ಮಂಗಳವಾರ, ಮೇ 24, 2022
30 °C

ಎಳನೀರು ಮಾರಾಟ;ಟೆಂಡರ್ ಪ್ರಕ್ರಿಯೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ನಗರದಲ್ಲಿ ಎಳನೀರು ಮಾರಾಟಕ್ಕೆ ಪುರಸಭೆಯ ಟೆಂಡರ್ ಕರೆದಿರುವುದನ್ನು ತಕ್ಷಣ ರದ್ದು ಪಡಿಸಬೇಕು. ರೈತರ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ತಾಲ್ಲೂಕು ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಮಂಗಳವಾರ ಪುರಸಭೆ ಮುಂದೆ ಪ್ರತಿಭಟನೆ ನಡೆಸಲಾಯಿತು.ತೆಂಗಿನ ಸಸಿ ನೆಡಲು ಆರ್ಥಿಕ ನೆರವು ನೀಡಿದ್ದೀರಾ? ಗೊಬ್ಬರ ಕೊಟ್ಟಿದ್ದೀರಾ? ನೀರು ಕೊಟ್ಟಿದ್ದೀರಾ? ಏನೂ ಕೊಡದ ಮೇಲೆ ಪುರಸಭೆಯವರಿಗೆ ತೆರಿಗೆ ಹಾಕಲು ಏನು ಹಕ್ಕಿದೆ. ಬೆಳೆಗಾರರು ಮುಕ್ತವಾಗಿ ಎಳನೀರು, ತರಕಾರಿ ಮಾರಾಟ ಮಾಡಲು ಅವಕಾಶ ಕೊಡಿ ಎಂದು ಸಂಘದ ಅಧ್ಯಕ್ಷ ಎಚ್. ತಿಪ್ಪೇಸ್ವಾಮಿ ಒತ್ತಾಯ ಮಾಡಿದರು.ಕಳೆದ ವರ್ಷ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕರು ಒತ್ತಾಯ ಮಾಡಿದ್ದರಿಂದ ಎಳನೀರು ಹರಾಜು ರದ್ದುಪಡಿಸಲಾಗಿತ್ತು. ಆದರೆ, ಮತ್ತೆ ಪುರಸಭೆ ಆಡಳಿತ ನಡೆಸುವವರು ಈ ಬಾರಿ ಹರಾಜು ಮಾಡುವ ಬಗ್ಗೆ ಕರಪತ್ರ ಮುದ್ರಿಸಿ ಹಂಚಿದ್ದಾರೆ. ಎಳನೀರು ಮಾರಾಟಕ್ಕೆ ಟೆಂಡರ್ ಹಾಕಲು ತಾವು ಅವಕಾಶ ಕೊಡುವುದಿಲ್ಲ ಎಂದು ಅವರು ಎಚ್ಚರಿಸಿದರು.ರೈತ ಮುಖಂಡರಾದ ಈಚಘಟ್ಟ ಸಿದ್ದವೀರಪ್ಪ, ರೆಡ್ಡಿಹಳ್ಳಿ ವೀರಣ್ಣ, ಪಿ.ಜೆ. ತಿಪ್ಪೇಸ್ವಾಮಿ ಪುರಸಭೆ ನೀತಿಯನ್ನು ಖಂಡಿಸಿದರು.ಪುರಸಭೆ ಅಸಮಾಧಾನ

ಬೆಳೆಗಾರರಿಗೆ, ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ಕಳೆದ ವರ್ಷ ಎಳನೀರು ಮಾರಾಟವನ್ನು ಟೆಂಡರ್ ಪ್ರಕ್ರಿಯೆಯಿಂದ ಹೊರಗಿಡಲಾಗಿತ್ತು. ಬೆಳೆಗಾರರು ಪುರಸಭೆ ವ್ಯಾಪ್ತಿಯಲ್ಲಿ ಎಳನೀರು ಮಾರಾಟ ಮಾಡಲು ಐದು ಸಾವಿರ ರೂಪಾಯಿ ಪಾವತಿಸಿ ಪರವಾನಗಿ ಪಡೆಯುವಂತೆ ಸೂಚಿಸಲಾಗಿತ್ತು. ಆದರೆ, ಯಾವೊಬ್ಬ ರೈತರೂ ಮುಂದೆ ಬರಲಿಲ್ಲ. ಎಂದಿನಂತೆ ಮಧ್ಯವರ್ತಿಗಳೇ ಮಾರಾಟ ಮಾಡತೊಡಗಿದ್ದರಿಂದ ಗ್ರಾಹಕರಿಗೆ ಮಾಮೂಲಿ ದರದಲ್ಲಿ ಎಳನೀರು ಸಿಗುತ್ತಿತ್ತು. ಈ ವ್ಯವಸ್ಥೆಯಿಂದ ಗ್ರಾಹಕರಿಗೆ ಹಾಗೂ ಪುರಸಭೆಗೆ ಆಗುತ್ತಿದ್ದ ನಷ್ಟ ತಪ್ಪಿಸಲು ಮತ್ತೆ ಟೆಂಡರ್ ಕರೆಯಲು ನಿರ್ಧರಿಸಲಾಯಿತು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ಗಂಗಾಧರ್ ತಿಳಿಸಿದರು.ಸ್ವತಃ ರೈತರು ಎಳನೀರು ತಂದು ಮಾರಾಟ ಮಾಡುವುದಕ್ಕೆ ವಿರೋಧವಿಲ್ಲ. ಆದರೆ, ರೈತರ ಹೆಸರಿನಲ್ಲಿ ಬೇರೆಯವರು ಮಾರಾಟ ಮಾಡಬಾರದು. ಹಿಂದಿನ ವರ್ಷ ಎಳನೀರು ಹರಾಜಿನಿಂದ ` 3.5 ಲಕ್ಷ ಹಣ ಪುರಸಭೆಗೆ ಬಂದಿತ್ತು. ಆದರೂ, ನಾಗರಿಕರ ಹಿತದೃಷ್ಟಿಯಿಂದ ಟೆಂಡರ್‌ನಿಂದ ಎಳನೀರು ಮಾರಾಟವನ್ನು ಹೊರಗಿಡಲಾಗಿತ್ತು. ಈ ಬಾರಿ ಟೆಂಡರ್ ಕರೆದು, ಎಂಟು ರೂಪಾಯಿಗಿಂತ ಕಡಿಮೆ ದರದಲ್ಲಿ ಎಳನೀರು ಮಾರಾಟ ಮಾಡಬೇಕು.ನುಸಿ ಇತ್ಯಾದಿ ರೋಗದಿಂದ ಕೂಡಿದ ಎಳನೀರು ಮಾರಾಟ ಮಾಡಬಾರದು. ಮಾರಾಟ ಜಾಗದ ಹತ್ತಿರ ದರಪಟ್ಟಿ ತೂಗುಹಾಕಬೇಕು ಎಂಬ ನಿಯಮ ರೂಪಿಸಲು ಪುರಸಭೆ ಉದ್ದೇಶಿಸಿದೆ ಎಂದು ಅಧ್ಯಕ್ಷೆ ಮಂಜುಳಾ ವೆಂಕಟೇಶ್ ಸ್ಪಷ್ಟಪಡಿಸಿದರು.ನಮಗೆ ಸ್ವಲ್ಪ ದಿನ ಕಾಲಾವಕಾಶ ಕೊಡಿ. ರೈತರೇ ಎಳನೀರು ತಂದು ಮಾರಾಟ ಮಾಡುವ ವ್ಯವಸ್ಥೆ ಮಾಡುತ್ತೇವೆ. ರೈತರಿಗಾಗಲೀ, ಗ್ರಾಹಕರಿಗಾಗಲೀ ಅನ್ಯಾಯ ಆಗಲು ಬಿಡುವುದಿಲ್ಲ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕೆನ್ನುವುದೇ ರೈತ ಸಂಘದ ಹೋರಾಟದ ಪ್ರಮುಖ ಗುರಿ ಎಂದು ಎಚ್. ತಿಪ್ಪೇಸ್ವಾಮಿ ಹೇಳಿದರು.ಒಂದು ಹಂತದಲ್ಲಿ ರೈತಸಂಘದ ಕೆಲವು ಮುಖಂಡರು ಹಾಗೂ ಗ್ರಾಹಕರ ನಡುವೆ ಎಳನೀರಿಗೆ ವಿಧಿಸುತ್ತಿರುವ ಬೆಲೆ ಕುರಿತಂತೆ ಮಾತಿನ ಚಕಮಕಿ ನಡೆಯಿತು. ಪಿಎಸ್‌ಐ ಪಾಲಬಾವಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.ರೈತರು ಕೊಡುವ ಮನವಿಯನ್ನು ಜಿಲ್ಲಾಧಿಕಾರಿಗಳ ಅನುಮತಿಗೆ ಕಳಿಸೋಣ. ಅಲ್ಲಿಂದ ಬರುವ ಆದೇಶವನ್ನು ಪಾಲಿಸೋಣ ಎಂದು ಸದಸ್ಯರಾದ ಎ. ಮಂಜುನಾಥ್, ಸಬೀಹಾಬೇಗಂ, ಫೈರೋಜಖಾನಂ ಸೂಚಿಸಿದಾಗ ಅಧ್ಯಕ್ಷೆ ಮಂಜುಳಾ ಒಪ್ಪಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.