ಬುಧವಾರ, ಜೂನ್ 16, 2021
21 °C

ಎವರೆಸ್ಟ್‌ಗೆ ಡೊಂಕು ರೇಖೆ ಏಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ಓದು

ವಾರೆ ಕೋರೆ

ಸಂ: ಪ್ರಕಾಶ್ ಶೆಟ್ಟಿ

ಬೆ: ರೂ. 70; ಪ್ರ: ಫನ್ ಗ್ಯಾಲರಿ ಪಬ್ಲಿಕೆಷನ್ಸ್, 646 ಅಜಂತ ಕ್ಲಾಸಿಕ್ ಅಪಾರ್ಟ್‌ಮೆಂಟ್, ಎಫ್‌ಎಫ್ 5, 18ನೇ ಮುಖ್ಯರಸ್ತೆ, 16ನೇ ಅಡ್ಡರಸ್ತೆ, ರಾಜರಾಜೇಶ್ವರಿ ನಗರ, ಬೆಂಗಳೂರು- 560 098.

 

ಖ್ಯಾತ ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ ಅವರ `ವಾರೆ ಕೋರೆ~ ಮಾಸಪತ್ರಿಕೆ ಅಕಾಲ ಅಂತ್ಯ ಕಂಡಾಗ ವರ್ಷಕ್ಕೊಮ್ಮೆ ಭರ್ಜರಿ ಭೋಜನದ ಭರವಸೆ ನೀಡಿದ್ದರು. ಆ ಭರವಸೆಯನ್ನು ಈಗ ಅಚ್ಚುಕಟ್ಟಾಗಿ ಈಡೇರಿಸಿದ್ದಾರೆ.

 

`ವಾರೆಕೋರೆ~ ಎಂಬ ವ್ಯಂಗ್ಯ ಲೇಖನ, ವ್ಯಂಗ್ಯಚಿತ್ರಗಳಿಗೆ ಮೀಸಲಾದ ಕೃತಿಯನ್ನು ಪ್ರಕಟಿಸಿದ್ದಾರೆ. ಅವರಲ್ಲಿ ಇರುವ ಏನಾದರೊಂದು ಹೊಸದನ್ನು ಮಾಡುವ ಹುಮ್ಮಸ್ಸು ಇದಕ್ಕೆ ಅವರು ಕೈ ಹಚ್ಚುವಂತೆ ಮಾಡಿದೆ. ವ್ಯಂಗ್ಯಚಿತ್ರಗಳು, ವ್ಯಂಗ್ಯ ಬರಹಗಳು, ಅಲ್ಲದೆ ವ್ಯಂಗ್ಯ ಛಾಯಾಚಿತ್ರಗಳು ಇದರಲ್ಲಿದೆ. ವಾರೆಕೋರೆ ಬಳಗದ ವಸಂತ ಹೊಸಬೆಟ್ಟು, ಕುಗೋ ಲೇಖನಗಳು ಇಲ್ಲಿವೆ. ಜೀವನ್, ಹರಿಣಿ, ಆನಂದ್, ಶ್ರೀಧರ್, ಗೋಪಾಲ್, ಅಮೃತ ಈ ಮುಂತಾದವರ ವ್ಯಂಗ್ಯಚಿತ್ರಗಳಿವೆ. ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ಸಂದರ್ಶನವಿದೆ. ಈ ಸಂದರ್ಶನದಲ್ಲಿ ಅವರು ಆಸ್ಟ್ರಿಕ್ಸ್ ಎಂಬ ಖ್ಯಾತ ವ್ಯಂಗ್ಯಚಿತ್ರ ಮಾಲಿಕೆಯ ಬಗ್ಗೆ ತಮಗಿರುವ ಆಸಕ್ತಿಯನ್ನು ಹೊರಗೆಡವಿದ್ದಾರೆ. ಆ ವ್ಯಂಗ್ಯಚಿತ್ರ ಮಾಲಿಕೆಯ ಎಲ್ಲ ಸಂಪುಟಗಳು ತಮ್ಮಲ್ಲಿವೆ ಎಂದು ಅಚ್ಚರಿಯ ಅಂಶವನ್ನು ಹೊರಗೆಡವಿದ್ದಾರೆ. ಉದಯ್ ಜಾದೂಗಾರ್ ಅವರ ಸಂದರ್ಶನ ಚೇತೋಹಾರಿ.ಈ ಕೃತಿಯ ಇನ್ನೊಂದು ಹೈಲೈಟ್ ಎಂದರೆ ಖ್ಯಾತ ವ್ಯಂಗ್ಯಚಿತ್ರಕಾರ ಕುಟ್ಟಿ ಅವರ ಕಿರುಪರಿಚಯ ಮತ್ತು ಅವರ ವ್ಯಂಗ್ಯಚಿತ್ರಗಳ ಗುಚ್ಛ. ಕುಟ್ಟಿ ಸಾವು ಹಿರಿಯ ಪತ್ರಿಕೆಗಳಿಗೆ ದೊಡ್ಡ ಸುದ್ದಿಯಾಗಿಲ್ಲದ ಕಾರಣ ಬಹಳಷ್ಟು ಅವರ ಅಭಿಮಾನಿಗಳಿಗೆ ಇದು ಹೊಸ ಸುದ್ದಿ ! `ದೇವರು ಮಾನವನನ್ನು ಸೃಷ್ಟಿಸುವ ಫ್ಯಾಕ್ಟರಿ ನಾನು ಮಾನವನನ್ನು ಮರು ಸೃಷ್ಟಿಸುವ ಫ್ಯಾಕ್ಟರಿ~ ಎಂಬ ಲೇಖನದಲ್ಲಿ ಒಂದು ಲಕ್ಷಕ್ಕೂ ಅಧಿಕ ವ್ಯಂಗ್ಯಭಾವಚಿತ್ರ (ಕ್ಯಾರಿಕೇಚರ್)ಗಳನ್ನು ರಚಿಸಿದ ತಮ್ಮ ಅನುಭವಗಳನ್ನು ಸ್ವಾರಸ್ಯಪೂರ್ಣವಾಗಿ ಪ್ರಕಾಶ್ ಬಣ್ಣಿಸಿದ್ದಾರೆ. ಪುಸ್ತಕ ಪ್ರಕಟಣೆಯ ನೋವು ನಲಿವುಗಳನ್ನು ಬಣ್ಣಿಸಿದ್ದಾರೆ.`ಯಾವನೇ ಕಲಾವಿದ ಕಲೆಯನ್ನು ಎಲ್ಲ ವರ್ಗದ ಜನರಿಗೆ ಮುಟ್ಟಿಸಬಲ್ಲವನಾದರೆ ಆತ ಎವರೆಸ್ಟ್ ಪರ್ವತ ಏರಿದಂತೆಯೇ ಎಂಬುದು ನನ್ನ ಅಭಿಪ್ರಾಯ. ಆ ಕೆಲಸ ನಾನು ಮಾಡಿದ್ದೇನೆ~ ಎಂದು ಪ್ರಕಾಶ್ ಹೆಮ್ಮೆಯಿಂದ ಹೇಳಿಕೊಂಡದ್ದು ಒಣ ಹೆಮ್ಮೆಯ ಉದ್ಗಾರವಲ್ಲ.ಪ್ರಕಾಶ್ ಅವರ ಬೆಳವಣಿಗೆಯನ್ನು ಸಮೀಪದಿಂದ ಗಮನಿಸಿದವರಿಗೆ ಇದು ಸತ್ಯ ಎನ್ನುವುದು ಗೊತ್ತು. ಅವರದ್ದು ಒನ್ ಮ್ಯಾನ್ ಶೋ, ಲೇಖನ ಸಂಗ್ರಹ, ಸಾಂದರ್ಭಿಕ ಚಿತ್ರ ರಚನೆಯಿಂದ ಕೊನೆಗೆ ಪುಸ್ತಕದ ಪುಟ ವಿನ್ಯಾಸದವರೆಗೆ ಅವರೇ ಮಾಡಿದ್ದಾರೆ. ಕೃತಿ ವ್ಯಂಗ್ಯಚಿತ್ರ ಪ್ರೇಮಿಗಳಿಗೆ ಖುಷಿ ತಂದುಕೊಡುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.