ಗುರುವಾರ , ಜನವರಿ 30, 2020
22 °C

ಎಸ್.ಬಂಗಾರಪ್ಪಗೆ ಭಾವಪೂರ್ಣ ಶ್ರದ್ಧಾಂಜಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರಿಗೆ ಎಸ್.ಬಂಗಾರಪ್ಪನವರ ಅಭಿಮಾನಿಗಳ ಬಳಗದ ವತಿಯಿಂದ ನಗರದ ಕಲಾಮಂದಿರದಲ್ಲಿ ಶುಕ್ರವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಠಾಧೀಶರು, ಧರ್ಮ ಗುರುಗಳು, ರಾಜಕಾರಣಿಗಳು, ಬಂಗಾರಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಶಿಸ್ತಿನ ಸಿಪಾಯಿ: ಈ ಸಂದರ್ಭದಲ್ಲಿ ಮಾತನಾಡಿದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, `ವರ್ಣನಾತ್ಮಕ ವ್ಯಕ್ತಿತ್ವ ಹೊಂದಿದ್ದ ಬಂಗಾರಪ್ಪ ಅಪರೂಪದ ರಾಜಕಾರಣಿ. ಶಿಸ್ತಿನ ಸಿಪಾಯಿಯಾಗಿದ್ದ ಅವರು ಕ್ರೀಡೆ, ಸಾಹಿತ್ಯ, ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ತಮ್ಮ ಭಾಷಣಗಳಲ್ಲಿ ಕವನ ವಾಚಿಸುತ್ತ ಸಾಹಿತ್ಯಾಭಿಮಾನ ಮೆರೆಯುತ್ತಿದ್ದರು. ಒಂದು ಸಾರಿ ನಿರ್ಧಾರ ತೆಗೆದುಕೊಂಡರೆ ಎಂತಹ ಸಂದರ್ಭದಲ್ಲೂ ಬದಲಾಯಿ ಸುತ್ತಿರಲಿಲ್ಲ~ ಎಂದು ಹೇಳಿದರು.`ಹುಟ್ಟು ಸ್ವಾಭಾವಿಕ, ಸಾವು ನಿಶ್ಚಿತ, ನೆನಪು ನಿರಂತರ. ಬಂಗಾರಪ್ಪ ದೈಹಿಕವಾಗಿ ಮಾತ್ರ ಅಗಲಿದ್ದಾರೆ. ಸಾವು ನಿಶ್ಚಿತ ಎಂಬುದನ್ನು ಎಲ್ಲರೂ ಅರಿತುಕೊಂಡರೆ ಇರುವಷ್ಟು ದಿನ ನೆಮ್ಮದಿಯಿಂದ ಬದುಕಬಹುದು~ ಎಂದು ತಿಳಿಸಿದರು.ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, `ಬಡವರ ಪರ ಹೋರಾಟಗಾರ, ಅಂತಕರಣ ಹೊಂದಿದ್ದ ಬಂಗಾರಪ್ಪನವರು ಆದರ್ಶ ಕನಸು ಹೊತ್ತು, ಬದಲಾವಣೆ ಬಯಸಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದರು. ಅವರ ಅಗಲಿಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ಅವರ ಹೆಸರಿನಲ್ಲೇ ಪಕ್ಷವನ್ನು ಮುನ್ನಡೆಸಲಾಗುವುದು~ ಎಂದು ಹೇಳಿದರು.ಆರ್ಯ ಈಡಿಗ ಸಮಾಜದ ರೇಣುಕಾನಂದ ಸ್ವಾಮೀಜಿ, ಸಿದ್ದಬಸವ ಕಬೀರ ಸ್ವಾಮೀಜಿ, ಭಾಷ್ಯಂ ಸ್ವಾಮೀಜಿ, ಮುಡಾ ಮಾಜಿ ಅಧ್ಯಕ್ಷ ಪಿ.ಗೋವಿಂದರಾಜು, ರಾಜ್ಯ ಯುವ ಜನತಾದಳದ ಅಧ್ಯಕ್ಷ ಮಧು ಬಂಗಾರಪ್ಪ, ಮಾಜಿ ಶಾಸಕ ಅಲೆಗ್ಸಾಂಡರ್, ಶಾಸಕ ತನ್ವೀರ್ ಸೇಟ್, ಚಿಕ್ಕಮಾದು, ಮಾಜಿ ಸಚಿವ ಎಂ.ಶಿವಣ್ಣ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಬಸವೇಗೌಡ, ಮೇಯರ್ ಪುಷ್ಪಲತಾ ಚಿಕ್ಕಣ್ಣ ಸೇರಿದಂತೆ ಇತರರು ಹಾಜರಿದ್ದರು.ಪ್ರಧಾನಿ ಅರ್ಹತೆ ಇತ್ತು

ಬಂಗಾರಪ್ಪನವರಿಗೆ ಪ್ರಧಾನಿಯಾಗುವ ಎಲ್ಲ ಅರ್ಹತೆ ಇತ್ತು. ಜನಪರ ಕಾಳಜಿಯುಳ್ಳ ರಾಜಕಾರಣಿಯಾಗಿದ್ದ ಅವರು, ಯುವಕರಿಗೆ ಮಾರ್ಗದರ್ಶನ ಮಾಡುತ್ತ ಪ್ರೋತ್ಸಾಹಿಸುತ್ತಿದ್ದರು. ಮನುಷ್ಯ ಅಧಿಕಾರಕ್ಕೆ ಅಂಟಿಕೊಳ್ಳಬಾರದು ಎಂದು ಹೇಳುತ್ತಿದ್ದ ಅವರು, ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಿರಲಿಲ್ಲ. ಸಂಘರ್ಷ ಮತ್ತು ವೈರುಧ್ಯದ ನಡುವೆಯೇ ಬೆಳೆದವರು.

-ಎಸ್.ಎ.ರಾಮದಾಸ್, ಸಚಿವ

ಖಡಕ್ ಸಮಾಜವಾದಿ

ಬಂಗಾರಪ್ಪ ಖಡಕ್ ಸಮಾಜವಾದಿ ಆಗಿದ್ದರು. ಕಾಗೋಡು ಚಳವಳಿಯೇ ರಾಜಕೀಯಕ್ಕೆ ಬರಲು ಪ್ರೇರಣೆ. ಅವರೊಬ್ಬ ಪಕ್ಷಾಂತರಿ, ಆದರೆ ತತ್ವಾಂತರಿ ಅಲ್ಲ. ಕೊಣಂದೂರು ಲಿಂಗಪ್ಪ, ಕಾಗೋಡು ತಿಮ್ಮಪ್ಪ ಹಾಗೂ ಬಂಗಾರಪ್ಪ ಮೂವರೂ ಜೊತೆಯಾಗಿಯೇ ರಾಜಕೀಯ ಪ್ರವೇಶ ಮಾಡಿದವರು. ಸಿಟ್ಟು, ಸಿಡುಕು, ಹಟವನ್ನು ಮೈಗೂಡಿಸಿಕೊಂಡಿದ್ದ ಬಂಗಾರಪ್ಪ ಇನ್ನು ನೆನಪು ಮಾತ್ರ.

-ಶ್ರೀನಿವಾಸ್ ಪ್ರಸಾದ್, ಶಾಸಕ

ರಾಜಕಾರಣದ `ರಾಜ~ಕುಮಾರ!

ಚಿತ್ರ ನಟ ಡಾ.ರಾಜಕುಮಾರ್ ಚಿತ್ರರಂಗದ ರಾಜನಾದರೆ, ಬಂಗಾರಪ್ಪ ರಾಜಕಾರಣದ `ರಾಜ~ ಆಗಿದ್ದರು. ನನ್ನ ರಾಜಕೀಯ ಗುರುಗಳೂ ಹೌದು. ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಅವರೇ ಕಾರಣ. ಗ್ರಾಮೀಣ ಕೃಪಾಂಕದ ಮೂಲಕ ಸಾವಿರಾರು ಮಂದಿ ನೌಕರರ ಆಶಾ ಕಿರಣವಾಗಿದ್ದಾರೆ.

-ಆರ್.ಧ್ರುವನಾರಾಯಣ, ಸಂಸದಬಂಗಾರದ ಆಸ್ತಿ!

ಸಾಮಾಜಿಕ ಸಿದ್ಧಾಂತ ಹಾಗೂ ರಾಜಿಯಾಗದ ನಿಲುವು ಬಂಗಾರಪ್ಪನವ ಬಂಗಾರದಂತಹ ಆಸ್ತಿಯಾಗಿದ್ದವು. ಅಸಾಮಾನ್ಯ ರಾಜಕಾರಣಿ ಆಗಿದ್ದ ಅವರು, ಕಾಂಗ್ರೆಸ್‌ನಲ್ಲಿ ಇದ್ದಾಗಲೇ ಸಚಿವ, ಮುಖ್ಯಮಂತ್ರಿ ಆಗಿದ್ದರು. ಯಾರನ್ನೂ ವಿರೋಧಿಸುತ್ತಿರಲಿಲ್ಲ. ಆದರೆ ಕೊನೆಯ ದಿನಗಳಲ್ಲಿ ಅವರು ನಡೆದುಕೊಂಡ ರೀತಿ ಎಲ್ಲ ರಾಜಕಾರಣಿಗಳಿಗೂ ಎಚ್ಚರಿಕೆಯ ಗಂಟೆ. ವಿಶ್ರಾಂತ ಜೀವನವನ್ನು ಹೇಗೆ ಕಳೆಯಬೇಕು ಎಂದು ರಾಜಕಾರಣಿಗಳೂ ಯೋಚಿಸುವಂತೆ ಮಾಡಿದ್ದಾರೆ.

-ಎಚ್.ವಿಶ್ವನಾಥ್, ಸಂಸದ

`ಬಂಗಾರಪ್ಪ ಯೋಜನೆ~ ಹೆಸರಿಡಿ

ಆಶ್ರಯ ಮನೆ ಯೋಜನೆಗೆ `ಬಂಗಾರಪ್ಪ ಯೋಜನೆ~ ಎಂದು ಹೆಸರಿಡಬೇಕು. ಬಂಗಾರಪ್ಪನವರ ಹೆಸರಿನಲ್ಲಿ ಶಿವಮೊಗ್ಗ ಅಥವಾ ಬೆಂಗಳೂರಿನಲ್ಲಿ ಅದ್ಭುತ ಸ್ಮಾರಕ ನಿರ್ಮಾಣ ಮಾಡಬೇಕು. ಈ ಎರಡೂ ಕೆಲಸಗಳನ್ನು ಸರ್ಕಾರವೇ ಮಾಡಬೇಕು. ಒಬ್ಬ ವ್ಯಕ್ತಿ ಸತ್ತಾಗ ಶ್ರದ್ಧಾಂಜಲಿ ಸಲ್ಲಿಸುವ ಬದಲು ಬದುಕಿದ್ದಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಕೆಂಗಲ್ ಹನುಮಂತಯ್ಯ ಬದುಕಿದ್ದಾಗಲೇ ಬೆಂಗಳೂರಿನ ಪ್ರಮುಖ ರಸ್ತೆಗೆ ಅವರ ಹೆಸರಿಡಲಾಗಿತ್ತು. ಅದೊಂದು ಬಾರಿ ನನ್ನ ಕರೆದು, `ಬಾರಯ್ಯ ನನ್ನ ಹೆಸರಿನ ರಸ್ತೆಯನ್ನು ನೋಡಿ ಬರೋಣ~ ಎಂದು ಹೇಳಿದ್ದರು.

-ವಾಟಾಳ್ ನಾಗರಾಜ್, ಮಾಜಿ ಶಾಸಕ

ಪ್ರತಿಕ್ರಿಯಿಸಿ (+)