ಶುಕ್ರವಾರ, ಏಪ್ರಿಲ್ 23, 2021
23 °C

ಎಸ್‌ಎಂಎಸ್ ಮಾಡಿದರೆ ಕುಳಿತಲ್ಲೇ ಊಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ಜನರಿಗೆ ಇಲ್ಲಿದೆ ಸಂತಸದ ಸುದ್ದಿ. ಇನ್ನುಮುಂದೆ ಒಂದು ಎಸ್‌ಎಂಎಸ್ ಮಾಡಿದರೆ ಸಾಕು, ಕುಳಿತಲ್ಲೇ ಊಟ ಬರುತ್ತದೆ!ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ವ್ಯವ ಸ್ಥಾಪಕ ಪ್ರವೀಣಕುಮಾರ ಮಿಶ್ರಾ ಶುಕ್ರವಾರ ಈ ವಿಷಯ ಪ್ರಕಟಿಸಿದರು. `ಲೋಂಡಾ ಮೂಲದ ಸಂಸ್ಥೆ ಈ ಸೇವೆ ನೀಡಲು ಮುಂದಾಗಿದ್ದು, ಇನ್ನು 2-3 ದಿನಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ಇಲ್ಲಿ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಇತರ ಪ್ರಮುಖ ರೈಲುಗಳಿಗೂ ಈ ಸೇವೆ ವಿಸ್ತರಿಸಲಾಗುತ್ತದೆ~  ಎಂದರು.`ಹೊಸಪೇಟೆ-ವಾಸ್ಕೊ ಜೋಡಿ ಮಾರ್ಗ ನಿರ್ಮಾಣದ ಜವಾಬ್ದಾರಿಯನ್ನು ರೈಲ್ವೆ ವಿಕಾಸ ನಿಗಮ ವಹಿಸಿಕೊಂಡಿದ್ದು, ವಾರದಲ್ಲೇ ಕೆಲಸ ಆರಂಭವಾಗುವ ಸಾಧ್ಯತೆ ಇದೆ~ ಎಂದು ತಿಳಿಸಿದರು. `ಹುಬ್ಬಳ್ಳಿ ರೈಲು ನಿಲ್ದಾಣದ ಹೊಸ ಕಟ್ಟಡ ನಿರ್ಮಾಣ ಕಾರ್ಯ ತ್ವರಿತಗತಿಯಿಂದ ನಡೆದಿದ್ದು, ಹಣಕಾಸಿನ ತೊಂದರೆ ಇಲ್ಲ. ಎರಡು ಪಾರ್ಕಿಂಗ್ ಸ್ಥಳಗಳ ವ್ಯವಸ್ಥೆ ಮಾಡಲಾಗಿದ್ದು, ಎಲ್ಲ ಆಧುನಿಕ ಸೌಲಭ್ಯಗಳನ್ನು ನಿಲ್ದಾಣ ಹೊಂದಿದೆ~ ಎಂದು ವಿವರಿಸಿದರು. `ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಿಲ್ದಾಣದ ಆವರಣದವರೆಗೆ ಬಸ್ಸುಗಳನ್ನು ಬಿಡಲು ರಾಜ್ಯ ಸಾರಿಗೆ ಸಂಸ್ಥೆ ಒಪ್ಪಿಕೊಂಡಿದೆ~ ಎಂದ ಅವರು, `ನಿಲ್ದಾಣದ ಮುಂಭಾಗದಲ್ಲಿ ಏಳು ಮೀಟರ್ ಸುತ್ತಳತೆಯ ದೊಡ್ಡ ನೆಲ ಗಡಿಯಾರ ಬರಲಿದೆ~ ಎಂದು ಮಾಹಿತಿ ನೀಡಿದರು.`ಹೈದರಾಬಾದ್-ಕೊಲ್ಲಾಪುರ ಮಧ್ಯೆ ದೈನಂದಿನ ರೈಲು ಓಡಿಸಲು ದಕ್ಷಿಣ ಮಧ್ಯೆ ರೈಲ್ವೆ ಸಿದ್ಧತೆ ನಡೆಸುತ್ತಿದೆ~ ಎಂದ ಅವರು, `ವಿಜಾಪುರ- ಹುಟಗಿ ಮತ್ತು ಹೊಸಪೇಟೆ-ಕೊಟ್ಟೂರು ಮಧ್ಯೆ ಗಂಟೆಗೆ 100 ಕಿ.ಮೀ. ವೇಗದಲ್ಲಿ ರೈಲು ಚಲಿಸಲು ಅನುಮತಿ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ~ ಎಂದು ವಿವರಿಸಿದರು. ಹಾಸಿಗೆ ಸಾಮಗ್ರಿಗಳ ಸ್ವಚ್ಛತೆಗೆ ಹುಬ್ಬಳ್ಳಿಯಲ್ಲಿ ಯಾಂತ್ರೀಕೃತ ಲಾಂಡ್ರಿ ಯನ್ನು ಆರಂಭಿಸಲಾಗುತ್ತದೆ ಎಂದ ಅವರು, `ಪ್ರಮುಖ ರೈಲುಗಳ ಸ್ವಚ್ಛತೆಗೂ ಕ್ರಮ ಕೈಗೊಳ್ಳಲಾಗಿದೆ~ ಎಂದರು.`ಕಬ್ಬಿಣದ ಅದಿರಿನ ಮೇಲೆ ವಿಧಿಸಲಾದ ನಿರ್ಬಂಧದಿಂದ ಸರಕು ಸಾಗಾಣಿಕೆಯಲ್ಲಿ ಉಂಟಾದ ನಷ್ಟವನ್ನು ಕಲ್ಲಿದ್ದಲು ಮತ್ತು ಮೆಕ್ಕೆಜೋಳದಂತಹ ಸರಕು ಸಾಗಾಟ ಹೆಚ್ಚಿಸುವ ಮೂಲಕ ತುಂಬಿಕೊಳ್ಳಲು ಯತ್ನಿಸಲಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಜುಲೈವರೆಗೆ 8.947 ದಶಲಕ್ಷ ಟನ್ ಸರಕು ಸಾಗಾಟ ಮಾಡಿ, ರೂ 765.15 ಕೋಟಿ ವರಮಾನ ಗಳಿಸಲಾಗಿದೆ~ ಎಂದು ತಿಳಿಸಿದರು.`ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 19.70ರಷ್ಟು ಪ್ರಗತಿ ಸಾಧಿಸಲಾಗಿದ್ದರೂ, ಕಬ್ಬಿಣದ ಅದಿರಿನ ಸಾಗಾಟದಲ್ಲಿ ಶೇ 21.13 ರಷ್ಟು ಕಡಿಮೆಯಾಗಿದೆ~ ಎಂದರು. `ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 1.41 ಕೋಟಿ ಜನ ಪ್ರಯಾಣ ಮಾಡಿದ್ದು, ರೂ 71.57 ಕೋಟಿ ವರಮಾನ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 5ರಷ್ಟು ಪ್ರಗತಿ ಸಾಧಿಸ ಲಾಗಿದೆ~ ಎಂದು ಅವರು ಮಾಹಿತಿ ನೀಡಿದರು.`ವಿಜಾಪುರ-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ವೇಗ ಹೆಚ್ಚಿಸಲು ಸುರಕ್ಷಾ ಮಂಡಳಿ ಅನು ಮತಿ ಅಗತ್ಯವಾಗಿದ್ದು, ಈ ಸಂಬಂಧ ಪ್ರತವನ್ನೂ ಬರೆಯಲಾಗಿದೆ~ ಎಂದು ಅವರು, ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಈಚೆಗೆ ಹಳಿ ತಪ್ಪಿದ ವಿಷಯಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ತನಿಖೆ ನಡೆಸುತ್ತಿದ್ದು, ವಾರದಲ್ಲೇ ವರದಿ ನೀಡುವ ಸಾಧ್ಯತೆ ಇದೆ ಎಂದು ಹೇಳಿದರು.ವಿಭಾಗದ ಹಿರಿಯ ಅಧಿಕಾರಿಗಳಾದ ಜಿ.ಕೆ. ದ್ವಿವೇದಿ, ಪಿಆರ್‌ಎಸ್ ರಾಮನ್, ಎನ್.ಎಸ್. ಶ್ರೀಧರಮೂರ್ತಿ, ಸುಖದೇವ್ ಮಹತೊ, ವಿನಾಯಕ ನಾಯಕ, ಎನ್.ಗೋವಿಂದು, ಸತೀಶ ರೇವಣಕರ್ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.