ಗುರುವಾರ , ಏಪ್ರಿಲ್ 15, 2021
30 °C

ಎಳೆಯದೆ ಸಾಗುವ ರಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಲಗಿ: ಶಾಂತಿ, ಸೌಹಾರ್ದತೆಗೆ ಹೆಸರಾಗಿರುವ ಇಲ್ಲಿಗೆ ಸಮೀಪದ ಸುಣಧೋಳಿ ಗ್ರಾಮದ ಪವಾಡ ಪುರುಷ ಜಡಿಸಿದ್ಧೇಶ್ವರ ಮಠದ ವೈಶಿಷ್ಟ್ಯಪೂರ್ಣ ರಥೋತ್ಸವವು ಏ. 22ರಂದು ಸಂಜೆ 5ಕ್ಕೆ ವಿಜೃಂಭಣೆಯಿಂದ ಜರುಗಲಿದೆ. 15ನೇ ಶತಮಾನದಲ್ಲಿ ಶಿವನು ಜಡಿಸಿದ್ಧೇಶ್ವರರ ರೂಪದಲ್ಲಿ ಭೂಮಿಯ ಮೇಲೆ ಅವತರಿಸಿ ದೇಶ ಸಂಚಾರ ಮಾಡುತ್ತಾ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲ, ಪುಟ್ಟರಾಜ ಬಸವಾದಿ ಶರಣರ ವಚನ ಸಾಹಿತ್ಯವನ್ನು ಹೊತ್ತುಕೊಂಡು, ನೂರಾರು ಪವಾಡಗಳ ಮೂಲಕ ಲೋಕ ಕಲ್ಯಾಣವನ್ನು ಬಯಸಿದ್ದರು. ಶಿವನ ರೂಪದ ಜಡಿಸಿದ್ಧೇಶ್ವರರು ತಮ್ಮ ಲೋಕಸಂಚಾರ ಕಾಲದಲ್ಲಿ ಸುಣಧೋಳಿ ಗ್ರಾಮವನ್ನು ತಮ್ಮ ವಾಸ್ತವ್ಯವನ್ನಾಗಿ ಮಾಡಿಕೊಂಡು ಇಲ್ಲಿ ತಪಸ್ಸನ್ನು ಮಾಡಿದರು ಎಂದು ಐತಿಹ್ಯವಿದೆ.ಹೀಗಾಗಿ ಜಡಿಸಿದ್ಧೇಶ್ವರರ ಮೂಲ ಸನ್ನಿಧಿಯು ಸುಣಧೋಳಿ ಗ್ರಾಮದಲ್ಲಿದೆ. ಈ ಪ್ರತೀಕವಾಗಿ ಗ್ರಾಮದಲ್ಲಿ ಭಕ್ತರು ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಿ ಭಾವದಲ್ಲಿ ಪೂಜೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ನಂಬಿದ ಭಕ್ತರನ್ನು ಕೈಬಿಡಲಾರರು ಎಂಬ ಭಾವನೆ ಇಲ್ಲಿಯ ಜನರಲ್ಲಿ ಬೇರೂರಿದ್ದು, ಭಕ್ತರ ಪಾಲಿಗೆ ಮಠವು ಅತ್ಯಂತ ಜಾಗೃತ ಸ್ಥಳವಾಗಿದೆ. ಭಕ್ತರು ತಮ್ಮ ಇಷ್ಟಿತಾರ್ಥಕ್ಕಾಗಿ ಹರಕೆಗಳನ್ನು ಇಲ್ಲಿ ಸಲ್ಲಿಸುವರು.ಜಡಿಸಿದ್ಧೆಶ್ವರರು ತಾವು ಪ್ರಾಣ ಬಿಡುವ ಸಂಗತಿಯನ್ನು ಭಕ್ತರಿಗೆ ಮುಂಚೆಯೇ ತಿಳಿಸಿ, ನೆಲದ ಗದ್ದುಗೆಯಲ್ಲಿ ತಪಸ್ಸು ಮಾಡುತ್ತಾ ಅಲ್ಲಿಯೇ ಅವರು ಪ್ರಾಣವನ್ನು ತ್ಯಾಗ ಮಾಡಿದರು ಎಂದು ಹೇಳುವರು. ನಂತರ ಅಲ್ಲಿ ಅಗೇದು ನೋಡಿದಾಗ ಭಕ್ತರಿಗೆ ಅಲ್ಲಿ ಲಿಂಗ, ಬಸವನ ಮೂರ್ತಿ, ರುದ್ರಾಕ್ಷಿ ಸರ, ಜಡೆಗಳು ಮಾತ್ರ ನೋಡಲು ದೊರೆತವು. ಮಠದ ನೆಲಗದ್ದುಗೆಯಲ್ಲಿ ಈಗಲೂ ಲಿಂಗ ಹಾಗೂ ಬಸವನ ಮೂರ್ತಿ ನೋಡಲು ಇದ್ದು, ಭಕ್ತರು ನಿತ್ಯ ದರ್ಶನ ಪಡೆಯುತ್ತಾರೆ.ಭಕ್ತರ ಆಶಯದಂತೆ ಸದ್ಯ ಮಠಾಧೀಶರಾಗಿ ಕಿರಿಯ ವಯಸ್ಸಿನ ಶಿವಾನಂದ ಸ್ವಾಮೀಜಿಯವರು ವಹಿಸಿಕೊಂಡಿದ್ದು, ಚಿಂತನ ಹಾಗೂ ಕ್ರಿಯಾಶೀಲರಾಗಿದ್ದು ಮಠದ ಸಂಪ್ರದಾಯಗಳನ್ನು ಮುಂದುವರಿಸಿದ್ದಾರೆ. ಮಠದ ಏಳ್ಗೆಗೆ ಸದಾ ಶ್ರಮಿಸುತ್ತಿದ್ದಾರೆ. ಪ್ರತಿ ಹುಣ್ಣಿಮೆಗೆ ಮಾಸಿಕ ಶಿವಾನುಭವ ಕಾರ್ಯಕ್ರಮವನ್ನು ಹಮ್ಮಿಕೊಂಡು ಪೂಜ್ಯರಿಂದ ಪ್ರವಚನ, ವಚನ ಗಾಯನ, ಭಜನೆ, ಸಾಧಕ ಜೀವಿಗಳಿಗೆ ಸನ್ಮಾನ ಹೀಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಅತ್ಯಂತ ಭಕ್ತಿಪೂರ್ವಕವಾಗಿ ನಡೆಸಿಕೊಂಡು ಬರುತ್ತಿದ್ದು, ಈಗಾಗಲೇ 75ಕ್ಕೂ ಅಧಿಕ ಶಿವಾನುಭವ ಗೋಷ್ಠಿಗಳು ಜರುಗಿದ್ದು, ದಾಸೋಹ, ಪ್ರವಚನ, ಸಾಂಸ್ಕೃತಿಕ ನೆಲೆ ಎನಿಸಿದೆ. ಪವಾಡ  ಹಗ್ಗವನ್ನು ಕಟ್ಟಿ ಎಳೆಯದೆ ಹಾಗೂ ಜನರು ಕೈಗಳಿಂದ ತಳ್ಳದೆ ರಥ ಮುಂದೇ ಸಾಗುವ ಸೋಜಿಗದ ಸಂಗತಿ ಈ ಜಾತ್ರೆಯ ವೈಶಿಷ್ಟ್ಯವಾಗಿದೆ.  ಈ ವಿಶೇಷತೆಯನ್ನು ನೋಡಲು ನಾಡಿನ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರತಿವರ್ಷ ರಥೋತ್ಸವ ಸಂದರ್ಭದಲ್ಲಿ ಇಲ್ಲಿ ಸೇರುವರು. ಇದು ಇಲ್ಲಿ ಹಲವಾರು ದಶಕಗಳಿಂದ ನಡೆದು ಬಂದಿದೆ ಎಂದು ಇಲ್ಲಿಯ ಹಿರಿಯ ಭಕ್ತರು ಹೇಳುವರು. ಹಿನ್ನೆಲೆ: ಬ್ರಿಟಿಷರ ಆಡಳಿತದ ಕಾಲದಲ್ಲಿ ಚಾಚೂ ತಪ್ಪದೆ ಅವರ ಆದೇಶಗಳನ್ನು ಪಾಲಿಸಲೇಬೇಕಾಗಿತ್ತು.  ಒಂದು ವರ್ಷ ಜಾತ್ರೆಯನ್ನು ಮಾಡದಂತೆ ಹಾಗೂ ರಥವನ್ನು ಎಳೆಯದಂತೆ ಆದೇಶ ನೀಡಿ ಭಕ್ತರನ್ನು ಆತಂಕಕ್ಕೆ ಸಿಲುಕುವಂತೆ ಬ್ರಿಟಿಷರ ಆಡಳಿತವು ನಿಷೇಧ ಹೇರಿತ್ತು. ಇನ್ನೇನು ರಥವನ್ನು ಎಳೆಯುವ ಸಮಯ ಸಮೀಪಿಸುತ್ತಿದ್ದಂತೆ ಚಿಂತೆಯಲ್ಲಿದ್ದ ಸಾವಿರಾರು ಭಕ್ತರು ‘ಹರ....ಹರ... ಮಹಾದೇವ...........’ ಎಂದು ಮುಗಿಲು ಮುಟ್ಟುವಂತೆ ಭಕ್ತಿಯ ಭಾವಾವೇಷದಲ್ಲಿ ಜಪವನ್ನು ಮಾಡಿದಾಗ ರಥವು ತನ್ನಷ್ಟಕ್ಕೆ ತಾನೇ ಚಲಿಸಿ ಮತ್ತೆ ತನ್ನ ಮೂಲ ಸ್ಥಳಕ್ಕೆ ಬಂದು  ನಿಂತಿತು ಎಂದು ಇಲ್ಲಿಯ ಮಠದ ಇತಿಹಾಸದಿಂದ ತಿಳಿದು ಬರುತ್ತದೆ.

 

ಹಲವಾರು ದಶಕಗಳ  ಪೂರ್ವದಲ್ಲಿ ನಡೆದ ಘಟನೆ ಇದಾಗಿದ್ದರೂ ಸಹ, ಈಗಲೂ ಭಕ್ತರು ರಥಕ್ಕೆ ಹಗ್ಗವನ್ನು ಕಟ್ಟದೆ ಕೇವಲ ಜಡಿಸಿದ್ಧೇಶ್ವರರ ಧ್ಯಾನ, ಜಪಗಳನ್ನು ಮಾಡುತ್ತಾ ಆಳೆತ್ತರದ ಕಲ್ಲಿನ ಗಾಲಿಗಳನ್ನು ಹೊಂದಿರುವ, ಒಳಗೆ ಹತ್ತಾರು ಜನರು ಕುಳಿತಿರುವ ದೊಡ್ಡದಾದ ರಥವು ತನ್ನಷ್ಟಕ್ಕೆ ತಾನೇ ಸಾಗುವ ವಿಶೇಷ ಉತ್ಸವವನ್ನು ಪ್ರತಿ ವರ್ಷವು ಅತ್ಯಂತ ಭಕ್ತಿಯಿಂದ ಮಾಡಿಕೊಂಡು ಬಂದಿದ್ದಾರೆ. ಜಾತ್ರೆಯ ಅಂಗವಾಗಿ ಜಡಿಸಿದ್ಧೇಶ್ವರರ ಮೂರ್ತಿಯನ್ನು ಆಕರ್ಷಕ ಬೆಳ್ಳಿ ಆಭರಣಗಳಿಂದ ಅಲಂಕೃತಗೊಳಿಸುವರು. ರಥ ಸಾಗುವ ದಾರಿಯುದ್ದಕ್ಕೂ ಭಕ್ತರು ಪೂರ್ಣ ತೆಂಗಿನ ಕಾಯಿ, ಉತ್ತತ್ತಿಯನ್ನು ಎಸೆದು ತಮ್ಮ ಭಕ್ತಿಯನ್ನು ಅರ್ಪಿಸುವರು. ಕಾರ್ಯಕ್ರಮ:

ಜಾತ್ರೆಯ ದಿನವಾದ ಏ. 22ರ ಮುಂಜಾನೆ 6ಕ್ಕೆ ಜಡಿಸಿದ್ಧೇಶ್ವರ ಮೂರ್ತಿಗೆ ರುದ್ರಾಭಿಷೇಕ, ಮುಂಜಾನೆ 10ಕ್ಕೆ ವಿವಿಧ ವಾದ್ಯ ಮೇಳಗಳೊಂದಿಗೆ  ಕಳಸ ಮೆರವಣಿಗೆ, ಸಂಜೆ 5ಕ್ಕೆ ಜಡಿಸಿದ್ಧೇಶ್ವರರ ರಥೋತ್ಸವ ಜರಗುವುದು. ನಂತರ ಅನ್ನಸಂತರ್ಪಣೆ, ರಾತ್ರಿ 10ಕ್ಕೆ ಕಮಕೇರಿಯ ಶ್ರೀಕೃಷ್ಣ ಪಾರಿಜಾತ ಇರುವುದು. ಏ. 23 ಸಂಜೆ 4ಕ್ಕೆ ಜಂಗಿ ಕುಸ್ತಿ ಸ್ಪರ್ಧೆ ಇರುವುದು. ಜಾತ್ರೆಯ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮೇಲು-ಕೀಳು ಎನ್ನದೆ ಸರ್ವರೂ ಭಾಗವಹಿಸಿ ಇಲ್ಲಿ ಭಾವೈಕ್ಯತೆ ಮೆರೆಯುವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.