ಎಸ್ಸೆಸ್ಸೆಲ್ಸಿ ‘ರೇಡಿಯೊ ಪಾಠ’

7
ನೇರ ಪ್ರಸಾರ: ಚರ್ಚೆಗೆ ವಿದ್ಯಾರ್ಥಿಗಳಿಗೆ ಅವಕಾಶ

ಎಸ್ಸೆಸ್ಸೆಲ್ಸಿ ‘ರೇಡಿಯೊ ಪಾಠ’

Published:
Updated:

ಗುಲ್ಬರ್ಗ:  ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಗುಲ್ಬರ್ಗ ಆಕಾಶವಾಣಿ ಕೇಂದ್ರವು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ರೇಡಿಯೊ ಪಾಠಗಳ್ನು (ನೇರ ಪ್ರಸಾರ) ಬಿತ್ತರಿಸಲು ಸೋಮವಾರ ಚಾಲನೆ ನೀಡಿದೆ.ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಾದ ಬೀದರ್, ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರತಿ ವರ್ಷ ಕೊನೆಯ ಸ್ಥಾನದಲ್ಲಿರುತ್ತವೆ. ಈ ಕಾರಣಕ್ಕಾಗಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಮೈಸೂರಿನ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಗುಲ್ಬರ್ಗ ಆಕಾಶವಾಣಿ ಸಹಯೋಗದಲ್ಲಿ ಜ. 6 ರಿಂದ ಮಾ. 14ರ ವರೆಗೆ 50 ದಿನ (ಭಾನುವಾರ, ಸರ್ಕಾರಿ ರಜೆ ಹೊರತುಪಡಿಸಿ) ಬೆಳಿಗ್ಗೆ 10.30 ರಿಂದ 11.30ರ ವರೆಗೆ ವಿಷಯ ತಜ್ಞರಿಂದ ಪಾಠಗಳನ್ನು ಪ್ರಸಾರ ಮಾಡಲು ಮುಂದಾಗಿದೆ. ರೇಡಿಯೊ ಪಾಠಗಳಿಗೆ ‘50–50 ಯಶಸ್ವಿ ಎಸ್ಸೆಸ್ಸೆಲ್ಸಿ’ ಎಂದು ಹೆಸರಿಡಲಾಗಿದೆ.‘ಆಯಾ ವಿಷಯಗಳಲ್ಲಿ ಪರಿಣತಿ ಹೊಂದಿರುವ ವಿಷಯ ಶಿಕ್ಷಕರು ಆಕಾಶವಾಣಿ ಸ್ಟುಡಿಯೋದಲ್ಲಿ ಬೋಧನೆ ಮಾಡುತ್ತಾರೆ. ಒಂದು ಗಂಟೆ ಅವಧಿಯ ಮೊದಲ 40 ನಿಮಿಷಗಳಲ್ಲಿ ಪಾಠಗಳನ್ನು ಹೇಳುತ್ತಾರೆ. ಆ ಬಳಿಕ 20 ನಿಮಿಷ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾರೆ. ಪ್ರಶ್ನೆ, ಸಂದೇಹಗಳಿಗೆ ಉತ್ತರ ನೀಡುತ್ತಾರೆ. ಒಂದು ಗಂಟೆಯ ಕಾರ್ಯಕ್ರಮ ನೇರ ಪ್ರಸಾರ ಆಗುವುದರಿಂದ ಬಹಳಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅಲ್ಲದೇ, ತಮ್ಮಲ್ಲಿರುವ ಸಂದೇಹಗಳನ್ನು ಪರಿಹರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಾಕಷ್ಟು ನೆರವಾಗಲಿದೆ’ ಎಂದು ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ಹೇಳುತ್ತಾರೆ.‘ಯಾವುದಾದರೂ ವಿಷಯಗಳ ಬಗ್ಗೆ ಗೊಂದಲ ಇದ್ದಲ್ಲಿ ಅದನ್ನು ಮೊದಲೇ ಗುರುತು ಹಾಕಿಕೊಳ್ಳಬೇಕು. ನೇರ ಪ್ರಸಾರ ಕಾರ್ಯಕ್ರಮದಲ್ಲಿ ನೇರವಾಗಿ ಪ್ರಶ್ನೆ ಕೇಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇದಕ್ಕಾಗಿ 08472–241853/241854/241855 ಸಂಖ್ಯೆಗಳಿಗೆ ಕರೆ ಮಾಡಬಹುದು’ ಎಂದು ತಿಳಿಸಿದರು.‘ಎಸ್ಸೆಸ್ಸೆಲ್ಸಿ ವೇಳಾಪಟ್ಟಿ ಈಗಾಗಲೇ ಪ್ರಕಟವಾಗಿದ್ದು, ವಿದ್ಯಾರ್ಥಿಗಳು ಅಧ್ಯಯನ, ಪುನರ್‌ಮನನದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಧೈರ್ಯ, ಆತ್ಮವಿಶ್ವಾಸ ಮೂಡಿಸಲು ಈ ಪ್ರಯೋಗ ಚೆನ್ನಾಗಿದೆ. ಬಹುಮುಖ್ಯವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ರೇಡಿಯೊ ಪಾಠಗಳ ನೇರ ಪ್ರಸಾರದಿಂದ ಸಾಕಷ್ಟು ಅನುಕೂಲವಾಗಲಿದೆ. ಇದರಿಂದ ಹೈ.ಕ ಭಾಗದ ಫಲಿತಾಂಶ ಸುಧಾರಣೆಯಾಗಲಿದೆ’ ಎಂದು ಶಿಕ್ಷಕ ಸಂದೀಪ ಪಾಟೀಲ ಹೇಳುತ್ತಾರೆ. ರೇಡಿಯೊ ಪಾಠಗಳನ್ನು ಪ್ರಸಾರ ಮಾಡಲು ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ₨ 12 ಲಕ್ಷ ಅನುದಾನ ನೀಡಿದೆ.‘2010–11ರಲ್ಲಿ ಆಕಾಶವಾಣಿ ಮೂಲಕ ರೇಡಿಯೊ ಪಾಠಗಳನ್ನು ಪ್ರಸಾರ ಮಾಡಲಾಗಿತ್ತು. ಆ ವರ್ಷ ಫಲಿತಾಂಶದಲ್ಲಿ ಶೇ 10ರಷ್ಟು ಹೆಚ್ಚಳವಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ 2011–12 ಹಾಗೂ 2012–13ರಲ್ಲಿ ಪ್ರಸಾರ ಮಾಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ಮತ್ತೆ ಪ್ರಾರಂಭಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಎಸ್.ಪರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry