ಎಸ್ಟೇಟ್ ಮಾಲೀಕರಿಗೂ ಸೌಲಭ್ಯ!

7

ಎಸ್ಟೇಟ್ ಮಾಲೀಕರಿಗೂ ಸೌಲಭ್ಯ!

Published:
Updated:

ಚಿಕ್ಕಮಗಳೂರು: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಮತ್ತು ಕೂಲಿಕಾರ್ಮಿಕರಿಗೆ ಸಿಗಬೇಕಾದ ಸ್ವಾಸ್ಥ್ಯ ಬಿಮಾ ಯೋಜನೆ ಸ್ಮಾರ್ಟ್ ಕಾರ್ಡ್‌ಗಳು ಜಿಲ್ಲೆಯಲ್ಲಿ 25, 50, 100 ಎಕರೆ ಕಾಫಿ ತೋಟದ ಮಾಲೀಕರಿಗೆ ಸಿಕ್ಕಿವೆ!ಎಸ್ಟೇಟ್‌ಗಳಲ್ಲಿ ಕೂಲಿ ಮಾಡುತ್ತಿರುವ ಕಾರ್ಮಿಕರು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯ ಫಲ ಪಡೆಯದೆ ವಂಚಿತರಾಗಿದ್ದಾರೆ. ಬಡವರ ಸವಲತ್ತು ಉಳ್ಳವರ ಪಾಲಾಗಿರುವುದಕ್ಕೆ ಮಲೆನಾಡಿನ ಬಹಳಷ್ಟು ಗ್ರಾಮಗಳಲ್ಲಿ ಕಾರ್ಮಿಕ ವರ್ಗದ ಆಕ್ರೋಶ ಭುಗಿಲೆದ್ದಿದೆ.ಇದು ಕೇಂದ್ರ ಸರ್ಕಾರ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಗೆ ಹತ್ತು ವರ್ಷಗಳ ಹಿಂದೆ ಫಲಾನುಭವಿಗಳನ್ನು ಗುರುತಿಸುವಾಗ ಆಗಿರುವ ಪ್ರಮಾದ. 2002ರಲ್ಲಿ  ಕುಟುಂಬಗಳ ಸಮೀಕ್ಷೆ ಮಾಡಲಾಗಿತ್ತು. ಆಗ ಸಂಗ್ರಹಿಸಿದ್ದ ಬಿಪಿಎಲ್ ಕುಟುಂಬಗಳ ಅಂಕಿಅಂಶ ಆಧರಿಸಿ ಮೈಸೂರು, ಬೆಳಗಾವಿ, ಮಂಗಳೂರು, ಶಿವಮೊಗ್ಗ ಬೆಂಗಳೂರು ಈ 5 ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಸ್ವಾಸ್ಥ್ಯ ಬಿಮಾ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊ ಳಿಸಿತು.ಇದರ ಯಶಸ್ಸಿನ ಮೇಲೆ ಇಡೀ ರಾಜ್ಯಕ್ಕೆ ಯೋಜನೆ ವಿಸ್ತರಿಸಿ, ಈ ವರ್ಷದಿಂದ 30 ಜಿಲ್ಲೆಗಳಲ್ಲೂ ಸೌಲಭ್ಯ ಒದಗಿಸಲು ಕಾರ್ಡ್ ವಿತರಣೆ ಹೊಣೆಯನ್ನು ಕಾರ್ಮಿಕ ಇಲಾಖೆಗೆ ವಹಿಸಿದೆ.10 ವರ್ಷಗಳ ಹಿಂದೆ ಬಡತನ ರೇಖೆ ಕೆಳಗೆ ಗುರುತಿಸಲ್ಪಟ್ಟಿದ್ದ ಕುಟುಂಬಗಳು ಇಂದು ಬಡವ ರಾಗಿ ಉಳಿದಿಲ್ಲ. ಅಲ್ಲದೆ ಗ್ರಾಮಗಳಿಗೆ ಸರ್ವ ಕುಟುಂಬಗಳ ಸಮೀಕ್ಷೆಗೆ ಬಂದಿದ್ದ ಇಲಾಖೆ ಸಿಬ್ಬಂ ದಿಗೆ ಸುಳ್ಳು ಮಾಹಿತಿ ನೀಡಿ, ಯೋಜನೆಯ ಫಲಾ ನುಭವಿಗಳಾಗಿದ್ದಾರೆ.

 

ಹತ್ತು ವರ್ಷಗಳ ನಂತರದಲ್ಲಿ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸದಿರುವ ಹಿನ್ನೆಲೆಯಲ್ಲಿ ಹೊಸ ಕುಟುಂಬಗಳು ಈ ಯೋಜನೆಯಲ್ಲಿ ಸೇರಿಲ್ಲ. ಹೀಗಾಗಿ ಸ್ವಾಸ್ಥ್ಯ ಬಿಮಾ ಯೋಜನೆ ಕಾರ್ಡ್ ಪಡೆಯುವ ಅರ್ಹತೆ ಇದ್ದರೂ ವಂಚಿತವಾಗಿ ಪರಿತಪಿಸುವಂತಾಗಿದೆ.ಕಾಫಿ ಎಸ್ಟೇಟ್ ಮಾಲೀಕರು, ದೊಡ್ಡ ಭೂ ಹಿಡುವಳಿ ದಾರರು, ಸರ್ಕಾರಿ ನೌಕರರ ಕುಟುಂಬಗಳನ್ನು ಹಾಗೂ ಬಡವರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಎಲ್ಲರಿಗೂ ವಾರ್ಷಿಕ 30 ಸಾವಿರ ರೂಪಾಯಿವರೆಗೆ ಉಚಿತ ಆರೋಗ್ಯ ಸೇವೆ ಪಡೆಯುವ ಸ್ಮಾರ್ಟ್ ಕಾರ್ಡ್ ನೀಡುತ್ತಿರುವುದು ಸರಿಯಲ್ಲ ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಬಡವರ ಸೌಲಭ್ಯ ಉಳ್ಳವರ ಪಾಲಾಗಿರುವು ದಕ್ಕೆ ಕುಪಿತಗೊಂಡಿರುವ ಕಾರ್ಮಿಕ ವರ್ಗ ಮತ್ತು ವಿವಿಧ ಜನಪರ ಸಂಘಟನೆಗಳು, ಮಲೆನಾಡಿನ ಬಹುತೇಕ ಹಳ್ಳಿಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಿ ಸಲು ಅವಕಾಶ ನೀಡದೆ, ಕಾರ್ಮಿಕ ಇಲಾಖೆ ಸಿಬ್ಬಂದಿಯನ್ನು ವಾಪಸ್ ಕಳುಹಿಸಿರುವ ಪ್ರಸಂಗ ಗಳು ನಡೆದಿವೆ. ಕಡೂರು ತಾಲ್ಲೂಕಿನ ಜೋಡಿ ತಿಮ್ಮನಹಳ್ಳಿಯಲ್ಲಿ ಇಲಾಖೆ ಸಿಬ್ಬಂದಿಯನ್ನು ಪಂಚಾಯಿತಿ ಕೊಠಡಿಯಲ್ಲಿ ಕೂಡಿ ದಿಗ್ಬಂಧನ ಹಾಕಿದ ನಿದರ್ಶನವೂ ಇದೆ.ಮೂಡಿಗೆರೆ ತಾಲ್ಲೂ ಕಿನ ಸುಂಕಸಾಲೆ, ಜಾವಳಿ, ಬಾಳೂರು, ಕೂವೆ, ಬಣಕಲ್ ಪಂಚಾಯಿತಿಯಲ್ಲಿ ಸ್ಮಾರ್ಟ್ ಕಾರ್ಡ್ ವಿತರಿಸಲು ಕಾರ್ಮಿಕ ಇಲಾಖೆಗೆ ಅವಕಾಶವನ್ನೇ ನೀಡಿಲ್ಲ. ಶೃಂಗೇರಿ, ಕಡೂರು ತಾಲ್ಲೂಕುಗಳಲ್ಲೂ ಇದೇ ಪರಿಸ್ಥಿತಿ ಇದ್ದು, ಜನರಿಗೆ ಮನದಟ್ಟು ಮಾಡುವಷ್ಟರಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಸಾಕಷ್ಟು ಹೈರಾಣಾಗಿ ಹೋಗಿದ್ದಾರೆ.ಬಣಕಲ್ ಗ್ರಾಮ ಪಂಚಾಯಿತಿಯ ಗ್ರಾಮವೊಂದರಲ್ಲಿ ಸುಮಾರು 60 ಎಕರೆ ಎಸ್ಟೇಟ್ ಹೊಂದಿರುವ ಕಾಫಿ ಬೆಳೆಗಾರರೊಬ್ಬರಿಗೆ ಸ್ವಾಸ್ಥ್ಯ ಬಿಮಾ ಯೋಜನೆಯ ಸ್ಮಾರ್ಟ್ ಕಾರ್ಡ್ ಸಿಕ್ಕಿದೆ. ಹತ್ತು ವರ್ಷಗಳ ಹಿಂದೆ ಜಾರಿಯಲ್ಲಿದ್ದ ಕೂಲಿಗಾಗಿ ಕಾಳು ಯೋಜನೆಯಡಿ ಕಾಮಗಾರಿಯ ಬಿಲ್ ಪಡೆದುಕೊಂಡಿದ್ದರಿಂದ ಇವರ ಹೆಸರನ್ನು ಸ್ವಾಸ್ಥ್ಯ ಬಿಮಾ ಯೋಜನೆಗೆ ಸೇರ್ಪಡೆ ಮಾಡಿ, ಸ್ಮಾರ್ಟ್ ಕಾರ್ಡ್ ನೀಡಿದ್ದಾರೆ.

 

ಇಂತಹ ಅಭಾಸದ ಪ್ರಕರಗಳು ಪ್ರತಿ ಹಳ್ಳಿಯಲ್ಲೂ ಹತ್ತಾರು ಸಿಗುತ್ತವೆ. ಇದೇ ಉದ್ದೇಶದಿಂದ ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ತಡೆಯೊಡ್ಡಲಾಯಿತು. ಉಳ್ಳವರಿಗೆ ನೀಡಿರುವ ಕಾರ್ಡ್‌ಗಳನ್ನು ರದ್ದುಪಡಿಸಿ ಬಡತನ ರೇಖೆಗಿಂತ ಕೆಳಗಿರುವ ಮತ್ತು ಕೂಲಿಕಾರ್ಮಿಕ ಕುಟುಂಬಗಳಿಗೆ ಮಾತ್ರ ವಿತರಿಸಬೇಕು ಎಂದು ಕರ್ನಾಟಕ ಜನಶಕ್ತಿ ಸಂಘಟನೆ ಸಂಚಾಲಕ ಗೌಸ್ ಮೊಹಿಯುದ್ದೀನ್ ಒತ್ತಾಯಿಸುತ್ತಾರೆ.ಜಿಲ್ಲೆಯಲ್ಲಿ ಯೋಜನೆಗೆ 1,09,819 ಮಂದಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಬೇಕು. ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ಬರದಿದ್ದರೆ ಮೂರು ತಿಂಗಳ ಕಾಲಮಿತಿಯಲ್ಲಿ ಕಾರ್ಡ್ ವಿತರಣೆ ಪೂರ್ಣವಾಗುತ್ತಿತ್ತು. ಏಪ್ರಿಲ್‌ವರೆಗೆ 56 ಸಾವಿರ ಕಾರ್ಡ್ ವಿತರಣೆಯಾಗಿದ್ದು, ಮೇ ಅಂತ್ಯಕ್ಕೆ ಬಹುತೇಕ ಕಾರ್ಡ್ ವಿತರಣೆ ಪೂರ್ಣವಾಗುತ್ತಾ ಬಂದಿದೆ.ಕೆಲವು ಪಂಚಾಯಿತಿಗಳಲ್ಲಿ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಕಾರ್ಡ್ ವಿತರಣೆ ಸಾಧ್ಯವಾಗಿಲ್ಲ. ಪ್ರತಿಯೊಂದು ತಾಲ್ಲೂಕಿನಲ್ಲೂ ಜನರಿಂದ ಅಸಮಾಧಾನ ವ್ಯಕ್ತವಾಯಿತು. ಸರ್ವ ಕುಟುಂಬಗಳ ಸಮೀಕ್ಷೆಯ ಡೆಟಾದಲ್ಲಿ ವ್ಯತ್ಯಾಸ ಇರುವುದರಿಂದ ಈ ಸಮಸ್ಯೆ ಎದುರಾಗಿದೆ. ಮೂಡಿಗೆರೆ ತಾಲ್ಲೂಕಿನ 5 ಪಂಚಾಯಿತಿಗಳಲ್ಲಿ ಕಾರ್ಡ್ ನೀಡುವ ಪ್ರಕ್ರಿಯೆ ಸ್ಥಗಿತಗೊಳಿಸಿದ್ದೇವೆ. ಕೇಂದ್ರ ಸರ್ಕಾರ ನೀಡಿರುವ ಪಟ್ಟಿಯಂತೆ ಕಾರ್ಡ್ ವಿತರಿಸಬೇಕು. ಇದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಯೋಜನೆ ಅನುಷ್ಠಾನಗೊಳಿಸಲು ಶ್ರಮಿಸುತ್ತಿದ್ದೇವೆ ಎನ್ನುತ್ತಾರೆ ಸಹಾಯಕ ಕಾರ್ಮಿಕ ಆಯುಕ್ತೆ ಎ.ಜೆ.ಶ್ರೀವಳ್ಳಿ.ಏನಿದು ಸ್ವಾಸ್ಥ್ಯ ಬೀಮಾ ಯೋಜನೆ:  ಯೋಜನೆ ಯಡಿ ಆಯ್ಕೆಯಾದ ಕುಟುಂಬದ ಯಜಮಾನ ಅಥವಾ ಯಜಮಾನಿ ಸೇರಿದಂತೆ ಅವರು ಸೂಚಿಸುವ ಗರಿಷ್ಠ 5 ಮಂದಿ ಬಯೋಮೆಟ್ರಿಕ್ ಸ್ಮಾರ್ಟ್ ಕಾರ್ಡ್ ತೋರಿಸಿ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ತುರ್ತು ಚಿಕಿತ್ಸೆ ಮತ್ತು ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಸೌಲಭ್ಯ ಒದಗಿಸಲು ಈ ಯೋಜನೆ ಯಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 710 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ.ಇಡೀ ರಾಜ್ಯದಲ್ಲಿ ಸುಮಾರು 8 ಸಾವಿರ ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ. ಸ್ಮಾರ್ಟ್ ಕಾರ್ಡ್ ಬಳಸುವ ಮೊದಲು ಅದನ್ನು ಸಂಬಂಧಪಟ್ಟ ಆಸ್ಪತ್ರೆಯಲ್ಲಿ ನೋಂದಣಿ ಮಾಡಿಸಿ ಕಾರ್ಡ್ ಆಕ್ಟಿವೇಟ್ ಮಾಡಿಸಿಕೊಳ್ಳಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry