ಶನಿವಾರ, ಅಕ್ಟೋಬರ್ 19, 2019
28 °C

ಎಳೆ ಮನಸುಗಳ ಹೂ ತೋಟದ ಸುತ್ತ

Published:
Updated:

ಕೆಜಿಎಫ್: ಶಾಲೆಗೊಂದು ವನ ಎಂಬ ಶಿಕ್ಷಣ ಇಲಾಖೆ ಆಶಯಕ್ಕೆ ತಕ್ಕ ರೀತಿಯಲ್ಲಿ ಕೆಜಿಎಫ್‌ನ ಕೋಡಿಹಳ್ಳಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವನ ಬೆಳೆಸಿದ್ದು, ಇತರ ಶಾಲೆಗಳಿಗೆ ಇದು ಮಾದರಿಯಾಗಿದೆ.



ಕೇವಲ 25 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ನೂರಾರು ಮರಗಳಿವೆ. ಕಣ್ಣು ಮುದಗೊಳ್ಳುವಂತಹ ಬಣ್ಣದ ಹೂಗಳು ಶಾಲೆಗೆ ಬರುವವರನ್ನು ಸ್ವಾಗತಿಸುತ್ತವೆ. ಗುಟ್ಟಹಳ್ಳಿಯ ವೆಂಕಟರಮಣಸ್ವಾಮಿ ದೇವಾಲಯಕ್ಕೆಂದು ಇದೇ ರಸ್ತೆಯಲ್ಲಿ ಹೋಗುವವರ ಗಮನವನ್ನು ಈ ಶಾಲೆ ಸೆಳೆಯುತ್ತಿದೆ.



ಸುಮಾರು ಒಂದೂವರೆ ಎಕರೆ ವಿಸ್ತೀರ್ಣವುಳ್ಳ ಶಾಲೆಗೆ ಜಾಗದ ಕೊರತೆ ಇಲ್ಲ. ಆದರೆ ನೀರಿನದ್ದೇ ಸಮಸ್ಯೆ. ಕೊಂಚ ಇಳಿಜಾರಿನ ಪ್ರದೇಶದಲ್ಲಿರುವ ಕಾರಣ ನೀರಿನ ಪಸೆ ಇದೆ. ಅದನ್ನು ಉಪಯೋಗಿಸಿ ಗುಲಾಬಿ ತೋಟ, ತರಕಾರಿ ಕೈತೋಟ, ದಾಸವಾಳ, ಸಂಪಿಗೆ, ಸಿಲ್ವರ್, ಗೋಲ್ದನೇರ್ ಸೇರಿದಂತೆ ವಿವಿಧ ಜಾತಿ ಮರಗಳು ಸೊಂಪಾಗಿ ಬೆಳೆದು ನಿಂತಿವೆ. ಜೊತೆಗೆ ಔಷಧ ಸಸ್ಯಗಳೂ ಇವೆ. ಆಟದ ಪರಿಕರಗಳುಳ್ಳ ನೆಹರೂ ಮೈದಾನವೂ ಇದೆ. ಶಾಲೆಯ ವನಸಂಪತ್ತು ಕಂಡ ಅರಣ್ಯ ಇಲಾಖೆ ಸಿಬ್ಬಂದಿ 800 ಸಸ್ಯಗಳನ್ನು ಶಾಲೆಗೆ ನೀಡಿ ಪ್ರೋತ್ಸಾಹಿಸಿದ್ದರು.



ಇಷ್ಟೊಂದು ಪ್ರದೇಶದಲ್ಲಿ ಕ್ರಮಬದ್ಧವಾಗಿ ಸಸ್ಯತೋಟ ಅಭಿವೃದ್ಧಿ ಪಡಿಸಲು ಶಾಲೆಯ ಮುಖ್ಯಶಿಕ್ಷಕ  ಎಚ್.ಎಂ. ಲಕ್ಷ್ಮೀನಾರಾಯಣ ಮತ್ತು ಸಹ ಶಿಕ್ಷಕ ಟಿ.ಎಸ್.ರಾಘವೇಂದ್ರರ ಪರಿಶ್ರಮವೂ ಇದೆ. ಶಾಲೆಯಲ್ಲಿ ಸಚಿವ ಸಂಪುಟವನ್ನು ರಚಿಸಿದ್ದಾರೆ. ಅದರ ಸದಸ್ಯರು ಸರದಿ ಪ್ರಕಾರ ಉಸ್ತುವಾರಿ ವಹಿಸಿಕೊಳ್ಳುತ್ತಾರೆ. ಎಲ್ಲಾ ಮಕ್ಕಳು ಗ್ರಾಮೀಣ ಹಿನ್ನೆಲೆಯವರಾದ್ದರಿಂದ ಕೆಲಸ ಹೇಳಿಕೊಡುವ ಅಗತ್ಯವಿಲ್ಲ.



ವಿದ್ಯಾರ್ಥಿಗಳ ಕೊರತೆ ಅನುಭವಿಸಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಇಂದಿನ ಸನ್ನಿವೇಶದಲ್ಲಿ ಯಾವುದೇ ಅಧೀನ ಶಾಲೆ ನೆರವಿಲ್ಲದೆ 65 ಮನೆಗಳ ಈ ಊರಿನಲ್ಲಿ 25 ಮಕ್ಕಳನ್ನು ಕಲೆ ಹಾಕಿರುವುದು ಶಿಕ್ಷಕರ ಸಾಹಸವೇ ಸರಿ.



ಕಣ್ಮನ ಸೆಳೆಯುವ ವನಕ್ಕೆ ಹೆಸರುವಾಸಿಯಾದ ಕೋಡಿಹಳ್ಳಿ ಶಾಲೆ ಪಠ್ಯೇತರ ಚಟುವಟಿಕೆಗಳಿಗೂ ಸೈ ಎನಿಸಿಕೊಂಡಿದೆ. ಶಾಲೆಯ ಆಡಳಿತ ಕಚೇರಿ ಒಳಗೆ ಪ್ರವೇಶಿಸಿದ ತಕ್ಷಣ ಕಾಣಸಿಗುವುದು ಬಹುಮಾನಗಳ ರಾಶಿರಾಶಿ. ಈ ಬಾರಿಯೂ ಶಾಲೆಯ ವಿದ್ಯಾರ್ಥಿಗಳಾದ ವೇಣು, ಶ್ವೇತಾ, ಅನುಷಾ ಮತ್ತು ನಂದಿನಿ ಕ್ವಿಜ್ ಸ್ಪರ್ಧೆಯಲ್ಲಿ ಕೋಲಾರ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿ ರಾಜ್ಯ ಮಟ್ಟದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ.



ಉತ್ತಮ ಶಾಲೆ ಎಂದರೆ ಹೇಗಿರಬೇಕು ಎಂಬುದಕ್ಕೆ ಪಕ್ಕಾ ಉದಾಹರಣೆಯಾಗಿರುವ ಕೋಡಿಹಳ್ಳಿ ಕನ್ನಡ ಶಾಲೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕೆಂದು ಇಲ್ಲಿನ ಶಿಕ್ಷಕರ ಕನಸು. ಶಾಲೆಗೊಂದು ಸ್ಟೇಜ್ ಬೇಕು, ಕಂಪ್ಯೂಟರ್ ಬೇಕು, ಡೈನಿಂಗ್ ಹಾಲ್ ಬೇಕು ಎಂಬ ಬೇಕುಗಳ ಪಟ್ಟಿಯನ್ನೇ ಶಿಕ್ಷಕರು ಮುಂದಿಡುತ್ತಾರೆ.

Post Comments (+)