ಎ.ಸಿ.ಗೆ ಬೆದರಿಕೆ: ಕ್ರಮಕ್ಕಾಗಿ ಧರಣಿ

7

ಎ.ಸಿ.ಗೆ ಬೆದರಿಕೆ: ಕ್ರಮಕ್ಕಾಗಿ ಧರಣಿ

Published:
Updated:

ಕೋಲಾರ: ಉಪವಿಭಾಗಾಧಿಕಾರಿ ಆಯೀಷಾ ಪರ್ವಿನ್ ಅವರ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿರುವ ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮತ್ತು ವಕೀಲ ಆಂಜಿನಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಹಿಂದ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಸಮಿತಿ ಕಾರ್ಯಕರ್ತರು ನಗರದ ಮೆಕ್ಕೆ ವೃತ್ತದಲ್ಲಿ ಸೋಮವಾರ ಧರಣಿ ನಡೆಸಿದರು.ಕಂದಾಯ ಇಲಾಖೆಯ ನ್ಯಾಯಾಲಯಗಳಲ್ಲಿ ಕಾನೂನುಬದ್ಧವಾಗಿ, ನಿಷ್ಪಕ್ಷಪಾತವಾಗಿ ಪ್ರಕರಣಗಳು ಇತ್ಯರ್ಥಗೊಳ್ಳಬೇಕು. ಅದಕ್ಕೆ ತಕ್ಕಂತೆ ವರ್ತಿಸುವುದನ್ನು ಬಿಟ್ಟು ಪ್ರಭಾವಿ ಮುಖಂಡರು ತಮ್ಮ ಮೂಗಿನ ನೇರಕ್ಕೆ ನ್ಯಾಯಾಲಯಗಳಲ್ಲಿ ತೀರ್ಪು ಪಡೆಯಲು ಪ್ರಯತ್ನಿಸುವುದು ಮತ್ತು ದಂಡಾಧಿಕಾರಿಗೆ ಬೆದರಿಕೆ ಒಡ್ಡುವುದು ಅಪರಾಧ. ಹೀಗಾಗಿ ಇಬ್ಬರು ಮುಖಂಡರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.ನ.28ರಂದು ಉಪವಿಭಾಗಾಧಿಕಾರಿ ಕಚೇರಿಗೆ ನುಗ್ಗಿದ ಮುಖಂಡರು ಪ್ರಕರಣವೊಂದರ ಸಂಬಂಧ ತಾವು ಹೇಳಿದಂತೆ ತೀರ್ಪು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅದಕ್ಕೆ ಒಪ್ಪದ ಅಧಿಕಾರಿಗೆ ಬೆದರಿಕೆ ಒಡ್ಡಿದ್ದಾರೆ. ಈ ಸಂಬಂಧ ಅಧಿಕಾರಿಯು ಗಲ್‌ಪೇಟೆ ಠಾಣೆಗೆ ದೂರನ್ನೂ ನೀಡಿದ್ದಾರೆ. ದೂರು ದಾಖಲಿಸಿರುವ ಪೊಲೀಸರು ಇದುವರೆಗೆ ಕ್ರಮವನ್ನೂ ಕೈಗೊಂಡಿಲ್ಲ. ಬೆದರಿಕೆ ಒಡ್ಡಿರುವ ಮುಖಂಡರು ಮಾತ್ರ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ ಎಂದರು.ಸರ್ಕಾರಿ ಕಚೇರಿಗೆ ನುಗ್ಗಿ ಅವರಿಗೆ ಬೆದರಿಕೆ ಒಡ್ಡಿರುವುದು ದೌರ್ಜನ್ಯದ ಪರಮಾವಧಿ. ಉಪವಿಭಾಗದ ದಂಡಾಧಿಕಾರಿಗಳನ್ನು ಏಕವಚನದಲ್ಲಿ ನಿಂದಿಸಿರುವುದು ನ್ಯಾಯಾಂಗ ವ್ಯವಸ್ಥೆಗೆ ಮಾಡಿರುವ ಅಪಚಾರ. ಅಧಿಕಾರಿಯೊಂದಿಗೆ ಗೂಂಡಾ ಪ್ರವೃತ್ತಿಯನ್ನು ಪ್ರದರ್ಶಿಸಿರುವುದು ಖಂಡನಾರ್ಹ. ಕೂಡಲೇ ಜಿಲ್ಲಾಧಿಕಾರಿ ಕ್ರಮ ವಹಿಸದಿದ್ದರೆ  ಅಧಿಕಾರಿಗಳು ಕಾನೂನು ಬದ್ಧವಾಗಿ ಕೆಲಸ ಮಾಡುವುದು ಕಷ್ಟಕರವಾಗಲಿದೆ ಎಂದು ಹೇಳಿದರು.ತನಿಖೆಗೆ ಆಗ್ರಹ: ಉಪವಿಭಾಗಾಧಿಕಾರಿ ಜೊತೆಗೆ ಅನುಚಿತವಾಗಿ ವರ್ತಿಸಿರುವ ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕ ಬ್ಯಾಲಹಳ್ಳಿ ಗೋವಿಂದಗೌಡ ಸಹಕಾರಿ ಸಂಸ್ಥೆಗಳ ಮೂಲಕ ಹಲವು ಅವ್ಯವಹಾರಗಳನ್ನು ನಡೆಸಿದ್ದಾರೆ.ಅವೆಲ್ಲವನ್ನೂ ತನಿಖೆಗೆ ಒಳಪಡಿಸಬೇಕಾಗಿದೆ ಎಂದು ಆಗ್ರಹಿಸಿದರು.ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಧರಣಿ ನಡೆಸುವ ಮುನ್ನ ಕಾಲೇಜು ವೃತ್ತದಿಂದ ಸಮಿತಿಯ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಮಿತಿಯ ಮುಖಂಡರಾದ ಏಜಾಜ್ ಖಾನ್, ಏಜಿಯಾಜ್, ಕೆ.ವಿ.ಸುರೇಶಕುಮಾರ್, ಅಬ್ದುಲ್‌ಖಾನ್, ನಜೀರ್ ಅಹ್ಮದ್, ನಗರಸಭೆ ಸದಸ್ಯ ಸಿ.ಸೋಮಶೇಖರ್ ನೇತೃತ್ವ ವಹಿಸಿದ್ದರು.ಸಂಚಾರ ಸ್ಥಗಿತ: ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಪರ್ಯಾಯ ರಸ್ತೆಗಳಾದ ಕೋಲಾರಮ್ಮ ಗುಡಿ ರಸ್ತೆ ಮತ್ತು ಕೋಟೆ ಬಡಾವಣೆಯ ಕಿರಿದಾದ ಆಡ್ಡ ರಸ್ತೆಗಳಲ್ಲಿ ವಾಹನ ದಟ್ಟಣೆ ಏರ್ಪಟ್ಟಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry