ಸೋಮವಾರ, ಮೇ 23, 2022
21 °C

ಎಸ್.ಎಲ್. ಭೈರಪ್ಪ ಎಚ್ಚರಿಕೆ: ಕನ್ನಡ ಕಲಿಯದಿದ್ದರೆ ಸಂಸ್ಕೃತಿ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್.ಎಲ್. ಭೈರಪ್ಪ ಎಚ್ಚರಿಕೆ: ಕನ್ನಡ ಕಲಿಯದಿದ್ದರೆ ಸಂಸ್ಕೃತಿ ನಾಶ

ಬೆಂಗಳೂರು:  ರಾಜ್ಯ ಸರ್ಕಾರದ ಭಾಷಾ ನೀತಿಯ ವಿರುದ್ಧ ಚಾಟಿ ಬೀಸಿದ ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರು, `ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಮೊದಲ ಆದ್ಯತೆ ನೀಡಬೇಕು. ಆಗ ಉತ್ತಮ ಭಾರತೀಯರಾಗಲು ಸಾಧ್ಯ~ ಎಂದು ಪ್ರತಿಪಾದಿಸಿದರು.ರೌಂಡ್ ಟೇಬಲ್ ಇಂಡಿಯಾ ವತಿಯಿಂದ ನಗರದಲ್ಲಿ ಶುಕ್ರವಾರ ನಡೆದ `ಪ್ರೈಡ್ ಆಫ್ ಕರ್ನಾಟಕ~ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.`ಮೊದಲು ಮಾತೃಭಾಷೆಯನ್ನು ಚೆನ್ನಾಗಿ ಕಲಿಯಬೇಕು. ಇಂಗ್ಲಿಷ್ ಕಲಿತರೆ ಮಾತ್ರ ಶ್ರೇಷ್ಠ ಎಂಬ ಭ್ರಮೆ ಬೇಡ. ಎಲ್ಲ ಕ್ಷೇತ್ರಗಳಲ್ಲೂ ಇಂಗ್ಲಿಷ್ ಭಾಷೆ ಅಳವಡಿಸಿಕೊಳ್ಳುವುದು ಆತ್ಮಹತ್ಯೆ ಮಾಡಿಕೊಂಡಂತೆ. ಮಕ್ಕಳಿಗೆ ಕನ್ನಡ ಭಾಷೆ ಕಲಿಸದಿದ್ದರೆ ನಮ್ಮ ಸಂಸ್ಕೃತಿ ನಾಶ ಹೊಂದುತ್ತದೆ~ ಎಂದು ಅವರು ಎಚ್ಚರಿಸಿದರು.`ಇತ್ತೀಚೆಗೆ ಉದ್ಯಮಿಗಳು, ಮಧ್ಯಮ ವರ್ಗ, ಶ್ರೀಮಂತರಲ್ಲಿ ಇಂಗ್ಲಿಷ್ ಭಾಷೆಯ ಅತೀ ವ್ಯಾಮೋಹ ಬೆಳೆದಿದೆ. ಆಧುನಿಕ ಯುವ ಉದ್ಯಮಿಗಳು ಇಂಗ್ಲಿಷ್ ಭಾಷೆಯನ್ನು ಮಾತ್ರ ಬಳಸುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಇಂಗ್ಲಿಷ್ ಭಾಷೆ ಬೇಕು. ಎಲ್ಲ ಕ್ಷೇತ್ರದಲ್ಲೂ ಇಂಗ್ಲಿಷ್ ಬೇಕಿಲ್ಲ. ಮಾತೃಭಾಷೆ ಕಲಿತ ಬಳಿಕ ಬೇರೆ ಭಾಷೆ ಕಲಿತರೆ ಸಾಕು. ಕನ್ನಡ ಕಲಿತ ಬಳಿಕ ಇಂಗ್ಲಿಷನ್ನು ಚೆನ್ನಾಗಿ ಕಲಿಯಬಹುದು~ ಎಂದು ಅವರು ಕಿವಿಮಾತು ಹೇಳಿದರು.`ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಂಸ್ಕೃತಿಕ ನೀತಿಯ ಮಾತನಾಡುತ್ತಿವೆ. ಆರ್ಥಿಕ ನೀತಿ ಎಲ್ಲರಿಗೂ ಗೊತ್ತು ಹಾಗೂ ಅದರ ಅಗತ್ಯ ಇದೆ. ಆದರೆ ಈ ನೀತಿ ಏನೆಂದು ಅರ್ಥವಾಗುತ್ತಿಲ್ಲ~ ಎಂದು ಲೇವಡಿ ಮಾಡಿದ ಅವರು, `ನಮ್ಮಲ್ಲಿ ಅನೇಕ ಸಂಗೀತ ವಿಶ್ವವಿದ್ಯಾಲಯಗಳು ಇವೆ. ಆದರೆ ಒಬ್ಬನೇ ಒಬ್ಬ ಶ್ರೇಷ್ಠ ಸಂಗೀತಗಾರರನ್ನು ಈ ವಿವಿಗಳು ತಯಾರು ಮಾಡಿಲ್ಲ. ಗುರು ಶಿಷ್ಯ ಪರಂಪರೆ, ಸಂಗೀತ ಸಭಾಗಳ ಮೂಲಕ ಭಾರತೀಯ ಸಂಗೀತ, ಕಲೆ ಉಳಿದಿದೆ. ಸರ್ಕಾರ ಹಣ ತೊಡಗಿಸಿದ ಕ್ಷೇತ್ರವು ಅವನತಿ ಹೊಂದುತ್ತಿದೆ~ ಎಂದು ವಿಷಾದಿಸಿದರು.ಪ್ರಶಸ್ತಿ ಸ್ವೀಕರಿಸಿದ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ, `ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ಸಾಧನೆ ಸುಲಭವಾಗಿ ಬರುವುದಿಲ್ಲ. ಇದಕ್ಕೆ ಸಾಕಷ್ಟು ಪರಿಶ್ರಮ ಬೇಕು. ನಿರುದ್ಯೋಗ ಸಮಸ್ಯೆ ದೇಶದ ದೊಡ್ಡ ಸಮಸ್ಯೆ. ಉದ್ಯೋಗ ಸೃಷ್ಟಿಸಿದರೆ ದೇಶದ ಸಮಸ್ಯೆ ತಕ್ಕ ಮಟ್ಟಿಗೆ ನಿವಾರಿಸಲು ಸಾಧ್ಯ~ ಎಂದರು.ಪ್ರಶಸ್ತಿ ಪುರಸ್ಕೃತ ಹಿರಿಯ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ, `ಕ್ರೀಡೆ ಹಾಗೂ ಶಿಕ್ಷಣ ಜೊತೆ ಜೊತೆಯಲ್ಲಿ ಸಾಗಬೇಕು. ಕರ್ನಾಟಕದ ಹೆಮ್ಮೆಯ ಪುತ್ರ ಎಂಬ ಮಾತು ಕೇಳುವಾಗ ಸಂತಸ ಆಗುತ್ತದೆ. ಕರ್ನಾಟಕದ ಆಟಗಾರರ ಪರವಾಗಿ ಈ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ~ ಎಂದರು.ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿ, `ಜಾತಿ, ಅಪರಾಧ ಹಾಗೂ ಭ್ರಷ್ಟಾಚಾರ ದೇಶಕ್ಕೆ ಅಂಟಿದ ಕಳಂಕ. ಯುವಜನತೆ ಇವುಗಳ ವಿರುದ್ಧ ಹೋರಾಟ ಮಾಡಬೇಕು~ ಎಂದರು.ಹಿರಿಯ ಕಲಾವಿದ ಯೂಸಫ್ ಅರಕ್ಕಲ್, ಸಿನಿಮಾ ನಟಿ ರಮ್ಯಾ ಪ್ರಶಸ್ತಿ ಸ್ವೀಕರಿಸಿದರು. ರೌಂಡ್ ಟೇಬಲ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಟಿ.ಆರ್. ಅಶ್ವಿನ್ ಕುಮಾರ್ ಹೇಮ್‌ದೇವ್, ಬೆಂಗಳೂರು ಘಟಕದ ಅಧ್ಯಕ್ಷ ಬಿ.ಆರ್. ವಿಶ್ವಾಸ್ ಉಪಸ್ಥಿತರಿದ್ದರು.

ಆಂಗ್ಲ ಮಾಧ್ಯಮ: ತಡೆ ಹಿಡಿಯಲು ಆಗ್ರಹ

ಬೆಂಗಳೂರು:  ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಆರಂಭಿಸಲು ನೀಡಿರುವ ಅನುಮತಿಯನ್ನು ಭಾಷಾ ನೀತಿ ವಿವಾದ ಇತ್ಯರ್ಥವಾಗುವವರೆಗೂ ತಡೆಹಿಡಿಯಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಶುಕ್ರವಾರ ಇಲ್ಲಿ ಒತ್ತಾಯಿಸಿದರು.ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ಬೇರೆ ಬೇರೆ ರಾಜ್ಯಗಳಲ್ಲೂ ಭಾಷಾ ನೀತಿಯ ಗೊಂದಲಗಳಿವೆ. ಪ್ರಾದೇಶಿಕ ಭಾಷೆಗಳು ಅಪಾಯ ಎದುರಿಸುತ್ತಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಏಕರೂಪ ಭಾಷಾ ನೀತಿಯನ್ನು ರೂಪಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದಾಗುವ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗಲೇ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಷರತ್ತು ವಿಧಿಸಬೇಕು. ಸರ್ಕಾರದಿಂದ ಹಲವು ಸೌಲಭ್ಯಗಳನ್ನು ಪಡೆಯುವ ಕಂಪೆನಿಗಳು ಉದ್ಯೋಗ ನೀಡುವಾಗ ಸ್ಥಳೀಯರನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.