ಎಲ್‌ಪಿಜಿ ಸಿಲಿಂಡರ್ ರೂ 11.42 ದುಬಾರಿ

7

ಎಲ್‌ಪಿಜಿ ಸಿಲಿಂಡರ್ ರೂ 11.42 ದುಬಾರಿ

Published:
Updated:

ನವದೆಹಲಿ (ಪಿಟಿಐ): ಸರ್ಕಾರವು ವಿತರಕರಿಗೆ ನೀಡುವ ಕಮಿಷನ್ ಹೆಚ್ಚಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಶನಿವಾರದಿಂದ ಅಡುಗೆ ಅನಿಲ ಸಿಲಿಂಡರ್ (ಎಲ್‌ಪಿಜಿ) ಬೆಲೆ 11.42 ರೂಪಾಯಿ ಹೆಚ್ಚಾಗಿದೆ.ವಿತರಕರಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ ಇನ್ನೂ 23 ಪೈಸೆ ಹಾಗೂ ಡೀಸೆಲ್‌ಗೆ 10 ಪೈಸೆಯಷ್ಟು ಕಮಿಷನ್ ಹೆಚ್ಚಿಸಲು ಇಂಧನ ಸಚಿವಾಲಯ ಮುಂದಾಗಿರುವ ಕಾರಣ ಇವೆರಡರ ಬೆಲೆ ಕೂಡ ತುಸು ಹೆಚ್ಚಳವಾಗುವ ಸಾಧ್ಯತೆ ಇದೆ.`ಎಲ್‌ಪಿಜಿ ವಿತರಕರಿಗೆ ಪ್ರತಿ ಸಿಲಿಂಡರ್‌ಗೆ ನೀಡುತ್ತಿದ್ದ ರೂ 25.83 ರಿಂದ 37.25 ರೂಪಾಯಿಗೆ ಹೆಚ್ಚಿಸಿ ಶುಕ್ರವಾರ ಸಚಿವಾಲಯವು ಆದೇಶ ಹೊರಡಿಸಿದೆ. ಇದನ್ನು ಗ್ರಾಹಕರು ಭರಿಸಬೇಕಾಗುತ್ತದೆ~ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ಸಬ್ಸಿಡಿಯಲ್ಲಿ ನೀಡಿರುವ ಎಲ್‌ಪಿಜಿ ಸಿಲಿಂಡರ್ ಮಿತಿಯನ್ನು ಕೇವಲ ಆರಕ್ಕೆ ಸೀಮಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದ ವಾರದಲ್ಲಿಯೇ ಎಲ್‌ಪಿಜಿ ಬೆಲೆ ಏರಿಕೆಯಾಗಿದೆ.ಮಾರುಕಟ್ಟೆ ದರ ಅಥವಾ ಸಬ್ಸಿಡಿ ರಹಿತ ಎಲ್‌ಪಿಜಿ ವಿತರಣೆಗೆ ನೀಡುವ ಕಮಿಷನ್ ಕೂಡ ಪ್ರತಿ ಸಿಲಿಂಡರ್‌ಗೆ ರೂ 12.17ರಿಂದ ರೂ 38ರಷ್ಟು ಹೆಚ್ಚಳವಾಗಿದೆ. ಆ ಪ್ರಕಾರ ಸಬ್ಸಿಡಿ ರಹಿತ ಪ್ರತಿ ಸಿಲಿಂಡರ್ ಬೆಲೆ ರೂ 883.5ರಿಂದ ರೂ 921.5ರಷ್ಟು ಹೆಚ್ಚಳವಾಗಲಿದೆ. ಸರ್ಕಾರವು 5 ಕೆ.ಜಿ. ಸಿಲಿಂಡರ್‌ಗಳಿಗೆ ನೀಡುವ ಕಮಿಷನ್ ಹಣವನ್ನು ರೂ 5.33ರಿಂದ ರೂ18.63ಕ್ಕೆ ಏರಿಸಿದೆ.ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕ್ರಮವಾಗಿ 67 ಪೈಸೆ ಹಾಗೂ 42 ಪೈಸೆಯೊಳಗೆ ಏರಿಸುವ ಚಿಂತನೆ ನಡೆಯುತ್ತಿದೆ. ಪ್ರಸ್ತುತ ವಿತರಕರು ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟಕ್ಕೆ ಕ್ರಮವಾಗಿ ರೂ 1.49 ಹಾಗೂ 0.91 ಪೈಸೆಯಷ್ಟು ಕಮಿಷನ್ ಪಡೆಯುತ್ತಿದ್ದಾರೆ.ಇನ್ನು ಮುಂದೆ ಅಂದಾಜಿನ ಪ್ರಕಾರ (ತೆರಿಗೆ ಹೊರತುಪಡಿಸಿ) ಸಬ್ಸಿಡಿ ಎಲ್‌ಪಿಜಿ ಪ್ರತಿ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ ರೂ 408ರಿಂದ 419.42ಕ್ಕೆ ದೆಹಲಿಯಲ್ಲಿ ರೂ 339ರಿಂದ 410.42ಕ್ಕೆ ಹೆಚ್ಚಲಿದೆ. ಕೋಲ್ಕತ್ತದಲ್ಲಿ ರೂ 412.42, ಮುಂಬೈನಲ್ಲಿ ರೂ 434.42 ಹಾಗೂ ಚೆನ್ನೈನಲ್ಲಿ ರೂ 397.92ಕ್ಕೆ ಏರಿಕೆ ಆಗಲಿದೆ.                   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry