ಸೋಮವಾರ, ಜೂನ್ 21, 2021
28 °C
2014–15ನೇ ಸಾಲಿನಿಂದ ಜಾರಿ

ಎಸ್ಸೆಸ್ಸೆಲ್ಸಿ ಪಠ್ಯಕ್ರಮ, ಪರೀಕ್ಷಾ ಪದ್ಧತಿ ಬದಲಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂಬರುವ ಶೈಕ್ಷಣಿಕ ಸಾಲಿನಿಂದ (2014–15) ಎಸ್ಸೆಸ್ಸೆಲ್ಸಿ ಪಠ್ಯಕ್ರಮ ಮತ್ತು ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಆಗಲಿದೆ.ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿಗೆ ಅನುಗುಣವಾಗಿ ಪಠ್ಯ­ಕ್ರಮ ಪರಿಷ್ಕರಿಸಲಾಗಿದ್ದು, ಈಗಾಗಲೇ ಪಠ್ಯಪುಸ್ತಕ­ಗಳ ಮುದ್ರಣ ಕಾರ್ಯ ಶೇ 56ರಷ್ಟು ಪೂರ್ಣಗೊಂಡಿದೆ.ಪಿಯುಸಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಿಬಿಎಸ್‌ಇ ಪಠ್ಯಕ್ರಮ ಅಳವಡಿಸಿಕೊಳ್ಳಲಾಗಿದೆ. ಆದರೆ, ಎಸ್ಸೆಸ್ಸೆಲ್ಸಿ­ಯಲ್ಲಿ ರಾಜ್ಯ ಮತ್ತು ಸಿಬಿಎಸ್‌ಇ ಪಠ್ಯಕ್ರಮದ ಮಿಶ್ರಣವಿದೆ.ಒಮ್ಮೆಲೇ ಪೂರ್ಣ ಪ್ರಮಾಣದಲ್ಲಿ ಸಿಬಿಎಸ್ಇ ಪಠ್ಯಕ್ರಮ ಅಳವಡಿಸಿಕೊಂಡರೆ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಎದುರಿಸಲು ಕಷ್ಟವಾಗಲಿದೆ ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಮೊಹಮದ್‌ ಮೊಹಸಿನ್‌ ‘ಪ್ರಜಾವಾಣಿ’ಗೆ ತಿಳಿಸಿದರು.ಭಾಗಶಃ ಸಿಬಿಎಸ್ಇ ಪಠ್ಯಕ್ರಮವೂ ಇರುವುದರಿಂದ ಮುಂದೆ ಪಿಯುಸಿ, ಸಿಇಟಿ ಪರೀಕ್ಷೆ ಎದುರಿಸಲು ಅನುಕೂಲವಾಗಲಿದೆ. ಎಸ್ಸೆಸ್ಸೆಲ್ಸಿಯಿಂದಲೇ ವಿದ್ಯಾರ್ಥಿ­ಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.ಪಠ್ಯಪುಸ್ತಕಗಳನ್ನು ತಾಲ್ಲೂಕು ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ಶಾಲೆಗಳಲ್ಲಿ ತರಗತಿಗಳು ಇನ್ನೂ ನಡೆಯುತ್ತಿರುವುದರಿಂದ ಕೆಲವು ಕಡೆ ಸಂಗ್ರಹಣೆಗೆ ತೊಂದರೆ ಇದೆ. ಸದ್ಯ ದೊಡ್ಡ ಶಾಲೆಗಳನ್ನು ಹುಡುಕಿ ಅಲ್ಲಿ ಇಡಲಾಗುತ್ತಿದೆ ಎಂದು ವಿವರಿಸಿದರು.ಶೈಕ್ಷಣಿಕ ವರ್ಷ ಆರಂಭವಾಗಿ ತರಗತಿಗಳು ಶುರು­ವಾಗುವ ವೇಳೆಗೆ ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕಗಳು ತಲುಪಲಿವೆ. ಇದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿದೆ ಎಂದರು.ಕೆಲ ಖಾಸಗಿ ಶಾಲೆಗಳು ಅಗತ್ಯಕ್ಕೆ ಅನುಗುಣವಾಗಿ ಮೊದಲೇ ಬೇಡಿಕೆ ಪಟ್ಟಿ ಸಲ್ಲಿಸುವುದಿಲ್ಲ. ಕೊನೆ ಹಂತದಲ್ಲಿ ಹೆಚ್ಚಿನ ಪುಸ್ತಕಗಳು ಬೇಕು ಎನ್ನುತ್ತಾರೆ. ಅಂತಹ ಸಂದರ್ಭದಲ್ಲಿ ಸಮಸ್ಯೆ ಆಗುತ್ತದೆ. ಪ್ರತಿ­ಯೊಂದು ಶಾಲೆಯೂ ನಿಗದಿತ ಸಮಯದಲ್ಲಿ ಸರಿಯಾಗಿ ಬೇಡಿಕೆ ಪಟ್ಟಿ ಸಲ್ಲಿಸಿದರೆ ಈ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂದು ತಿಳಿಸಿದರು.ಪರೀಕ್ಷಾ ಪದ್ಧತಿ: ಪ್ರಸ್ತುತ ಕನ್ನಡ (ಇದಕ್ಕೆ 125 ಅಂಕ ಇದೆ) ಹೊರತುಪಡಿಸಿ ಪ್ರತಿ ವಿಷಯಕ್ಕೆ 100 ಅಂಕಗಳ ಲಿಖಿತ ಪರೀಕ್ಷೆ ಇದೆ. ಆದರೆ, ಹೊಸ ಪದ್ಧತಿ ಪ್ರಕಾರ 80 ಅಂಕಗಳಿಗೆ ಮಾತ್ರ ಲಿಖಿತ ಪರೀಕ್ಷೆ ಬರೆಯ ಬೇಕಾಗುತ್ತದೆ.ಉಳಿದ 20 ಅಂಕಗಳನ್ನು ಸಮಗ್ರ ಮತ್ತು ನಿರಂತರ ಮೌಲ್ಯಮಾಪನಕ್ಕೆ ಮೀಸಲಿಡ­ಲಾಗುತ್ತದೆ. ವಿದ್ಯಾರ್ಥಿ­ಗಳ ಆಂತರಿಕ ಚಟುವಟಿಕೆ­ಗಳು, ಕಲಿಕಾ ಸಾಮರ್ಥ್ಯ, ಸಂವಹನಾ ಕೌಶಲ ಇತ್ಯಾದಿಗಳನ್ನು ಅವಲೋಕಿಸಿ ಆಯಾ ವಿಷಯಗಳನ್ನು ಬೋಧಿಸುವ ಶಿಕ್ಷಕರೇ ಅಂಕಗಳನ್ನು ನೀಡುತ್ತಾರೆ.ಸಿಬಿಎಸ್‌ಇ/ ಐಸಿಎಸ್‌ಇಯಲ್ಲಿ ಈಗಾಗಲೇ ಈ ಪದ್ಧತಿ ಇದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ­ರುವ ಕಾರಣ ಎಸ್ಸೆಸ್ಸೆಲ್ಸಿಯಲ್ಲೂ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.ಇದನ್ನು ಯಾವ ರೀತಿ ಅನುಷ್ಠಾನ ಗೊಳಿಸಬೇಕು ಎಂದು ಅಧ್ಯಯನ ನಡೆಸಿ ವರದಿ ನೀಡಲು ಶಿಕ್ಷಣ ತಜ್ಞರ ಸಮಿತಿ ರಚಿಸಲಾಗಿದೆ. ಮೇ ತಿಂಗಳ ಮೊದಲ ವಾರ­ದಲ್ಲಿ ಸಮಿತಿ ವರದಿ ನೀಡಲಿದೆ ಎಂದು ವಿವರಿಸಿದರು.ಹಂತ ಹಂತವಾಗಿ ಜಾರಿ: 8ನೇ ತರಗತಿಯನ್ನು ಹಿರಿಯ ಪ್ರಾಥಮಿಕ ಶಾಲೆ ವ್ಯಾಪ್ತಿಗೆ ಸೇರಿಸುವ ಕಾರ್ಯ ಹಂತ ಹಂತವಾಗಿ ಜಾರಿಯಾಗಲಿದೆ.ವಿದ್ಯಾರ್ಥಿಗಳ ಸಂಖ್ಯೆ, ಶಿಕ್ಷಕರು, ಶಾಲಾ ಕೊಠಡಿ ಸೇರಿದಂತೆ ಮೂಲಸೌಕರ್ಯಗಳನ್ನು ಆಧರಿಸಿ ಅಗತ್ಯ ಇರುವ ಕಡೆ 2014–15ನೇ ಸಾಲಿನಲ್ಲೇ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿಗೆ ಪ್ರವೇಶ ನೀಡಲಾಗುತ್ತದೆ. ಆದರೆ, ಒಮ್ಮೆಗೇ ಎಲ್ಲ ಕಡೆ ಇದನ್ನು ಜಾರಿಗೊಳಿಸಲು ಆಗುವುದಿಲ್ಲ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.