ಎಳ್ಳ ಅಮಾವಾಸ್ಯೆಗೂ ಭಯದ ಕರಿನೆರಳು

7

ಎಳ್ಳ ಅಮಾವಾಸ್ಯೆಗೂ ಭಯದ ಕರಿನೆರಳು

Published:
Updated:

ಡಂಬಳ:  ಊರಿನ ಅರ್ಧಕ್ಕರ್ಧ ಮನೆ ಬಾಗಿಲುಗಳು ಮುಚ್ಚಿವೆ. ಎತ್ತ ನೋಡಿದರು ಬಿಕೋ ಎನ್ನುವ ವಾತಾವರಣ, ದೂರದ ಎಲ್ಲೋ ವಾಹನವೊಂದು ಬುರ್ರ್‌... ಎಂದು ಬರುವ ಸದ್ದು ಕೇಳಿದರೆ ಕಿಟಕಿಯ ಬಾಗಿಲುಗಳು ಮೆಲ್ಲಗೆ ಸಣ್ಣದಾಗಿ ತೆರೆದುಕೊಳ್ಳುತ್ತವೆ. ಅಲ್ಲಿಂದಲೇ ಜಗತ್ತು ಏನಾಗುತ್ತಿದೆ ಎನ್ನುವುದನ್ನು ಭಯದ ‘ಕಣ್ಣು’ಗಳು ಗಮನಿಸುತ್ತವೆ.- ಇದು ಡಂಬಳದಲ್ಲಿ ಕಳೆದ ಮೂರು ದಿನಗಳಿಂದ ಇರುವ ಪರಿಸ್ಥಿತಿ. ಗ್ರಾಮಕ್ಕೆ ಹೊಸದಾಗಿ ಹೋದವರಂತೂ ಇಲ್ಲಿ ಜನ ವಾಸವಾಗಿದ್ದರೋ ಇಲ್ಲವೋ ಎನ್ನುವ ಅನುಮಾನ ಕಾಡಹತ್ತುವುದಂತೂ ಅಕ್ಷರಶಃ ಸತ್ಯ. ಅಷ್ಟು ಮೌನ. ಒಂದು ರೀತಿಯ ನೀರವ. ಮಧ್ಯಾಹ್ನದ ಹೊತ್ತು ಹಕ್ಕಿ-ಪಕ್ಷಿಗಳ ಕೂಗೇ ಮಾರ್ಧನಿಸುತ್ತದೇ ಹೊರತು ನರಪಿಳ್ಳೆಯ ಉಸಿರು ಕೇಳುವುದಿಲ್ಲ.ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಗಲಭೆಯಾಗಿ ಮೂರು ದಿನವಾಯಿತು. ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿ ಜೈಲಿನಲ್ಲಿ ಇಟ್ಟರು. ಊರಿನಲ್ಲಿ ನಾಲ್ಕಾರು ಜೀಪ್, ಒಂದೆರಡು ವ್ಯಾನ್, ಹತ್ತಾರು ಪೊಲೀಸರು ಆಯಕಟ್ಟಿನ ಸ್ಥಳದಲ್ಲಿ ರಕ್ಷಣಾ ಕಾರ್ಯವನ್ನು ಮಾಡುತ್ತಿದ್ದರೂ ಊರಿನವರಿಗೆ ಭಯ ಮಾತ್ರ ಹೋಗಿಲ್ಲ. ಮೂರು ದಿನದ ನಂತರವೂ ಕುಡಿಯುವ ನೀರನ್ನು ಸರಬರಾಜು ಮಾಡಿದರು ಬೀದಿಗೆ ಬಂದು ನೀರನ್ನು ಹಿಡಿದುಕೊಳ್ಳಲು ಜನ ಹೊರಗೆ ಬಂದಿಲ್ಲ.ಗ್ರಾಮದಲ್ಲಿ ಅಂಗಡಿ ಮುಂಗಟ್ಟು ಬಾಗಿಲು ಹಾಕಿವೆ. ಖಾಸಗಿ ದವಾಖಾನೆಗಳೂ ಬಂದ್ ಆಗಿವೆ. ಒಂದಷ್ಟು ಕುಟುಂಬಗಳು ಮನೆಗೆ ಬೀಗ ಜಡಿದು ಊರು ಬಿಟ್ಟು ಹೋಗಿವೆ. ಬ್ಯಾಂಕು, ಶಾಲೆ ಎಲ್ಲವೂ ನಿಂತುಹೋಗಿವೆ. ಒಂದು ರೀತಿ ಊರಿನಲ್ಲಿ ಜನಜೀವನ ಕ್ರಿಯಾಶೀಲತೆ ಕಳೆದುಕೊಂಡತೆ ಕಾಣುತ್ತದೆ.ಮಂಗಳವಾರ ಎಳ್ಳ ಅಮಾವಾಸ್ಯೆ. ಇಡೀ ಊರಿಗೆ ಊರು ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುವ ದಿನ. ಚರಗಾ ಚೆಲ್ಲುವುದಕ್ಕಾಗಿ ನೆಂಟರನ್ನು ಕರೆದು ಸಂತೋಷ ಪಡುವ ವೇಳೆ ‘ಕೋಮುಗಲಭೆ’ ಎಂಬ ಕರಿನೆರಳು ಊರ ತುಂಬ ಹರಡಿದೆ. ಸೋಮವಾರ ಹಬ್ಬದ ಹಿಂದಿನ ದಿನವಾದರೂ ಡಂಬಳದಲ್ಲಿ ಸಡಗರದ ವಾತಾವರಣಕ್ಕೆ ಬದಲಾಗಿ ಆತಂಕವೇ ತುಂಬಿ ತುಳುಕುತ್ತಿದೆ. ಊರ ಮುಂದಿನ ರಸ್ತೆ ಬದಿಯಲ್ಲಿ ಹರಿಯುವ ಸಣ್ಣ ತೊರೆಯಲ್ಲಿ ಒಂದಷ್ಟು ಮಹಿಳೆಯರು ಬಟ್ಟೆ ಸ್ವಚ್ಛ ಮಾಡುವ ಕಾರ್ಯವನ್ನು ಮಾಡುತ್ತಿದ್ದ ದೃಶ್ಯ ಬಿಟ್ಟರೆ. ಎಲ್ಲೂ ಮಹಿಳೆಯರ ಮುಖ ಕಾಣುವುದೇ ಇಲ್ಲ.“ನಾಳೆ ಎಳ್ಳಾಮಾವಾಸ್ಯೆ ಇದೆ. ದಿನಸಿ ಪದಾರ್ಥ ತಗೆದುಕೊಳ್ಳಬೇಕು. ತಲೆಗೆ ಹಾಕಲು ಕೊಬ್ಬರಿ ಎಣ್ಣೆ ಸಹಿತ ಮನೆಯಲ್ಲಿ ಇಲ್ಲ. ಇವತ್ತು- ನಾಳೆ ಅಂಗಡಿಗಳ ಬಾಗಿಲು ತೆರೆಯಿಸಿ” ಎಂದು ಕೆಲ ಹಿರಿಯರು ಊರನ್ನು ಕಾಯುತ್ತಿರುವ ಪೊಲೀಸರ ಬಳಿ ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಗ್ರಾಮದ ಸ್ಥಿತಿಗೆ ಕನ್ನಡಿ ಹಿಡಿದಂತೆ ಇತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry