ಎಸಿಸಿ ಕಂಪೆನಿ ವಿರುದ್ಧ ರೈತರ ಆಕ್ರೋಶ

7

ಎಸಿಸಿ ಕಂಪೆನಿ ವಿರುದ್ಧ ರೈತರ ಆಕ್ರೋಶ

Published:
Updated:

ವಾಡಿ: ಪಟ್ಟಣದ ಎಸಿಸಿ ಸಿಮೆಂಟ್ ಕಂಪೆನಿ ಬಿಡುತ್ತಿರುವ ತ್ಯಾಜ್ಯ ಹಾಗೂ ವಿಷಕಾರಕ ನೀರಿನಿಂದ ಸುಮಾರು 200 ಎಕರೆ ಜಮೀನು ಬಂಜರಾವಾಗಿದೆ ಎಂದು ರೈತರು ಕಂಪೆನಿ ಆಡಳಿತ ಮಂಡಳಿ ವಿರುದ್ಧ ವಾಗ್ದಾಳಿ ನಡೆಸಿದರು.ಶುಕ್ರವಾರ ರೈತರು ಬೆಳಿಗ್ಗೆ ಕಂಪೆನಿ ಒಳಗೆ ನುಗ್ಗಿ ಎಸಿಸಿ ಕಂಪೆನಿ ಮಾನವ ಸಂಪನ್ಮೂಲ ವ್ಯಕ್ತಿ ಬಿ.ಡಿ ದಲೇರ್ ಜೊತೆ ಮಾತಿನ ಚಕಮಕಿ ನಡೆಸಿದರು. ಕುಂದನೂರು ಮಾರ್ಗ ಮಧ್ಯದಲ್ಲಿರುವ ಇಂಗಳಗಿ ರೈತರ ಜಮೀನಿಗೆ  ಕಂಪೆನಿಯಿಂದ ವಿಷಭರಿತ ನೀರು ಭೂಮಿಯೊಳಗೆ ಬರುತ್ತಿದೆ ಎಂದು ಹೇಳಿದರೂ ಕಂಪೆನಿ ಪರಿಗಣಿಸುತ್ತಿಲ್ಲ ಎಂದು ಆಕ್ಷೇಪಿಸಿದರು.ರೈತರ ಅನುಮತಿ ಪಡೆಯದೆ ಜಮೀನಿನಲ್ಲಿ ದೊಡ್ಡ ತಗ್ಗು ಗುಂಡಿ ಅಗೆದು ಸುಮಾರು 30 ವರ್ಷದಿಂದ ಕಂಪೆನಿ  ವಿಷಭರಿತ ನೀರನ್ನು ಹೊರ ಹಾಕುತ್ತಿದೆ. ಇದರಿಂದ ಭೂಮಿ ಸಂಪೂರ್ಣ ಬರಡಾಗಿದೆ. ಈಗ ಯಾವುದೇ ಬೆಳೆ ಆಗುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.ಭೂ ಮಣ್ಣಿನ ಪರೀಕ್ಷೆ ಅಧಿಕಾರಿಗಳ ಪ್ರಕಾರ ಇಲ್ಲಿನ ಮಣ್ಣು ಯಾವುದೇ ಬಿತ್ತನೆಗೆ ಯೋಗ್ಯವಾದುದಲ್ಲ ಎಂದು ದೃಢ ಪಡಿಸಿದ್ದಾರೆ. ಆದ್ದರಿಂದ ಜಮೀನು ಇದ್ದೂ ಇಲ್ಲದಂತಾಗಿದೆ. ಇಲ್ಲಿಯವರೆಗೆ ರೈತರು ಅನಿಭವಿಸಿದ ನಷ್ಟದ ವೆಚ್ಚವನ್ನು ಕಂಪೆನಿ ಭರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಕಂಪೆನಿಯಿಂದ ತ್ಯಾಜ್ಯ ನೀರು ಯಾರ ಜಮೀನಿನ ಒಳಗೆ ಹೊಗಿದೆ ಎಂದು ಎರಡು ತಿಂಗಳ ನಂತರ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಬಿ.ಡಿ ದಲೇರ್ ತಿಳಿಸಿದ್ದಾಗಿ ತಿಳಿದುಬಂದಿದೆ.ಎಸಿಸಿ ಸಿಮೆಂಟ್ ಕಂಪೆನಿ ಸಾರ್ವಜನಿಕರಿಗೆ ಅನಗತ್ಯವಾಗಿ ಮಾನಸಿಕ ಕಿರುಕುಳ ನೀಡುತ್ತಿದೆ. ಕಂಪೆನಿ ರೈತರ ಮೇಲೆ ತನ್ನ ದೌರ್ಜನ್ಯ ಮುಂದುವರಿಸಿದರೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ವಾಡಿ ಘಟಕದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದು ಪಂಚಾಳ ಹೇಳಿದ್ದಾರೆ.ಗೌತಮ ಗಾಯಕವಾಡ, ಶಾಮೀಲ್ ಚಂದ್ರಶೇಖರ, ಶಿವಬಸಪ್ಪ, ಶ್ಯಾಮ ವಿಠಲ್, ಪ್ರಕಾಶ ಮರೆಪ್ಪ, ಕಿಸನ್ ಹರಿಚಂದ್ರ ನಾಯಕ, ದಶರತ ಮರೆಪ್ಪ, ಶಿವಶರಣಪ್ಪ, ಬಿಎಸ್‌ಪಿ ಆನಂದ, ಕರವೇ ಸಿದ್ದು ಪಂಚಾಳ ನಿಯೋಗದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry