ಎಸ್‌ಎಂಇ: ಸಬ್ಸಿಡಿ ಹಣ ಬಿಡುಗಡೆಗೆ ಕ್ರಮ

ಶುಕ್ರವಾರ, ಮೇ 24, 2019
28 °C

ಎಸ್‌ಎಂಇ: ಸಬ್ಸಿಡಿ ಹಣ ಬಿಡುಗಡೆಗೆ ಕ್ರಮ

Published:
Updated:

ಬೆಂಗಳೂರು: ಸಣ್ಣ ಕೈಗಾರಿಕೆಗಳಿಗೆ ಸಂಬಂಧಿಸಿದ ಕಡತಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ದೃಷ್ಟಿಯಿಂದ ಸಣ್ಣ ಕೈಗಾರಿಕಾ ಇಲಾಖೆಗೆ ಪ್ರತ್ಯೇಕ ಕಾರ್ಯದರ್ಶಿ ಅಥವಾ ಆಯುಕ್ತರನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಮನವಿ ಮಾಡಲಾಗಿದೆ. 2008-09ರಿಂದ ಸಬ್ಸಿಡಿ ಹಣ ರೂ180 ಕೋಟಿ ಬಾಕಿ ಇದ್ದು, 2-3 ಕಂತುಗಳಲ್ಲಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ವಿನಂತಿಸಲಾಗುವುದು ಎಂದು ಸಣ್ಣ ಕೈಗಾರಿಕಾ ಸಚಿವ ರಾಜೂಗೌಡ ಶುಕ್ರವಾರ ಇಲ್ಲಿ ಹೇಳಿದರು.ಸಣ್ಣ ಕೈಗಾರಿಕೆಗಳ ಕಚ್ಚಾ ಪದಾರ್ಥಗಳ ಮೇಲೆ ನಮ್ಮಲ್ಲಿ ಶೇ 14ರಷ್ಟು ಮೌಲ್ಯವರ್ಧಿತ ತೆರಿಗೆ ವಿಧಿಸುತ್ತಿದ್ದರೆ, ಬೇರೆ ರಾಜ್ಯಗಳಲ್ಲಿ ಶೇ 2ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಆದ್ದರಿಂದ ದೊಡ್ಡ ಕೈಗಾರಿಕೆಗಳು ತಮಗೆ ಬೇಕಾದ ಕಚ್ಚಾ ಪದಾರ್ಥಗಳನ್ನು ಹೊರ ರಾಜ್ಯಗಳಿಂದ ತರಿಸುತ್ತಿದ್ದಾರೆ. ಇದನ್ನು ತಪ್ಪಿಸುವ ದೃಷ್ಟಿಯಿಂದ ಕರ್ನಾಟಕದಲ್ಲೂ ಶೇ 2ರಷ್ಟು ಮಾತ್ರ ತೆರಿಗೆ ವಿಧಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.ಕೈಗಾರಿಕೆಗಳ ಸ್ಥಾಪನೆಗೆ ಸ್ವಾಧೀನಪಡಿಸಿಕೊಳ್ಳುವ ಭೂಮಿಯಲ್ಲಿ ಶೇ 20ರಷ್ಟನ್ನು ಸಣ್ಣ ಕೈಗಾರಿಕೆಗಳಿಗೆ ಮೀಸಲಿಡುವ ಸಂಬಂಧ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರೊಂದಿಗೆ ಚರ್ಚಿಸಲಾಗುವುದು. ಅಲ್ಲದೆ ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ಪತ್ರ ಬರೆಯಲಾಗುವುದು ರೂ5 ಕೋಟಿಗಿಂತ ಕಡಿಮೆ ಬಂಡವಾಳದಲ್ಲಿ ಆರಂಭಿಸುವ ಸಣ್ಣ ಕೈಗಾರಿಕೆಗಳಿಗೆ ಜಿಲ್ಲಾ ಮಟ್ಟದಲ್ಲಿಯೇ ಅನುಮತಿ ನೀಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.ಒಂದು ಹೋಬಳಿಯಲ್ಲಿ ಒಂದು ಸಾವಿರ ಜನರಿಗೆ ಉದ್ಯೋಗ ನೀಡುವ ಕೈಗಾರಿಕೆಗಳನ್ನು ಪ್ರಾಯೋಗಿಕವಾಗಿ ಎರಡು ಹೋಬಳಿಗಳಲ್ಲಿ ಆರಂಭಿಸುವ ಉದ್ದೇಶವಿದೆ. ಹೈದರಾಬಾದ್ ಕರ್ನಾಟಕ ಭಾಗದ ಹೋಬಳಿಗಳನ್ನೇ ಆಯ್ಕೆ ಮಾಡಲಾಗುತ್ತದೆ ಎಂದರು. ಗ್ರಾಮಾಂತರ ಪ್ರದೇಶದ ಗುಡಿ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಈ ವರ್ಷ 40 ಸಾವಿರ ಮನೆ ಮತ್ತು ಶೆಡ್‌ಗಳನ್ನು ನಿರ್ಮಿಸಿಕೊಡುವ ಉದ್ದೇಶವಿದೆ.ಪ್ರತಿಯೊಂದು ಮನೆ ಮತ್ತು ಶೆಡ್‌ಗೆ ರೂ 3 ಲಕ್ಷ ವೆಚ್ಚ ಮಾಡಲಾಗುವುದು. ಫಲಾನುಭವಿಗಳ ಆಯ್ಕೆಗೆ ಮಾನದಂಡ ಏನು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಆದಷ್ಟು ಬೇಗ ಇದಕ್ಕೆ ಅಂತಿಮ ರೂಪ ನೀಡಲಾಗುವುದು. ಪ್ರತಿಯೊಂದು ಜಿಲ್ಲೆಗೆ ಭೇಟಿ ನೀಡಿ ಸಣ್ಣ ಕೈಗಾರಿಕೆಗಳ ಸಮಸ್ಯೆಗಳನ್ನು ಸಂವಾದ ಮೂಲಕ ಬಗೆಹರಿಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry