ಎಳನೀರು ನೋಡಿ ಇದರ ಕಾರುಬಾರು

7

ಎಳನೀರು ನೋಡಿ ಇದರ ಕಾರುಬಾರು

Published:
Updated:

ದಿ ನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆ, ಕೈಗಾರಿಕೀಕರಣ ಮತ್ತು ಬದಲಾದ ಜೀವನಶೈಲಿಯಿಂದ ಸಾಕಷ್ಟು ಕೃತಕ ಪಾನೀಯಗಳು ಮಾರುಕಟ್ಟೆಯಲ್ಲಿ ಬೇರೂರಿವೆ. ನಿಸರ್ಗದತ್ತ ಹಣ್ಣುಗಳಿಂದ ತಯಾರಿಸಿದ ಪಾನೀಯಗಳು ಲಭ್ಯವಿದ್ದರೂ ಕೃತಕ ಪಾನೀಯಗಳನ್ನು ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ.ಆದಾಗ್ಯೂ ಕೃತಕ ಪಾನೀಯಗಳ ಬಳಕೆಯಿಂದ ಉಂಟಾಗಬಹುದಾದ ದುಷ್ಪರಿಣಾಮಗಳಿಂದ ಜನರ ಗಮನ ನೈಸರ್ಗಿಕ ಮೂಲಗಳತ್ತ ಹರಿಯುತ್ತಿದೆ. ಇಂತಹ ನಿಸರ್ಗಜನ್ಯ ಪೇಯಗಳಲ್ಲಿ ಎಳನೀರು ಅತ್ಯುತ್ತಮವಾದ ಆರೋಗ್ಯಕರ ಪಾನೀಯ.ಕೆಳಗೆ ಉಪ್ಪು ನೀರು ಕುಡಿದರೂ ಮುಡಿಯಲ್ಲಿ ಸಿಹಿ ನೀರನ್ನು ಧರಿಸಿ, ದಿಟ್ಟವಾಗಿ ಯಾರಿಗೂ ಜಗ್ಗದೆ ಬಗ್ಗದೆ ಸೆಟೆದು ನಿಲ್ಲುವ ತೆಂಗು ತನ್ನ ಹಲವಾರು ಗುಣಗಳಿಂದ ಸರ್ವಾಂತರ್ಯಾಮಿಯಾಗಿದೆ. ಅದರಲ್ಲೂ ಬೇಸಿಗೆ ಹತ್ತಿರವಾದಂತೆಲ್ಲಾ ಎಲ್ಲೆಲ್ಲೂ ಕಾಣಸಿಗುವ ತಂಪಾದ ಎಳನೀರು ಹಲವಾರು ಬಗೆಯ  ಔಷಧೀಯ ಗುಣಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ.ಇದರ ಪೋಷಕಾಂಶ ದೈಹಿಕ ಬೆಳವಣಿಗೆಗೆ ಸಹಕಾರಿ. ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ತಂಪಾಗಿಸುತ್ತದೆ. ಎಳನೀರನ್ನು ದೇಹದ ಭಾಗಗಳಿಗೆ ಲೇಪಿಸುವುದರಿಂದ ಬೇಸಿಗೆಯಲ್ಲಿ ಉಂಟಾಗಬಹುದಾದ ಉರಿಯನ್ನು ಕಡಿಮೆ ಮಾಡಬಹುದು.ಇದು ಮಕ್ಕಳಿಂದ ವಯೋವೃದ್ಧರವರೆಗೆ ಉತ್ತಮವಾದ ಶಕ್ತಿ ವರ್ಧಕವಾಗಿ ಕಾರ್ಯ ನಿರ್ವಹಿಸುವುದಲ್ಲದೆ, ಪೋಷಕಾಂಶಗಳ ಕೊರತೆಯನ್ನು ನಿವಾರಿಸುತ್ತದೆ. ಮೂತ್ರಕೋಶ ಸಂಬಂಧಿ ತೊಂದರೆ ನಿವಾರಣೆಗೂ ಸಹಕಾರಿ.ನಮ್ಮ ಪುರಾತನ ಆರ್ಯುವೇದ ಚಿಕಿತ್ಸೆಯಲ್ಲಿ ಹೃದಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಎಳನೀರಿನ ಪರಿಹಾರವನ್ನು ಸೂಚಿಸಲಾಗಿದೆ. ಅದರಲ್ಲಿರುವ ಎಲ್-ಆರ್ಜಿನೈನ್, ಮೆಗ್ನೀಶಿಯಂ, ಪೊಟಾಷಿಯಂ, ಜೀವಸತ್ವ ಸಿ ಅಂಶಗಳು ಹೃದಯ ತೊಂದರೆಯ ನಿವಾರಣೆಗೆ ನೆರವಾಗುತ್ತವೆ.

 

ಐಸೋಪೆಂಟಾನಾಲ್‌ಗಳಿಂದ ಬರಬಹುದಾದ ವೆುಯೋಕಾರ್ಡಿಯಲ್ ನಂಜಿನಂತಹ ಸಮಸ್ಯೆಗಳಿಗೆ ಎಳನೀರು ಉತ್ತರವಾಗಬಲ್ಲದು. ಇದು ಎದೆ ಉರಿಯನ್ನು ಕಡಿಮೆ ಮಾಡುತ್ತದಲ್ಲದೆ, ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಟ್ಟು ಹೃದಯ ಬಡಿತವನ್ನು ಸುಧಾರಿಸುತ್ತದೆ.ಉದರ ತೊಂದರೆಗಳು

ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಎಳನೀರಿನ ಅವಶ್ಯಕತೆ ಬಹಳಷ್ಟಿರುತ್ತದೆ. ಅದರಲ್ಲಿ ನೇರವಾಗಿ ಸಿಗಬಹುದಾದ ಸಕ್ಕರೆ ಅಂಶವು ಹೆಚ್ಚಿರುವುದರಿಂದ ದಣಿವು ನೀಗಲು ಪರಿಣಾಮಕಾರಿಯಾಗಿದೆ.ಆರ್ಯುವೇದದಲ್ಲಿ ನಮೂದಿಸಿರುವ ಹಾಗೆ ಎಳನೀರು ಹಲವಾರು ಉದರ ಸಂಬಂಧಿ ತೊಂದರೆಗಳ ನಿವಾರಣೆಗೆ ಅತ್ಯುತ್ತಮ ಪಾನೀಯ. ಸಾಮಾನ್ಯವಾಗಿ ಉಂಟಾಗಬಹುದಾದ ಭೇದಿ/ ಅತಿಸಾರ ಮುಂತಾದ ತೊಂದರೆಗಳಿಗೆ ಅದು ರಾಮಬಾಣ. ಹೀಗಾಗಿ ಉಷ್ಣ ವಲಯಗಳಲ್ಲಿ ಎಳನೀರು ಅತಿ ಹೆಚ್ಚು ಬಳಕೆಯಲ್ಲಿದೆ.ಶ್ರೀಲಂಕಾ, ಭಾರತ, ಬಾಂಗ್ಲಾ ದೇಶ, ಇಂಡೊನೇಷ್ಯಾಗಳಲ್ಲಿ ಕಾಲರಾ ರೋಗದ ನಿಯಂತ್ರಣಕ್ಕೆ ಎಳನೀರಿನೊಂದಿಗೆ ನಿಂಬೆರಸವನ್ನು ಬೆರೆಸಿ ನೀಡಲಾಗುತ್ತಿತ್ತು. ಇದರಿಂದ ರೋಗಿಗಳ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿತ್ತು. ಎಳನೀರಿನಲ್ಲಿರುವ ಸಲಾರಿನ್ ಮತ್ತು ಆಲ್ಬುಮಿನ್ ಅಂಶಗಳು ಕಾಲರಾ ರೋಗಿಗಳಲ್ಲಿ ವಾಂತಿಯಾಗದಂತೆ ತಡೆಯುತ್ತದೆ.ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಬುಡಕಟ್ಟು ಜನಾಂಗದವರು ಹೊಟ್ಟೆ ನೋವಿನ ನಿವಾರಣೆಗೆ ನೋನಿ ಮತ್ತು Alstinia macrophilla ಎಲೆಗಳನ್ನು ಅರೆದು ಎಳನೀರಿನೊಂದಿಗೆ ಮಿಶ್ರಣ ಮಾಡಿ ಸೇವಿಸುತ್ತಾರೆ.ಒಂದು ಚಮಚ ಮೆಂತ್ಯವನ್ನು ಎಳನೀರಿನಲ್ಲಿ ಒಂದು ರಾತ್ರಿ ನೆನೆಸಿ ಮುಂಜಾವಿನಲ್ಲಿ ಕುಡಿಯುವುದರಿಂದ ಮೈ ಕೈ ನೋವು ಕಡಿಮೆಯಾಗುತ್ತದೆ. ಪ್ರಖ್ಯಾತ ಪ್ರಕೃತಿ ಚಿಕಿತ್ಸಾ ವ್ಶೆದ್ಯರಾದ ಸಾಧವ ದುಬೆ `ನಮ್ಮ ಆಹಾರ ಪದ್ಧತಿಯನ್ನು ಎಳನೀರು, ನಿಂಬೆ ರಸ, ಹಣ್ಣುಗಳು ಮತ್ತು ಹಸಿ ತರಕಾರಿಗಳಿಗೆ ಬದಲಾಯಿಸಿದರೆ ಕ್ಯಾನ್ಸರ್ ರೋಗವನ್ನು ದೂರವಿಡಬಹುದು~ ಎಂದು ಹೇಳುತ್ತಾರೆ.ಕ್ರೀಡಾಪಟುಗಳಿಗೆ ಎಳನೀರು ಉತ್ತಮ ಪಾನೀಯ. ಇದರಲ್ಲಿನ ಹೆಚ್ಚಿನ ಪ್ರಮಾಣದ ಪೊಟಾಷಿಯಂ ಮತ್ತು ಸಕ್ಕರೆ ಅಂಶವು ಅಧಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಸಣ್ಣ ಮಕ್ಕಳಿಗೆ ಎಳನೀರನ್ನು ಜಂತುಹುಳುಗಳ ನಿವಾರಣೆಗಾಗಿ ನೀಡುವ ರೂಢಿ ಇದೆ. ಮಕ್ಕಳ ಉದರ ತೊಂದರೆ ನಿವಾರಣೆಗೂ ಇದು ಉಪಕಾರಿ.ಅಷ್ಟೇ ಅಲ್ಲದೆ ಹೆಚ್ಚು ಪ್ರಖ್ಯಾತವಾಗಿರುವ ಜೈವಿಕ ಅಂಗಾಂಶ ಕೃಷಿಯ ಸಸಿಗಳ ಉತ್ಪಾದನೆಯಲ್ಲಿ ಎಳನೀರನ್ನು ಬಳಸಲಾಗುತ್ತಿದೆ. ಇದರಲ್ಲಿರುವ ಸಸ್ಯ ಪ್ರಚೋದಕಗಳಾದ ಸೈಟೋಕೈನಿನ್, ಜಿಬ್ಬರೆಲಿನ್ ಮತ್ತು ಅಕ್ಸಿನ್‌ಗಳು ಸಸ್ಯ ಅಂಗಾಂಶ ವರ್ಧನೆ ಮತ್ತು ಬೆಳವಣಿಗೆಗೆ ನೆರವಾಗುತ್ತವೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ, ಕಾಸರಗೋಡು ಇಲ್ಲಿಯ ವಿಜ್ಞಾನಿ ಡಾ. ಮಹೇಶ್ವರಪ್ಪ ಅವರನ್ನು ಸಂಪರ್ಕಿಸಬಹುದು ದೂರವಾಣಿ- 09495103236ಎಳನೀರಿನ ಪ್ರಾಮುಖ್ಯತೆ

ಎಳನೀರಿನಲ್ಲಿ ಶೇ 5ರಷ್ಟು ಸಕ್ಕರೆ ಅಂಶ ಇರುತ್ತದೆ. ಇದು ಮುಖ್ಯವಾಗಿ ಫ್ರುಕ್ಟೋಸ್ ಮತ್ತು ಸುಕ್ರೋಸ್‌ನ ರೂಪದಲ್ಲಿರುತ್ತದೆ. ಸಿ ಮತ್ತು ಬಿ ಜೀವಸತ್ವಗಳು ಎಳನೀರಿನಲ್ಲಿ ಹೆಚ್ಚಾಗಿದ್ದು, ಕಾಯಿ ಬಲಿತಂತೆಲ್ಲಾ ಕಡಿಮೆಯಾಗುತ್ತವೆ. ಸುಮಾರು ಪ್ರತಿ 100 ಮಿ.ಲೀ ಎಳನೀರಿನಲ್ಲಿ 2.2-3.7 ಮಿ.ಗ್ರಾಂನಷ್ಟು ಸಿ ಜೀವಸತ್ವ ಇರುತ್ತದೆ.ಎಳನೀರಿನಲ್ಲಿರುವ ಪ್ರಮುಖ ಅಮೈನೋ ಆಮ್ಲಗಳು (ಆರ್ಜಿನೈನ್, ಅಲನಿನ್ ಮತ್ತು ಸಿಸ್ಟೈನ್) ಹಸುವಿನ ಹಾಲಿನಲ್ಲಿರುವ ಅಂಶಕ್ಕಿಂತ ಹೆಚ್ಚಾಗಿರುತ್ತವೆ. ಇದರಲ್ಲಿ ಶೇ 0.12ನಷ್ಟು ಕೊಬ್ಬಿನಾಂಶವಿದ್ದು ಬಲಿತ ಕೊಬ್ಬರಿಗಿಂತ ಕಡಿಮೆ ಇರುತ್ತದೆ. ತೆಂಗಿನ ಸ್ವಾದಿಷ್ಟ ಗುಣಕ್ಕೆ ಡೆಲ್ಟಾ ಲ್ಯಾಕ್ಟೋನ್ ಎಂಬ ಅಂಶ ಮುಖ್ಯ ಕಾರಣವಾಗಿದೆ.ಕಾಯಿ ಬಲಿತಂತೆಲ್ಲಾ ಈ ಅಂಶ ಕ್ಷೀಣಿಸುವುದರಿಂದ ಸ್ವಾದಿಷ್ಟತೆ ಕಡಿಮೆಯಾಗುತ್ತದೆ. ತೆಂಗಿನ ಈ ವಿಶಿಷ್ಟ ಗುಣವನ್ನು ಬೆಳವಣಿಗೆಯ ಎಲ್ಲ ಹಂತಗಳಲ್ಲೂ ಹಿಡಿದಿಡುವುದು ಅಸಾಧ್ಯವಾಗಿರುವುದೇ ಎಳನೀರಿನ ವೈಶಿಷ್ಟ್ಯಕ್ಕೆ ಕಾರಣ.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry