ಮಂಗಳವಾರ, ನವೆಂಬರ್ 19, 2019
23 °C

ಎಸ್ಪಿ ಚೇತನ್‌ಸಿಂಗ್ ಅಮಾನತ್ತಿಗೆ ಆಗ್ರಹ

Published:
Updated:

ಅಕ್ಕಿಆಲೂರ: ಹೋಳಿ ಹುಣ್ಣಿಮೆ ಆಚರಣೆಯಲ್ಲಿ ಅನವಶ್ಯಕ ತೀರ್ಮಾನ ಕೈಗೊಂಡು ಸಮುದಾಯದಲ್ಲಿ ಭೀತಿ ಸೃಷ್ಟಿಸುವ ಮೂಲಕ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಠೋರ್ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿ ಸೋಮವಾರ ಕರೆ ನೀಡಿದ್ದ `ಅಕ್ಕಿಆಲೂರ ಬಂದ್' ವ್ಯಾಪಕ ಬೆಂಬಲ ವ್ಯಕ್ತವಾಯಿತು.ಬೆಳಿಗ್ಗೆ ಸ್ಥಳೀಯ ಚನ್ನವೀರೇಶ್ವರ ವಿರಕ್ತಮಠದಿಂದ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿದ ಸುಮಾರು 5 ಸಾವಿರಕ್ಕೂ ಹೆಚ್ಚು ನಾಗರಿಕರು ಕೈಗೆ ಕಪ್ಪು ಬಟ್ಟೆ ಧರಿಸಿ ಮೆರವಣಿಗೆಯುದ್ದಕ್ಕೂ ಮೌನಯುತವಾಗಿ ಹೆಜ್ಜೆ ಹಾಕುವ ಮೂಲಕ ತಾವು ಶಾಂತಿಪ್ರೀಯರು ಎನ್ನುವ ಸಂದೇಶ ಸಾರಿದರು. ಪ್ರತಿವರ್ಷ ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ಆನೆ ಅಂಬಾರಿ ಮೆರವಣಿಗೆ ಕುಂಬಾರ ಓಣಿಯಲ್ಲಿ ನಡೆಯುವುದು ಸಂಪ್ರದಾಯ.ಈ ಸಂಪ್ರದಾಯವನ್ನು ಮುರಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೆರವಣಿಗೆಯಲ್ಲಿ ಕೇವಲ 21 ಜನರಿಗೆ ತೆರಳಲು ಅವಕಾಶ ನೀಡುವುದಾಗಿ ಹೇಳಿದ್ದರು. ಜೊತೆಗೆ ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಯ ಕಾರ್ಯಕ್ಕೆ ನಿಯೋಜಿಸಿದ್ದು, ಹಿಂದೂಗಳನ್ನು ಕೆರಳಿಸಿತ್ತು. ಕುಂಬಾರ ಓಣಿಯಲ್ಲಿ ಎಲ್ಲರಿಗೂ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ. ಶಾಂತಿ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಸ್ವತಃ ತಾವೇ ವಹಿಸುವುದಾಗಿ ಇಲ್ಲಿಯ ಹಿಂದೂ ಸಮುದಾಯದ ಹಿರಿಯರು ಪೊಲೀಸ್ ಅಧಿಕಾರಿಗಳಲ್ಲಿ ಪದೇ ಪದೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿರದ ಹಿನ್ನೆಲೆಯಲ್ಲಿ ಹೋಳಿ ಹುಣ್ಣಿಮೆಗೆ ಸಾಮೂಹಿಕವಾಗಿ ಬಹಿಷ್ಕಾರ ಹಾಕಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.ಚನ್ನವೀರೇಶ್ವರ ವಿರಕ್ತಮಠದಿಂದ ಆರಂಭವಾದ ಮೌನ ಮೆರವಣಿಗೆ ಪೇಟೆ ಓಣಿ, ಕೆಳಗಿನ ಓಣಿ, ಹಳೂರು ಓಣಿ, ಕುಮಾರ ನಗರ, ಸಿಂಧೂರ ಸಿದ್ಧಪ್ಪ ವೃತ್ತದ ಮೂಲಕ ಹಾಯ್ದು ನಾಡಕಚೇರಿ ತಲುಪಿತು. ಈ ವೇಳೆ ತಹಶೀಲ್ದಾರ್ ಡಾ.ನಾಗೇಂದ್ರ ಹೊನ್ನಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಠೋರ್, ತಮ್ಮ ಅಧಿಕಾರದ ಬಲಪ್ರಯೋಗದಿಂದ ಹಿಂದೂ ಧರ್ಮಕ್ಕೆ ಅವಮಾನ ಮಾಡುವ ಉದ್ದೇಶದಿಂದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿಲಿಲ್ಲ. ಸಾವಿರಕ್ಕೂ ಹೆಚ್ಚು ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ರಕ್ಷಣೆಯ ನೆಪದಲ್ಲಿ ಭೀತಿ ಹುಟ್ಟಿಸಿದ ಪರಿಣಾಮದಿಂದ ಸಾಕಷ್ಟು ನಾಗರಿಕರು ಊರು ಬಿಟ್ಟು ಬೇರೆಡೆ ತೆರಳುವಂತಾಯಿತು. ಪ್ರತಿವರ್ಷ ಆನೆ ಅಂಬಾರಿ ಮೆರವಣಿಗೆ ಸಾಗುವ ಮಾರ್ಗಗಳನ್ನು ಬದಲಿಸಿ ದ್ವೇಷ ಹುಟ್ಟು ಹಾಕುವಂತೆ ಮಾಡಿದ್ದಾರೆ. ಹಬ್ಬದಲ್ಲಿ ಪಾಲ್ಗೊಳ್ಳುವರ ಮೇಲೆ ಲಾಠಿ ಪ್ರಹಾರ, ಅಶ್ರುವಾಯು ಸಿಡಿಸುವುದಾಗಿ ಎಚ್ಚರಿಕೆ ನೀಡಿರುವುದು ಸರಿಯಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.ಮತದಾನ ಬಹಿಷ್ಕರಿಸುವ ಎಚ್ಚರಿಕೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಠೋರ್ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ದೇಶದ ಸಂವಿಧಾನಿಕ ಹಕ್ಕುಗಳಲ್ಲಿ ಒಂದಾದ ಧಾರ್ಮಿಕ ಹಕ್ಕನ್ನು ಕಸಿದಿದ್ದಾರೆ. ಶಾಂತಿಯುತವಾಗಿ ನಡೆಯಬೇಕಿದ್ದ ಹೋಳಿ ಹುಣ್ಣಿಮೆಯನ್ನು ಹಾಳು ಮಾಡಿ ನೋವುಂಟು ಮಾಡಿದ್ದಾರೆ. ತಕ್ಷಣವೇ ಚೇತನಸಿಂಗ್ ರಾಠೋರ್ ಅವರನ್ನು ಅಮಾನತ್ತುಗೊಳಿಸಿ ರಾಜ್ಯದಿಂದ ಬೇರೆಡೆ ವರ್ಗಾವಣೆಗೊಳಿಸಬೇಕು. ಜೊತೆಗೆ ಪುನಃ ಹೋಳಿ ಹುಣ್ಣಿಮೆ ಆಚರಣೆಗೆ ಅವಕಾಶ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯ ಮತದಾನ ಬಹಿಷ್ಕರಿಸುವ ಮೂಲಕ ವಿವಿಧ ಸಂಘಟನೆಗಳ ಆಶ್ರಯದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ. ಮಧ್ಯಾಹ್ನದ ವರೆಗೆ ಅಂಗಡಿ-ಮುಂಗ್ಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಲಾಗಿತ್ತು.

ಪ್ರತಿಕ್ರಿಯಿಸಿ (+)