ಎಸ್ಸೆಸೆಂ: ಬಂಡಾಯ ಸ್ಪರ್ಧೆಗೆ ಒತ್ತಾಯ

7
ಅಭಿಮಾನಿಗಳ ಬಳಗದ ಸಭೆ: ಹೈಕಮಾಂಡ್‌ಗೆ ಕಾಂಗ್ರೆಸ್ ಕಾರ್ಯಕರ್ತರ ಸವಾಲು

ಎಸ್ಸೆಸೆಂ: ಬಂಡಾಯ ಸ್ಪರ್ಧೆಗೆ ಒತ್ತಾಯ

Published:
Updated:
ಎಸ್ಸೆಸೆಂ: ಬಂಡಾಯ ಸ್ಪರ್ಧೆಗೆ ಒತ್ತಾಯ

ದಾವಣಗೆರೆ: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ನೀಡಬೇಕು. ಇಲ್ಲದಿದ್ದಲ್ಲಿ ಎಸ್ಸೆಸೆಂ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಎಸ್ಸೆಸೆಂ ಅಭಿಮಾನಿಗಳ ಸಭೆಯಲ್ಲಿ ಮಂಗಳವಾರ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.ಮಲ್ಲಿಕಾರ್ಜುನ ಅವರ ಬದಲು ಬೇರೊಬ್ಬರ ಹೆಸರು ಸೂಚಿಸಲಾಗಿದೆ. ಇದು ಕಾರ್ಯಕರ್ತರಿಗೆ ಆದ ಅವಮಾನ. ಪಕ್ಷದ ರಾಜ್ಯ ವರಿಷ್ಠರಿಗೆ `ಬಿಸಿ' ಮುಟ್ಟಿಸುವ ಕೆಲಸ ಮಾಡಬೇಕಷ್ಟೇ. ಕೆಪಿಸಿಸಿ ಅಧ್ಯಕ್ಷರ ಧೋರಣೆಗೆ ಪಾಠ ಕಲಿಸಬೇಕಾಗಿದೆ. ಟಿಕೆಟ್ ಕೊಡದಿದ್ದಲ್ಲಿ ಎಸ್ಸೆಸೆಂ ಪಕ್ಷೇತರರಾಗಿ ಸ್ಪರ್ಧಿಸಿ ಹೈಕಮಾಂಡ್‌ಗೆ ಸವಾಲು ಹಾಕಬೇಕು ಎಂದು ಸಭೆಯಲ್ಲಿ ವಿವಿಧ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.ಸಭೆಯಲ್ಲಿ ನಿರ್ಣಯ ಕೈಗೊಂಡ ನಂತರ ಕಾರ್ಯಕರ್ತರು ಎಸ್ಸೆಸೆಂ ಅವರ ಮನೆಯವರೆಗೂ ಪಾದಯಾತ್ರೆ ನಡೆಸಿ, ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಲ್ಲಿಕಾರ್ಜುನ ಅವರ ಮೇಲೆ ಒತ್ತಡ ಹೇರಿದರು.ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕಾರ್ಯಕರ್ತರು ಮಲ್ಲಿಕಾರ್ಜುನ ಅವರನ್ನು ಮನೆಯಿಂದ ಹೊತ್ತುಕೊಂಡೇ ಹೊರಗೆ ತಂದರು.ಅಭಿಮಾನಿಗಳ ಬೆಂಬಲ, ಒತ್ತಾಯಕ್ಕೆ ಭಾವುಕರಾದ ಮಲ್ಲಿಕಾರ್ಜುನ, `ಹೈಕಮಾಂಡ್ ಇನ್ನೂ ಏನೂ ತೀರ್ಮಾನಿಸಿಲ್ಲ. ಸಂಜೆಯ ನಂತರವಷ್ಟೇ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ. ತಾಳ್ಮೆಯಿಂದ ಇರಿ' ಎಂದು ಬೆಂಬಲಿಗರನ್ನು ಸಮಾಧಾನಪಡಿಸಲು ಯತ್ನಿಸಿದರು.

ಆದರೆ, ಅವರ ಮಾತಿಗೆ ಕಿವಿಗೊಡದ ಬೆಂಬಲಿಗರು, ಹೈಕಮಾಂಡ್‌ಗೇ ಸವಾಲು ಹಾಕಿ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂದು ತೀವ್ರ ಒತ್ತಡ ಹೇರಿದರು. ನಂತರ ಕಾರ್ಯಕರ್ತರನ್ನು ಸಮಾಧಾನಪಡಿಸಿದ ಮಲ್ಲಿಕಾರ್ಜುನ, ಕಾದು ನೋಡುವ ತಂತ್ರದ ಮೊರೆ ಹೊಕ್ಕರು.ಎಸ್ಸೆಸೆಂ ಅವರ ತೀರ್ಮಾನದ ಕುರಿತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಅವರನ್ನು ಸುದ್ದಿಗಾರರು ಮಾತಿಗೆಳೆಯಲು ಯತ್ನಿಸಿದರೂ, `ನಾನು ಈ ಬಗ್ಗೆ ಈಗಲೇ ಏನನ್ನೂ ಹೇಳುವುದಿಲ್ಲ. ಕಾದು ನೋಡಿ' ಎಂದಷ್ಟೇ ಚುಟುಕಾಗಿ ಉತ್ತರಿಸಿದರು.ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಅಸಗೋಡು ಜಯಸಿಂಹ ಮಾತನಾಡಿ, ಎಸ್ಸೆಸೆಂ ಬದಲಿಗೆ ಬೇರೆಯವರ ಹೆಸರು ಸೂಚಿಸಿರುವುದು ಕಾರ್ಯಕರ್ತರಿಗೆ ನೋವಾಗಿದೆ. ಸರ್ವಧರ್ಮವನ್ನೂ ಪ್ರೀತಿಸುವವನೇ ನಿಜವಾದ ನಾಯಕ. ಈ ನಿಟ್ಟಿನಲ್ಲಿ ಎಸ್ಸೆಸೆಂ ನಿಜವಾದ ನಾಯಕ. ಈ ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರೂ ಎಸ್ಸೆಸೆಂ ಉತ್ತಮ ಮಂತ್ರಿ ಎಂದು ಮೆಚ್ಚುಗೆ ಸೂಚಿಸಿದ್ದರು. ಮುಂದೊಂದು ದಿನ ಎಸ್ಸೆಸೆಂ ಮುಖ್ಯಮಂತ್ರಿಯೂ ಆಗಬಹುದು ಎಂದು ವಿಶ್ವಾಸವ್ಯಕ್ತಪಡಿಸಿದರು.ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕ ಅಧ್ಯಕ್ಷೆ ಪುಷ್ಪಾ ಲಕ್ಷ್ಮಣಸ್ವಾಮಿ ಮಾತನಾಡಿ, ಮಲ್ಲಣ್ಣ ಅವರನ್ನು ಹೊರುತಪಡಿಸಿದರೆ ಇತರ ಅಭ್ಯರ್ಥಿಯನ್ನು ಸಹೋದರ ಭಾವದಿಂದ ಕಾಣಲಾಗದು. ಮಲ್ಲಣ್ಣ ಅವರು ಮಾಡಿರುವ ಅಭಿವೃದ್ಧಿ ಕಾರ್ಯ ಮತ್ತೊಬ್ಬರು ಮಾಡಲಾಗದು ಎಂದು ಮಹಿಮ ಪಟೇಲ್ ಹೆಸರನ್ನು ಹೇಳದೇ ಪರೋಕ್ಷವಾಗಿ ಟೀಕಿಸಿದರು.ಕೆಪಿಸಿಸಿ ಸದಸ್ಯ ಡಿ. ಬಸವರಾಜ ಮಾತನಾಡಿ, ಎಸ್ಸೆಸೆಂ ಟಿಕೆಟ್ ನೀಡಬೇಕೆಂದು ದೆಹಲಿಯಲ್ಲಿ ಬೀಡುಬಿಟ್ಟು ನಾಯಕರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಆದರೆ, ರಾಜ್ಯದ ನಾಯಕರು ಎಸ್ಸೆಸೆಂ ಅಭಿವೃದ್ಧಿ ಗಮನಿಸದೇ ಬೇರೆಯವರ ಹೆಸರು ಸೂಚಿಸಿದ್ದಾರೆ. ಅಂತೆಯೇ ಮಾಯಕೊಂಡ ಕ್ಷೇತ್ರದಲ್ಲೂ ಕಾಣದ ಕೈಗಳು 25ವರ್ಷದಿಂದ ಕ್ಷೇತ್ರಕ್ಕೆಮುಖ ತೋರಿಸದ ಶಿವಮೂರ್ತಿ ನಾಯ್ಕ ಅವರಿಗೆ ಟಿಕೆಟ್ ನೀಡಲಾಗಿದೆ. ಎಸ್ಸೆಸೆಂಗೆ ಟಿಕೆಟ್ ನೀಡದಿದ್ದಲ್ಲಿ ಜಿಲ್ಲೆಯ 8 ಕ್ಷೇತ್ರಗಳಲ್ಲೂ ಕಾಂಗ್ರೆಸ್ ನೆಲೆ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.ಕಾಂಗ್ರೆಸ್ ಮುಖಂಡರಾದ ಎ. ನಾಗರಾಜ, ಕೆ.ಜಿ. ಶಿವಕುಮಾರ, ಅಜ್ಜಂಪುರ ಮುತ್ತಣ್ಣ, ಅಯೂಬ್ ಪೈಲ್ವಾನ್, ಮಂಜಣ್ಣ, ಖಾಸಿಂ ಸಾಬ್, ಡಾ.ಬಸವನಗೌಡ, ಶಾಮನೂರು ಕಲ್ಲೇಶ್, ಮೀನಾಕ್ಷಮ್ಮ, ದಿನೇಶ್ ಕೆ. ಶೆಟ್ಟಿ, ನಲ್ಕುಂದ ಹಾಲೇಶ್, ಲಿಂಗರಾಜು ಮತ್ತು ಅಪಾರಸಂಖ್ಯೆಯ ಬೆಂಬಲಿಗರು ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry