ್ನು ಮುಂದೆ ತಮ್ಮ ವಿತರಕರ ಬಳಿಗೆ ಹೋಗಿ `ಕೆವೈಸಿ~ ನಮೂನೆ ಪಡೆದು ಭರ್ತಿ ಮಾಡಿಕೊಡಬೇಕಾಗುತ್ತದೆ ಎಂದೂ ಪೌಲ್ ತಿಳಿಸಿದ್ದಾರೆ.

ಸಬ್ಸಿಡಿ ರಹಿತ ಸಿಲಿಂಡರ್‌ಗೆ ರೂ 1200?

ಚಳಿಗಾಲದಲ್ಲಿ ಬೇಡಿಕೆ ಹೆಚ್ಚುವುದರಿಂದ ಡಿಸೆಂಬರ್ ವೇಳೆಗೆ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಸುಮಾರು ರೂ 1200 ಆಗಬಹುದೆಂದು ಅಂದಾಜಿಸಲಾಗಿದೆ. ಆಮದು ವೆಚ್ಚ ಆಧರಿಸಿ ಬೆಲೆಯನ್ನು ಪ್ರತಿ ತಿಂಗಳೂ ಪರಿಷ್ಕರಿಸುವ ಸ್ವಾತಂತ್ರ್ಯವನ್ನು ತೈಲ ಕಂಪೆನಿಗಳಿಗೆ ನೀಡಿರುವುದರಿಂದ ಈ ಬೆಲೆ ವ್ಯತ್ಯಾಸ ಆಗಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry